ಕಡೆಗೂ ಶ್ರೀ ಸತ್ಯಸಾಯಿಬಾಬಾ ಅವರ ದೇಹಾವಸಾನವಾಯಿತು!
ಐವತ್ತು ವರ್ಷಗಳ ಹಿಂದೆ, ನಾನೂ ಮಿತ್ರ ಪೂರ್ಣಚಂದ್ರ ತೇಜಸ್ವಿಯವರೂ ಬಾಬಾ ಅವರನ್ನು ಪುಟ್ಟಪರ್ತಿಯಲ್ಲಿ ಕಂಡಿದ್ದೆವು. ಆಗ ಅದಿನ್ನೂ ಒಂದು ಕುಗ್ರಾಮ; ಒಂದು ಸಣ್ಣ ಆಸ್ಪತ್ರೆಯಷ್ಟೆ ಅಲ್ಲಿತ್ತು (ಅಂದಹಾಗೆ, ತೇಜಸ್ವಿಯವರಿಗೆ ಸಾಯಿಬಾಬಾ ಅವರಲ್ಲಿ ಭಕ್ತಿಯೇನೂ ಇರಲಿಲ್ಲ; ಅವರ ಅಜ್ಜಿ-ತಾಯಿಯ ತಾಯಿ-ಬಾಬಾ ಭಕ್ತೆಯಾಗಿದ್ದುದರಿಂದ, ಸ್ವಲ್ಪ ಆಸಕ್ತಿ ಇತ್ತಷ್ಟೆ. ಆಮೇಲೆ ಅದೂ ಅಳಿಯಿತು.) ತೇಜಸ್ವಿಯವರಿಗೆ ಏನೋ ಅಮೂಲ್ಯವಾದ ವಸ್ತುವನ್ನು (ಉಂಗುರ?) ಬಾಬಾ ಅನುಗ್ರಹಿಸಿದಂತೆ ತೋರುತ್ತದೆ; ಬಡಪಾಯಿ ನನಗೆ ಲಭಿಸಿದ್ದು ಬರಿಯ ಮಾಮೂಲು ಬೂದಿಯೆ! (ಅಲ್ಲದೆ, ಅವರ ಒಂದು ಆಶ್ವಾಸನೆ ಹುಸಿಯಾಯಿತು.)
ಅದು ಹಾಗಿರಲಿ. ಇನ್ನೊಂದು ಮುಖ್ಯ ವಿಷಯ: ಆ ನಂತರ ನಾನು ಕುವೆಂಪು ಅವರೊಡನೆ ಒಮ್ಮೆ ಮಾತನಾಡುವಾಗ, ಬಾಬಾ ಬಗೆಗೆ ಅವರು ಹೇಳಿದರು: ‘ಸಾಯಿಬಾಬಾ ಅವರಲ್ಲಿ ಏನೋ ಶಕ್ತಿಯಿರಬೇಕು. ಅವರೊಬ್ಬ ‘ಡೆಮಿ ಗಾಡ್’ (ಅರ್ಧದೇವತೆ, ಉಪದೇವತೆ) ಇರಬಹುದು!’
ಕುವೆಂಪು ಹೀಗೆಂದರೆಂದು ನಾನೊಂದು ಸಭೆಯಲ್ಲಿ ಶ್ರೋತೃವೊಬ್ಬರ ಪ್ರಶ್ನೆಗೆ ಉತ್ತರವಾಗಿ ತಿಳಿಸಿದಾಗ, ಅಲ್ಲಿ ಉಪಸ್ಥಿತರಿದ್ದ ‘ಕುಂಬಳಕಾಯಿ ಆಕಾಂಕ್ಷಿ’ ಡಾ. ಎಚ್. ನರಸಿಂಹಯ್ಯನವರು ತಲೆಯಾಡಿಸಿ ನಕ್ಕರು; ಅವರ ಪಕ್ಕದಲ್ಲಿದ್ದ ಪ್ರೊ. ಜಿ.ಎಸ್. ಸಿದ್ಧಲಿಂಗಯ್ಯನವರು ‘ಹೌದು, ಹೌದು. ಡಮ್ಮಿ ಗಾಡ್’ (ತೋರಿಕೆಯ ದೇವತೆ) ಎಂದು ವ್ಯಂಗ್ಯವಾಡಿದರು!
ಮಾನವ ಶರೀರಕ್ಕೆ ಅಂತ್ಯ ಉಂಟೇ ಉಂಟು. ಅಚ್ಚರಿಯೇನು? ಸಾಯಿಬಾಬಾ ಅವರಿಗೆ 85 ವರ್ಷ ವಯಸ್ಸಾಗಿತ್ತು. ‘ಯಾರು ರಾಮನೋ, ಯಾರು ಕೃಷ್ಣನೋ ಅವನೇ ಈ ದೇಹದಲ್ಲಿ ರಾಮಕೃಷ್ಣನಿದ್ದಾನೆ!’ ಎಂದು ಘೋಷಿಸಿದ ‘ಅವತಾರವರಿಷ್ಠ’ ಶ್ರೀ ರಾಮಕೃಷ್ಣ ಪರಮಹಂಸರು 50ನೆಯ ವಯಸ್ಸಿಗೇ (ಗಂಟಲು ಕ್ಯಾನ್ಸರಿನಿಂದ ನರಳಿ) ಅಸ್ತಂಗತರಾಗಲಿಲ್ಲವೆ? ಇಷ್ಟಕ್ಕೂ, ಸಾಯಿಬಾಬಾ ಅವರ ಬಗೆಗೆ ನನ್ನ ವೈಯಕ್ತಿಕ ಅಭಿಪ್ರಾಯವೇನು? ನಾನೊಬ್ಬ ಸಂದೇಹವಾದಿ ಎಂದಷ್ಟೆ ಹೇಳಬಲ್ಲೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.