ADVERTISEMENT

ನೆಪಕ್ಕೆ ಮಾತ್ರ ನಿಲ್ದಾಣ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2012, 19:30 IST
Last Updated 2 ಏಪ್ರಿಲ್ 2012, 19:30 IST

ನೆಪಕ್ಕೆ ಮಾತ್ರ ನಿಲ್ದಾಣ
ಹಳೆಯ ಮದ್ರಾಸು ರಸ್ತೆಯಲ್ಲಿರುವ `ಟಿನ್ ಫ್ಯಾಕ್ಟರಿ~ ನಿಲ್ದಾಣ ಸಮಸ್ಯೆಯ ಗೂಡುಗಳಾಗಿವೆ. ಮಾರ್ಕೆಟ್ ಕಡೆ ಹೊರಡುವ ಪ್ರಯಾಣಿಕರಿಗಾಗಿ ನಿರ್ಮಿಸಿರುವ ಸಾಲು ಸಾಲಾಗಿನ ಐದು ನಿಲ್ದಾಣಗಳ ಪೈಕಿ ಪ್ರಯಾಣಿಕರು ಕೂರಲು  ಮೇಜೇ ಇರುವುದಿಲ್ಲ.

ಹಿಂದಿನಿಂದ ಮಲ-ಮೂತ್ರ ವಿಸರ್ಜನೆಯ ಗಬ್ಬುನಾತ ಬೇರೆ. ಒಂಟಿ ಕಂಬಿಗಳ ಮೇಲೆ ಕಷ್ಟಪಟ್ಟು ಕುಳಿತು ಬಸ್ಸಿಗೆ ಕಾಯಬೇಕಾಗಿದೆ. ದಯಮಾಡಿ ನಿಲ್ದಾಣಗಳನ್ನು ಸರಿಪಡಿಸಿ ಪ್ರಯಾಣಿಕರಿಗೆ ಅನುಕೂಲವಾಗಲು ಸ್ಪಂದಿಸಿ.
-ಬಿ.ಎಸ್. ನಾರಾಯಣಸ್ವಾಮಿ

ಪ್ರಯಾಣಿಕರ ಕಷ್ಟ ನೀಗಲಿ
ಮಾಗಡಿ ಮುಖ್ಯ ರಸ್ತೆಯಲ್ಲಿರುವ ಸುಂಕದಕಟ್ಟೆಯ ಬಿಎಂಟಿಸಿ ಬಸ್‌ಸ್ಟಾಪ್‌ನಲ್ಲಿ 3-4 ಖಾಸಗಿ ದೊಡ್ಡ ಬಸ್‌ಗಳು ಒಂದರ ಹಿಂದೆ ಒಂದು ನಿಲ್ಲುತ್ತವೆ. ಬಿಎಂಟಿಸಿ ಬಸ್‌ಗಳು ಅದರ ಪಕ್ಕದಲ್ಲಿ ಹಾದು ದೂರಹೋಗಿ ನಿಲ್ಲುತ್ತಿವೆ.
 
ಇದರಿಂದಾಗಿ ವಯಸ್ಸಾದವರು, ಗರ್ಭಿಣಿಯರು, ಓಡಿಹೋಗಿ ಬಸ್ ಹತ್ತಲು ಸಾಧ್ಯವಾಗುತ್ತಿಲ್ಲ. ಇನ್ನೊಂದು ಬಸ್ಸಿಗೆ ಗಂಟೆಗಟ್ಟಲೆ ಕಾಯಬೇಕಾಗಿದೆ.  ಯಾವುದೇ ಕಾರಣಕ್ಕೂ ಬಿಎಂಟಿಸಿ ಬಸ್‌ಹೊರತು ಪಡಿಸಿ ಬೇರೆ ಬಸ್ ನಿಲ್ಲದಂತಾಗಲಿ...

ಖಾಸಗಿ ವಾಹನದವರಿಗೆ ಮತ್ತು ಆಟೊರಿಕ್ಷಾದವರಿಗೆ ಪ್ರತ್ಯೇಕ ಸ್ಥಳ ಏರ್ಪಾಡು ಮಾಡುವ ಅಗತ್ಯವಿದೆ. ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳಲು ಮನವಿ.
-ಕೆ.ಆರ್. ರಾಘವೇಂದ್ರರಾವ್

ಬಸ್ ಷೆಲ್ಟರ್ ಇಲ್ಲ, ರಸ್ತೆಯಿಲ್ಲ

ನಗರದ ಅತ್ಯಂತ ಪ್ರಮುಖ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ರಸ್ತೆಗೆ ಸಂಪರ್ಕ ಕಲ್ಪಿಸುವ ಯಲಹಂಕದ ಕೋಗಿಲು ಕ್ರಾಸ್, ಬೆಳ್ಳಹಳ್ಳಿ ರಸ್ತೆ ಈಚೆಗಷ್ಟೆ ವಿಸ್ತಾರ ಗೊಳಿಸಲಾಗಿದೆ. ಆದರೆ  ಕಳಪೆ ಕಾಮಗಾರಿಯಿಂದ ಪಾದಚಾರಿ ರಸ್ತೆ ಹೋಗಲಿ, ನಡುರಸ್ತೆಯೇ ಸಂಚಾರಕ್ಕೆ ಯೋಗ್ಯವಾಗಿಲ್ಲ. ಮೋರಿಯ ಮೇಲಿನ ಸಿಮೆಂಟ್ ಸ್ಲಾಬ್‌ಗಳು ಕಳಪೆ ದರ್ಜೆಯಿಂದ ಅಲ್ಲಲ್ಲಿ ಕಿತ್ತುಹೋಗಿವೆ. 

ಅವೈಜ್ಞಾನಿಕ ರಸ್ತೆ ವಿಭಜನೆಯಿಂದ ಸರಾಗ ಸಂಚಾರಕ್ಕೂ ತೊಂದರೆಯಾಗುತ್ತಿದೆ. ಅಲ್ಲದೆ ಈ ರಸ್ತೆಯು ಪಾದಚಾರಿ ರಸ್ತೆಗಿಂತ ಕೆಳಮಟ್ಟದಲ್ಲಿದೆ. ಅಕ್ಕಪಕ್ಕದ ಅಂಗಡಿಯವರು ತಮ್ಮ ಅಂಗಡಿಗಳ ಮುಂದೆ ಸಿಮೆಂಟ್ ಇಳಿಜಾರುಗಳನ್ನು ನಿರ್ಮಿಸಿದ್ದರಿಂದ ರಸ್ತೆ ಮತ್ತಷ್ಟು ಕಿರಿದಾಗಿದೆ.

ಕೋಗಿಲು ಕ್ರಾಸ್‌ನಿಂದ ಬೆಳ್ಳಹಳ್ಳಿಯವರೆಗಿನ ಸುಮಾರು 5 ಕಿ.ಮೀ. ದೂರದ ರಸ್ತೆಯಲ್ಲಿ ಒಂದೇ ಒಂದು ಸಾಧಾರಣ ಬಸ್ ಷೆಲ್ಟರ್‌ಗಳು ಇಲ್ಲ. ವಿರಳವಾಗಿ ಬರುವ ಬಸ್ಸುಗಳಿಗೆ ಗಂಟೆಗಟ್ಟಲೆ ಕಾಯುವ ಪ್ರಯಾಣಿಕರ ಪಾಡು ಹೇಳತೀರದಾಗಿದೆ.

ಈ ಬಗ್ಗೆ ಸ್ಥಳೀಯ ಶಾಸಕರು ಹಾಗೂ ಕಾರ್ಪೊರೇಟರ್‌ಗೆ ಪತ್ರ ಮುಖೇನ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಆದ್ದರಿಂದ ಈಗಲಾದರೂ ಬಿಬಿಎಂಪಿ ಮತ್ತು ಬಿಎಂಟಿಸಿ ಅಧಿಕಾರಿಗಳು ಇತ್ತ ಗಮನಹರಿಸಿ, ಇಲ್ಲಿನ ಪ್ರಯಾಣಿಕರ ಸೌಲಭ್ಯದ ಬಗ್ಗೆ ಕ್ರಮ ಕೈಗೊಳ್ಳುವರೆ?
-ಡಿ.ಎಸ್. ವೆಂಕಟಾಚಲಪತಿ

ಬಸ್‌ಗೆ ಕ್ರಮಕೈಗೊಳ್ಳಿ

ಬಿ.ಬಿ.ಎಂ.ಪಿ.ಯ ವಾರ್ಡ್ ನಂ. 85, ಮಾರತ್ ಹಳ್ಳಿಯಿಂದ ದೊಡ್ಡನೆಕ್ಕುಂದಿಗೆ ಮಾರ್ಗ ಸಂಖ್ಯೆ 333 ಎಫ್, 330 ಡಿ, 337ನ ಬಸ್ಸುಗಳಿವೆ. ಆ ಬಸ್ಸುಗಳು ಒಂದೂ ಸಮಯಕ್ಕೆ ಸರಿಯಾಗಿ ಬರುವುದಿಲ್ಲ. ಬೆಳಿಗ್ಗೆ 8-30ರ ನಂತರ ಶಾಲಾ ಕಾಲೇಜು, ಆಫೀಸುಗಳಿಗೆ ಹೋಗುವವರ ಪಾಡಂತೂ ಹೇಳತೀರದು. ಸಂಜೆ 5 ಗಂಟೆ ನಂತರ ಒಂದು ಬಸ್ಸು ಕಾಣುವುದಿಲ್ಲ. ಮಾರತ್‌ಹಳ್ಳಿಯಿಂದ ದೊಡ್ಡನೆಕ್ಕುಂದಿಗೆ ಎರಡೂವರೆ ಕಿಲೋಮೀಟರ್ ಹೋಗಬೇಕಾಗಿದೆ. 

 ದಯವಿಟ್ಟು ಸಂಬಂಧಪಟ್ಟ ಬಿ.ಎಂ.ಟಿ.ಸಿ. ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಸಮಯಕ್ಕೆ ಸರಿಯಾಗಿ ಬಸ್ಸುಗಳು ಸಂಚರಿಸುವಂತೆ ಮನವಿ.
- ನಿವಾಸಿಗಳು

ನಡೆಯಲು ದಾರಿ ಬೇಕು

ಮೈಸೂರು ರಸ್ತೆಯಲ್ಲಿ ಪಾದಚಾರಿಗಳು ನಡೆಯಲು ಜಾಗವೇ ಇಲ್ಲದಂತಾಗಿದೆ.   ಫುಟ್‌ಪಾತ್‌ಗಳನ್ನು ಅಗೆದು ರಸ್ತೆ ಅಗಲ ಮಾಡುತ್ತಿದ್ದಾರೆ. ಪಕ್ಕದ ಮೋರಿಗೆ ಸಿಮೆಂಟ್ ಚಪ್ಪಡಿಗಳನ್ನು ಹಾಕಿರುತ್ತಾರೆ. ಆ ಮೋರಿಯ ಮೇಲೆ ವಿವಿಧ ರೀತಿಯ ತಳ್ಳುಗಾಡಿಯಲ್ಲಿ ಅಂಗಡಿಗಳನ್ನು ತೆರೆದಿರುತ್ತಾರೆ. ಗೋಬಿ ಮಂಚೂರಿ, ಪಾನಿಪೂರಿ ಅಂಗಡಿ, ಕಬಾಬ್ ಅಂಗಡಿ, ಇಡ್ಲಿ, ವಡೆ, ಅನ್ನ ಸಾಂಬಾರ್ ಅಂಗಡಿ, ಎಗ್ ರೈಸ್ ಆಮ್ಲೆಟ್ ಅಂಗಡಿ.

