ADVERTISEMENT

ಹಾಲು– ಅನ್ನ ಉಂಡಂತಾಯ್ತು

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2019, 19:56 IST
Last Updated 1 ನವೆಂಬರ್ 2019, 19:56 IST

ಹಾವೇರಿ ಜಿಲ್ಲೆಯ ರಟ್ಟೀಹಳ್ಳಿ ತಾಲ್ಲೂಕಿನ ಚಿಕ್ಕಕಬ್ಬಾರ ಗ್ರಾಮದ ಮಸೀದಿಯಲ್ಲಿ ‘200 ವರ್ಷಗಳಿಂದ ಕನ್ನಡದಲ್ಲಿ ಪ್ರಾರ್ಥನೆ’ ಎಂಬ ಲೇಖನ ಓದಿ (ಪ್ರ.ವಾ., ನ. 1) ಹಾಲು–ಅನ್ನ ಉಂಡಂತಾಯಿತು. ಇದು ಎರಡು ಕಾರಣಕ್ಕೆ: ಒಂದು, ಕನ್ನಡ ಭಾಷೆಯ ಉಳಿವು. ಇನ್ನೊಂದು, ಹಿಂದೂ– ಮುಸ್ಲಿಂ ಸೌಹಾರ್ದ. ಕರ್ನಾಟಕ ‘ಸರ್ವ ಜನಾಂಗದ ಶಾಂತಿಯ ತೋಟ’ ಎಂಬ ರಾಷ್ಟ್ರಕವಿಯ ಮಾತು ಸಾರ್ಥಕ್ಯ ಪಡೆಯಿತು. ಚಿಕ್ಕಕಬ್ಬಾರ ಗ್ರಾಮವು ಕೋಮು
ಸೌಹಾರ್ದಕ್ಕೆ ಒಂದು ಮಾದರಿ. ರಾಷ್ಟ್ರದ ಉದ್ದಗಲಕ್ಕೆ ಇಂಥ ಎಷ್ಟೋ ಊರು ಕೇರಿಗಳಿವೆ. ಉದಾಹರಣೆಗೆ, ದಕ್ಷಿಣ ಕನ್ನಡದ ಬ್ಯಾರಿ ಸಮುದಾಯದಲ್ಲಿಯೂ ಕನ್ನಡಮಯ ವಾತಾವರಣವೇ ಇದೆ. ಅವರ ಸಭೆ– ಸಮಾರಂಭ, ಮದುವೆ ಕರೆಯೋಲೆ ಎಲ್ಲವೂ ಕನ್ನಡದಲ್ಲೇ ಜರುಗುವುದನ್ನು ಕಂಡಿದ್ದೇನೆ. ಅಲ್ಲಿ ಅಲ್ಲಾಹುವಿನ ಸನ್ಮಾರ್ಗವು ಕನ್ನಡ ನುಡಿಯಲ್ಲೂ ಕೇಳಿಬರುತ್ತದೆ.

ಒಟ್ಟಾರೆ, ಇಂಥ ಪವಿತ್ರ ವಾತಾವರಣದೊಳಗೆ ಮತೀಯ ರಾಜಕಾರಣ ಪ್ರವೇಶಿಸದಿದ್ದರೆ, ಜನರನ್ನು ತಮ್ಮ ಪಾಡಿಗೆ ತಾವು ಬದುಕಲು ಬಿಟ್ಟರೆ ನಮ್ಮ ಭಾಷೆಯೂ ಉಳಿಯುತ್ತದೆ, ನಮ್ಮ ಬದುಕೂ ಉಳಿಯುತ್ತದೆ.

ಪ್ರೊ. ಶಿವರಾಮಯ್ಯ, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.