ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ
ಬೆಂಗಳೂರು, ಏ.13– ಕೇಂದ್ರ ಸರ್ಕಾರ ಬಜೆಟ್ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯ ವಿರುದ್ಧ ಇಂದು ಇಲ್ಲಿ ಪ್ರದೇಶ ಕಾಂಗ್ರೆಸ್ ಸಮಿತಿಯು ಪ್ರತಿಭಟನಾ ರ‍್ಯಾಲಿ ಮತ್ತು ಮೆರವಣಿಗೆ ನಡೆಸಿತು.
ರ‍್ಯಾಲಿ ನಂತರ ಕಾಂಗ್ರೆಸ್ ಮುಖಂಡರು ರಾಜಭವನಕ್ಕೆ ತೆರಳಿ ಅಗತ್ಯ ವಸ್ತುಗಳ ಬೆಲೆಯನ್ನು ಇಳಿಸಲು ಒತ್ತಾಯಿಸಿ, ರಾಜ್ಯಪಾಲರಾದ ವಿ.ಎಸ್.ರಮಾದೇವಿ ಅವರಿಗೆ ಮನವಿ ಅರ್ಪಿಸಿದರು.
ರ‍್ಯಾಲಿಯ ಅಧ್ಯಕ್ಷತೆ ವಹಿಸಿದ್ದ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಗುಲಾಂ ನಬಿ ಆಜಾದ್ ಅವರು, ರಾಷ್ಟ್ರೀಯ ಪ್ರಜಾಸತ್ತಾತ್ಮಕ ರಂಗ ಸರ್ಕಾರದ ಬಜೆಟ್ ಜನವಿರೋಧಿ ಮತ್ತು ರೈತ ವಿರೋಧಿ ಧೋರಣೆ ತಳೆದಿದೆ ಎಂದು ಖಂಡಿಸಿದರು.
ಮೋಸದಾಟ: ಸಿಬಿಐ ತನಿಖೆಗೆ ಪಟೌಡಿ, ಬೇಡಿ ಆಗ್ರಹ
ನವದೆಹಲಿ, ಏ. 13 (ಪಿಟಿಐ)– ಹ್ಯಾನ್ಸಿ ಕ್ರೊನಿಯೆ ಅವರು ಪಾಲುಗೊಂಡಿರುವರು ಎನ್ನಲಾದ ಮೋಸದಾಟ ಪ್ರಕರಣದ ಸತ್ಯ ಬಹಿರಂಗ ಪಡಿಸಲು ಕೇಂದ್ರೀಯ ತನಿಖಾ ದಳದಿಂದ (ಸಿಬಿಐ) ತನಿಖೆ ನಡೆಸಬೇಕು ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕರಾದ ಮನ್ಸೂರ್ ಅಲಿ ಖಾನ್ ಪಟೌಡಿ ಹಾಗೂ ಬಿಷನ್ ಸಿಂಗ್ ಬೇಡಿ ಅವರು ಇಂದು ಇಲ್ಲಿ ಒತ್ತಾಯಿಸಿದ್ದಾರೆ.
ಭಾರತ ಕ್ರೀಡಾ ಪ್ರಾಧಿಕಾರದ ಕ್ರಿಕೆಟ್ ಅಕಾಡೆಮಿಯನ್ನು ಉದ್ಘಾಟಿಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಪಟೌಡಿ ಅವರು, ‘ಬಾಜಿ, ಮೋಸದಾಟದಂಥ ವಿಷಯಗಳ ಕುರಿತು ಕ್ರಮ ಕೈಗೊಳ್ಳಲು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ ಸಂಪೂರ್ಣ ಅಧಿಕಾರವಿಲ್ಲ. ಭಾರತ ಕ್ರಿಕೆಟ್ ಮಂಡಳಿಯು ಈ ಪ್ರಕರಣವನ್ನು ನಿರ್ವಹಿಸಲು ಸಾಮರ್ಥ್ಯ ಹೊಂದಿಲ್ಲ ಅಥವಾ ನಿವೃತ್ತ ನ್ಯಾಯಾಧೀಶರ ಸ್ವತಂತ್ರ ತನಿಖೆಯಿಂದಲೂ ಸತ್ಯ ಹೊರ ಬರುವ ಸಾಧ್ಯತೆ ಕಡಿಮೆ. ಸಿಬಿಐ ಮಾತ್ರ ಸತ್ಯಾಂಶವನ್ನು ಹೊರತರಬಲ್ಲದು’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಗಾಗಲಿ ಅಥವಾ ಭಾರತೀಯ ಕ್ರಿಕೆಟ್ ಮಂಡಳಿಗಾಗಲಿ ಯಾವುದೇ ತನಿಖೆಯ ಅನುಭವ ಇಲ್ಲ. ಆದಕಾರಣ ಇದು ಸರ್ಕಾರ ಕ್ರಮ ಕೈಗೊಳ್ಳಲು ಸಕಾಲ ಎಂದು ಸಿಬಿಐ ತನಿಖೆಯ ಪ್ರಸ್ತಾವವನ್ನು ಸಮರ್ಥಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.