ADVERTISEMENT

ಆತುರ ಏಕೆ?

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2016, 19:30 IST
Last Updated 10 ನವೆಂಬರ್ 2016, 19:30 IST

ಕಳೆದ ಎರಡು ದಿನಗಳಿಂದ ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿರುವ ಒಂದೇ ಒಂದು ವಿಷಯ– ನೋಟು ಚಲಾವಣೆ ರದ್ದತಿ. ಕೇಂದ್ರ ಸರ್ಕಾರವು ರಾತ್ರೋ ರಾತ್ರಿ ಈ ನೋಟುಗಳ ಚಲಾವಣೆಯನ್ನು ನಿಷೇಧಿಸಿದೆ.  ಇದರಿಂದ ದೇಶದಲ್ಲಿ ಕಪ್ಪುಹಣ ಹಾವಳಿ ಹಾಗೂ ಭಯೋತ್ಪಾದಕ ಕೃತ್ಯಗಳು ಕಡಿಮೆಯಾಗುತ್ತವೆ ಎಂಬ ಮಾತು ಹಬ್ಬಿದೆ. 

ನೋಟು ಚಲಾವಣೆ ರದ್ದತಿ ಕ್ರಮ ದಿಟ್ಟ ನಿರ್ಧಾರ ಎಂದು ಸಮೂಹ ಮಾಧ್ಯಮಗಳಲ್ಲಿ ಹೇಳಿಕೆಗಳಿವೆ. ಆದರೆ, ಇದರ ಸತ್ಪರಿಣಾಮಗಳನ್ನು ಈಗಲೇ  ಹೇಳಲು ಸಾಧ್ಯವಿಲ್ಲ. ಆದರೂ ಈ ಕ್ರಮವನ್ನು ಹೊಗಳಲು ಯಾಕೆ ಇಷ್ಟೊಂದು ಆತುರ?

ಇಂಥ ಕ್ರಮಗಳಿಂದ ಕಪ್ಪುಹಣ ಕುಳಗಳು,  ಭ್ರಷ್ಟರಿಗೆ ತೀವ್ರ ಪೆಟ್ಟು ಬೀಳುತ್ತದೆ ಎಂದು ಹೇಳಲಾಗದು.  ಕಪ್ಪು ಹಣ ಕೂಡಿಟ್ಟವರು ಅದನ್ನು ಹಣದ ರೂಪದಲ್ಲಿಯೇ ಇಟ್ಟಿರುತ್ತಾರೆ ಎಂಬುದಕ್ಕೆ ಪುರಾವೆಗಳಿಲ್ಲ. ಅವರು ರಿಯಲ್ ಎಸ್ಟೇಟ್ ವ್ಯವಹಾರ ಸೇರಿದಂತೆ ವ್ಯಾಪಾರ–ಉದ್ಯಮ ರಂಗದಲ್ಲಿ ಹಣ ಹೂಡಿರುತ್ತಾರೆ. ಆದರೆ ಇಲ್ಲಿ ಕಷ್ಟ ಅನುಭವಿಸಬೇಕಾಗಿರುವುದು ಸಾಮಾನ್ಯ ಜನರು. ನ್ಯಾಯಮಾರ್ಗದಲ್ಲಿ ದುಡಿದು ಅಷ್ಟೋ ಇಷ್ಟೋ ದುಡ್ಡನ್ನು ತಮ್ಮ ಹತ್ತಿರ ಇಟ್ಟುಕೊಂಡಿರುವವರು.

ಅಲ್ಲದೇ 19 ವಿವಿಧ ಬಗೆಯ ಹಣಕಾಸು ಸಂಸ್ಥೆಗಳಲ್ಲಿ ನೋಟು ಬದಲಾವಣೆಗೆ ಅವಕಾಶ ನೀಡಿರುವುದು ಸಹ ದೊಡ್ಡ ಹಿನ್ನಡೆ. ಏಕೆಂದರೆ ಸಹಕಾರಿ ಬ್ಯಾಂಕ್‌ಗಳಂತಹ ಹಣಕಾಸು ಸಂಸ್ಥೆಗಳು ಬಹುಮಟ್ಟಿಗೆ ದುಡ್ಡಿರುವವರ ಕೈವಶದಲ್ಲಿವೆ. ಭಾರತ ಸಣ್ಣ ರಾಷ್ಟ್ರವಲ್ಲ. ಇಲ್ಲಿ ಸುಧಾರಣೆಗಳನ್ನು ತರುವ ಮೊದಲು ಸಾಮಾನ್ಯ ಜನರ ಮೇಲೆ ಆಗುವ ಪರಿಣಾಮಗಳ ಬಗ್ಗೆ ಗಂಭೀರವಾಗಿ ಯೋಚನೆ ಮಾಡುವುದು ಅವಶ್ಯಕ.
-ಅವಿನಾಶ ವಗರನಾಳ, ಗಂಗಾವತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.