ADVERTISEMENT

371ನೇ ಕಲಂ: ಅಸಂಬದ್ಧ ವಿಚಾರ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2012, 19:30 IST
Last Updated 23 ಆಗಸ್ಟ್ 2012, 19:30 IST

ಬರಹಗಳು ಮತ್ತು ಹೇಳಿಕೆಗಳು ಸಾರ್ವಜನಿಕರನ್ನು ದಿಕ್ಕು ತಪ್ಪಿಸುತ್ತವೆ ಎನ್ನುವುದಕ್ಕೆ ಹಂಪಿಯ ಕನ್ನಡ ವಿವಿ ಪ್ರಾಧ್ಯಾಪಕರಾದ ಡಾ. ಟಿ. ಆರ್. ಚಂದ್ರಶೇಖರ ಅವರ`ಸಂವಿಧಾನದ 371ನೇ ಜೆ ಕಲಂ ಮತ್ತು ವಿಜಾಪುರ ಜಿಲ್ಲೆ~ ಎಂಬ  ಅಸಂಗತ ಲೇಖನ ಮತ್ತು ಸಚಿವ ಮುರುಗೇಶ ನಿರಾಣಿಯವರು ವಿಶೇಷ ಸ್ಥಾನಮಾನಕ್ಕೆ ನನ್ನ ತವರು ಜಿಲ್ಲೆಯಾದ ಬಿಜಾಪುರವನ್ನು ಸೇರಿಸಬೇಕು ಎಂಬ  ಹೇಳಿಕೆಗಳೇ ಸಾಕ್ಷಿ.

ಟಿ.ಆರ್.ಸಿ. ಯವರು ಬಿಜಾಪುರ ಜಿಲ್ಲೆಯಲ್ಲಿನ ಕೆಲ ಅಂಕಿ - ಸಂಖ್ಯೆ ನೀಡಿ ಅದನ್ನು 371ನೇ ವಿಧಿಗೆ ಸೇರಿಸಬೇಕೆಂಬ ಅವರ ಅಭಿಪ್ರಾಯ ಒಪ್ಪುವಂತಹ ವಿಚಾರವಲ್ಲ.

ಬರೀ ಬಿಜಾಪುರವಷ್ಟೇ ಅಲ್ಲ ರಾಜ್ಯದ ಇತರ ಜಿಲ್ಲೆಗಳೂ ತೀರಾ ಹಿಂದುಳಿದಿವೆ. ಅವುಗಳನ್ನೂ 371ನೇ ವಿಧಿಗೆ ಸೇರಿಸಲು ಸಾಧ್ಯವೇ? ಹಿಂದೆ ಇದೇ ಪ್ರಾಧ್ಯಾಪಕರು ಹೈ-ಕಕ್ಕೆ 371ನೇ ಕಲಂ ಜಾರಿಯಾದರೆ ಅಭಿವೃದ್ಧಿ ಸಾಧ್ಯವೇ ಎಂದು ಪತ್ರಿಕಾ ಬರಹಗಳಲ್ಲಿ ಪ್ರಶ್ನಿಸಿದವರು ಇಂದು 371ನೇ ಕಲಂ ಬಗ್ಗೆ ಆಸಕ್ತಿ ತೋರುತ್ತಿರುವುದರ ಹಿಂದಿನ ಉದ್ದೇಶವಾದರೂ ಏನು ಎಂಬುದು ತಿಳಿಯುತ್ತಿಲ್ಲ.
 
ನಿರಾಣಿಯವರೂ 371ನೇ ಕಲಂ ಬಿಜಾಪುರ ಜಿಲ್ಲೆಗೆ ವಿಸ್ತರಿಸಬೇಕು ನಾನು ಅದೇ ಜಿಲ್ಲೆಯವನು ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಈ ಭಾಗದ ಜನತೆ ವಿಶೇಷ ಸ್ಥಾನ - ಮಾನಕ್ಕಾಗಿ ಕಳೆದ ಅನೇಕ ವರ್ಷಗಳಿಂದಲೂ ಹೋರಾಟ ಮಾಡುತ್ತಾ ಬಂದಿದ್ದಾರೆ. ಆ ಸಂದರ್ಭದಲ್ಲಿ ಇವರೆಲ್ಲ ಎಲ್ಲಿದ್ದರು? 

ಈ ಭಾಗದಲ್ಲಿ ದಬ್ಬಾಳಿಕೆಯಿಂದ, ಬಡತನದಿಂದ, ತೀರಾ ಸಂಕಷ್ಟದಿಂದ ಜನ ಕಣ್ಣೀರಲ್ಲಿ ಕೈತೊಳೆದಿದ್ದಾರೆ. ಇಲ್ಲಿನ ಇತಿಹಾಸವೇ ರಕ್ತಸಿಕ್ತ ಚರಿತ್ರೆ. ಈ ಭಾಗದ ಜನ ವಿಶೇಷ ಸ್ಥಾನಕ್ಕಾಗಿ ಹೋರಾಟ ಮಾಡಿದಾಗ ದೂರ ನಿಂತು ತಮಾಷೆ ನೋಡಿದವರೆ ಮತ್ತು ವಿರೋಧಿಸಿದವರೇ ಜಾಸ್ತಿ. ಈ ವಿಶೇಷ ಸ್ಥಾನ ಮಾನಕ್ಕೆ ಬಳ್ಳಾರಿ ಜಿಲ್ಲೆಯನ್ನೂ ಸಹ ಸೇರಿಸಬಾರದು ಎಂಬುದು ನನ್ನ ಅಭಿಪ್ರಾಯವಾಗಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.