ADVERTISEMENT

ಹುಳುಕು, ಹೂರಣಗಳು ಹೊರಬರಲಿ

ಸಾಮಗ ದತ್ತಾತ್ರಿ
Published 2 ಏಪ್ರಿಲ್ 2013, 19:59 IST
Last Updated 2 ಏಪ್ರಿಲ್ 2013, 19:59 IST

“ಬಿಜೆಪಿಯಲ್ಲಿ ಇರುವಷ್ಟು ದಿನ ಭ್ರಷ್ಟರ ಜತೆ ಕೆಲಸ ಮಾಡಬೇಕಿತ್ತು. ಈಗ ಮುಜುಗರ ತಪ್ಪಿಸಿದ್ದಾರೆ” ರೇಣುಕಾಚಾರ್ಯ ಉವಾಚ. (ಪ್ರ.ವಾ., ಮಾ. 28). ಮಾನ್ಯರು ಈಗಷ್ಟೆ ಮಂತ್ರಿಸ್ಥಾನ ಚ್ಯುತರು; 6 ವರ್ಷಗಳ ಕಾಲ ಭಾಜಪ ಸದಸ್ಯತ್ವ ಕಳೆದುಕೊಂಡವರು ಇದೆಲ್ಲ `ಭ್ರಷ್ಟರ' ಕಿತಾಪತಿಯಿಂದ, ಇದು ರೇಣುಕಾಚಾರ್ಯರ ಅಭಿಪ್ರಾಯ. ಬೇರೆಯವರನ್ನು `ಭ್ರಷ್ಟರು' ಎಂದಿರುವ ಇವರು ಆ ಭ್ರಷ್ಟರ ಜೊತೆಯಲ್ಲೇ ನಾಲ್ಕೈದು ವರ್ಷಗಳ ಕಾಲ ಮಂತ್ರಿಯಾಗಿ ಕೆಲಸ ಮಾಡಿದ್ದೇಕೆ? ಅವರನ್ನೆಲ್ಲ ಸಹಿಸಿಕೊಂಡಿದ್ದೇಕೆ?

ಇವರಿಗೆ ಅಂತಃಸಾಕ್ಷಿಯಿದ್ದಿದ್ದರೆ ಭ್ರಷ್ಟ ವಾತಾವರಣ ತಮ್ಮ ಸುತ್ತುವರಿದಿದೆಯೆನ್ನುವುದು ಅರಿವಿಗೆ ಬಂದೊಡನೆಯೇ ಮಂತ್ರಿ ಪದವಿಯನ್ನು ಬಿಸಾಕಬೇಕಿತ್ತು. ಇಂತಹ ವಾತಾವರಣದ ಅರಿವು ಇತ್ತೀಚೆಗಷ್ಟೆ ಬಂದುದಲ್ಲವಲ್ಲ! ಹೈದರಾಬಾದ್ ರೆಸಾರ್ಟ್‌ಗೆ ಹೋದುದರ ಬಗ್ಗೆ ಹೇಳುತ್ತಾರೆ; ತಮ್ಮ ವೈಯಕ್ತಿಕ ಬದುಕಿನ ಬಗ್ಗೆ ಪ್ರಸ್ತಾಪಿಸಿದ್ದ ಸದಾನಂದಗೌಡರ ವೈಯಕ್ತಿಕ ಬಗೆಗಿನ ದಾಖಲೆಗಳೂ ತಮ್ಮ ಬಳಿ ಇವೆ ಎಂದು ಎಚ್ಚರಿಸುತ್ತಾರೆ ರೇಣುಕಾಚಾರ್ಯ ಅವರು.

ಮತದಾರರಾದ ನಾವು ಅರಿಯಬೇಕಾದುದೆಂದರೆ ಯಾರ್ಯಾರು ವೈಯಕ್ತಿಕ ಜೀವನದಲ್ಲಿ ಎಷ್ಟು ಶುದ್ಧರು, ನಿಷ್ಠರು ಮತ್ತು ಪ್ರಾಮಾಣಿಕರು ಎನ್ನುವುದನ್ನು. ನಮ್ಮನ್ನು ಪ್ರತಿನಿಧಿಸುವವರ ಅರ್ಹತಾನರ್ಹತೆಗಳೇನು, ತತ್ವನಿಷ್ಠೆಗಳೇನು ಎಂದು ತಿಳಿಯುವ ಹಕ್ಕು ನಮಗಿದೆಯಲ್ಲವೇ? ರಾಜಕೀಯ ನಾಯಕರ ನಡುವಣ (ಕ್ಷುಲ್ಲಕ) ಜಗಳಗಳ ನೆಪದಿಂದಲಾದರೂ ಪರಸ್ಪರರ ಹುಳುಕು, ಹೂರಣಗಳು ಹೊರಬರಲಿ. ಮತದಾರರಿಗೆ ಆಯ್ಕೆ ಸಲೀಸಾಗುತ್ತದೆ!
ಸದಾನಂದಗೌಡರೇ, ರೇಣುಕಾಚಾರ್ಯರೇ ಮುಂದೆ ಬನ್ನಿ!
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.