ADVERTISEMENT

ಸೃಜನಶೀಲತೆಯೂ ಇರಲಿ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2018, 19:30 IST
Last Updated 12 ಮಾರ್ಚ್ 2018, 19:30 IST

‘ರಾಜ್ಯದಲ್ಲಿ ಇದುವರೆಗೆ 212 ವಸತಿಶಾಲೆಗಳನ್ನು ನಿರ್ಮಾಣ ಮಾಡಿದ್ದೇವೆ. ನಮ್ಮ ಇಲಾಖೆಯ ಶಾಲೆಗಳು ಸ್ಟಾರ್ ಹೋಟೆಲ್‌ಗಳಂತೆ ಕಾಣುತ್ತವೆ...’ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಹೇಳಿರುವುದು ವರದಿಯಾಗಿದೆ(ಪ್ರ.ವಾ., ಮಾ. 12). ಇದು ಶೈಕ್ಷಣಿಕ ಪ್ರಗತಿಯಲ್ಲಿನ ಒಂದು ಸಣ್ಣ ಹೆಜ್ಜೆ. ಸ್ವಾಗತಾರ್ಹವಾದ ನಡೆಯೂ ಹೌದು.

ನಮ್ಮ ತಳ ಸಮುದಾಯದ ವಿದ್ಯಾರ್ಥಿಗಳು ಐಷಾರಾಮಿ ಕಟ್ಟಡದಲ್ಲಿ ಸುಪ್ಪತ್ತಿಗೆಯ ಮೇಲೆ ಮಲಗಿ ನಿದ್ರಿಸುವುದು, ರುಚಿಕರವಾದ, ಆರೋಗ್ಯಕರವಾದ ಆಹಾರ ಸೇವಿಸುವುದು ಅತ್ಯಂತ ಸಂತೋಷದಾಯಕ ಸಂಗತಿಯೇ. ಆದರೆ ಈ ಹೊರ ಸಂತೋಷ ದಕ್ಕಿದರೆ ಸಾಕೇ? ವಿದ್ಯಾರ್ಥಿಯ ಸರ್ವಾಂಗೀಣ ಅಭಿವೃದ್ಧಿಗೂ ಹಾಸ್ಟೆಲ್‍ಗಳು ಕಾರಣವಾಗುವಂತಿರಬೇಕಲ್ಲವೇ?

ಹಾಸ್ಟೆಲ್ಗಳು ವಿವಿಧ ರೀತಿಯ ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರಗಳಂತಿರಬೇಕಾದುದು ಅತಿ ಅಗತ್ಯ. ಅಲ್ಲಿ ಎರಡು– ಮೂರು ಪಠ್ಯೇತರ ವಿಚಾರ ಸಂಕಿರಣಗಳು, ಸಂವಾದಗಳು, ಸೃಜನಾತ್ಮಕ ಚಟುವಟಿಕೆಗಳು ನಡೆಯುವಂತಿರಬೇಕು. ಇದಕ್ಕೆ ಪೂರಕವಾದ ಪುಟ್ಟ ಗ್ರಂಥ ಭಂಡಾರ ಅಲ್ಲಿರಬೇಕು. ಅದರಲ್ಲಿ ಗಾಂಧಿ, ಜೋತಿಬಾ ಫುಲೆ, ಅಂಬೇಡ್ಕರ್, ಸಾವಿತ್ರಿಬಾಯಿ, ಕಸ್ತೂರಬಾ ಮುಂತಾದ ಮಹಾಸಾಧಕರ ಜೀವನ ಚರಿತ್ರೆ, ಭಾರತದ ನಂಬಲರ್ಹವಾದ ಗತದ ಚರಿತ್ರೆ, ರಾಮಾಯಣ, ಮಹಾಭಾರತ, ಅವಕ್ಕೆ ಸಂಬಂಧಿಸಿದ ವಿಭಿನ್ನ ದೃಷ್ಟಿಯ ವಿಮರ್ಶಾ ಗ್ರಂಥಗಳು ಇರಬೇಕು.

ADVERTISEMENT

ಅಲ್ಲಿನ ವಾರ್ಡನ್ ಕ್ರಿಯಾಶೀಲತೆಯಿಂದ ತೊಡಗಿಸಿಕೊಳ್ಳುವಂತಿರಬೇಕು. ಎಚ್ಚರದ ವಾತಾವರಣ ಅಲ್ಲಿ ಸದಾ ಜೀವಂತಿಕೆಯನ್ನು ಸೂಸುವಂತಿರಬೇಕು. ಭವಿಷ್ಯದ ಆರೋಗ್ಯಪೂರ್ಣ, ಸದೃಢ, ಸುಸ್ಥಿರ ಭಾರತ ನಿರ್ಮಾಣಕ್ಕೆ ಇಷ್ಟು ಸಾಕಲ್ಲವೇ? ಸಚಿವರು ಇತ್ತ ಗಮನಹರಿಸಬೇಕು. ಆ ಮೂಲಕ ಅವರೂ ಕ್ರಿಯಾಶೀಲರೂ, ಸೃಜನಶೀಲರೂ ಆಗಬೇಕು.

- ಚಂದ್ರಶೇಖರ ತಾಳ್ಯ, ಹೊಳಲ್ಕೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.