ADVERTISEMENT

ಮಡೆಸ್ನಾನ ಪದ್ಧತಿ: ಕೊನೆ ಹೇಗೆ?

ಜಿ.ಎಸ್.ನಾರಾಯಣನ್, ಬೆಂಗಳೂರು.
Published 23 ಡಿಸೆಂಬರ್ 2012, 19:59 IST
Last Updated 23 ಡಿಸೆಂಬರ್ 2012, 19:59 IST

ಈ ಪದ್ಧತಿ ಹೇಗೆ ಬಂತು, ಏಕೆ ಬಂತು? ಅಸಹ್ಯವಾಗಿ ಕಂಡರೂ ಏಕೆ ನಡೆದುಬಂದಿದೆ? ಇದಕ್ಕೆ ಕೊನೆಯೇ ಇಲ್ಲವೆ? ಇದಾವ ಪ್ರಶ್ನೆಗೂ ಸರಿಯಾದ, ಸಮರ್ಪಕವಾದ ಉತ್ತರ ಸಿಕ್ತಾ ಇಲ್ಲ. ಸರ್ಕಾರಕ್ಕೆ ಅದು ಎಂತಹ ನಂಬಿಕೆಯಾದರೂ ಆಗಲಿ, ಅದನ್ನು ಮಟ್ಟಹಾಕಲು ಮನಸ್ಸಿಲ್ಲ. ಹೀಗಿರುವಾಗ ಅದಕ್ಕೆ ಕೊನೆ ಎಲ್ಲಿ?

ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮಾತ್ರ ಕಂಡುಬರುವ ಈ “ಮಡೆಸ್ನಾನ” ಪದ್ಧತಿ ಕೊನೆಗಾಣಿಸಲು ಉಡುಪಿ ಮಠಗಳು ಏಕೆ ಪ್ರಯತ್ನಿಸುತ್ತಿಲ್ಲ? ಸಮಾಜ ಪರಿವರ್ತನೆಗೆ ಶ್ರಮಿಸುತ್ತಿರುವ ಸಂಘ ಸಂಸ್ಥೆಗಳು ಏಕೆ ಪ್ರಯತ್ನಿಸುತ್ತಿಲ್ಲ? ಈ ಪದ್ಧತಿ ಹೆಚ್ಚಾಗಿ ಕಂಡುಬರುತ್ತಿರುವ ಮಲೆಕುಡಿಯ ಜನಾಂಗದವರನ್ನ, ಅಷ್ಠಮಠದವರು ಉದ್ಧರಿಸಲು ಏಕೆ ಪ್ರಯತ್ನಿಸಬಾರದು? ಒಂದೆರಡು ಕೋಟಿ ಖರ್ಚುಮಾಡಿ ಒಂದು ಚರಿತ್ರಾರ್ಹ ವಿಶ್ಲೇಷಣೆ ನಡೆಸಿ, ಆ ಪದ್ಧತಿಯ ಮೂಲ ಕಂಡುಹಿಡಿದು, ಅದರಿಂದ ಆಗುತ್ತಿರುವ ಅನಾರೋಗ್ಯಕರ ಪರಿಣಾಮಗಳನ್ನು ಎತ್ತಿ ತೋರಿಸುವ ಕೆಲಸ ಏಕೆ ಮಾಡಬಾರದು? ಯಾವ ನಂಬಿಕೆಯಾಗಲಿ, ಹೇಗೆ ಬಂತೋ ಹಾಗೆಯೇ ಕಣ್ಮರೆಯಾಗಲೂ ಸಾಧ್ಯ. ಮನುಷ್ಯ ಪ್ರಯತ್ನ, ತಿಳಿವಳಿಕೆ ಬೇಕು, ಅಷ್ಟೆ. ಅದರ ಜೊತೆಯಲ್ಲೇ ಮಲೆಕುಡಿಯರ ಸಾಮಾಜಿಕ ಸುಧಾರಣೆ ನಡೆಯಲಿ. ಅವರಲ್ಲಿ ಕೆಲವರು ಆರ್ಥಿಕವಾಗಿ, ಸಾಂಸ್ಕೃತಿಕವಾಗಿ ಏಳಿಗೆ ಕಂಡರೆ, ಈ ಪದ್ಧತಿ ನಿಧಾನವಾಗಿ ಕಣ್ಮರೆಯಾಗುತ್ತೆ. ಅಂತಹ ಬದಲಾವಣೆಗಾಗಿ ನಾವೆಲ್ಲ ಪ್ರಯತ್ನಿಸಬೇಕಾದ್ದು ನಮ್ಮ  ಸಾಮಾಜಿಕ ಬದ್ಧತೆ ಅಲ್ಲವೆ?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.