ADVERTISEMENT

ಪುಂಡು ಪೋಕರಿಗಳ ಹಾವಳಿ ತಪ್ಪಿಸಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 1 ಏಪ್ರಿಲ್ 2013, 19:59 IST
Last Updated 1 ಏಪ್ರಿಲ್ 2013, 19:59 IST

ಚಾಮರಾಜಪೇಟೆ ಕ್ಷೇತ್ರದ ವಾರ್ಡ್ ಸಂಖ್ಯೆ 139ರ ವ್ಯಾಪ್ತಿಗೆ ಬರುವ ಬಕ್ಷಿ ಗಾರ್ಡನ್ ಪ್ರದೇಶದಲ್ಲಿ ಪುಂಡು ಪೋಕರಿಗಳು ಮಾತ್ರವಲ್ಲದೆ, ಕುಡುಕರು, ಬೀದಿ ಕಾಮಣ್ಣರು, ಪುಡಿ ರೌಡಿಗಳ ಹಾವಳಿ ವಿಪರೀತವಾಗಿಬಿಟ್ಟಿದೆ. ಇವರೆಲ್ಲರ ಕಾಟದಿಂದಾಗಿ ಹೆಣ್ಣುಮಕ್ಕಳು ಮತ್ತು ಮಹಿಳೆಯರು ನಿರ್ಭಯವಾಗಿ ತಿರುಗಾಡಲು ಕಷ್ಟವಾಗಿಬಿಟ್ಟಿದೆ.

ಕುಡುಕರು ಮಧ್ಯರಾತ್ರಿಯವರೆಗೂ ಅರಚುತ್ತಾ, ಕಿರುಚುತ್ತಾ ಗಲ್ಲಿ ಗಲ್ಲಿಗಳಲ್ಲಿ ಅಡ್ಡಾಡಿ ಜನರ ನಿದ್ರೆಗೆಡಿಸಿದರೆ, ಬೀದಿ ಕಾಮಣ್ಣರು ಎಲ್ಲೆಂದರಲ್ಲಿ ನಿಂತು ಶಾಲಾ ವಿದ್ಯಾರ್ಥಿನಿಯರನ್ನು, ಮಹಿಳೆಯರನ್ನು ಕೆಟ್ಟ ಶಬ್ದಗಳಿಂದ ಚುಡಾಯಿಸುತ್ತಿರುತ್ತಾರೆ.

ಇನ್ನು ಪುಂಡು ಪೋಕರಿಗಳು, ಪುಡಿ ರೌಡಿಗಳು ಲಾಂಗ್ ಮಚ್ಚುಗಳನ್ನು ಝಳಪಿಸುತ್ತಾ ಜನರಲ್ಲಿ ಭೀತಿ ಹುಟ್ಟಿಸಿ ಮಾಯವಾಗಿಬಿಡುತ್ತಾರೆ.

ಚಳಿಗಾಲದಲ್ಲಿ ಬೀದಿ ನಾಯಿಗಳ ಕಾಟದಂತೆ ಬೇಸಿಗೆ ಕಾಲದಲ್ಲಿ ಈ ತಿಳಿಗೇಡಿಗಳ ಕಾಟ ಗರಿಗೆದರುತ್ತದೆ. ಸಾರ್ವಜನಿಕವಾಗಿ ಕೇಳಿ ಬರುತ್ತಿರುವ ಈ ಸಂಗತಿ ಹತ್ತಿರದ ಕಾಟನ್‌ಪೇಟೆ ಪೊಲೀಸ್ ಠಾಣೆಗೆ ಕೇಳಿಸುವುದೂ ಇಲ್ಲ, ಕಾಣಿಸುವುದೂ ಇಲ್ಲ ಬಿಡಿ! ಇಲ್ಲಿ ಬಡವರು ಹೆಚ್ಚಾಗಿ ವಾಸಿಸುತ್ತಿದ್ದು, ಇವರೆಲ್ಲರೂ ಕೂಲಿ ಕಾರ್ಮಿಕರು. ರಾತ್ರಿ ಹೊತ್ತು ನೆಮ್ಮದಿಯಾಗಿ ನಿದ್ದೆ ಮಾಡಲೂ ಸಾಧ್ಯವಾಗುತ್ತಿಲ್ಲ. ಹೇಗಾದರೂ ಇರಲಿ ಸ್ಥಳೀಯ ಹೆಣ್ಣು ಮಕ್ಕಳ ರಕ್ಷಣೆಯ ಸಲುವಾಗಿ ಉನ್ನತ ಪೊಲೀಸ್ ಅಧಿಕಾರಿಗಳು ಇತ್ತ ಗಮನಹರಿಸಬೇಕೆಂದು ವಿನಂತಿ.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT