ADVERTISEMENT

ಸಮಾಜಶಾಸ್ತ್ರ ಪದವೀಧರರಿಗೆ ಅನ್ಯಾಯ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2012, 19:30 IST
Last Updated 16 ಫೆಬ್ರುವರಿ 2012, 19:30 IST

ಕರ್ನಾಟಕ ಲೋಕ ಸೇವಾ ಆಯೋಗವು ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪರಿವೀಕ್ಷಣಾಧಿಕಾರಿ (ದರ್ಜೆ - 1) ಮತ್ತು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಹುದ್ದೆಗಳಿಗೆ ಎಂ.ಎಸ್. ಡಬ್ಲ್ಯೂ. ಪದವಿ ಪಡೆದವರು ಅರ್ಜಿ ಸಲ್ಲಿಸಲು ಅರ್ಹರು.
 
ಸಮಾಜಶಾಸ್ತ್ರದಲ್ಲಿ ಎಂ.ಎ. ಪದವಿ ಪಡೆದವರಿಗೆ ಅರ್ಜಿ ಸಲ್ಲಿಸಲು ಅವಕಾಶ ಇಲ್ಲ.
ಈ ಹಿಂದೆ (2007-08ರಲ್ಲಿ) ಕರ್ನಾಟಕ ಲೋಕ ಸೇವಾ ಆಯೋಗವು ಪದವಿ ಪೂರ್ವ ಮಹಾವಿದ್ಯಾಲಯಗಳ ಉಪನ್ಯಾಸಕರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದಾಗ ಸಮಾಜಶಾಸ್ತ್ರ ಉಪನ್ಯಾಸಕ ಹುದ್ದೆಗಳಿಗೆ ಎಂ.ಎ. ಸಮಾಜಶಾಸ್ತ್ರ ಪದವೀಧರರ ಜೊತೆಗೆ ಎಂ.ಎಸ್.ಡಬ್ಲ್ಯೂ. ಪದವೀಧರರಿಗೂ ಅವಕಾಶ ನೀಡಿತ್ತು.

ಪದವಿ ಪೂರ್ವ ಕಾಲೇಜುಗಳ ಸಮಾಜಶಾಸ್ತ್ರ ಉಪನ್ಯಾಸಕ ಹುದ್ದೆಗಳಿಗೂ ಮತ್ತು ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿನ ಹುದ್ದೆಗಳಿಗೂ ಎಂ.ಎಸ್.ಡಬ್ಲ್ಯೂ. ವಿದ್ಯಾರ್ಹತೆಯನ್ನೇ ಪರಿಗಣಿಸಿದರೆ ಎಂ.ಎ. ಪದವಿಗೆ ಸಮಾಜಶಾಸ್ತ್ರವನ್ನು ಅಧ್ಯಯನ ಮಾಡುವ ಅವಶ್ಯಕತೆ ಏನಿದೆ?

 ಕೇವಲ ಎಂ.ಎಸ್.ಡಬ್ಲ್ಯೂ. ಪದವಿ ಇದ್ದರೆ ಸಾಕಲ್ಲವೇ? ಎಂ.ಎಸ್.ಡಬ್ಲ್ಯೂ. ಪದವೀಧರರು  ಪದವಿ ಪೂರ್ವ ಮಹಾವಿದ್ಯಾಲಯಗಳಲ್ಲಿ ಸಮಾಜಶಾಸ್ತ್ರ ವಿಷಯವನ್ನು ಸಮರ್ಥವಾಗಿ ಪಾಠ ಮಾಡಬಲ್ಲರೇ? ಸಮಾಜಶಾಸ್ತ್ರದಲ್ಲಿ ಎಂ.ಎ. ಪದವಿ ಪಡೆದವರಿಗೆ ಆಯೋಗ ಹೀಗೆ ತಾರತಮ್ಯ ಮಾಡಿದರೆ ಮುಂದೆ ವಿಶ್ವವಿದ್ಯಾಲಯಗಳಲ್ಲಿನ ಸಮಾಜಶಾಸ್ತ್ರ ವಿಭಾಗಗಳನ್ನು ಮುಚ್ಚುವ ಸಂದರ್ಭ ಬರಬಹುದು.

ಆದ್ದರಿಂದ ಆಯೋಗ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಸಮಾಜಶಾಸ್ತ್ರದಲ್ಲಿ ಎಂ.ಎ. ಪದವಿ ಪಡೆದವರಿಗೆ ಅವಕಾಶ ಕಲ್ಪಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.