ಪ್ರಾಥಮಿಕ ಅಥವಾ ಪ್ರೌಢಶಾಲಾ ವಿದ್ಯಾರ್ಥಿಗಳ ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ ಪ್ರಶ್ನೆಪತ್ರಿಕೆಯಲ್ಲಿ ‘ರಾಹುಲ್ ಗಾಂಧಿ ಯಾರು?’ ಎಂಬ ಪ್ರಶ್ನೆ ಎದುರಾದರೆ, ಸಾರಾಸಗಟು ಅವರೆಲ್ಲ ‘ಕಾಂಗ್ರೆಸ್‌ನ ಯುವರಾಜ’ ಎಂಬ ತಪ್ಪು ಉತ್ತರ ಕೊಡುವ ಸಂಭವವೇ ಹೆಚ್ಚಾಗಿರುತ್ತದೆ.
ಏಕೆಂದರೆ ಮಾಧ್ಯಮಗಳು ರಾಹುಲ್ ಗಾಂಧಿ ಅವರನ್ನು ಕಾಂಗ್ರೆಸ್‌ನ ಯುವರಾಜನೆಂದು ಹೇಳುತ್ತವೆ ಹೊರತು ಅವರು ಆ ಪಕ್ಷದ ಉಪಾಧ್ಯಕ್ಷ ಎಂದು ಹೆಚ್ಚಾಗಿ ಪ್ರಸ್ತಾಪಿಸುವುದೇ ಇಲ್ಲ. ಕೆಲವು ರಾಜಕಾರಣಿಗಳು ಹಾಗೂ ಇನ್ನಿತರರಿಗೆ ಸಾಮ್ರಾಟ, ಚಕ್ರವರ್ತಿ ಎಂದೆಲ್ಲ ಮಾಧ್ಯಮಗಳು ಪಟ್ಟಾಭಿಷೇಕ ಮಾಡುವುದೂ ಇದೆ.
ನಾವೀಗ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದೇವೆ. ರಾಜಮಹಾರಾಜರು, ಚಕ್ರವರ್ತಿಗಳು, ಸಾಮಂತರು, ಪಾಳೇಗಾರರೆಲ್ಲ ಭೂತಕಾಲಕ್ಕೆ ಸರಿದು ಎಷ್ಟೋ ವರ್ಷಗಳಾಗಿವೆ. ವರ್ತಮಾನದಲ್ಲಿ ಅಂತಹ ಪದಗಳನ್ನು ಸಂದರ್ಭಾನುಸಾರ ಆಲಂಕಾರಿಕವಾಗಿ ಬಳಸಬಹುದೇ ಹೊರತು ವಾಸ್ತವರೂಪದಲ್ಲಲ್ಲ. ರಾಹುಲ್ ಅವರ ತಲೆಯ ಮೇಲೀಗ ಕಿರೀಟವೂ ಇಲ್ಲ, ಕೈಯಲ್ಲಿ ಕತ್ತಿಯೂ ಇಲ್ಲ. ಅವರು ಕುದುರೆ ಮೇಲೆ ಸಂಚರಿಸುತ್ತಲೂ ಇಲ್ಲ.
ಅನಗತ್ಯವಾಗಿ ಒಬ್ಬ ವ್ಯಕ್ತಿಯನ್ನು ಅಟ್ಟಕ್ಕೇರಿಸುವುದು ಅಥವಾ ಹಾಸ್ಯಾಸ್ಪದವಾಗಿ ಬಿಂಬಿಸುವುದು- ಇವೆಲ್ಲ ಬಹುಜನರನ್ನು ತಲುಪುವ ಮಾಧ್ಯಮಗಳಿಂದ ಆಗಕೂಡದು. ಯಾವುದೇ ವಿಷಯ, ಸುದ್ದಿಗಳಿಗೆ ವಿವೇಚನೆಯ ತಳಹದಿ ಇಲ್ಲದಿದ್ದರೆ ಸಮಾಜಕ್ಕೆ ತಪ್ಪುಸಂದೇಶಗಳನ್ನು ರವಾನಿಸಿದಂತಾಗುತ್ತದೆ. ಅಲ್ಲದೆ ಭಾಷೆ ಕೂಡ ಕುಲಗೆಡುತ್ತದೆ. ಮುಖ್ಯವಾಗಿ ಎಳೆಯ ಮನಸ್ಸುಗಳು ಗೊಂದಲಗೊಳ್ಳುವ ಸಂಭವ ಹೆಚ್ಚಾಗಿರುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.