ಈ ಫೆಬ್ರುವರಿ ಮೊದಲ ವಾರದಲ್ಲಿ ಬಿಎಂಟಿಸಿ ಬಸ್ಸುಗಳಲ್ಲಿ 2ನೇ ಹಂತದ ₨ 9 ಟಿಕೆಟ್ ದರವನ್ನು ಚಿಲ್ಲರೆ ಸಮಸ್ಯೆಗಾಗಿ ₨ 10 ಮಾಡಿರುವುದು ನಿಜ ಎಂದು ಸಾರಿಗೆ ಸಚಿವರು ಫೆ. 17ರ ವಿಧಾನಪರಿಷತ್ತಿನಲ್ಲಿ ಹೇಳಿರುವುದು ಪ್ರಯಾಣಿಕರಲ್ಲಿ ಬೇಸರ, ವಿಸ್ಮಯ ಮೂಡಿಸಿದೆ.
ಚಿಲ್ಲರೆ ಸಮಸ್ಯೆ ಪರಿಹರಿಸಲೂ ಪ್ರಯಾಣಿಕರಿಗೆ ದರ ಏರಿಕೆಯ ಬರೆ ಹಾಕಬೇಕೆ? ಏಕೆ? ಪ್ರತಿದಿನ ದುಡ್ಡು ಕೊಟ್ಟು ಪ್ರಯಾಣಿಸುವವರಿಗೆ, ಹಿರಿಯ ನಾಗರಿಕರಿಗೆ ಬೆಲೆ ಏರಿಕೆ ಬಿಸಿ ತಗುಲಿರುವುದನ್ನು ಸಾರಿಗೆ ಸಂಸ್ಥೆ, ಸಚಿವರು ಗಂಭೀರವಾಗಿ ಗಮನಿಸಲಿ, ಸೂಕ್ತವಾಗಿ ಸ್ಪಂದಿಸಲಿ.
ಪ್ರತಿದಿನ ಸಾರಿಗೆ ಸಂಸ್ಥೆಗೆ ಈ ಚಿಲ್ಲರೆ ಸಮಸ್ಯೆ ಆದರೆ ಏರಿಕೆಯ ಲಾಭ ಸಿಗುತ್ತಿದೆ! ಈ ಲಾಭ ತಿಂಗಳಿಗೆ ಎಷ್ಟು! ವರ್ಷಕ್ಕೆ ಎಷ್ಟು! ಎನ್ನುವ ಅಂಕಿ ಅಂಶವನ್ನು ಸಾರಿಗೆ ಸಂಸ್ಥೆ ಸಚಿವರು ಬಹಿರಂಗಪಡಿಸುವರೆ? ಕಡೆಪಕ್ಷ ಹಿರಿಯ ನಾಗರಿಕರಿಗಾದರೂ ದರ ಏರಿಕೆಯ ಬರೆ ಬೇಡ ಎನ್ನುವ ಮಾನವೀಯತೆಯನ್ನು ಸಾರಿಗೆ ಸಂಸ್ಥೆ ಪ್ರದರ್ಶಿಸಬಾರದೆ.
ಮುಂದಿನ ದಿನಗಳಲ್ಲಿ ಸಾರಿಗೆ ಸಂಸ್ಥೆ ಇದೇ ಮಾದರಿ ಚಿಲ್ಲರೆ ಸಮಸ್ಯೆಯ ನೆಪ ಹೇಳಿ ಪ್ರಯಾಣ ದರ, ಬಸ್‌ಪಾಸ್ ದರ, ಏರಿಸಿದರೆ ಪ್ರಯಾಣಿಕರ ಗತಿ! ಬಿಎಂಟಿಸಿಯ ಈ ಅನ್ಯಾಯದ ವಿರುದ್ಧ ಪ್ರಯಾಣಿಕರು ಮೌನವಾಗಿರುವುದು ಎಂತಹ ಚಿಲ್ಲರೆ ವಿಪರ್ಯಾಸ!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.