ADVERTISEMENT

ಬುಧವಾರ, 17–4–1968

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2018, 19:30 IST
Last Updated 16 ಏಪ್ರಿಲ್ 2018, 19:30 IST

ವಿಧಾನಸಭೆಯಲ್ಲಿ ಅಪೂರ್ವ ಬೈಠಕ್ ಸತ್ಯಾಗ್ರಹ

ಬೆಂಗಳೂರು, ಏ. 16– ಬೆಂಗಳೂರಿನ ನಾಲ್ಕು ಮಂದಿ ವಿರೋಧಪಕ್ಷಗಳ ಶಾಸಕರು ಇಂದು ವಿಧಾನಸಭೆಯಲ್ಲಿ ನೆಲದ ಮೇಲೆ ಸತ್ಯಾಗ್ರಹ ಆರಂಭಿಸಿ ಹಿಂದೆಂದೂ ಸಭೆಯಲ್ಲಿ ನಡೆಯದ ಪ್ರಸಂಗವೊಂದಕ್ಕೆ ಕಾರಣರಾದರು.

ಸತ್ಯಾಗ್ರಹಕ್ಕೆ ಕಾರಣವಾದ ನಗರದ ನೀರು ದರದ ಪ್ರಶ್ನೆಯನ್ನು ಅಂದಾಜುಗಳ ಪರಿಶೀಲನಾ ಸಮಿತಿಗೆ ಒಪ್ಪಿಸುವ ಭರವಸೆಯನ್ನು ಪೌರಾಡಳಿತ ಸಚಿವರು ನೀಡಿದ ಬಳಿಕ ಸರ್ವಶ್ರೀ ಟಿ.ಆರ್. ಶಾಮಣ್ಣ, ಎಂ.ಎಸ್. ಕೃಷ್ಣನ್, ವಾಟಾಳ್ ನಾಗರಾಜು ಮತ್ತು ಪಿ. ತಿಮ್ಮಯ್ಯ ಅವರು ಅರ್ಧಗಂಟೆಯ ಸತ್ಯಾಗ್ರಹ ಮುಗಿಸಿ, ಮೇಲೆದ್ದು ತಮ್ಮ ಆಸನಗಳ ಬಳಿಗೆ ಹೋದರು.

ADVERTISEMENT

ಕೃಷ್ಣಾ – ಗೋದಾವರಿ ವಿವಾದ ಬಗ್ಗೆ ಪಂಚಾಯ್ತಿ ರಚನೆ ಅನಿವಾರ್ಯ

ನವದೆಹಲಿ, ಏ. 16– ಮೈಸೂರು, ಮಹಾರಾಷ್ಟ್ರ ಮತ್ತು ಆಂಧ್ರಗಳ ನಡುವಣ ಕೃಷ್ಣಾ – ಗೋದಾವರಿ ನದಿ ವಿವಾದವನ್ನು ಪಂಚಾಯ್ತಿಗೆ ಒಪ್ಪಿಸುವುದು ಅನಿವಾರ್ಯವಾಗಬಹುದೆಂದು ನೀರಾವರಿ ಮತ್ತು ವಿದ್ಯುಚ್ಛಕ್ತಿ ಸಚಿವ ಶಾಖೆಯ ಅಧಿಕಾರಿಗಳು ಊಹೆ ಮಾಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ನದಿನೀರಿನ ಬಿಕ್ಕಟ್ಟು ಸಂಧಾನದಿಂದ ಇತ್ಯರ್ಥಗೊಳ್ಳುವ ಸಾಧ್ಯತೆ ಕಡಿಮೆಯಾಗಿರುವುದರಿಂದ ವಿವಾದವನ್ನು ಪಂಚಾಯ್ತಿಗೊಪ್ಪಿಸಬೇಕೆಂದು ಮೈಸೂರು ಮತ್ತು ಮಹಾರಾಷ್ಟ್ರ ರಾಜ್ಯಗಳು ಪ್ರಬಲವಾಗಿ ಪ್ರತಿಪಾದಿಸಿವೆ.

ಯಲವಿಗಿ ದುರಂತ ವಿಚಾರಣೆ: ವೇಗದಿಂದ ಚಲಿಸುವ ರೈಲು ಹಳಿ ತಪ್ಪುವ ಸಂಭವ

ಬೆಂಗಳೂರು, ಏ. 16– ‘ವೇಗದಿಂದ ಚಲಿಸುವ ರೈಲ್ವೆ ಗಾಡಿಯು ಪಾಯಿಂಟ್ಸ್‌ಗಳಲ್ಲಿ ನಿರ್ದಿಷ್ಟ ದಿಕ್ಕನ್ನು ಬದಲಿಸಲಾರದು, ಆದರೆ ಹಳಿ ತಪ್ಪುವ ಸಂಭವ
ವಿದೆ’ ಎಂದು ದಕ್ಷಿಣ ರೈಲ್ವೆಯ ಸೀನಿಯರ್ ಸಿಗ್ನಲಿಂಗ್ ಮತ್ತು ತಂತಿ ಸಂಪರ್ಕ ಎಂಜಿನಿಯರ್ ಶ್ರೀ ಎಚ್.ಕೆ. ಮಂಜುನಾಥ್ ಅವರು ಇಂದು ಯಲವಿಗಿ ರೈಲು ದುರಂತ ವಿಚಾರಣಾ ಆಯೋಗದ ಮುಂದೆ ಸಾಕ್ಷ್ಯ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.