ನಟರಾಜ್ ಹುಳಿಯಾರ್ ಅವರ ಲೇಖನಕ್ಕೆ (ಪ್ರ.ವಾ., ಅ. 14) ಪ್ರತಿಕ್ರಿಯೆ. ಅವರು ‘ರಾಜಕೀಯ ಅಧಿಕಾರ ಹಿಡಿಯುವ ಧಾವಂತವಿಲ್ಲದೆ, ಜನರ ದನಿ, ಆತ್ಮಸಾಕ್ಷಿಯಾಗುವ ಮೂಲಕ ಇವತ್ತಿಗೂ ಇಂಡಿಯಾದ ಜನಮಾನಸದಲ್ಲಿ ಹೊಸ ನಂಬಿಕೆ ಹುಟ್ಟಿಸಬಹುದೆಂಬುದನ್ನು ಜೆ.ಪಿ. ಮತ್ತೊಮ್ಮೆ ತೋರಿಸಿಕೊಟ್ಟಿದ್ದರು’ ಎಂದು ಜಯಪ್ರಕಾಶ ನಾರಾಯಣರ ಬಗ್ಗೆ ಹೇಳುತ್ತಾರೆ.
ಆದರೆ ರಾಜಕೀಯ ಪಕ್ಷವೊಂದರ ಜೊತೆ ತಮ್ಮನ್ನು ಗುರುತಿಸಿಕೊಂಡ ಚಂಪಾ ಅವರನ್ನು ಕುರಿತು ‘ಇವತ್ತಿಗೂ ಜೆ.ಪಿ. ಚಳವಳಿಯ ಮೂಲಚೈತನ್ಯವನ್ನು ಉಳಿಸಿಕೊಂಡಿರುವ ಚಂಪಾಗೆ ಭಾರತ ಯಾತ್ರಾ ಕೇಂದ್ರ ಈ ಸಲದ ‘ಲೋಕನಾಯಕ ಜಯಪ್ರಕಾಶ ನಾರಾಯಣ ಪ್ರಶಸ್ತಿ’ಯನ್ನು ಕೊಟ್ಟಿರುವುದು ಅರ್ಥಪೂರ್ಣ’ ಎನ್ನುತ್ತಾರೆ.
ಮತ್ತೆ ಜೆ.ಪಿ.ಯ ಮುಂದಿನ ತಲೆಮಾರನ್ನು ಪ್ರಸ್ತಾಪಿಸುತ್ತಾ ‘ಆದರೆ ಜೆ.ಪಿ.ಯವರ ನೇತೃತ್ವದಲ್ಲಿ ಮಹಾತ್ಮ ಗಾಂಧಿಯವರ ಸಮಾಧಿಯೆದುರು ಪ್ರತಿಜ್ಞೆ ಮಾಡಿದ ರಾಜಕಾರಣಿಗಳಿಗೆ ಮಾತ್ರ ತಮ್ಮ ಹಳೆಯ ತೆವಲುಗಳನ್ನು ಬಿಟ್ಟು ಹೊಸ ಮನುಷ್ಯರಾಗುವುದು ಸಾಧ್ಯವಾಗಲಿಲ್ಲ’ ಎನ್ನುತ್ತಾ ಮೊರಾರ್ಜಿ, ಚರಣ್ ಸಿಂಗ್, ಅಡ್ವಾಣಿ, ವಾಜಪೇಯಿ ಅವರನ್ನು ಪ್ರಸ್ತಾಪಿಸುತ್ತಾರೆಯೇ ಹೊರತು ಲಾಲುಪ್ರಸಾದ್, ಮುಲಾಯಂ ಮುಂತಾದ ಜೆ.ಪಿ. ಚಳವಳಿಯಿಂದಲೇ ರಾಜಕೀಯಕ್ಕೆ ಬಂದು ಈಗಲೂ ಸಕ್ರಿಯರಾಗಿರುವವರನ್ನು ಯಾಕೆ ಹೆಸರಿಸುವುದಿಲ್ಲ. ಜಾಣ ಮರೆವೇ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.