ADVERTISEMENT

ಬುಧವಾರ, 21–2–1968

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2018, 19:30 IST
Last Updated 20 ಫೆಬ್ರುವರಿ 2018, 19:30 IST

ಬಂಗಾಳದಲ್ಲಿ ರಾಷ್ಟ್ರಪತಿ ಆಡಳಿತ
ನವದೆಹಲಿ, ಫೆ. 20–
ಸ್ವಾತಂತ್ರ್ಯ ಪಡೆದ ಬಳಿಕ ಮೊದಲ ಬಾರಿ ಪಶ್ಚಿಮ ಬಂಗಾಳದಲ್ಲಿ ಇಂದು ರಾಷ್ಟ್ರಪತಿ ಆಡಳಿತವನ್ನು ಜಾರಿಗೆ ತರಲಾಯಿತು. ಪಶ್ಚಿಮ ಬಂಗಾಳ ವಿಧಾನಸಭೆಯನ್ಹು ವಿಸರ್ಜಿಸಲಾಯಿತು.

ರಾಜ್ಯಾಂಗದ 356ನೇ ವಿಧಿಯ ಪ್ರಕಾರ ಹೊರಡಿಸಲಾದ ಈ ಘೋಷಣೆಗೆ ರಾಷ್ಟ್ರಪತಿ ಡಾ. ಜಾಕಿರ್ ಹುಸೇನ್‌ರವರು ಕಲ್ಕತ್ತೆಗೆ ಹೊರಡುವುದಕ್ಕೆ ಸ್ವಲ್ಪ ಮುಂಚೆ ಸಹಿ ಹಾಕಿದರು.

ಭಾರತದ ಪ್ರಥಮ ಬದಲಿ ಹೃದಯಿ
ಮುಂಬಯಿ, ಫೆ. 20–
ಕಳೆದ ವಾರ ಮುಂಬಯಿ ಕೆ.ಇ.ಎಂ. ಆಸ್ಪತ್ರೆಯಲ್ಲಿ 19 ವರ್ಷ ವಯಸ್ಸಿನ ಯುವತಿಯ ಹೃದಯವನ್ನು ಹೃದ್ರೋಗದಿಂದ ಬಳಲುತ್ತಿದ್ದ 27 ವರ್ಷ ವಯಸ್ಸಿನ ಯುವಕನೊಬ್ಬನಿಗೆ ಅಳವಡಿಸಲಾಯಿತು. ಈ ಯುವಕ ಬದಲಿ ಹೃದಯ ಅಳವಡಿಸಿದ ನಂತರ ಮೂರು ಗಂಟೆ ಕಾಲ ಬದುಕಿದ್ದ.

ADVERTISEMENT

ಬದಲಿ ಹೃದಯ ಅಳವಡಿಸುವ ಶಸ್ತ್ರಚಿಕಿತ್ಸೆ ಯಶಸ್ವಿಯಾಯಿತು.

ಬರ್ನಾರ್ಡ್ ಪ್ರಶಂಸೆ
ಬ್ಯೂನೋಸ್ ಏರ್ಸ್, ಫೆ. 20–
ಬದಲಿ ಹೃದಯ ಚಿಕಿತ್ಸೆಯಲ್ಲಿ ಭಾರತೀಯ ವೈದ್ಯರು ಸರಿಯಾದ್ದನ್ನೇ ಮಾಡಿದ್ದಾರೆಂದು ದಕ್ಷಿಣ ಆಫ್ರಿಕಾದ ಡಾ. ಕ್ರಿಶ್ಚಿಯನ್ ಬರ್ನಾರ್ಡ್‌  ಇಂದು ಹೇಳಿದರು.‌

ಈ ಬಗೆಯ ಪರಿಸ್ಥಿತಿಗೆ (ಕಾರ್ಡಿಯೋ ಮಯೋಪಥಿ) ಬದಲಿ ಹೃದಯ ಜೋಡಣೆಯೇ ಸೂಕ್ತ ಚಿಕಿತ್ಸೆ. ಈ ಸಂದರ್ಭದಲ್ಲಿ ನಾನೂ ಅದೇ ಚಿಕಿತ್ಸೆ ಮಾಡುತ್ತಿದ್ದೆ’ ಎಂದು ಅವರು ತಿಳಿಸಿದರು.

