`ಬೇಂದ್ರೆ ಕವಿತೆಗಳನ್ನು ಇಂಗ್ಲಿಷ್ ಭಾಷೆಗೆ ವಿ. ಕೃ. ಗೋಕಾಕರು ಅನುವಾದ ಮಾಡಿದ್ದು ಕಾವ್ಯವನ್ನು ಸಮರ್ಪಕವಾಗಿ ಗ್ರಹಿಸದೆ ಕೊಲೆ ಮಾಡಿದ್ದರು~ ಎಂದು ಎಸ್. ದಿವಾಕರ ಅವರು ಹೇಳಿದ್ದಾರೆ.
ಭಾನುವಾರ (ಜೂನ್ 17) ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆದ ಜಿ. ಎಸ್. ಅಮೂರ ಅನುವಾದಿಸಿದ `ದಿ ಸ್ಪೈಡರ್ ಅಂಡ್ ದಿ ವೆಬ್~ ಪುಸ್ತಕವನ್ನು ಯು. ಆರ್. ಅನಂತಮೂರ್ತಿ ಬಿಡುಗಡೆ ಮಾಡಿದ ಸಂದರ್ಭದಲ್ಲಿ, ವಿ. ಕೃ. ಗೋಕಾಕ ಅವರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ.
ಗೋಕಾಕ ಅವರಿಗೆ ಇಂಗ್ಲಿಷ್, ಕನ್ನಡ, ಸಂಸ್ಕೃತ ಭಾಷೆಗಳ ಮೇಲೆ ಇದ್ದ ಪ್ರಭುತ್ವದ ಅರಿವು ದಿವಾಕರ ಅವರಿಗೆ ಇಲ್ಲವಲ್ಲ ಎಂದು ಕನಿಕರವೆನಿಸುತ್ತದೆ. ಸಿಮ್ಲಾದಲ್ಲಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ನಿರ್ದೇಶಕರಾಗಿ ಭಾರತದ ಆಯ್ದ ಸಾಹಿತಿಗಳ, ಕಲಾವಿದರ, ಸಂಶೋಧನೆಗೆ ದಾರಿ ತೋರಿಸಿದವರು ಅವರು. ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಅವರು ಭಾಷಾಂತರಕ್ಕಾಗಿಯೇ ಕಮ್ಮಟಗಳನ್ನು ಏರ್ಪಡಿಸಿ ಇಂಗ್ಲಿಷ್ ಹಾಗೂ ಭಾರತದ ವಿವಿಧ ಭಾಷೆಗಳ ಕೊಡುಕೊಳ್ಳುವಿಕೆ ಹೇಗಿರಬೇಕೆನ್ನುವುದನ್ನು ನಿರ್ದೇಶಿಸಿದವರು ಅವರು.
ಗೋಕಾಕರು ಇಂಗ್ಲಿಷ್ ಸಾಹಿತಿಗಳು. ಇಂಗ್ಲಿಷ್‌ನಲ್ಲಿ 30 ವಿವಿಧ ಪ್ರಕಾರದ ಕೃತಿಗಳನ್ನು ರಚಿಸಿದ ಕೀರ್ತಿ ಅವರದು. ಬೇಂದ್ರೆ ಅವರಿಗೆ ಇಂಥ ಒಬ್ಬ ಅಸಾಧಾರಣ ವಿದ್ವಾಂಸರನ್ನು ಇಂಗ್ಲಿಷ್ ಭಾಷೆಗೆ ಒಪ್ಪಿಸುವ ಮನಸ್ಸಾಗಲಿಲ್ಲ. ಗೋಕಾಕರನ್ನೆಳೆದು ತಂದು ಕನ್ನಡ ಸಾಹಿತ್ಯ ರಥಕ್ಕೆ ಹೂಡಿದರು. ಜ್ಞಾನಪೀಠ ಪ್ರಶಸ್ತಿಯವರೆಗೂ ಅದನ್ನೆಳೆದುಕೊಂಡು ಹೋದರು. ಬೇಂದ್ರೆ ಅವರನ್ನು ಗೋಕಾಕರು ಗುರು ಎಂದೇ ಭಾವಿಸಿದ್ದರು.
ಇಂಥವರು ಬೇಂದ್ರೆ ಕವಿತೆಗಳನ್ನು ಭಾಷಾಂತರಿಸಲು ಅಸಮರ್ಥರೆ? ಅವರು ಮಾಡಿದ ಅನುವಾದ ಬೇಂದ್ರೆ ಕವಿತೆಗಳ ಕೊಲೆಯೆ? ತಮ್ಮ ಪ್ರಸಿದ್ಧ `ರುದ್ರವೀಣೆ~ ಕವಿತೆಯ ಭಾಷಾಂತರವನ್ನು ಸ್ವತಃ ಬೇಂದ್ರೆ ಮೆಚ್ಚಿಕೊಂಡು `ನನ್ನ ಮೂಲ ಕವಿತೆಗಿಂತ ನಿನ್ನ ಭಾಷಾಂತರವೇ ಚೆನ್ನಾಗಿದೆ~ ಎಂದು ಬೆನ್ನು ತಟ್ಟಿದ ಪ್ರಸಂಗವನ್ನು ಬೇಂದ್ರೆ-ಗೋಕಾಕ ನಿಕಟವರ್ತಿಗಳು ಆಗೀಗ ಪ್ರಸ್ತಾಪಿಸುತ್ತಿರುತ್ತಾರೆ.
ಗೋಕಾಕರಿಗೆ ಜ್ಞಾನಪೀಠ ಪ್ರಶಸ್ತಿಯನ್ನು ಪ್ರದಾನ ಮಾಡಿದ ಅಂದಿನ ಪ್ರಧಾನ ಮಂತ್ರಿಗಳಾದ ಪಿ.ವಿ. ನರಸಿಂಹರಾವ್, ತಮ್ಮ ಭಾಷಣದಲ್ಲಿ `ಭಾರತ ಸಿಂಧು ರಶ್ಮಿ~ಯ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ. ಗೋಕಾಕರೇ ಇಂಗ್ಲಿಷ್‌ಗೆ ಭಾಷಾಂತರಿಸಿದ `ಭಾರತ ಸಿಂಧು ರಶ್ಮಿ~ಯ ಕೆಲವು ಸಾಲುಗಳನ್ನು ಓದಿದ ಅವರು ಭಾಷಾಂತರವೇ ಇಷ್ಟು ಚೆನ್ನಾಗಿರಬೇಕಾದರೆ ಮೂಲವು ಅದೆಷ್ಟು ಚೆನ್ನಾಗಿದ್ದೀತು ಎಂದು ಉದ್ಗರಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.