ADVERTISEMENT

ಆಹಾರ ಸಂಸ್ಕೃತಿಗೆ ಒನಕೆಯೇಟು

ಎಂ.ಬಿ.ರಮಾಕಾಂತ, ಬೆಂಗಳೂರು .
Published 8 ಜುಲೈ 2013, 19:59 IST
Last Updated 8 ಜುಲೈ 2013, 19:59 IST

ಜೋಳ-ರಾಗಿ ಏಕೆ ಬೇಡ?  ಎಂಬ ಶಿರೋನಾಮೆಯ (ಜು. 5) ಸಂಪಾದಕೀಯ ತುಂಬ ಮಹತ್ವದ ಪ್ರಶ್ನೆಗಳನ್ನೆತ್ತಿದೆ. ಧಾರವಾಡದಂಥ ದೊಡ್ಡ ನಗರಗಳಲ್ಲಿ  ಜೋಳದ ರೊಟ್ಟಿ ತಟ್ಟುವವರು ಈಗಾಗಲೇ ಸಿಗ್ತಾ ಇಲ್ಲ  ಎಂದು ಖಾನಾವಳಿ ನಡೆಸುವವರು ದೂರುತ್ತಿದ್ದಾರೆ. ಪಡಿತರ ಅಕ್ಕಿಯೇ ಎಲ್ಲ ಕೆಳಸ್ತರದ ಕುಟುಂಬಗಳಿಗೂ ಹೊಕ್ಕಿದೆಯಾದ್ದರಿಂದ ನೀವಂದಂತೆ ಜೋಳದ ರೊಟ್ಟಿಯ ಸಂಸ್ಕೃತಿಗೇ ಏಟು ಬಿದ್ದಿದೆ.

ಜೋಳದ ಪೋಷಕಾಂಶಗಳು ಅಕ್ಕಿಗಿಂತ ಅದೆಷ್ಟೊ ರೀತಿಯಲ್ಲಿ, ದೈಹಿಕ ಕೆಲಸ ಮಾಡುವವರಿಗೆ ಆರೋಗ್ಯದಾಯಕವಾಗಿತ್ತು. ಮೇಲಾಗಿ ಭತ್ತಕ್ಕೆ ಸುರಿಯುವ ವಿಷದ ರಾಸಾಯನಿಕಗಳಿಗೆ ಹೋಲಿಸಿದರೆ ಜೋಳ ಅದೆಷ್ಟೊ ಪಾಲು ಸುರಕ್ಷಿತ ಎನ್ನಬೇಕು. ಭತ್ತ ಬೆಳೆಯಲು ನೀರೂ ಅಪಾರ ಪ್ರಮಾಣದಲ್ಲಿ ದುರ್ಬಳಕೆಯಾಗುತ್ತಿದೆ. ವಿಷವಸ್ತುಗಳು ಬೆರೆತ ಈ ನೀರು ಲೋಕವನ್ನೆಲ್ಲ ರೋಗಗ್ರಸ್ತ ಮಾಡುತ್ತಿದೆ.

ಇತ್ತ ದಕ್ಷಿಣ ಕರ್ನಾಟಕದ ರಾಗಿಯೂ ಮೂಲೆಗುಂಪಾಗುತ್ತಿದೆ. ಮುದ್ದೆಗಿಂತ ಅನ್ನ ಬೇಯಿಸುವುದೇ ಸುಲಭವಾಗಿದ್ದರಿಂದ ಮಳೆಯಾಶ್ರಿತ ಈ ಬೆಳೆಗೂ ಬೇಡಿಕೆ ಇಲ್ಲವಾಗುತ್ತಿದೆ. ರಾಗಿಯಲ್ಲಿ ಇತರೆಲ್ಲ ಧಾನ್ಯಗಳಿಗಿಂತ ಹೆಚ್ಚಿನ ಪ್ರಮಾಣದ ಕ್ಯಾಲ್ಸಿಯಂ ಅಂಶ ಇದ್ದು, ರೈತರ ಮೂಳೆ ಗಟ್ಟಿ ಇಡುವಲ್ಲಿ, ಮಹಿಳೆಯರ ಋತುಬಂಧದ ನಂತರದ ಆರೋಗ್ಯವನ್ನು ಸುಸ್ಥಿತಿಯಲ್ಲಿ ಇಡಲು ನೆರವಾಗುತ್ತಿತ್ತು.

`ಹಸಿರು ಕ್ರಾಂತಿ'ಯ ಅಬ್ಬರದಲ್ಲಿ ನಾವು ನವಣೆ, ಸಜ್ಜೆ, ಬರಗು, ಆರಕ ಮುಂತಾದ ಮಹತ್ವದ ತೃಣಧಾನ್ಯಗಳನ್ನು ಕಳೆದುಕೊಂಡೆವು. ನಂತರದ ಹಂತವಾಗಿ ಈಗ ಜೋಳ, ರಾಗಿಯನ್ನೂ ಮನೆಯಿಂದ ಆಚೆ ನೂಕಲು ಹೊರಟಿದ್ದೇವೆ.

ಅಗ್ಗದ ವೋಟ್‌ಬ್ಯಾಂಕ್ ರಾಜಕೀಯದ ಭಾಗವಾಗಿ ಈ ಒಂದು ರೂಪಾಯಿ ಅಕ್ಕಿ ಎಂಬುದು ಇಡೀ ಸಮಾಜವನ್ನು ನೀವಂದಂತೆ ಸಾಂಸ್ಕೃತಿಕ ಬೆಂಗಾಡಿನತ್ತ ಅಷ್ಟೇ ಅಲ್ಲ, ಆಸ್ಪತ್ರೆಗಳತ್ತ, ಗ್ರಾಮೀಣ ನೆಲೆಗಟ್ಟಿನ ಪತನದತ್ತ, ಪರಿಸರ ದಿವಾಳಿತನದತ್ತ ತಳ್ಳುತ್ತಿದೆ. ಸರ್ಕಾರ ಅಗ್ಗದ ಆಹಾರ ಕೊಡಬೇಕು ಆದರೆ ಸ್ಥಳೀಯ ಆಹಾರ ಸಂಸ್ಕೃತಿಯನ್ನು ತುಳಿಯಬಾರದು.
  - ಎಂ.ಬಿ.ರಮಾಕಾಂತ , ಬೆಂಗಳೂರು .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT