ADVERTISEMENT

ನ್ಯಾಯಾಲಯಗಳಲ್ಲಿ ಕಕ್ಷಿದಾರರಿಗೆ ಆಗುತ್ತಿರುವ ಮಾನಸಿಕ ಹಿಂಸೆ: ಒಂದು ಅನುಭವ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2017, 19:30 IST
Last Updated 16 ಅಕ್ಟೋಬರ್ 2017, 19:30 IST

ಡಾ. ಕೆ.ಕೆ. ಜಯಚಂದ್ರ ಗುಪ್ತ ಅವರ ಪತ್ರ ‘ತೀರ್ಪು– ನ್ಯಾಯ’ಕ್ಕೆ (ವಾ.ವಾ.,ಅ. 5) ನನ್ನ ಸಹಮತ ವ್ಯಕ್ತಪಡಿಸುತ್ತಾ ನನ್ನದೇ ಆದ ಒಂದು ಅನುಭವವನ್ನು ತಿಳಿಸಲು ಇಷ್ಟಪಡುತ್ತೇನೆ.

ನಾನು ಮೊದಲು ಒಂದು ಖಾಸಗಿ ಹೈಸ್ಕೂಲಿನಲ್ಲಿ ಅಧ್ಯಾಪಕನಾಗಿದ್ದೆ. ಬಳಿಕ ಕೇಂದ್ರೀಯ ವಿದ್ಯಾಲಯಕ್ಕೆ ಸೇರಿದೆ. ನಿವೃತ್ತಿಯ ನಂತರ ಪಿಂಚಣಿಗಾಗಿ ನನ್ನ ಹಿಂದಿನ ಹೈಸ್ಕೂಲಿನಲ್ಲಿ ದುಡಿದ ಸರ್ವೀಸನ್ನು ಕಾನೂನಿನಂತೆ ಗಣನೆಗೆ ತೆಗೆದುಕೊಳ್ಳಬೇಕೆಂದು ಕೇಂದ್ರದ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಗೆ ಬೇಡಿಕೆ ಸಲ್ಲಿಸಿದಾಗ, ಅದು ಅದನ್ನು ತಿರಸ್ಕರಿಸಿತು. ‘ಸರ್ಕಾರಿ ಸ್ಕೂಲ್‌ಗಳಲ್ಲಿ ದುಡಿದವರ ಸೇವೆಯನ್ನು ಮಾತ್ರ ಪರಿಗಣಿಸಲಾಗುವುದು’ ಎಂದು ತಿಳಿಸಿತು.

ನಾನು ಮತ್ತೆ, ಸರ್ಕಾರದಿಂದ ಅನುದಾನ ಬರುತ್ತಿದ್ದ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ದುಡಿದವರ ಸೇವೆಯನ್ನು ಪರಿಗಣಿಸಬೇಕೆಂಬ ಕಾನೂನನ್ನು ಉಲ್ಲೇಖಿಸಿ ಪತ್ರ ಬರೆದೆ. ಅದಕ್ಕೆ ‘ನೀವು ಬೇಡಿಕೆ ಸಲ್ಲಿಸುವಾಗ ವಿಳಂಬವಾದುದರಿಂದ ನಿಮ್ಮ ಮನವಿಯನ್ನು ತಿರಸ್ಕರಿಸಲಾಗಿದೆ’ ಎಂಬ ಉತ್ತರ ಬಂತು. ವಿಳಂಬಕ್ಕೆ ಕಾರಣವನ್ನು ತಿಳಿಸಿದರೂ ಮೌನವೇ ಉತ್ತರವಾಯಿತು.

ADVERTISEMENT

ನಾಲ್ಕು ವರ್ಷ ಹೋರಾಡಿದರೂ ಪ‍್ರಯೋಜನವಾಗದ ಮೇಲೆ ಹೈಕೋರ್ಟಿನಲ್ಲಿ ರಿಟ್ ಅರ್ಜಿ ಸಲ್ಲಿಸಿದೆ. ನಾಲ್ಕು ವರ್ಷಗಳ ನಂತರ ಹೈಕೋರ್ಟ‌್ ಅದನ್ನು ಕ್ಯಾಟ್‌ಗೇ (ಸೆಂಟ್ರಲ್) ವರ್ಗಾಯಿಸಿತು. ಅಲ್ಲಿ ಮೂರು ವರ್ಷ ಕಳೆದ ಮೇಲೆ ನನ್ನ ಪರವಾಗಿ ತೀರ್ಪು ಬಂತು. ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟಿಗೆ ಹೋಯಿತು. ಆರು ವರ್ಷ ಕಳೆದ ಮೇಲೆ ಸುಪ್ರೀಂ ಕೋರ್ಟ್ ನನ್ನ ಬೇಡಿಕೆಗೆ ಮನ್ನಣೆ ಇತ್ತು ಆದೇಶ ನೀಡಿತು.

ಆದೇಶವನ್ನು ಜಾರಿಗೆ ತಾರದೆ ಸರ್ಕಾರ ನನ್ನನ್ನು ಎರಡು ವರ್ಷ ಸತಾಯಿಸಿತು. ಆದರೂ ಬಿಡದೆ 21 ವರ್ಷ ಹೋರಾಡಿ ನನ್ನ 81ನೇ ವರ್ಷದಲ್ಲಿ ನಾನು ಸಂಪೂರ್ಣ ಪಿಂಚಣಿ ಪಡೆಯಲು ಅರ್ಹನಾದೆ. ನನಗೀಗ 90 ವರ್ಷ. ಆರ್ಥಿಕ ಸ್ಥಿತಿಯಿಂದ ಕೋರ್ಟ್ ಫೀಸ್, ವಕೀಲರ ಫೀಸ್ ಎಂದು ಅನುಭವಿಸಿದ ಕಷ್ಟಗಳಿಗೆ ಎಣೆಯೇ ಇಲ್ಲ. ಹೋರಾಡಲು ಸಾಧ್ಯವಾಗದೆ ಒಮ್ಮೆ ಆತ್ಮಹತ್ಯೆಗೆ ಮನಸ್ಸು ಮಾಡಿದ್ದೂ ಇದೆ.

ಒಂದು ಸಣ್ಣ ಕಾರಣಕ್ಕಾಗಿ ಸರ್ಕಾರ ತೊಂದರೆ ಕೊಟ್ಟು ನ್ಯಾಯಾಲಯಗಳಲ್ಲಿ ತೀರ್ಪು ಬೇಗ ಬಾರದಂತೆ ಹೇಗೆ ನಡೆದುಕೊಂಡಿತು ಎಂಬುದು ಬಹಳ ರೋಚಕ ಸಂಗತಿ. ಎಲ್ಲವನ್ನೂ ಬರೆಯಲು ಹೊರಟರೆ ಅದೇ ಒಂದು ಗ್ರಂಥವಾದೀತು.

ಎಂ.ವಿ. ಭಟ್, ಮೇದರಹಳ್ಳಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.