ಮೇ 10ರ `ಶಿಶು ಮರಣ ತಪ್ಪಿಸಿ' ಕುರಿತ ಸಂಪಾದಕೀಯವು ಮಕ್ಕಳ ಆರೋಗ್ಯದ ಸ್ಥಿತಿಗತಿಯ ಮೇಲೆ ಬೆಳಕು ಚೆಲ್ಲುವಂಥಹದು. 2010ರಲ್ಲಿ ಕರ್ನಾಟಕ ರಾಜ್ಯದಲ್ಲಿ ಶಿಶುಮರಣ ಪ್ರಮಾಣ 30 ರಷ್ಟಿದೆ. ಅಂದರೆ ಪ್ರತಿ ವರ್ಷ ಪ್ರತಿ ಸಾವಿರ ಜೀವಂತ ಜನನಕ್ಕೆ 38 ಮಕ್ಕಳು ಸಾವನ್ನಪ್ಪುತ್ತಿವೆ.
ಇದರಲ್ಲಿ ಮೊದಲ 7 ದಿನಗಳಲ್ಲಿ ಶೇ 63 ರಷ್ಟು ಮಕ್ಕಳು ಸಾವಿಗೀಡಾಗುತ್ತಿವೆ. ಮತ್ತು ಉಳಿದ ಶೇ 37 ರಷ್ಟು ಮಕ್ಕಳು ಒಂದು ತಿಂಗಳಿಂದ ಒಂದು ವರ್ಷದ ಅವಧಿಯಲ್ಲಿ ಮರಣ ಹೊಂದುತ್ತಿವೆ. ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದಲ್ಲಿ ಮಕ್ಕಳ ಸಾವಿನ ಪ್ರಮಾಣವನ್ನು 2012ರ ಹೊತ್ತಿಗೆ 30ಕ್ಕೆ ಇಳಿಸುವುದಾಗಿತ್ತು. ಆದರೆ ಇದು ಸಾಧ್ಯವಾಗಲಿಲ್ಲ. ಮತ್ತೊಂದು ಆಘಾತಕಾರಿ ಅಂಶವನ್ನು ಇಲ್ಲಿ ನಾನು ಪ್ರಸ್ತಾಪಿಸಬೇಕಾಗಿದೆ.
ನಮ್ಮ ರಾಜ್ಯದಲ್ಲಿ ಪ್ರತಿ ವರ್ಷ 1000 ಹೆರಿಗೆಯಲ್ಲಿ 8 ಮಕ್ಕಳು ಸತ್ತು ಹುಟ್ಟುತ್ತಿವೆ. ಇದು ಕಳೆದ 20 ವರ್ಷಗಳಿಂದ ಯಾವುದೇ ಬದಲಾವಣೆಯಾಗದೆ ಮುಂದುವರಿದಿದೆ. ಆರೋಗ್ಯ ಇಲಾಖೆಯ ವೈಫಲ್ಯವನ್ನು ಇದು ಎತ್ತಿ ತೋರಿಸುತ್ತದೆ. ಸತ್ತು ಹುಟ್ಟುವ ಮಕ್ಕಳ ಪ್ರಮಾಣ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾಗಿದೆ.
ಇದಕ್ಕೆ ಮುಖ್ಯ ಕಾರಣಗಳೆಂದರೆ ಗರ್ಭಾವಸ್ಥೆಯಲ್ಲಿದ್ದಾಗ ಸರಿಯಾದ ಪ್ರಮಾಣದಲ್ಲಿ ಪೌಷ್ಟಿಕ ಆಹಾರ, ವಿಶ್ರಾಂತಿ ಕೊರತೆ, ರಕ್ತಹೀನತೆ, ಬಾಲ್ಯವಿವಾಹ, ನಿರಂತರ ಮತ್ತು ಸಕಾಲದಲ್ಲಿ ವೈದ್ಯಕೀಯ ಪರೀಕ್ಷೆಯ ಕೊರತೆ, ಮನೆ ಹೆರಿಗೆ, ಬಡತನ, ಅನಕ್ಷರತೆ ಮುಂತಾದವುಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.