ಮೇ 29 ರ `ಸಂಗತ'ದಲ್ಲಿ `ಮೀಸಲು ಕ್ಷೇತ್ರಗಳು ಮತ್ತು ದಲಿತ ರಾಜಕಾರಣ' ಎಂಬ ಲೇಖನದಲ್ಲಿ ವಾದಿರಾಜರು `ದಲಿತ ಮತ-ಬ್ಯಾಂಕ್'ನಲ್ಲಿಯ ಒಳತುಮುಲಗಳನ್ನು ವಿವರಿಸಿದ್ದಾರೆ. `ಲಿಂಗಾಯತ ಮತ ಬ್ಯಾಂಕಿ'ನಲ್ಲಿಯೂ ಈ ಒಳತುಮುಲಗಳಿರುವುದನ್ನು ಯಾರೂ ಗಮನಿಸಿದಂತಿಲ್ಲ. ಈ ಎಲ್ಲ ಮತ ಬ್ಯಾಂಕುಗಳಲ್ಲಿ ಅಲ್ಪಸಂಖ್ಯಾತ ಮತ್ತು ಬಹುಸಂಖ್ಯಾತ ಜಾತಿಗಳ ಮುಖಾಮುಖಿ, ನಾಟಕೀಯ ಪುಸಲಾವಣೆ ಇದ್ದದ್ದೇ!
ಕರ್ನಾಟಕ ರಚನೆಯಾದಂದಿನಿಂದ ನಡೆದುಬಂದ ಚುನಾವಣೆಗಳಲ್ಲಿ `ಲಿಂಗಾಯತ ಮತ ಬ್ಯಾಂಕ್'ನ ಒಳಪಂಗಡಗಳಲ್ಲಿ ಎಷ್ಟೆಷ್ಟು ಜನ ಚುನಾವಣೆಗೆ ಸ್ಪರ್ಧಿಸಿದರು, ಪಕ್ಷಗಳಿಂದ ಸ್ಪರ್ಧಿಸಿದವರೆಷ್ಟು, ಶಾಸಕರಾದವರೆಷ್ಟು, ಸಚಿವರಾದವರೆಷ್ಟು ಎಂಬುದನ್ನು ಅಂಕಿ ಸಂಖ್ಯೆಗಳಲ್ಲಿ ವಿವರಿಸಿದರೆ ಈ ಮತ ಬ್ಯಾಂಕ್‌ಗಳ ರಾಜಕಾರಣದ ದುಷ್ಟತನ ಕಣ್ಣಿಗೆ ರಾಚುತ್ತದೆ. ಲಿಂಗಾಯತರು ತಮ್ಮ ಗುರುಗಳೆಂದು ಹೇಳಿಕೊಳ್ಳುವ `ಜಂಗಮರು' ಸಚಿವಸ್ಥಾನ ಪಡೆಯಲು, ಅದೇ ಸಮುದಾಯದ ಹಲವು ಮುಖ್ಯಮಂತ್ರಿಗಳಾಗಿ ಹೋದರೂ, ಹಿಂದುಳಿದ ನಾಯಕ ದೇವರಾಜ ಅರಸು ಮುಖ್ಯಮಂತ್ರಿಯಾಗುವವರೆಗೂ ಕಾಯಬೇಕಾಯಿತು.
ಇನ್ನು ಶಿವಶಿಂಪೆ, ಮಡಿವಾಳ, ನಾವಿಂದ ಇತ್ಯಾದಿ ಸಮುದಾಯಗಳು ಎಷ್ಟು ಅವಕಾಶ ಪಡೆದಿವೆಯೋ! ಆದರೂ ಚುನಾವಣೆಯಲ್ಲಿ ಅವರೆಲ್ಲ ಲಿಂಗಾಯತರೆ! ಹಾಗೆ ನೋಡಿದರೆ ಹಿಂದುಳಿದ ವರ್ಗದವರು ಮಾತ್ರ ತಮ್ಮ ಸ್ವಂತಿಕೆ ಉಳಿಸಿಕೊಂಡೇ ಅವಕಾಶ ಪಡೆಯುತ್ತಾರಾದರೂ ಅಲ್ಲಿಯೂ ಅಲ್ಪಸಂಖ್ಯಾತರದು ಅದೇ ಗತಿ! ಹೀಗೆ ಹಲವು ಜನವರ್ಗಗಳ ಭಾಗವಹಿಸುವುದನ್ನು ನಿರಾಕರಿಸುವ ಭಾರತದ ಪ್ರಜಾಪ್ರಭುತ್ವದ ಸಾಮರ್ಥ್ಯವೇ ಸೀಮಿತ ಎಂಬುದು ಅರ್ಥವಾಗದಿರದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.