ಮಂಗಳೂರಿನ ಹತ್ತಿರ ಮೆಲ್ಕಾರಿನಲ್ಲಿ ಮೊನ್ನೆ ಇಬ್ಬರು ಸ್ಥಳೀಯ ಕಾಲೇಜು ಹುಡುಗಿಯರು ಒಬ್ಬ ಅನ್ಯ ಕೋಮಿನ ಸಹಪಾಠಿ ಯುವಕನೊಂದಿಗೆ ಕಾಫಿ ಕುಡಿಯಲು ಹೋಟಲಿಗೆ ಹೋದರು ಎಂದು ಇಲ್ಲಿಯ ನೈತಿಕ ಪೊಲೀಸರು ಪುಂಡಾಟಿಕೆ ನಡೆಸಿ ಮೂವರ ಮೇಲೂ ಹಲ್ಲೆ ನಡೆಸಿದರು. ನಂತರ ಬಂದ ಪೊಲೀಸರು ಪುಂಡರ ಮೇಲೆ ಕಾನೂನು ಕ್ರಮ ಕೈಗೊಳ್ಳದೇ ಆ ಹುಡುಗಿಯರ ಪಾಲಕರನ್ನು ದೂರದ ಚಿಕ್ಕಮಗಳೂರಿನಿಂದ ಕರೆಸಿ ಅವರಿಂದ ಮುಚ್ಚಳಿಕೆ ಬರೆಸಿಕೊಂಡು ವಾರ್ನಿಂಗ್ ಕೊಟ್ಟು ಬಿಟ್ಟರೆಂದು ಪೊಲೀಸರೇ ಪತ್ರಿಕಾ ಹೇಳಿಕೆ ಕೊಟ್ಟಿದ್ದಾರೆ. ಇಂತಹ ಮಹಾನ್ ಕೆಲಸಕ್ಕೆ ಪೊಲೀಸರಿಗೆ ರಾಷ್ಟ್ರಪತಿ ಶೌ ರ್ಯ ಪ್ರಶಸ್ತಿ ಸಿಗಬೇಕಲ್ಲವೇ?
ಇಲ್ಲಿ ಪೊಲೀಸರೇ ಉತ್ತರಿಸಬೇಕಾದ ಪ್ರಶ್ನೆಯೆಂದರೆ ಹೋಟೆಲಿನ ಓಪನ್ ಹಾಲ್‌ನಲ್ಲಿ ಕುಳಿತು ಹುಡುಗಿಯರು ತಮ್ಮ ಸಹ ವಿದ್ಯಾರ್ಥಿಯೊಂದಿಗೆ ಕಾಫಿ ಕುಡಿಯುವುದು ಅಪರಾಧವೆಂದು ಯಾವ ಕೋರ್ಟು ಹೇಳಿದೆ? ಮೇಲಾಗಿ ಅದು ವಸತಿ ಸೌಲಭ್ಯ ಹೊಂದಿಲ್ಲದ ಒಂದು ಸಾಧಾರಣ ಹೋಟೆಲ್! ದೂರದ ಚಿಕ್ಕಮಗಳೂರಿನಿಂದ ಸಾವಿರಾರು ರೂಪಾಯಿ ಖರ್ಚು ಮಾಡಿಸಿ ವಿದ್ಯಾರ್ಥಿಗಳ ಪಾಲಕರನ್ನು ಕರೆಸಿ ಮುಚ್ಚಳಿಕೆ ಬರೆಸಿಕೊಳ್ಳುವುದಕ್ಕೆ ಪೊಲೀಸರಿಗೆ ಅಧಿಕಾರ ಕೊಟ್ಟವರಾರು? ಮೇಲಾಗಿ ಅದರಲ್ಲಿ ಪೊಲೀಸರು ಏನೆಂದು ಬರೆಸಿಕೊಂಡಿದ್ದಾರೆ? ಇನ್ನು ಮುಂದೆ ಹೋಟೆಲಿನಲ್ಲಿ ವಿದ್ಯಾರ್ಥಿಗಳು ಸಹಪಾಠಿಗಳೊಂದಿಗೆ ಎಂದೂ ಚಹಾ ಕುಡಿಯುವುದಿಲ್ಲ ಎಂದು ಬರೆಸಿಕೊಳ್ಳಲಾಗಿದೆಯೇ? ಅಷ್ಟೇ ಅಲ್ಲ, ಪೊಲೀಸರು ವಿದ್ಯಾರ್ಥಿಗಳಿಗೆ ಯಾವ ತಪ್ಪಿಗಾಗಿ ಏನೆಂದು ವಾರ್ನಿಂಗ್ ಕೊಟ್ಟು ಬಿಟ್ಟಿದ್ದಾರೆ?
ಹಾಗಾದರೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಕಾಲೇಜು ವಿದ್ಯಾರ್ಥಿಗಳು ಹೋಟೆಲಿನಲ್ಲಿ ಚಹಾ ಕುಡಿಯುವುದೂ ಅಪರಾಧವೇ? ಗೃಹ ಮಂತ್ರಿಗಳೇಕೆ ಈ ವಿಷಯ ವಿಚಾರಿಸಿಲ್ಲ? ಮಹಿಳಾ ಹಕ್ಕು ಸಂಘಟನೆ ಹಾಗೂ ಮಾನವ ಹಕ್ಕು ಸಂಘಟನೆಗಳು ಯಾಕೆ ಸುಮ್ಮನಿವೆ? ಹಾಗಾದರೆ ಇನ್ನು ಮುಂದೆ ಹುಡುಗಿಯರು ಹೋಟೆಲಿನಲ್ಲಿ ಕಾಫಿ ತಿಂಡಿ ಸೇವಿಸುವುದು ಅಪರಾಧ ಎಂದು ಕರಾವಳಿಯ ಎಲ್ಲ ಹೋಟೆಲ್‌ಗಳಲ್ಲಿ ಪೊಲೀಸರೇ ನಾಮಫಲಕ ಹಾಕಿಸಲಿ! ಇತರ ಜಿಲ್ಲೆಯ ಪಾಲಕರು ತಮ್ಮ ಹೆಣ್ಣು ಮಕ್ಕಳನ್ನು ಕರಾವಳಿ ಜಿಲ್ಲೆಗಳ ಕಾಲೇಜಿಗೆ ಕಳುಹಿಸುವುದು ವರ್ಜ್ಯ ಎಂದು ಬೇಕಾದರೆ ಪೊಲೀಸರು ರಾಜ್ಯಮಟ್ಟದಲ್ಲಿ ಫರ್ಮಾನು ಹೊರಡಿಸಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.