ADVERTISEMENT

ಪ್ರಶಸ್ತಿಗೆ ಡೊನೇಷನ್!

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2012, 19:30 IST
Last Updated 14 ಅಕ್ಟೋಬರ್ 2012, 19:30 IST

ಇತ್ತೀಚಿನ ದಿನಗಳಲ್ಲಿ ಪ್ರಶಸ್ತಿಗಳು ಎಂಬುದು ಕಂಡ ಕಂಡಲ್ಲಿ ಸಿಗುವ ಕಣಿಗಲೆ ಹೂವಿನಂತಾಗಿದೆ. ಆಡಳಿತ ಪಕ್ಷ ಇಂತಿಷ್ಟು ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿಗಳನ್ನು ಪ್ರಕಟಿಸಿದರೆ ವಿರೋಧ ಪಕ್ಷಗಳು `ಸರ್ಕಾರ ತಪ್ಪು ಮಾಡುತ್ತಿದೆ ಇನ್ನೂ 25-30 ಜನಕ್ಕೆ ನೀಡಬೇಕು~ ಎಂದಾಕ್ಷಣ ಪುನಃ ಬದಲಾವಣೆ! ಮತ್ಯಾವ ಜನಾಂಗದವರು, ಸಮಾಜದವರು `ನಮಗೆ ಈ ಪ್ರಶಸ್ತಿಯಲ್ಲಿ ಪ್ರಾಮುಖ್ಯ ನೀಡಿಲ್ಲ~ ಎಂದು ಹೇಳಿಕೆ ಕೊಟ್ಟಾಕ್ಷಣ ಪುನಃ ಪ್ರಶಸ್ತಿ ಅಂಕೆಗಳಲ್ಲಿ ಏರಿಕೆ!

ಪ್ರಶಸ್ತಿಗಳಿಗೆ ರಾಷ್ಟ್ರದ ಸಾಧಕರ ಹೆಸರಿಟ್ಟು ಪತ್ರಿಕೆಯಲ್ಲಿ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಪ್ರಚಾರ ಮಾಡುವುದು. ನಂತರ ಬಂದ ಪ್ರಶಸ್ತಿ ಪ್ರಿಯರ ಅರ್ಜಿಗಳನ್ನು ಅಭ್ಯಸಿಸಿ (ಅವರ ದೂರವಾಣಿ ನಂ. ಮತ್ತು ಮೊಬೈಲ್ ನಂ. ಮಾತ್ರ ಅಭ್ಯಸಿಸಿ) ಅವರಿಗೆ ಕರೆ ಮಾಡುವುದು.
 
`ನೀವು ನಮ್ಮ ಪ್ರತಿಷ್ಠಾನಕ್ಕೆ ಪ್ರಶಸ್ತಿಗಾಗಿ ಅರ್ಜಿ ಕಳುಹಿಸಿದ್ದೀರಿ ನಿಮ್ಮ ಸಂಪೂರ್ಣ ಸಾಧನೆ ನಾವು ಅಭ್ಯಸಿಸಿದ್ದೇವೆ. ನಿಮ್ಮ ಅರ್ಜಿ ನಮ್ಮ ಮುಂದೆ ಟೇಬಲ್ ಮೇಲಿದೆ~. ಆದರೆ ನಮ್ಮ ಕಾರ್ಯಕ್ರಮಕ್ಕೆ ನಿಮ್ಮ ದೇಣಿಗೆ ಎಷ್ಟು ಕೊಡುತ್ತೀರಿ?~ ಎಂಬುದೇ ಮೊದಲ ಪ್ರಶ್ನೆ. ಪ್ರಶಸ್ತಿ ಪ್ರಿಯನಿಗೆ (ಸಾಧಕನಾಗಿದ್ದರೆ) ಮೊದಲ ಪ್ರಶ್ನೆಗೇ ಬೆವರು ಇಳಿಯುವುದರಲ್ಲಿ ಸಂಶಯವಿಲ್ಲ. `ದೇಣಿಗೆ ಇಲ್ಲದಿದ್ದರೇನಂತೆ ಊಟದ ವ್ಯವಸ್ಥೆ, ಅಥವಾ  ವೇದಿಕೆಯ ಖರ್ಚು ಛೇ ಛೇ ಛೇ ಹಾಗಲ್ಲ ನೆನಪಿನ ಕಾಣಿಕೆಯಾದರೂ ಮಾಡಿಸಿಕೊಡಿ.

ಇದು ನಿಮ್ಮ ಕಾರ್ಯಕ್ರಮ, ಏನ್ ಮಾಡೋದು ನಮ್ಮ ಸಂಘದಲ್ಲಿ ಯಾವ ಆಸ್ತಿ ಮತ್ತು ಸಂಪನ್ಮೂಲ ಇಲ್ಲ. ನಾವು ಗ್ರಾಂಡಾಗಿ ಕಾರ್ಯಕ್ರಮ ನಡೆಸುತ್ತೇವೆ. ನಾವೇನು ಇದರಾಗೆ ದುಡಿಬೇಕು ಅಂತ ಏನೂ ಇಲ್ಲಪ್ಪ.ಪ್ರಶಸ್ತಿ ನೀಡಿ ಕಾರ್ಯಕ್ರಮ ನಡೆಸಬೇಕು ಅಷ್ಟೇ ನಮ್ಮ ಉದ್ದೇಶ!~ ಎಂಬ ಮಾತು.

ಪ್ರಶಸ್ತಿಗೆ ಡೊನೇಷನ್ ಎಂಬ ಹೆಸರೇಳಿ ಅಲ್ಪ ಸ್ವಲ್ಪ ಪ್ರಾಮಾಣಿಕ  ಸಾಧನೆ, ಸೇವೆ, ಶ್ರಮಪಡುವ ಸಾಧಕರಿಗೆ ಪ್ರಶಸ್ತಿ (ಹಣ ಪಡೆದು ನೀಡುವ) ಎಂಬ ಪದದೊಡನೆ ಚೆಲ್ಲಾಟವಾಡುತ್ತಾ ಸಮಾಜದಲ್ಲಿ ಅಹಿತಕರ ದೂಳನ್ನು ಎಬ್ಬಿಸಿ ಅನಾರೋಗ್ಯ ಸಮಾಜ ನಿರ್ಮಾಣ ಮಾಡಬೇಡಿ ಎಂಬುದು ವಿನಮ್ರ ಮನವಿ. ಮತ್ತೊಮ್ಮೆ ಪ್ರಶಸ್ತಿಗಳೆಂದರೆ ಕಂಡ ಕಂಡಲ್ಲಿ ಹಣದಿಂದ ಮಾರಲ್ಪಡುವ ಸನ್ಮಾನವೇ ಅಥವಾ ಪ್ರಶಸ್ತಿ ಸ್ವೀಕರಿಸಿದವರಿಗೆ (ಪ್ರಾಮಾಣಿಕವಾಗಿ) ನಾಗರಹಾವೆ? ಎಂಬ ಎದೆಯೊಳಗಿನ ತಲ್ಲಣದೊಂದಿಗೆ.
- ಕೆ. ಸಿರಾಜ್ ಅಹಮ್ಮದ್‌ಸಂತೇಬೆನ್ನೂರು
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.