ADVERTISEMENT

ವಾಚಕರ ವಾಣಿ: ಸಾಲ ಮಾಡಿ ತುಪ್ಪ ತಿನ್ನುವುದು ಬೇಡ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2020, 16:53 IST
Last Updated 18 ಸೆಪ್ಟೆಂಬರ್ 2020, 16:53 IST

ರಾಜ್ಯ ಸರ್ಕಾರವು ಆರ್ಥಿಕ ಸಂಕಷ್ಟದ ನೆವದಲ್ಲಿ ₹ 33,000 ಕೋಟಿ ಸಾಲ ಪಡೆಯಲು ತೀರ್ಮಾನಿಸಿದೆಯೆಂದು ವರದಿಯಾಗಿದೆ (ಪ್ರ.ವಾ., ಸೆ. 16). ಇದರಿಂದ ರಾಜ್ಯ ಸರ್ಕಾರದ ಒಟ್ಟಾರೆ ಸಾಲದ ಮೊತ್ತ ₹ 4 ಲಕ್ಷ ಕೋಟಿಗೆ ಏರಿಕೆಯಾಗಲಿದೆ ಎಂದು ಹೇಳಲಾಗಿದೆ.

ಇಷ್ಟೊಂದು ಸಾಲದ ಹೊರೆ ಇಟ್ಟುಕೊಂಡು ಅನಗತ್ಯ ಕಾರ್ಯಕ್ರಮಗಳು ಹಾಗೂ ಜನ ಮೆಚ್ಚಿಸುವ ಯೋಜನೆಗಳ ಘೋಷಣೆ ಎಗ್ಗಿಲ್ಲದೆ ನಡೆದೇ ಇದೆ. ಕೊರೊನಾ ವೈರಸ್ ಕಾಟ ಮತ್ತು ಪ್ರವಾಹದಿಂದ ರಾಜ್ಯ ಮಾತ್ರವಲ್ಲದೆ ಇಡೀ ದೇಶವೇ ನಲುಗಿದೆ. ಅನೇಕ ಕಾರ್ಖಾನೆಗಳು ಮುಚ್ಚಿವೆ, ವ್ಯಾಪಾರ ವ್ಯವಹಾರ ಕುಸಿದಿದೆ, ಸಾವಿರಾರು ಯುವಕ ಯುವತಿಯರು ಕೆಲಸ ಕಳೆದುಕೊಂಡು ದಿಕ್ಕೆಟ್ಟು ಊರುಗಳನ್ನು ಸೇರಿದ್ದಾರೆ. ರೈತರು, ಕಾರ್ಮಿಕರ ಬವಣೆ ಹೇಳತೀರದು. ಇದೊಂದು ಗಂಭೀರ ಪರಿಸ್ಥಿತಿ.

ಈಗಲಾದರೂ ಸರ್ಕಾರ ಎಚ್ಚೆತ್ತು ಕನಿಷ್ಠ ಒಂದು ವರ್ಷ ಅನಗತ್ಯ ಯೋಜನೆಗಳನ್ನು ಕೈಬಿಡಲಿ. ಎಲ್ಲ ಹಂತಗಳಲ್ಲಿ ಮಿತವ್ಯಯ ನಿಯಮ ಪಾಲಿಸಲಿ. ಸರ್ಕಾರ ಮಾಡಿದ ಸಾಲ ತೀರಿಸಲು ಜನಸಾಮಾನ್ಯರ ಮೇಲೆ ತೆರಿಗೆ ವಿಧಿಸಿ ಮತ್ತಷ್ಟು ಸಂಕಷ್ಟ ತರಬಾರದು. ಜನಸಾಮಾನ್ಯರಂತೆಯೇ ಸರ್ಕಾರ ಕೂಡ ತನ್ನ ಮನೆಯ ಖರ್ಚು ವೆಚ್ಚಗಳನ್ನು ಕಡಿಮೆ ಮಾಡಿ ಪರಿಸ್ಥಿತಿಯನ್ನು ಎದುರಿಸಬೇಕು. ಅದುಬಿಟ್ಟು ಸಾಲ ಮಾಡಿ ತುಪ್ಪ ತಿನ್ನುವುದಲ್ಲ.

ADVERTISEMENT

ಅತ್ತಿಹಳ್ಳಿ ದೇವರಾಜ್, ಹಾಸನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.