ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು
ಸಾಕುನಾಯಿ ಬಗ್ಗೆ ಚರ್ಚೆ ನಡೆಯಲಿ
ಶಾಸನಸಭೆಯಿಂದ ಸುಪ್ರೀಂ ಕೋರ್ಟ್‌ವರೆಗೆ ದೇಶದ ಎಲ್ಲೆಡೆ ಬೀದಿನಾಯಿಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಅದರ ಜೊತೆಗೆ ಸಾಕುನಾಯಿಗಳು ಮತ್ತು ಅವುಗಳ ಮಾಲೀಕರ ಬಗೆಗೂ ಚರ್ಚೆ ನಡೆಯಬೇಕಿದೆ. ಸಾಕುನಾಯಿಗಳ ಮಾಲೀಕರು ತಮ್ಮ ಪುಟ್ಟ–ದೊಡ್ಡ, ಸ್ವದೇಶಿ–ವಿದೇಶಿ, ವಿಚಿತ್ರ ಮೂತಿಯ ನಾಯಿಗಳನ್ನು ಬೆಳ್ಳಂಬೆಳಿಗ್ಗೆ ಹಿಡಿದುಕೊಂಡು ಠಾಕುಠೀಕಾಗಿ ನಡೆದು ಬರುತ್ತಾ, ಬಾಗಿಲು ಮುಚ್ಚಿರುವ ಮನೆ ಅಥವಾ ಅಂಗಡಿಗಳ ಮುಂದೆ ಹೇಸಿಗೆ ಮಾಡಿಸುತ್ತಾರೆ. ನಂತರ, ತಮಗೆ ಏನೂ ಗೊತ್ತಿಲ್ಲದವರಂತೆ ಅಲ್ಲಿಂದ ಮುಂದೆ ಹೋಗುತ್ತಾರೆ.
ಬೀದಿನಾಯಿಗಳು ಯಾವಾಗಲಾದರೊಮ್ಮೆ ತೊಂದರೆ ಕೊಡಬಹುದು. ಆದರೆ, ಸಾಕುನಾಯಿಗಳ ಉಪಟಳ ಪ್ರತಿದಿನವೂ ತಪ್ಪಿದ್ದಲ್ಲ. ಬೀದಿನಾಯಿಗಳ ಕಾಟ ತಡೆಯುವುದರ ಜೊತೆಗೆ, ಸಾಕುನಾಯಿಗಳ ಸಮಸ್ಯೆಗೂ ಪರಿಹಾರ ಬೇಕು.
⇒ಶಾಂತಿನಾಥ ಕೆ. ಹೋತಪೇಟಿ, ಹುಬ್ಬಳ್ಳಿ
‘ಖಾಕಿ’ ಎಂಬುದು ಅಭಿರುಚಿಹೀನ ಮಾತು
ಕನ್ನಡದ ಸುದ್ದಿ ವಾಹಿನಿಗಳು ತನಿಖೆ ಕಾರ್ಯಾಚರಣೆ ಕೈಗೊಳ್ಳುವ ಪೊಲೀಸರನ್ನು ‘ಖಾಕಿ’ ಎಂದು ಸಂಬೋಧಿಸುವುದು ಅಭಿರುಚಿಹೀನವಾಗಿದೆ. ಇದು ಕನ್ನಡದ ಸಂವೇದನೆಯನ್ನು ಕೀಳಾಗಿಸುವಂತಿದೆ. ‘ಪೊಲೀಸ್’, ‘ಪೊಲೀಸರು’ ಎಂದು ಕರೆದು, ಅವರ ಕರ್ತವ್ಯವನ್ನು ಗೌರವಿಸುವುದು ಒಳ್ಳೆಯದು.
⇒ದಾದಾಪೀರ್ ನವಿಲೇಹಾಳ್, ದಾವಣಗೆರೆ
ಚುನಾವಣೆ ವೇಳೆ ಉಡುಗೊರೆ ನೆನಪು
ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಕೇಂದ್ರ ಸರ್ಕಾರ ಮುಂದಾಗಿರುವುದು ಸ್ವಾಗತಾರ್ಹ (ಪ್ರ.ವಾ., ಆಗಸ್ಟ್ 19). ಜನಸಾಮಾನ್ಯರು ಬಳಸುವ ಸಕ್ಕರೆ, ಚಹಾ, ಅಡುಗೆ ಎಣ್ಣೆ, ಅಗರಬತ್ತಿ, ಜೀವರಕ್ಷಕ ಔಷಧಗಳು ಸೇರಿದಂತೆ ಅನೇಕ ದಿನಬಳಕೆ ವಸ್ತುಗಳ ಮೇಲೆ ಜಿಎಸ್‌ಟಿ ಹೆಸರಲ್ಲಿ ಅವೈಜ್ಞಾನಿಕ ವಾಗಿ ತೆರಿಗೆ ವಿಧಿಸಲಾಗುತ್ತಿದೆ. ಅನೇಕ ವರ್ಷಗಳಿಂದ ಹೀಗೆ ತೆರಿಗೆ ವಸೂಲಿ ಮಾಡಿರುವ ಕ್ರಮ ದೇಶದ ಜನರ ವಿಶ್ವಾಸಕ್ಕೆ ಎಸಗಿದ ದ್ರೋಹ. ಈಗ ಹಲವು ರಾಜ್ಯಗಳಲ್ಲಿ ಚುನಾವಣೆಗಳು ನಡೆಯಲಿರುವುದರಿಂದ ಕೇಂದ್ರ ಸರ್ಕಾರಕ್ಕೆ ಜನರ ಮೇಲೆ ಪ್ರೀತಿ ಉಕ್ಕಿದಂತೆ ಕಾಣುತ್ತಿದೆ. ಅದಕ್ಕೆ ದೀಪಾವಳಿ ಉಡುಗೊರೆಯ ನೆಪ!
