ADVERTISEMENT

ಏಕೆ ಈ ಅಸಹನೆ?

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2018, 19:30 IST
Last Updated 1 ಏಪ್ರಿಲ್ 2018, 19:30 IST

ಅಹಮದಾಬಾದ್‌ನಲ್ಲಿ ಸವರ್ಣೀಯರ ಆಕ್ರೋಶಕ್ಕೆ ದಲಿತನೊಬ್ಬನ ಹತ್ಯೆಯಾಗಲು ಕಾರಣ: ಕುದುರೆ ಸವಾರಿ. ಮೆಟ್ರಿಕ್ಯುಲೇಷನ್ ಓದಿದ ದಲಿತ ಯುವಕನೊಬ್ಬ ಕುದುರೆ ಖರೀದಿಸಿದ್ದ. ಅದರ ಮೇಲೆ ಸವಾರಿ ಮಾಡುತ್ತಾ, ತನ್ನ ತಂದೆಗೆ ಕೃಷಿಯಲ್ಲಿ ಸಹಾಯ ಮಾಡುತ್ತಿದ್ದ. ಆದರೆ ದಲಿತನೊಬ್ಬ ಕುದುರೆ ಸವಾರಿ ಮಾಡುವುದು ಸವರ್ಣೀಯರ ಕಣ್ಣುರಿಗೆ ಕಾರಣವಾಯಿತು. ಅದು ಹತ್ಯೆಯಲ್ಲಿ ಅಂತ್ಯ ಕಂಡಿದೆ. ಏಕೆ ಈ ಅಸಹನೆ?

ದಲಿತರು ಇರುವುದೇ ಮೇಲ್ಜಾತಿಯವರ ಮನೆಯ ಮುಸುರೆ ತಿಕ್ಕಲಿಕ್ಕೆ, ಅವರ ಬಟ್ಟೆ ತೊಳೆಯಲಿಕ್ಕೆ ಎಂಬ ಭಾವನೆ ಇನ್ನೂ ಹೋಗಿಲ್ಲ ಎಂಬುದಕ್ಕೆ ಈ ನಿದರ್ಶನ ಸಾಕ್ಷಿ. ಇಂತಹ ಕೆಲಸಗಳಿಗೆ ದಲಿತರನ್ನು ಹುರಿದುಂಬಿಸುತ್ತಾರೆ, ಹುಳಿಮಜ್ಜಿಗೆ ಕೊಟ್ಟು ಗೌರವಿಸುತ್ತಾರೆ. ಅಲ್ಲದೇ, ಅಡ್ಡದಾರಿ ಹಿಡಿಯಲು ಏನು ಬೇಕೋ ಅದನ್ನೆಲ್ಲಾ ಒದಗಿಸುತ್ತಾರೆ. ಒಟ್ಟಿನಲ್ಲಿ ಅವರ ಮನೆಯ ಚಾಕರಿಗೆ ಮಾತ್ರ ಇವರು ಮೀಸಲಿರಬೇಕು ಎಂಬುದು ಅವರ ಇಂಗಿತ.

ದಲಿತರು ಮತ್ತು ಹಿಂದುಳಿದವರ ಮಕ್ಕಳು ಓದುವುದಿರಲಿ, ಉತ್ತಮ ಬಟ್ಟೆ ಧರಿಸಿದರೂ ಅದನ್ನು ಸಹಿಸಲಾಗದು. ಈ ವಕ್ರದೃಷ್ಟಿ ಇನ್ನೂ ಜೀವಂತವಾಗಿದೆ. ಸ್ವತಂತ್ರ ಭಾರತದ 70 ವರ್ಷಗಳ ಆಡಳಿತದಲ್ಲಿ ಅಸ್ಪೃಶ್ಯತೆ ನಿವಾರಣೆಯಾಗಿದೆ. ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಎಲ್ಲರೂ ಸಮಾನರಾಗಿದ್ದೇವೆ. ಇನ್ನು ಮೀಸಲಾತಿ ಮುಂದುವರೆಸುವ ಅಗತ್ಯವಿಲ್ಲ ಎನ್ನುವ ಕೂಗುಮಾರಿಗಳು ಈ ಕೃತ್ಯವನ್ನು ಒಳಗಣ್ಣು ತೆರೆದು ನೋಡಲಿ.
→ ಗಣಪತಿ ನಾಯ್ಕ, ಕಾನಗೋಡ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.