ADVERTISEMENT

ರೆಡ್ಡಿ ಗತಿ: ಖಂಡಿತ ವಿಧಿಯಾಟವಲ್ಲ!

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2011, 19:30 IST
Last Updated 14 ಸೆಪ್ಟೆಂಬರ್ 2011, 19:30 IST

ಬಳ್ಳಾರಿಯ ಜನಾರ್ದನ ರೆಡ್ಡಿ ಹಾಗೂ ಶ್ರೀನಿವಾಸ ರೆಡ್ಡಿ ಅವರಿಗೆ ಬಂದೊದಗಿದ ಪ್ರಸಕ್ತ ಸ್ಥಿತಿಯನ್ನು ಕೃಷ್ಣ ವಟ್ಟಂ ಅವರು `ಇದು ವಿಧಿ ಆಟವಲ್ಲವೇ?~ ಎಂದು ಅರ್ಥೈಸಿದ್ದಾರೆ. (ವಾವಾ. ಸೆ.14).

ಮಾನವನ ಜೀವನದಲ್ಲಿ ಆಗಿರುವ, ಆಗಲಿರುವ ಪ್ರತಿಯೊಂದನ್ನೂ `ವಿಧಿ~ಯ ಮೇಲೆ ಹಾಕಿ ಮನುಷ್ಯನ `ಪಾತ್ರ~ವನ್ನು ಗೌಣವಾಗಿಸುವ ಇಂತಹ ಚಿಂತನೆ ಖಂಡಿತವಾಗಿಯೂ ವಾಸ್ತವಕ್ಕೆ ಪ್ರಜ್ಞಾಪೂರ್ವಕವಾಗಿ ವಿಮುಖವಾಗುವ ಯತ್ನವಷ್ಟೇ.
 
ಪ್ರಸ್ತುತ ರೆಡ್ಡಿಗಳ ಸ್ಥಿತಿಗೆ ಅವರು ಎಸಗಿರುವ ಅಕ್ರಮಗಳು ಮತ್ತು ಅವುಗಳನ್ನು ನಿಯಂತ್ರಿಸಲು ಸಶಕ್ತವಾಗಿರುವ ನಮ್ಮ ನೆಲದ ನ್ಯಾಯಾಂಗ ವ್ಯವಸ್ಥೆ, ತನಿಖಾ ಸಂಸ್ಥೆಗಳೇ ಕಾರಣ. ಇದು ಸರಳ ಹಾಗೂ ಸಾಮಾನ್ಯ ಜನರಿಗೂ ಅರ್ಥವಾಗಿರುವ ಸತ್ಯ. ಹೀಗಿರುವಾಗ ಈ ಘಟನೆಯಲ್ಲಿ `ಪುರಂದರ ವಿಠಲ~ನ ಮಹಿಮೆಯನ್ನೋ, `ವಿಧಿಯ ಆಟ~ವನ್ನೋ ಗುರುತಿಸುವ ವ್ಯರ್ಥ ಪ್ರಯತ್ನಕ್ಕೆ ಏನು ಅರ್ಥ?.

ವಿಧಿಯಾಟದ ವೈದಿಕ ವಿಶ್ಲೇಷಣೆಗಿಂತ ಜನಪದದಲ್ಲಿ ಗುರುತಿಸಿರುವ `ಮಾಡಿದ್ದುಣ್ಣೋ ಮಹಾರಾಯ~, `ಉಪ್ಪು ತಿಂದವ ನೀರು ಕುಡಿಯಲೇ ಬೇಕು~ ನುಡಿಗಟ್ಟುಗಳು ಹೆಚ್ಚು ಸಮಂಜಸ ಮತ್ತು ಧ್ವನಿಪೂರ್ಣ.

ರೆಡ್ಡಿ, ಕಟ್ಟಾ, ಕನಿಮೊಳಿ, ರಾಜಾ, ಅಮರಸಿಂಗ್, ದರ್ಶನ್ ಪ್ರಕರಣಗಳಲ್ಲಿ ದೇಶದ ನ್ಯಾಯಾಂಗ ಹಾಗೂ ತನಿಖಾ ವ್ಯವಸ್ಥೆಗಳ ವಿಶ್ವಾಸಾರ್ಹತೆ ಸಾಬೀತಾಗಿದೆ. ಈ ಬೆಳವಣಿಗೆಗಳ `ಕ್ರೆಡಿಟ್~ಅನ್ನು `ವಿಧಿ~ಗೆ ಕೊಟ್ಟು ಮನುಷ್ಯ ಸಾಮರ್ಥ್ಯವನ್ನೇಕೆ ಕಡೆಗಣಿಸಬೇಕು?

ಭಾರತೀಯ ಸಮಾಜದಲ್ಲಿ ಶತಮಾನಗಳಿಂದ `ವಿಧಿಯಾಟ~ದ `ಲೀಲೆ~ಗಳನ್ನು ಬಿತ್ತಿ ಅದರ ಫಸಲು ಸವಿದ ವರ್ಗ ಇನ್ನಾದರೂ ಇಂತಹ ಪ್ರಯತ್ನ ನಿಲ್ಲಿಸಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.