ತಿಂಡಿಬೀದಿಯೇ ಈ ಫುಟ್‌ಪಾತ್‌ನಲ್ಲಿದೆ.  ವಾಲ್ಮೀಕಿನಗರದ ಒಂದನೇ ಮುಖ್ಯ ರಸ್ತೆಯಿಂದ 2ನೇ ಮುಖ್ಯ ರಸ್ತೆ ಹಳೆಯ ಟೋಲ್‌ಗೇಟ್‌ವರೆಗೂ ವಿಸ್ತರಿಸಿದೆ. ಸಂಜೆ 5 ಗಂಟೆಯಿಂದ ರಾತ್ರಿ 11-30ರ ವರೆಗೂ ವ್ಯಾಪಾರ ನಡೆಯುತ್ತಿರುತ್ತದೆ. ಪೊಲೀಸ್ ಇಲಾಖೆಯವರು ಹಾಗೂ ನಗರ ಸಭೆಯವರಾಗಲಿ ಕ್ರಮ ಜರುಗಿಸಲಿ.
- ನಾಗರಿಕರು

ಫುಟ್‌ಪಾತ್ ತೆರವುಗೊಳಿಸಿ

ಜಯನಗರ ವಿಧಾನ ಸಭೆ ಕ್ಷೇತ್ರ ಜೆ. ಪಿ. ನಗರ ವಾರ್ಡ್, ಜೆ ಪಿ ನಗರ ಡೆಲ್ಮಿಯ ಸರ್ಕಲ್‌ನಿಂದ ಜೆ ಪಿ ನಗರ 4ನೇ ಹಂತ ಡಾಲರ್ ಕಾಲೋನಿಗೆ ಹೋಗುವ ರಸ್ತೆಯಲ್ಲಿ ಫುಟ್‌ಪಾತ್‌ನಲ್ಲಿ ಹಣ್ಣಿನ ಗಾಡಿಯವರು ರಸ್ತೆಗಳನ್ನು ಒತ್ತುವರಿ ಮಾಡಿದ್ದಾರೆ.

ಸಾರ್ವಜನಿಕರು ಓಡಾಡಲು ಕಷ್ಟವಾಗಿದೆ. ರಸ್ತೆಯಲ್ಲಿ ಕೊಳೆತ ಹಣ್ಣು ಎಸೆಯುತ್ತಾರೆ. ತಿಪ್ಪೆಗುಂಡಿಯಂತಾಗಿದೆ. ಕೇಳಲು ಹೋದರೆ ನಾವು ಬಿ.ಬಿ.ಎಂ.ಪಿ. ಗೆ ಹಣ ಕೊಡುತ್ತೇವೆ ಮತ್ತು ಟ್ರಾಫಿಕ್ ಪೊಲೀಸರಿಗೆ ವಾರಕ್ಕೆ ರೂ. 500 ಮಾಮೂಲಿ ಕೊಡುತ್ತೇವೆ ಎಂದು ನಿರ್ದಾಕ್ಷಿಣ್ಯವಾಗಿ ಹೇಳುತ್ತಾರೆ. 

ಈ ರಸ್ತೆಯಲ್ಲಿ ಹಾಪ್ ಕಾಮ್ ತರಕಾರಿ, ಹಣ್ಣಿನ ಅಂಗಡಿ ಇದೆ. ಆದರೂ  ಫುಟ್‌ಪಾತ್ ಹಣ್ಣಿನ ವ್ಯಾಪಾರಿಗಳು ಹಾಪ್‌ಕಾಮ್ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಾರೆ. 

ಈಗ ಬೇಸಿಗೆ ಕಾಲವಾದ ಕಾರಣ ಈ ರಸ್ತೆಯಲ್ಲಿರುವ ಫುಟ್‌ಪಾತ್ ಹಣ್ಣಿನ ಅಂಗಡಿಗಳನ್ನು ತುರ್ತಾಗಿ ತೆರವು ಗೊಳಿಸಿ. ಕಾಲರಾ ಮತ್ತು ಇತರೆ ರೋಗಗಳನ್ನು ಹರಡುವುದನ್ನು ತಪ್ಪಿಸಬೇಕಾಗಿ ಈ ಬಡಾವಣೆಯ ನಾಗರಿಕರ ಮನವಿ.
- ಸಿ. ಚಂದ್ರಶೇಖರ್
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT