ಕೋಮುವಾದಕ್ಕೆ ಉತ್ತೇಜನ ನೀಡುವವರಿಗೆ ಹಾಗೂ ನಾಸ್ತಿಕರಿಗೆ ಮತ ಹಾಕದಂತೆ ಕೇರಳ ಕ್ಯಾಥೋಲಿಕ್ ಬಿಷಪ್‌ರ ಸಮಿತಿ ಕರೆ ನೀಡಿದೆ (ಪ್ರ.ವಾ. ಮಾ.10). ಕೋಮುವಾದಿಗಳಿಗೆ ಮತ ಹಾಕದಂತೆ ಹೇಳಿರುವುದು ಸರಿಯಾಗಿದೆ. ಆದರೆ ನಾಸ್ತಿಕರಿಗೆ ಮತ ಹಾಕದಂತೆ ಹೇಳಿರುವುದು ಎಷ್ಟರಮಟ್ಟಿಗೆ ಸರಿ?
ನಾಸ್ತಿಕರೆಂದ ಮಾತ್ರಕ್ಕೆ ಅವರೆಲ್ಲ ಕೆಟ್ಟವರೇ? ದೇವರಲ್ಲಿ ನಂಬಿಕೆಯಿರದ ವ್ಯಕ್ತಿ ಒಳ್ಳೆಯವನಾಗಿರಲು ಸಾಧ್ಯವಿಲ್ಲವೇ? ನಾಸ್ತಿಕರಾಗಿದ್ದುಕೊಂಡೇ ಅಭಿವೃದ್ಧಿ ಕೆಲಸ ಮಾಡಿಸಿರುವ, ಜನರಿಗಾಗಿ ದುಡಿದಿರುವ, ಸಮಾಜ ಸೇವೆ ಮಾಡಿರುವ ರಾಜಕಾರಣಿಗಳು ಭಾರತೀಯ ರಾಜಕಾರಣದಲ್ಲಿ ಸಾಕಷ್ಟು ಮಂದಿ ಇದ್ದಾರೆ.
ಇವರೆಲ್ಲ ಜನರಲ್ಲಿಯೇ ಜನಾರ್ದನನನ್ನು ಕಂಡವರು. ಭಾರತೀಯ ಪರಂಪರೆಯಲ್ಲಿ ನಾಸ್ತಿಕವಾದಕ್ಕೆ ಅದರದ್ದೇ ಆದ ಪ್ರಾಮುಖ್ಯ ಇದೆ. ನಾಸ್ತಿಕರನ್ನು ಎಂದಿಗೂ ಭಾರತ ಕೀಳಾಗಿ ನೋಡಿಲ್ಲ. ದೇವರನ್ನು ನಂಬುವುದು ಬಿಡುವುದು ವೈಯಕ್ತಿಕ ವಿಚಾರ. ಹೇರಿಕೆ ಸಲ್ಲ. ಹೀಗಾಗಿ ಈ ಬಾರಿ ಚುನಾವಣೆಯಲ್ಲಿ ನಾಸ್ತಿಕ-–ಆಸ್ತಿಕ ಎಂಬ ಗೊಂದಲಕ್ಕೆ ಬೀಳದೆ, ಯಾರು ಪ್ರಾಮಾಣಿಕರೋ ಅವರಿಗೆ ಮಾತ್ರ ಮತ ಹಾಕೋಣ. ಇಂತಹ ವಿಚಾರಗಳಲ್ಲಿ ಯಾವುದೇ ಕಾರಣಕ್ಕೂ ಧರ್ಮವನ್ನು ಎಳೆದು ತರುವುದು ಬೇಡ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.