ADVERTISEMENT

ರಸ್ತೆಯಲ್ಲಿನ ಪ್ರಾಣಿಗಳು...

ಯಮಲೂರು ಎಂ.ವೆಂಕಟಪ್ಪ, ಬೆಂಗಳೂರು
Published 9 ಮಾರ್ಚ್ 2014, 19:30 IST
Last Updated 9 ಮಾರ್ಚ್ 2014, 19:30 IST

ಸಾರಿಗೆ ಇಲಾಖೆಯು (ಪ್ರ.ವಾ. ಫೆ. 23) ‘ರಸ್ತೆಯಲ್ಲಿ ಪ್ರಾಣಿಗಳ ಬಗ್ಗೆ ನಿಗಾ ವಹಿಸಿ, ಜಾಗರೂಕರಾಗಿರಿ’ ಎಂದು ವಾಹನ ಸವಾರರಿಗೆ  ಜಾಹೀರಾತು ಮೂಲಕ ಎಚ್ಚರಿಕೆ ನೀಡಿರುವುದನ್ನು  ನೋಡಿ ಆಶ್ಚರ್ಯವಾಯಿತು.

ಇಂದಿನ ದಿನಗಳಲ್ಲಿ ರಸ್ತೆಗಳಲ್ಲಿ ವಾಹನ ಸವಾರರು ಅನುಭವಿಸುತ್ತಿರುವ ನೋವು, ಸಂಕಟ ಅವರಿಗೇ ಗೊತ್ತು. ಸಮಯಕ್ಕೆ ಸರಿಯಾಗಿ ಕಚೇರಿ, ಶಾಲಾ ಕಾಲೇಜುಗಳನ್ನು ತಲುಪುವುದೇ ಕಷ್ಟವಾಗಿದೆ. ಒಂದು ಕಡೆ ಕುಲಗೆಟ್ಟ ರಸ್ತೆಗಳು, ಮತ್ತೊಂದು ಕಡೆ  ರಸ್ತೆ ಉಬ್ಬುಗಳು. ಜೊತೆಗೆ ರೋಡ್‌ ಕಟಿಂಗ್‌ ಮತ್ತು ಯಾವ ಅಡ್ಡಿಯೂ ಇಲ್ಲದೆ ರಸ್ತೆಯಲ್ಲೇ ಬೀಡುಬಿಟ್ಟಿರುವ ಜಾನುವಾರುಗಳು.

ಸುಗಮ ಸಂಚಾರಕ್ಕೆ ಇವೆಲ್ಲ ಮಾರಕವಾಗಿ ಪರಿಣಮಿಸಿವೆ. ರಸ್ತೆಗಿಳಿಯುವ ಜಾನುವಾರುಗಳನ್ನು ಇಲಾಖೆ ನಿಯಂತ್ರಿಸದೇ ವಾಹನ ಸವಾರರಿಗೆ ಎಚ್ಚರ ನೀಡಿರುವುದು ಎಷ್ಟು ಸರಿ?

‘ಜಗತ್ತಿನಾದ್ಯಂತ ಕ್ಯಾನ್ಸರ್‌, ಹೃದಯಾ­ಘಾತ, ಪಾರ್ಶ್ವವಾಯು ರೋಗಗಳಿಗಿಂತ ಹದಗೆಟ್ಟ ರಸ್ತೆಗಳಿಂದ ಆಗುವ ವಾಹನ ಅಪಘಾತಗಳಿಂದ ಸಂಭವಿಸುವ ಸಾವಿನ ಸಂಖ್ಯೆ ಹೆಚ್ಚು’ ಎಂದು ಸಮೀಕ್ಷೆಯೊಂದರಿಂದ ತಿಳಿದು­ಬಂದಿದೆ. ತಿಪ್ಪೆಗುಂಡಿಗಳಂತಿರುವ ರಸ್ತೆಗಳಲ್ಲಿ ದಿನನಿತ್ಯ ಸಂಭವಿಸುವ ಅದೆಷ್ಟೋ ಅಪಘಾತ­ಗಳು ದಾಖಲಾಗಿರುವುದಿಲ್ಲ.  ದ್ವಿಚಕ್ರವಾಹನ ಸವಾರರು ಬೆನ್ನುಮೂಳೆ ಸಂಬಂಧಿತ ಕಾಯಿಲೆಗಳಿಂದ ನರಳುವುದು ಹೆಚ್ಚಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.