⇒ಎಂ.ಜಿ. ರಂಗಸ್ವಾಮಿ, ಹಿರಿಯೂರು
ಗ್ರಾಹಕಸ್ನೇಹಿ ಹೋಟೆಲ್ ಬೇಕು
ಇತ್ತೀಚೆಗೆ ನಾನು ವಿಜಯಪುರಕ್ಕೆ ಕೆಲಸದ ನಿಮಿತ್ತ ಹೋಗಿದ್ದೆ. ಅಲ್ಲಿನ ಹೋಟೆಲ್‌ನಲ್ಲಿ ಸಣ್ಣ ಇಡ್ಲಿ ಮತ್ತು ವಡೆ ಸೇವಿಸಿದೆ. ಅದಕ್ಕೆ ದುಪ್ಪಟ್ಟು ಹಣ ನೀಡಿದೆ. ದುಬಾರಿ ಬೆಲೆ ಬಗ್ಗೆ ನಾನು ಹೋಟೆಲ್ ಮಾಲೀಕನನ್ನು ಪ್ರಶ್ನಿಸಿದೆ. ‘ಸರ್, ನಿಮಗೆ ಇಷ್ಟವಾದರೆ ತಿನ್ನಿ, ಇಲ್ಲದಿದ್ದರೆ ಬೇರೆ ಹೋಟೆಲ್‌ಗೆ ಹೋಗಿ’ ಎನ್ನುವ ಉತ್ತರ ಎದುರಾಯಿತು.
ಹೋಟೆಲ್ ಉದ್ಯಮ ಬಹುವಿಸ್ತಾರ ವಾಗಿ ಹರಡಿಕೊಂಡಿದೆ. ಗ್ರಾಹಕರಿಗೆ ರುಚಿಕರ ಹಾಗೂ ಶುದ್ಧ ಆಹಾರ ಒದಗಿಸುವುದು ಈ ಉದ್ಯಮ ನಡೆಸುತ್ತಿರುವವರ ಜವಾಬ್ದಾರಿ. ಕೆಲವು ಹೋಟೆಲ್‌ಗಳು ಗ್ರಾಹಕಸ್ನೇಹಿಯಾಗಿವೆ. ಆದರೆ, ಬಹುತೇಕ ಹೋಟೆಲ್ ಮಾಲೀಕರು, ಗ್ರಾಹಕರಿಂದ ಹೆಚ್ಚಿನ ಹಣ ವಸೂಲಿ ಮಾಡುತ್ತಾರೆ. ಗ್ರಾಹಕರು ನೀಡಿದ ಹಣಕ್ಕೆ ತಕ್ಕಂತೆ ಹೋಟೆಲ್‌ನಿಂದಲೂ ಗುಣಮಟ್ಟದ ಆಹಾರ ಪೂರೈಸುವುದು ಮಾಲೀಕರ ಹೊಣೆಯಾಗಿದೆ.
⇒ರಿಯಾಝ್ ಅಹ್ಮದ್, ರೋಣ
ಕಥೆ ಹೇಳುತ್ತಿವೆ ಬೆಳ್ಳಿ ಗದೆಗಳು!
