ADVERTISEMENT

ದರಪಟ್ಟಿ: ಎದ್ದು ಕಾಣುವ ದೋಷವೆಂದರೆ...

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 14 ಸೆಪ್ಟೆಂಬರ್ 2022, 19:30 IST
Last Updated 14 ಸೆಪ್ಟೆಂಬರ್ 2022, 19:30 IST

ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿನ ಲಂಚದ ದರಪಟ್ಟಿಯನ್ನು ಕಾಂಗ್ರೆಸ್ ಪಕ್ಷದ ರಾಜ್ಯ ಘಟಕ ಬಿಡುಗಡೆ ಮಾಡಿದೆ (ಪ್ರ.ವಾ., ಸೆ. 14). ಸರ್ಕಾರದಲ್ಲಿ ಲಂಚದ ತಾಂಡವನೃತ್ಯ ನಡೆಯುತ್ತಿದೆ, ಇದನ್ನು ಮುಂದಿಟ್ಟುಕೊಂಡು ಜನರ ಬಳಿಗೆ ತಾನು ಹೋಗುವೆನೆಂದು ಪಕ್ಷ ಹೇಳಿದೆ. ಲಂಚದ ನೃತ್ಯವೈಭವ ಯಾವ ಕಾಲದಲ್ಲಿ ಇರಲಿಲ್ಲ ಎಂದು ಕಾಂಗ್ರೆಸ್ ಹೇಳಬೇಕು. ಈಗ್ಗೆ ಸುಮಾರು 900 ವರ್ಷಗಳ ಹಿಂದೆ ಇದ್ದ ಪುಲಿಗೆರೆ ಸೋಮನಾಥನ ಸೋಮೇಶ್ವರ ಶತಕದಲ್ಲೇ ಲಂಚದ ಪ್ರಸ್ತಾಪವಿದೆ! ‘ಕೈಯಾಸೆಯಂ ಮಾಡದಂ ನಿಜ ಮಂತ್ರೀಶ್ವರಂ’ ಎಂದಿದ್ದ ಕವಿ. ಲಂಚಕ್ಕೆ ಸಾರ್ವಕಾಲಿಕ ಕುಖ್ಯಾತಿಯಿದೆ.

ಕಾಂಗ್ರೆಸ್ ಬಿಡುಗಡೆ ಮಾಡಿರುವ ದರಪಟ್ಟಿಯಲ್ಲಿ ಏನಿದೆ ವಿಶೇಷ? ಎದ್ದು ಕಾಣುವ ದೋಷವೆಂದರೆ ಆ ದರಪಟ್ಟಿಯು ಬೇರೆ ಬೇರೆ ಇಲಾಖೆಗಳಲ್ಲಿ ಲಂಚವನ್ನು ಪಡೆದಿರುವ ವ್ಯಕ್ತಿ, ಆಯಾ ಇಲಾಖೆಗೆ ಸಂಬಂಧಿಸಿದ ಮಂತ್ರಿ, ಲಂಚದ ನಿಖರ ಮೊತ್ತ, ಯಾವಾಗ ಮತ್ತು ಯಾವ ರೂಪದಲ್ಲಿ ಲಂಚವನ್ನು ಕೊಟ್ಟಿದ್ದು, ಲಂಚ ನೀಡಿದ ನಿರ್ದಿಷ್ಟ ವ್ಯಕ್ತಿ ಯಾರು, ಸಂಘ, ಸಂಸ್ಥೆ ಯಾವುದು ಎಂಬಂತಹ ಸ್ಪಷ್ಟ ಹಾಗೂ ಖಚಿತ ವಿವರಗಳು ಇಲ್ಲದಿರುವುದು. ಲಂಚದ್ದು ಸಾರ್ವಕಾಲಿಕ ಕುಖ್ಯಾತಿ ಎಂದಾಗ ಅದು ಕಾಂಗ್ರೆಸ್ ಆಡಳಿತದ ಕಾಲವನ್ನು ಸಹ ಒಳಗೊಳ್ಳುತ್ತದೆ ಅಥವಾ ಕಾಂಗ್ರೆಸ್ ಪ್ರಕಾರ ಆ ಕಾಲದಲ್ಲಿ ಲಂಚ ಇರಲಿಲ್ಲವೇ? ಲಂಚವನ್ನು ಆದಷ್ಟೂ ಇಲ್ಲದಂತೆ ಮಾಡಲು ಆ ಪಕ್ಷದ ನೇತೃತ್ವದ ಸರ್ಕಾರ ತೆಗೆದುಕೊಂಡ ಕ್ರಮಗಳೇನು? ಶಿಕ್ಷೆಗೆ ಒಳಪಡಿಸಿದ ಅಧಿಕಾರಿವರ್ಗ ಯಾವುದು? ಕಾಂಗ್ರೆಸ್ ಈಗ ಮಾಡುವ ಆಪಾದನೆಗಳನ್ನು ಸಮರ್ಥಿಸಿಕೊಳ್ಳಲು ಈ ವಿವರಗಳನ್ನೂ ಜನರ ಮುಂದೆ ಇಡಬೇಕಿತ್ತು.

ಪಾಪಕೃತ್ಯಕ್ಕಾಗಿ ಮೇರಿ ಮ್ಯಾಗ್ಡಲಿನ್‌ಗೆ ಕಲ್ಲಿನಿಂದ ಹೊಡೆಯಬೇಕೆಂದಾಗ, ಜೀಸಸ್ ಅಲ್ಲಿ ನೆರೆದವರನ್ನು ಉದ್ದೇಶಿಸಿ ಹೇಳಿದ್ದು ಇದು: ‘ನಿಮ್ಮಲ್ಲಿ ಯಾರು ಏನೊಂದೂ ಪಾಪವನ್ನು ಮಾಡಿಲ್ಲವೋ ಆತ ಮೊದಲು ಕಲ್ಲನ್ನು ಆಕೆಯತ್ತ ಬೀರಬೇಕು’ ಎಂದು.

ADVERTISEMENT

– ಸಾಮಗ ದತ್ತಾತ್ರಿ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.