ಸ್ಪೀಕರ್ ರೂಲಿಂಗ್ ‘ಅಕ್ರಮ’ ಎಂದು ಚವಾಣ್ ಟೀಕೆ
ನವದೆಹಲಿ, ಫೆ. 20–
ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ತರುವುದನ್ನು ಅನಿವಾರ್ಯಗೊಳಿಸಿದ ಮೂರೂ ಕಾರಣಗಳಲ್ಲಿ ವಿಧಾನಸಭೆಯ ಅಧಿವೇಶನವನ್ನು ಸ್ವೀಕರ್‌ರವರು ಪದೇ ಪದೇ ಅನಿರ್ದಿಷ್ಟ ಕಾಲ ಮುಂದೂಡುತ್ತಿದ್ದುದೂ ಒಂದು ಕಾರಣವಾಗಿದೆ.

ಉಳಿದ ಎರಡು ಕಾರಣಗಳು: ಪಶ್ಚಿಮ ಬಂಗಾಳದ ರಾಜಕೀಯ ಅಸ್ಥಿರತೆ, ಶಾಸನಸಭೆಯ ಪ್ರಜಾಸತ್ತಾತ್ಮಕ ಕಾರ್ಯನಿರ್ವಹಣೆಯನ್ನು ‘ತಡೆಯಲು’ ಕೆಲವು ರಾಜಕೀಯ ಪಕ್ಷಗಳು ನಡೆಸಿದ ದೃಢ ಪ್ರಯತ್ನ.

ನಿಜಲಿಂಗಪ್ಪ ಬಗ್ಗೆ ಪರಿಷತ್ ಪ್ರಸ್ತಾಪ
ಬೆಂಗಳೂರು, ಫೆ. 20–
ಶ್ರೀ ಎಸ್. ನಿಜಲಿಂಗಪ್ಪನವರು ಮುಖ್ಯಮಂತ್ರಿ ಹಾಗೂ ಎ.ಐ.ಸಿ.ಸಿ. ಅಧ್ಯಕ್ಷರು ಎರಡೂ ಆಗಿ ಮುಂದುವರೆಯುವುದರ ಸೂಕ್ತತೆಯನ್ನು ಇಂದು ವಿಧಾನ ಪರಿಷತ್ತಿನಲ್ಲಿ ಕೆಲವು ಸದಸ್ಯರು ಪ್ರಶ್ನಿಸಿದರು.

ಕೃಷ್ಣಾ ವಿವಾದ: ಸದ್ಯದಲ್ಲೇ ಮತ್ತಷ್ಟು ಮಾತುಕತೆ
ನವದೆಹಲಿ, ಫೆ. 20–
ಕೃಷ್ಣಾ– ಗೋದಾವರಿ ನದಿ ನೀರು ಹಂಚಿಕೆ ಸಂಬಂಧಪಟ್ಟಂತೆ ಉದ್ಭವಿಸಿರುವ ವಿವಾದ ಕುರಿತು ಮೈಸೂರು, ಮಹಾರಾಷ್ಟ್ರ ಮತ್ತು ಆಂಧ್ರ ಮುಖ್ಯಮಂತ್ರಿಗಳ ಜೊತೆ ಸದ್ಯದಲ್ಲೇ ಇನ್ನಷ್ಟು ಚರ್ಚೆ ನಡೆಯುವ ನಿರೀಕ್ಷೆಯಿದೆಯೆಂದು ನೀರಾವರಿ ಮತ್ತು ವಿದ್ಯುತ್ ಸಚಿವ ಡಾ. ಕೆ.ಎಲ್. ರಾವ್ ಅವರು ಇಂದು ರಾಜ್ಯ ಸಭೆಯಲ್ಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.