ಸಿ.ಎಂ, ಡಿ.ಸಿ.ಎಂ ಕೈಯಲ್ಲಿ ಬೆಳ್ಳಿ ಗದೆ ಹಿಡಿದಿರುವ ಫೋಟೊ ಮಾರ್ಮಿಕವಾಗಿದೆ (ಪ್ರ.ವಾ. ಚಿತ್ರ, ಆಗಸ್ಟ್ 19). ನನಗೆ ಬಿದ್ದ ಹೊಡೆತ ಯಾರ ಗದೆಯದೆಂಬ ಚಿಂತೆ ರಾಜಣ್ಣರಿಗೆ! ಯುದ್ಧ ಶುರುವಾಗುತ್ತಿಲ್ಲವಲ್ಲ ಎಂಬ ಬೇಸರ ಮಾಧ್ಯಮದವರಿಗೆ! ನಮ್ಮ ಆದೇಶಕ್ಕೆ ಕಾಯದೆ ಎಲ್ಲಿ ಯುದ್ಧ ಶುರು ಮಾಡಿಬಿಡುವರೋ ಎಂಬ ಆತಂಕ ಹೈಕಮಾಂಡಿಗೆ! ಇದೆಲ್ಲಾ ಮಾಮೂಲಿಯೆಂಬ ಸಿನಿಕತನ ಜನಸಾಮಾನ್ಯರಿಗೆ!
⇒ಜೆ.ಬಿ. ಮಂಜುನಾಥ, ಪಾಂಡವಪುರ
ಮುಂಬಡ್ತಿಗೆ ಅರ್ಹತಾ ಪರೀಕ್ಷೆ ಸ್ವಾಗತಾರ್ಹ
ಇದೇ ಮೊದಲ ಬಾರಿಗೆ ಪ್ರೌಢಶಾಲಾ ಸಹಶಿಕ್ಷಕರ ಮುಂಬಡ್ತಿಗೆ ಅರ್ಹತಾ ಪರೀಕ್ಷೆ ಆಯೋಜಿಸಿರುವ ಪದವಿಪೂರ್ವ ಶಿಕ್ಷಣ ಇಲಾಖೆಯ ನಡೆ ಸ್ವಾಗತಾರ್ಹ. ಪ್ರೌಢಶಾಲಾ ಶಿಕ್ಷಕರನ್ನು ಪಿಯು ಉಪನ್ಯಾಸಕರಾಗಿ ಬಡ್ತಿ ನೀಡುವುದಕ್ಕಾಗಿಯೇ ಪಿಯು ಉಪನ್ಯಾಸಕ ನೇಮಕದ ವೃಂದ ಮತ್ತು ನೇಮಕಾತಿ ನಿಯಮಗಳನ್ನು 2014ರಲ್ಲಿಯೇ ಬದಲಾವಣೆ ಮಾಡಲಾಗಿದೆ. ಒಬ್ಬ ಶಿಕ್ಷಕ ನಿರಂತರ ಓದುಗನಾಗ ಬೇಕು. ಶಿಕ್ಷಕನ ಓದು ವಿದ್ಯಾರ್ಥಿಯ ಓದಿನ ಮೂಲಾಧಾರ ಎಂದರೆ ತಪ್ಪಲ್ಲ.
⇒ಶಿವರಾಜ ಕಾಂಬಳೆ, ಚಿಕ್ಕೋಡಿ
ಕಾಯಕ ವರ್ಗಗಳಿಗೆ ಅಪಮಾನ ಬೇಡ
ಕುರಿಗಾಹಿಗಳ ಹಿತರಕ್ಷಣೆಗಾಗಿ ಕರ್ನಾಟಕ ಸಾಂಪ್ರದಾಯಿಕ ವಲಸೆ ಕುರಿಗಾಹಿಗಳ (ಕಲ್ಯಾಣ ಕಾರ್ಯಕ್ರಮಗಳು ಮತ್ತು ದೌರ್ಜನ್ಯ ತಡೆ) ಮಸೂದೆ– 2025 ಸಿದ್ಧಪಡಿಸಿರುವುದು ಸ್ವಾಗತಾರ್ಹ. ಕುರಿಗಾಹಿಗಳ ಬಗೆಗಿನ ಜಾತಿ ನಿಂದನೆಯು ಈಗ ಕಡಿಮೆಯಾಗಿದೆ. ಎಂದೋ ಜಾರಿಗೆ ಬರಬೇಕಾಗಿದ್ದ ಮಸೂದೆ ತಡವಾಗಿಯಾದರೂ ಮಂಡನೆಯಾಗುತ್ತಿರುವುದು ಅಭಿನಂದನೀಯ. ಸಮಾಜ ದಲ್ಲಿ ಕುರಿಗಾಹಿಯಂತೆ ದನಗಾಹಿ, ಸವಿತಾ, ಮಡಿವಾಳ, ಬಡಿಗ, ಕುಂಬಾರ ಮುಂತಾದ ಕಾಯಕ ವರ್ಗದವರಿಗೂ ಅಪಮಾನವಾಗುತ್ತಿದೆ. ಆದುದರಿಂದ ಈ ಎಲ್ಲಾ ಕಾಯಕವನ್ನು ನಿರ್ವಹಿಸುವ ಜನರನ್ನು ಕಾಯ್ದೆಯಡಿ ಸೇರಿಸುವುದು ಸೂಕ್ತ.
⇒ಕೆ.ಎಂ. ನಾಗರಾಜು, ಮೈಸೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.