ADVERTISEMENT

ವಾಚಕರ ವಾಣಿ: ತುರ್ತುಪರಿಸ್ಥಿತಿ; ತಾತ್ವಿಕ ವಿಶ್ಲೇಷಣೆ

​ಪ್ರಜಾವಾಣಿ ವಾರ್ತೆ
Published 28 ಜೂನ್ 2021, 19:33 IST
Last Updated 28 ಜೂನ್ 2021, 19:33 IST

‘ತುರ್ತುಪರಿಸ್ಥಿತಿಯ ಹಿಂದೆ- ಮುಂದೆ’ ಎಂಬ ವಿಷಯ ಕುರಿತ ‘ಪ್ರಜಾವಾಣಿ’ಯ ಫೇಸ್‍ಬುಕ್ ನೇರ ಸಂವಾದದಲ್ಲಿ ನಾನು ವ್ಯಕ್ತಪಡಿಸಿದ ಒಂದು ಅಭಿಪ್ರಾಯವನ್ನು ಮೋದೂರು ಮಹೇಶಾರಾಧ್ಯ ಅವರು ವಿತಂಡವಾದ ಎಂದಿದ್ದಾರೆ (ವಾ.ವಾ., ಜೂನ್ 28). ಬಹುಶಃ ಅವರು ಈ ಸಂವಾದದ ಬಗ್ಗೆ ಪತ್ರಿಕೆಯ ಸಂಕ್ಷಿಪ್ತ ವರದಿಯನ್ನು ಆಧರಿಸಿ ಈ ಅಭಿಪ್ರಾಯಕ್ಕೆ ಬಂದಿರುವಂತಿದೆ.

ಸುಮಾರು ಒಂದೂಕಾಲು ಗಂಟೆಯ ಸಂವಾದವನ್ನು ಪೂರ್ಣ ಗಮನಿಸಿದರೆ ಒಟ್ಟು ಚಿತ್ರಣ ದೊರಕುತ್ತದೆ. ನಾನು ಅಂದಿನ ಚರ್ಚೆಯಲ್ಲಿ ಕರಾಳ ಮತ್ತು ನಿರಾಳ ಹಾಗೂ ಸ್ವಾತಂತ್ರ್ಯ ಮತ್ತು ಸಮಾನತೆಗಳ ನಡುವೆ ಉಂಟಾಗುತ್ತಿರುವ ವೈರುಧ್ಯಗಳನ್ನು ತಾತ್ವಿಕವಾಗಿ ವಿಶ್ಲೇಷಿಸಿದೆ. ಜನರ ನಿರಾಳತೆಯನ್ನು ತುರ್ತುಪರಿಸ್ಥಿತಿ ಸಂದರ್ಭದ ಕರ್ನಾಟಕದ ಸನ್ನಿವೇಶವನ್ನು ಗಮನಿಸಿ ಹೇಳುತ್ತಿರುವುದಾಗಿ ಸ್ಪಷ್ಟಪಡಿಸಿದೆ. ತುರ್ಕ್‌ಮನ್ ಗೇಟ್ ಮುಂತಾದ ಕರಾಳ ಕೃತ್ಯಗಳನ್ನು ಸ್ಪಷ್ಟ ಮಾತುಗಳಲ್ಲಿ ಖಂಡಿಸಿದೆ. ಆದರೆ ಅದೇ ಸನ್ನಿವೇಶದಲ್ಲಿ ‘ಮೂಲಭೂತ ಅಗತ್ಯಗಳನ್ನು ಪಡೆದ ಜನಸಾಮಾನ್ಯರು’ ಮೂಲಭೂತ ಹಕ್ಕು ಮತ್ತು ಸ್ವಾತಂತ್ರ್ಯದ ಬಗ್ಗೆ ಯಾಕೆ ಪ್ರಶ್ನೆ ಎತ್ತಲಿಲ್ಲ ಎಂಬ ವೈರುಧ್ಯವನ್ನು ಅರ್ಥಮಾಡಿಕೊಳ್ಳುವುದು ಅಗತ್ಯವೆಂದು ಹೇಳಿದೆ. ಜೊತೆಗೆ, ಅಂದು ಅನೇಕ ದಮನಶೀಲ ಕಾರ್ಯಗಳಿಗೆ ಕಾರಣರಾದ ವಿ.ಸಿ.ಶುಕ್ಲಾ, ಜಗಮೋಹನ್‍ರಂಥವರನ್ನು ಆನಂತರ ತುರ್ತುಪರಿಸ್ಥಿತಿ ವಿರೋಧಿಸಿದವರು ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುವುದು ರಾಜಕೀಯ ನೈತಿಕತೆಯೆ ಎಂದೂ ಪ್ರಶ್ನಿಸಿದೆ.

ಸ್ವಾತಂತ್ರ್ಯ ಮತ್ತು ಸಮಾನತೆಗಳ ನಡುವಿನ ಅಂತರವನ್ನು ಹೋಗಲಾಡಿಸಿ ಒಂದಾಗಿಸುವ ಸವಾಲು ನಮ್ಮ ಮುಂದಿದೆ, ಒಟ್ಟಾರೆ ತುರ್ತುಪರಿಸ್ಥಿತಿಯ ಕಾಲದ ವೈರುಧ್ಯಗಳ ಮೂಲಕ ಭಾರತೀಯ ರಾಜಕಾರಣವನ್ನು ಅರ್ಥೈಸಿಕೊಳ್ಳುವ ಅಗತ್ಯವಿದೆಯೆಂಬುದು ನನ್ನ ಅಭಿಮತವಾಗಿತ್ತು. ಇದೆಲ್ಲವನ್ನೂ ವಿತಂಡವಾದ ಎನ್ನುವುದಾದರೆ ಅಂತಹ ಅಭಿಪ್ರಾಯ ತಾಳಲು ಅವರು ಸ್ವತಂತ್ರರು. ಆದರೂ ಅವರು ಅರ್ಥ ಮಾಡಿಕೊಳ್ಳುತ್ತಾರೆಂಬ ನಂಬಿಕೆ ನನ್ನದು.
-ಬರಗೂರು ರಾಮಚಂದ್ರಪ್ಪ, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.