ADVERTISEMENT

ವಾಚಕರ ವಾಣಿ| ಟಿಪ್ಪು: ಪುಸ್ತಕ, ನಾಟಕ...

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2022, 19:30 IST
Last Updated 27 ನವೆಂಬರ್ 2022, 19:30 IST

ಬಿಡುಗಡೆಯಾದ ಹತ್ತು ದಿನಗಳೊಳಗೇ ‘ಟಿಪ್ಪು ನಿಜಕನಸುಗಳು’ ಕೃತಿಗೆ ತಡೆಯಾಜ್ಞೆ ಎದುರಾಗಿದೆ. ನಾಟಕವು ಪೊಲೀಸ್ ಬಂದೋಬಸ್ತ್ ನಡುವೆ ಪ್ರದರ್ಶಿಸಲ್ಪಟ್ಟಿದೆ. ಒಂದು ಮುಖ್ಯ ಪ್ರಶ್ನೆಯೆಂದರೆ- ವೈಯಕ್ತಿಕ ಅಜೆಂಡಾಗೆ ಸಂಸ್ಥೆಗಳನ್ನು ಬಳಸಿರುವುದು ಸರಿಯೇ? ಕನಸು ಎಂಬುದರಲ್ಲಿ ಹೇಗೆ ಕಲ್ಪನೆ ಇರುತ್ತದೋ ಹಾಗೆಯೇ ಪುಸ್ತಕದಲ್ಲಿ ಕಾಲ್ಪನಿಕ ಸತ್ಯ ಅಭಿಪ್ರಾಯಸಹಿತ ಇರಬಹುದು. ಒಬ್ಬ ರಾಜನಾಗಿ ಟಿಪ್ಪುವಿನ ಬಗೆಗೆ ವಿವಿಧ ಚಿತ್ರಣಗಳಿವೆ. ತಮಿಳುನಾಡು, ಕೇರಳದಲ್ಲಿ ನಕಾರಾತ್ಮಕ ದಾಖಲೆಗಳಿವೆ. ಇಲ್ಲಿ ‘ಮೈಸೂರಿನ ಹುಲಿ’, ಶೃಂಗೇರಿ- ನಂಜನಗೂಡು ಕತೆಗಳಿವೆ. ತೋಟಗಾರಿಕೆ, ರೇಷ್ಮೆ ಉದ್ಯಮಗಳ ಸಂಬಂಧದಲ್ಲೂ ಆತನ ಹೆಸರನ್ನು ಉಲ್ಲೇಖಿಸಲಾಗುತ್ತದೆ. ಒಟ್ಟಾರೆ ಬ್ರಿಟಿಷರಿಗೆ ಫೈಟ್ ಕೊಟ್ಟವರಲ್ಲಿ ಒಬ್ಬ ಎಂಬುದನ್ನು ಯಾರೂ ನಿರಾಕರಿಸಲಾರರು.

ಸಮಸ್ಯೆಯೆಂದರೆ, ಎಸ್.ಎಲ್.ಭೈರಪ್ಪ ಅವರಂತಹವರು ‘ಅವನ ನಿಜಸ್ವರೂಪ ಎಲ್ಲರಿಗೂ ತಿಳಿಸಬೇಕು’ ಎನ್ನುವಾಗಲೂ ಟಿಪ್ಪುವಿನ ದೋಷಗಳನ್ನೇ ಹೆಚ್ಚಾಗಿ ಹೇಳುತ್ತಾರೆ. ಇನ್ನೊಂದು ತುದಿಯಲ್ಲಿ ಕೆಲವರು ಟಿಪ್ಪುವನ್ನು ತಮ್ಮ ‘ಸೆಕ್ಯುಲರ್’ ಉದ್ದೇಶಕ್ಕಾಗಿ ವೈಭವೀಕರಿಸುತ್ತಾರೆ. ಮೊಘಲರನ್ನು ಹಿಮ್ಮೆಟ್ಟಿಸಿದ ಅಸ್ಸಾಮಿನ ಸೇನಾಧಿಪತಿ ಯೊಬ್ಬರನ್ನು ಈಗ ಹಾಡಿಹೊಗಳುವಾಗ, ಇಡೀ ಈಶಾನ್ಯ ಪ್ರದೇಶ ಬ್ರಿಟಿಷ್ ಪೂರ್ವ ಅವಧಿಯಲ್ಲಿ ಬೇರೆ ಬೇರೆ ಒತ್ತಡಕ್ಕೆ ಒಳಗಾಗಿ ಭಾರತದ ಮೇನ್‌ಲ್ಯಾಂಡ್‌ಗೆ ಸೇರಿರಲಿಲ್ಲ ಎಂಬ ಅಂಶವನ್ನು ಅನುಕೂಲಕ್ಕೆಂದು ಮರೆಮಾಚುವುದೂ ನಡೆಯುತ್ತಿದೆ. ‘ಸರೈಘಾಟ್’ ಹಲವು ನಾಟಕಗಳಲ್ಲಿ ಪ್ರತಿಮಾತ್ಮಕವಾಗಿ‌ ಬಳಸಲ್ಪಟ್ಟಿದೆ. ಬೇರೆ ಪುರಾವೆ ಸಿಗುವವರೆಗೆ ಇತಿಹಾಸ ನಿಜ. ನಾಟಕ ಇನ್ನಿತರ ಕೃತಿಗಳಲ್ಲಿ ದೃಷ್ಟಿಕೋನ, ವ್ಯಾಖ್ಯಾನಗಳು ಸೇರಿಕೊಳ್ಳುತ್ತವೆ. ಆದ್ದರಿಂದ ಇಂತಹ ವಿಷಯಗಳಲ್ಲಿ ವಿವಾದಗಳನ್ನು ಬೆಳೆಸುತ್ತಾ ಹೋಗುವುದು ಸರಿಯಲ್ಲ.

- ಎಚ್.ಎಸ್.ಮಂಜುನಾಥ,ಗೌರಿಬಿದನೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.