ADVERTISEMENT

ಸೋಮವಾರ, 20–11–1967

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2017, 19:30 IST
Last Updated 19 ನವೆಂಬರ್ 2017, 19:30 IST

ಬ್ರಿಟಿಷ್ ಪೌಂಡ್ ಪತನ: ಶೇಕಡ 14.3 ರಷ್ಟು ಅಪಮೌಲ್ಯ
ಲಂಡನ್‌, ನ. 19–
ಪೌಂಡ್‌ ಸ್ಟರ್ಲಿಂಗನ್ನು ಶೇಕಡಾ 14.3ರಷ್ಟು ಅಪಮೌಲ್ಯಗೊಳಿಸಿರುವುದಾಗಿ ಬ್ರಿಟನ್ನಿನ ಲೇಬರ್‌ ಸರ್ಕಾರವು ನಿನ್ನೆ ರಾತ್ರಿ ಇಲ್ಲಿ ಪ್ರಕಟಿಸಿದೆ.

‘ನರಳುತ್ತಿರುವ’ ರಾಷ್ಟ್ರದ ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸುವುದಕ್ಕಾಗಿ ಹೊಸ ಮಿತವ್ಯಯ ಕ್ರಮಗಳನ್ನೂ ಜಾರಿ ಮಾಡಿತು. ಅಮೆರಿಕದ ಒಂದು ಡಾಲರ್‌ಗೆ ಈಗ 2.40 ಪೌಂಡ್‌ ಸಮವೆಂದು ಪ್ರಧಾನಿ ಹೆರಾಲ್ಡ್‌ ವಿಲ್ಸನ್‌ ಅವರ ಲೇಬರ್‌ ಸರ್ಕಾರ ನಿಗದಿಪಡಿಸಿದೆ.

ರೂಪಾಯಿ ವಿನಿಮಯ ದರ ಬದಲಾಗದು
ನವದೆಹಲಿ, ನ. 19–
ಪೌಂಡ್ ಅಪಮೌಲ್ಯವಾಗಿರುವುದರ ಕಾರಣ ಭಾರತದ ರೂಪಾಯಿಯ ವಿನಿಮಯ ದರದಲ್ಲಿ ಭಾರತ ಸರಕಾರವು ಯಾವ ಬದಲಾವಣೆಯನ್ನೂ ಮಾಡುವುದಿಲ್ಲವೆಂದು ಉಪ ಪ್ರಧಾನಮಂತ್ರಿ ಹಾಗೂ ಕೇಂದ್ರ ಅರ್ಥ ಸಚಿವ ಶ್ರೀ ಮುರಾರಜಿ ದೇಸಾಯಿ ಇಂದು ಇಲ್ಲಿ ಅಧಿಕೃತವಾಗಿ ತಿಳಿಸಿದರು.

ADVERTISEMENT

ಭಾರತವು ರೂಪಾಯಿಯನ್ನು 1966ರ ಜೂನ್‌ನಲ್ಲಿ ಶೇಕಡಾ 57ರಷ್ಟು ಹೆಚ್ಚು ಅಪಮೌಲ್ಯಗೊಳಿಸಿತ್ತು.

ಕಾಡಾನೆ ಹಿಂಡು ಕೆಂಗೇರಿ ಬಳಿ ಪ್ರತ್ಯಕ್ಷ
ಬೆಂಗಳೂರು, ನ. 19–
ಕಳೆದ 9 ರಂದು ಹುಡುಗನೊಬ್ಬನನ್ನು ತುಳಿದು ಸಾಯಿಸಿ, ಎರಡು ದಿನಗಳ ಕಾಲ ಕೆಂಗೇರಿ ಮತ್ತು ವಿಶ್ವನೀಡಂ ಸುತ್ತಮುತ್ತಲಿನ ಗದ್ದೆ, ತೋಟಗಳನ್ನು ಧ್ವಂಸ ಮಾಡಿ ಅಡವಿಯಲ್ಲಿ ಅಡಗಿ ಹೋದ ಒಂಬತ್ತು ಆನೆಗಳ ಹಿಂಡು ಇಂದು ಮತ್ತೆ ಕೆಂಗೇರಿಯ ಬಳಿ ಪ್ರತ್ಯಕ್ಷವಾಯಿತು.

ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ: 205 ಮಂದಿ ತೇರ್ಗಡೆ
ಬೆಂಗಳೂರು, ನ. 19– 1967ರ ಸೆಪ್ಟಂಬರ್‌ನಲ್ಲಿ ನಡೆದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಎಲ್ಲ ಭಾಗಗಳಿಗೂ 8,705 ವಿದ್ಯಾರ್ಥಿಗಳು ಕುಳಿತಿದ್ದು ಇವರಲ್ಲಿ ಕೇವಲ 205 ವಿದ್ಯಾರ್ಥಿಗಳು ಮಾತ್ರ ಎಲ್ಲ ಭಾಗಗಳಲ್ಲೂ ತೇರ್ಗಡೆಯಾಗಿದ್ದಾರೆ.

ಬ್ರಿಟನ್– ಯು.ಎ.ಆರ್. ರಾಜತಾಂತ್ರಿಕ ಸಂಬಂಧ ಪುನಃ ಆರಂಭ
ಲಂಡನ್, ನ. 19–
ಇಪ್ಪತ್ತು ಮೂರು ತಿಂಗಳ ನಂತರ ಐಕ್ಯ ಅರಬ್ ಗಣರಾಜ್ಯ ಮತ್ತು ಬ್ರಿಟನ್‌ಗಳು ತಮ್ಮ ರಾಜತಾಂತ್ರಿಕ ಸಂಬಂಧವನ್ನು ಪುನಃ ಪ್ರಾರಂಭಿಸಿವೆ ಎಂದು ಇಂದು ಪ್ರಕಟಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.