ADVERTISEMENT

ಕುಂದು ಕೊರತೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2017, 19:30 IST
Last Updated 7 ಫೆಬ್ರುವರಿ 2017, 19:30 IST
ಕಸ ತೆರವುಗೊಳಿಸಿ 
ಆರ್.ಟಿ.ನಗರ ಮುಖ್ಯರಸ್ತೆಯ ಬಾಬಾರೆಡ್ಡಿಪಾಳ್ಯದ ರಾಜಕಾಲುವೆಯಲ್ಲಿ ಕಸ ಸುರಿಯಲಾಗುತ್ತಿದೆ. ಸಾರ್ವಜನಿಕರು, ಹೋಟೆಲ್‌ನವರು ಪ್ರತಿನಿತ್ಯ ಕಸ ಸುರಿದು ರಾಜಕಾಲುವೆಯನ್ನು ಬಂದ್ ಮಾಡಿದ್ದಾರೆ. ಇದರಿಂದಾಗಿ ಮಳೆ ನೀರು ಸರಾಗವಾಗಿ ಹರಿಯಲು ತೊಂದರೆಯಾಗಿದೆ.
 
ರಾಜಕಾಲುವೆಯ ಪಕ್ಕದಲ್ಲಿ ಮನೆ ಮಾಡಿಕೊಂಡಿರುವ ಸಾರ್ವಜನಿಕರಿಗೆ ಕಸದ ದುರ್ನಾತದಿಂದ ನೆಮ್ಮದಿ ಇಲ್ಲದಂತೆ ಆಗಿದೆ. ಬಿಬಿಎಂಪಿ ಅಧಿಕಾರಿಗಳು ಶೀಘ್ರ ಇತ್ತ ಗಮನ ಹರಿಸಬೇಕು.
-ಬಾಬರೆಡ್ಡಿಪಾಳ್ಯ ನಿವಾಸಿಗಳು
 
**
ಬೀದಿದೀಪ ಬೆಳಗಿಸಿ
ಬಿ.ಕೆ.ಸರ್ಕಲ್‌ನಿಂದ ಬನ್ನೇರುಘಟ್ಟ ಮುಖ್ಯ ರಸ್ತೆಗೆ ಸೇರುವ ಲೊಯೊಲೊ ಸ್ಕೂಲ್‌ ರಸ್ತೆಯಲ್ಲಿ ಬೀದಿದೀಪಗಳಿಲ್ಲದೆ ಸಾರ್ವಜನಿಕರ ಓಡಾಟಕ್ಕೆ ತುಂಬಾ ತೊಂದರೆಯಾಗಿದೆ. ಅಹಿತಕರ ಘಟನೆಗಳಿಗೆ ಈ ವಾತಾವರಣ ಉತ್ತೇಜನ ನೀಡುವಂತಿದೆ. ಅಧಿಕಾರಿಗಳು ಶೀಘ್ರ ಇತ್ತ ಗಮನ ಹರಿಸಿ, ಬೀದಿದೀಪ ಅಳವಡಿಸಲು ಕ್ರಮ ಕೈಗೊಳ್ಳಬೇಕು.
-ವಿ. ಹೇಮಂತಕುಮಾರ್‌
 
**
ಹೆಚ್ಚುತ್ತಿದೆ ಕಳ್ಳತನ
ಯಲಹಂಕ ಬಳಿಯ ಎನ್‌ಇಎಸ್‌ ಬಸ್‌ ನಿಲ್ದಾಣದಲ್ಲಿ ಪಿಕ್‌ಪಾಕೆಟ್ ಮತ್ತು ಮೊಬೈಲ್ ಕಳ್ಳತನ ವಿಪರೀತ ಹೆಚ್ಚಾಗಿದೆ. ಇದರಿಂದ ಸಾವಿರಾರು ಪ್ರಯಾಣಿಕರ ನೆಮ್ಮದಿ ಹಾಳಾಗಿದೆ. ಅಂಗವಿಕಲನಾದ ನಾನೂ ಸಹ ಈ ಕಳ್ಳರ ಕಾಟದ ‘ಫಲಾನುಭವಿ’.
 
ಯಶವಂತಪುರ, ಕೆಂಗೇರಿ, ದೊಡ್ಡಬಳ್ಳಾಪುರ ಸೇರಿದಂತೆ ವಿವಿಧೆಡೆಗೆ ಇಲ್ಲಿಂದ ಬಸ್ ಸಂಪರ್ಕ ಇದೆ. ಪ್ರತಿದಿನ ನೂರಾರು ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಮತ್ತು ಎಪಿಎಸ್‌ಆರ್‌ಟಿಸಿ (ಆಂಧ್ರ ಸಾರಿಗೆ ನಿಗಮ) ಬಸ್‌ಗಳು ಇದೇ ಮಾರ್ಗದಲ್ಲಿ ಸಂಚರಿಸುತ್ತವೆ. ಪ್ರಯಾಣಿಕರ ಭದ್ರತೆ ಪೊಲೀಸರು ಕಿಂಚಿತ್ತೂ ಗಮನ ಹರಿಸಿಲ್ಲ. ಹಿರಿಯ ಅಧಿಕಾರಿಗಳು ಶೀಘ್ರ ಇತ್ತ ಗಮನ ಹರಿಸಿ ಕಳ್ಳರ ಉಪಟಳಕ್ಕೆ ಕಡಿವಾಣ ಹಾಕುವಂತೆ ಸ್ಥಳೀಯ ಪೊಲೀಸರಿಗೆ ಸೂಚನೆ ನೀಡಬೇಕಿದೆ.
-ಎಂ.ದೇವರಾಜು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.