ADVERTISEMENT

ಶುಕ್ರವಾರ, 17–5–1968

​ಪ್ರಜಾವಾಣಿ ವಾರ್ತೆ
Published 16 ಮೇ 2018, 19:30 IST
Last Updated 16 ಮೇ 2018, 19:30 IST

‘ಕುವೆಂಪು’ಗೆ ಜ್ಞಾನಪೀಠದ ಪ್ರಶಸ್ತಿ
ನವದೆಹಲಿ, ಮೇ 16– ಸುಪ್ರಸಿದ್ಧ ಕನ್ನಡ ಕವಿ ಶ್ರೀ ಕೆ.ವಿ. ಪುಟ್ಟಪ್ಪ ಮತ್ತು ಗುಜರಾತಿ ಕವಿ ಶ್ರೀ ಉಮಾಶಂಕರ ಜೋಶಿ ಅವರು ಭಾರತೀಯ ಜ್ಞಾನಪೀಠದ ಪ್ರಶಸ್ತಿಯನ್ನು ಪಡೆದಿದ್ದಾರೆ.

1967ನೇ ವರ್ಷಕ್ಕಾಗಿ ನೀಡಲಾದ ಭಾರತದ ಈ ಅತ್ಯುನ್ನತ ಸಾಹಿತ್ಯ ಪ್ರಶಸ್ತಿಯು ಒಂದು ಲಕ್ಷ ರೂಪಾಯಿ ನಗದು ಬಹುಮಾನವನ್ನು ಈ ಕವಿಗಳಿಬ್ಬರಿಗೂ ಹಂಚಲಾಗುತ್ತದೆ.

*

ADVERTISEMENT

ಹರಿಯಾಣ: ನಿರಾತಂಕ ಬಹುಮತ ಪಡೆದ ಕಾಂಗ್ರೆಸ್ ಅಧಿಕಾರಕ್ಕೆ

ಚಂಡೀಗಢ, ಮೇ 16– ಹರಿಯಾಣ ವಿಧಾನಸಭೆಯ 80 ಸ್ಥಾನಗಳಿಗೆ ನಡೆದ ಮಧ್ಯಕಾಲೀನ ಚುನಾವಣೆಗಳಲ್ಲಿ 48 ಸ್ಥಾನಗಳನ್ನು ಕಾಂಗ್ರೆಸ್ ತನ್ನದಾಗಿಸಿಕೊಂಡು ನಿರಾಂತಕ ಬಹುಮತದಿಂದ ಮತ್ತೆ ಅಧಿಕಾರದ ಗದ್ದುಗೆ ಏರಿದೆ.

*
ಸಭಾಸದನಕ್ಕೆ ಸಪ್ತ ಸ್ತ್ರೀಯರು

ಚಂಡೀಗಢ, ಮೇ 16– ಹರಿಯಾಣ ವಿಧಾನಸಭೆಗೆ ಮಧ್ಯಕಾಲೀನ ಚುನಾವಣೆಗಳ ಮೂಲಕ ಏಳು ಮಂದಿ ಮಹಿಳೆಯರು ಪ್ರವೇಶಿಸಿದ್ದಾರೆ.

ಈ ಏಳು ಮಹಿಳೆಯರಲ್ಲಿ ಐವರು ಕಾಂಗ್ರೆಸ್ ಪಕ್ಷಕ್ಕೆ ಸೇರಿದವರು. ಒಬ್ಬರು ವಿಶಾಲ ಹರಿಯಾಣ ಪಕ್ಷಕ್ಕೆ ಸೇರಿದವರು. ಮತ್ತೊಬ್ಬರು ಪಕ್ಷೇತರರು.

ಚುನಾವಣಾ ಕಣಕ್ಕೆ ಇಳಿದಿದ್ದ ಮುನ್ನೂರ ತೊಂಬತ್ತೊಂಬತ್ತು ಸ್ಪರ್ಧಿಗಳಲ್ಲಿ ಮಹಿಳಾ ಸ್ಪರ್ಧಿಗಳು ಹನ್ನೆರಡು ಜನ. ಏಳುಮಂದಿ ಕಾಂಗ್ರೆಸಿನವರು. ವಿಶಾಲ ಹರಿಯಾಣ ಪಕ್ಷ ಮತ್ತು ಜನಸಂಘಗಳಿಂದ ತಲಾ ಒಬ್ಬರು. ಮೂವರು ಪಕ್ಷೇತರರು.

ಪಕ್ಷಾಂತರ ರಾಜಕೀಯಕ್ಕೆ ನಿರಾಕರಣೆ ಮುದ್ರೆ– ಇಂದಿರಾ

ನವದೆಹಲಿ, ಮೇ 16– ಹರಿಯಾಣ ಚುನಾವಣಾ ಫಲಿತಾಂಶ ’ಪಕ್ಷಾಂತರ ರಾಜಕೀಯಕ್ಕೆ ನಿರಾಕರಣೆಯ ಮುದ್ರೆಯೊತ್ತಿದೆ’. ಪ್ರಧಾನಿ ಶ್ರೀಮತಿ ಇಂದಿರಾಗಾಂಧಿ ಅಭಿಪ್ರಾಯವಿದು.

ಹರಿಯಾಣದ ಮಧ್ಯಕಾಲೀನ ಚುನಾವಣೆಗಳನ್ನು ವ್ಯವಸ್ಥಿತ ಹಾಗೂ ಸುಗಮ ರೀತಿಯಲ್ಲಿ ನಿರ್ವಹಿಸಿದ್ದಕ್ಕೆ ಜನತೆಯನ್ನು ಅಭಿನಂದಿಸಿ ಅವರು ಇಂದು ಪತ್ರಿಕಾ ಹೇಳಿಕೆಯೊಂದನ್ನಿತ್ತರು.

ರಾಜ್ಯ ಮುಖ್ಯಮಂತ್ರಿಗಳ ಸಮ್ಮೇಳನದಲ್ಲಿ ಕೋಮುವಾರು ಪ್ರಶ್ನೆ ಚರ್ಚೆ

ನವದೆಹಲಿ, ಮೇ 16– ಕೇಂದ್ರ ಗೃಹ ಸಚಿವ ಶ್ರೀ ವೈ.ಬಿ. ಚವಾಣ್ ಅವರು ಮೇ 19 ರಂದು ಇಲ್ಲಿ ಕರೆದಿರುವ ರಾಜ್ಯ ಮುಖ್ಯಮಂತ್ರಿಗಳ ಸಮ್ಮೇಳನದಲ್ಲಿ ಕೋಮುವಾರು ಸಮಸ್ಯೆ ಮುಖ್ಯವಾಗಿ ಚರ್ಚಿಸಲ್ಪಡುವುದೆಂದು ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.