ADVERTISEMENT

ಗುರುವಾರ, 15–9–1994

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2019, 19:56 IST
Last Updated 14 ಸೆಪ್ಟೆಂಬರ್ 2019, 19:56 IST

ಬೆಂಗಳೂರು, ಸೆ. 14– ಸುಪ್ರೀಂಕೋರ್ಟ್ ನೀಡಿರುವ ಆದೇಶದ ಹಿನ್ನೆಲೆಯಲ್ಲಿ ವೈದ್ಯಕೀಯ ಎಂಜಿನಿಯರಿಂಗ್ ಶಿಕ್ಷಣಕ್ಕೆ ಹಿಂದುಳಿದ ವರ್ಗ ಹಾಗೂ ಪರಿಶಿಷ್ಟ ಜಾತಿ ಮತ್ತು ಬುಡಕಟ್ಟುಗಳ ಮೀಸಲು ಪ್ರಮಾಣವನ್ನು ಶೇ 50ಕ್ಕೆ ಮಿತಿಗೊಳಿಸಲು ರಾಜ್ಯ ಸಚಿವ ಸಂಪುಟ ಇಂದು ನಿರ್ಧರಿಸಿತು.

‘ವಂಚನೆಯಲ್ಲಿ’ ಬೆಂಗಳೂರು ಮುಂದೆ
ಬೆಂಗಳೂರು, ಸೆ. 14–
ಅಪರಾಧ ಜಗತ್ತಿನಲ್ಲಿ ಸಂಭವಿಸುವ ‘ವಂಚನೆ’ ಪ್ರಕರಣಗಳಲ್ಲಿ ಬೆಂಗಳೂರು ನಗರದ್ದೇ ಸಿಂಹಪಾಲು. ದೇಶದ ಬೇರಾವುದೇ ನಗರಗಳಿಗೆ ಹೋಲಿಸಿದರೆ ನಮ್ಮ ನಗರ ಪ್ರಥಮ ಸ್ಥಾನದಲ್ಲಿದೆ ಎಂದು ಪೊಲೀಸ್ ಮಹಾನಿರ್ದೇಶಕ ಆರ್. ರಾಮಲಿಂಗಂ ತಿಳಿಸಿದರು.

ಅಯೋಧ್ಯೆ– ಕೋರ್ಟ್ ತೀರ್ಪಿಗೆ ಬದ್ಧ
ನವದೆಹಲಿ, ಸೆ. 14 (ಪಿಟಿಐ, ಯುಎನ್‌ಐ)–
ಸುಪ್ರೀಂ ಕೋರ್ಟ್ ನೀಡುವ ಅಭಿಪ್ರಾಯದ ಮೇರೆಗೆ ಅಯೋಧ್ಯೆ ವಿವಾದಕ್ಕೆ ಪರಿಹಾರ ಕಂಡು ಹಿಡಿಯುವುದಾಗಿ ಕೇಂದ್ರ ಸರ್ಕಾರ ಇಂದು ಲಿಖಿತ ಮುಚ್ಚಳಿಕೆ ಬರೆದುಕೊಟ್ಟಿದೆ. ಸಾಲಿಸಿಟರ್ ಜನರಲ್ ದೀಪಂಕರ್ ಪಿ. ಗುಪ್ತಾ ಅವರು ಈ ಮುಚ್ಚಳಿಕೆಯನ್ನು ಮುಖ್ಯ ನ್ಯಾಯಮೂರ್ತಿ ಎಂ.ಎನ್. ವೆಂಕಟಾಚಲಯ್ಯ ಅವರ ನೇತೃತ್ವದ ಐವರು ಸದಸ್ಯರ ಪೀಠದ ಮುಂದೆ ಸಲ್ಲಿಸಿದರು. ಬಾಬರಿ ಮಸೀದಿಗಿಂತಲೂ ಮೊದಲು ಆ ಸ್ಥಳದಲ್ಲಿ ಮಂದಿರ ಇತ್ತೇ ಎಂದು ನಿರ್ಧರಿಸುವಂತೆ ರಾಷ್ಟ್ರಪತಿ, ಕೋರ್ಟ್‌ ಅನ್ನು ಕೋರಿರುವ ಹಿನ್ನೆಲೆಯಲ್ಲಿಅದು ನೀಡುವ ತೀರ್ಪಿಗೆ ಸರ್ಕಾರ ಬದ್ಧವಾಗಿರುವುದು ಎಂದು ಮುಚ್ಚಳಿಕೆಯಲ್ಲಿ ತಿಳಿಸಲಾಗಿದೆ.

ADVERTISEMENT

ತ್ರಿಭಾಷಾ ಶಿಕ್ಷಣ ಸೂತ್ರ: ಸಂಸ್ಕೃತಕ್ಕೆ ಕೊಕ್
ಬೆಂಗಳೂರು, ಸೆ. 14–
ಮಾತೃಭಾಷಾ ಶಿಕ್ಷಣ ನೀರಿ ಅನ್ವಯ ರಾಜ್ಯ ಸರ್ಕಾರ ರೂಪಿಸಿರುವ ಹೊಸ ತ್ರಿಭಾಷಾ ಶಿಕ್ಷಣ ಸೂತ್ರದಂತೆ ಪ್ರೌಢಶಾಲಾ ಹಂತದಲ್ಲಿ ಈ ಶೈಕ್ಷಣಿಕ ವರ್ಷದಿಂದ ಸಂಸ್ಕೃತ ಪ‍್ರಥಮ ಭಾಷೆಯ ಸ್ಥಾನದಿಂದ ವಂಚಿತವಾಗಿದೆ. ಈ ವರ್ಷದ ಏಪ್ರಿಲ್ 29 ರಂದು ಹೊರಡಿಸಲಾದ ಆದೇಶದಂತೆ ಕನ್ನಡ, ತಮಿಳು, ತೆಲುಗು, ಮಲಯಾಳಂ, ಮರಾಠಿ, ಹಿಂದಿ, ಉರ್ದು, ಇಂಗ್ಲಿಷ್ ಭಾಷೆಗಳನ್ನು ಪ್ರಥಮ ಭಾಷೆಯಾಗಿ ತೆಗೆದುಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.