ADVERTISEMENT

ಬೀಜ ಮಸೂದೆ: ಸಾರ್ವಜನಿಕ ಚರ್ಚೆಗೆ ಒಳಪಡಲಿ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2020, 19:45 IST
Last Updated 25 ಫೆಬ್ರುವರಿ 2020, 19:45 IST

ರೈತರ ಹಿತ ಕಾಯ್ದು, ಈ ನೆಲದ ಬೀಜವೈವಿಧ್ಯದ ರಕ್ಷಣೆಗೆ ಬದ್ಧವಾಗಿರಬೇಕಾದ ಬೀಜ (ಕರಡು) ಮಸೂದೆ- 2019, ಖಾಸಗಿ ಬೀಜ ಉತ್ಪಾದಕರು, ಬೃಹತ್ ಕಂಪನಿಗಳನ್ನೇ ಕೇಂದ್ರವಾಗಿಸಿಕೊಂಡಿದೆ. ‘ರೈತ ಎಂದರೆ
ವ್ಯವಸಾಯಯೋಗ್ಯ ಭೂಮಿಯ ಮಾಲೀಕ ಎಂದು ಹೇಳುವ ಮತ್ತು ‘ಬೀಜ’ ಎನ್ನುವುದನ್ನು ‘ರಾಜ್ಯದ ಬೀಜ’, ‘ರಾಷ್ಟ್ರೀಯ ಬೀಜ’ ಎಂದು ಸೀಮಿತಗೊಳಿಸುವ ಮೂಲಕ ಈ ಮಸೂದೆಯು ಈ ಹಿಂದಿನ ವಿವಿಧ ಕಾಯ್ದೆ, ಕಾನೂನು,ಅಂತರರಾಷ್ಟ್ರೀಯ ಒಪ್ಪಂದಗಳಲ್ಲಿ ಇವುಗಳ ಬಗ್ಗೆ ಇರುವವಿವರಣೆಗಳನ್ನು ಕೈಬಿಟ್ಟಿರುವುದು ತೀವ್ರ ಆಕ್ಷೇಪಾರ್ಹ. ಕುಲಾಂತರಿ ಬೀಜದ ಬಳಕೆ ಮತ್ತು ಅದರ ದುಷ್ಪರಿಣಾಮಗಳು ನಮ್ಮಲ್ಲಿ ವ್ಯಾಪಕವಾಗಿರುವಾಗ ಈ ಕರಡು ಮಸೂದೆ ಅದನ್ನು ‘ಬೀಜ’ದ ವ್ಯಾಪ್ತಿಯಿಂದ ಹೊರಗಿಟ್ಟು ಸುಪ್ರೀಂ ಕೋರ್ಟ್‌ತೀರ್ಪನ್ನು ಉಲ್ಲಂಘಿಸಿದೆ. ವಿದೇಶಗಳಲ್ಲಿ ಪಡೆದ ದೃಢೀಕರಣ ಪತ್ರಕ್ಕೆ ಅಸ್ತು ಹೇಳುವ ಮಸೂದೆಯು ಬಹುರಾಷ್ಟ್ರೀಯ ಕಂಪನಿಗಳ ಏಕಸ್ವಾಮ್ಯಕ್ಕೆ ಎಡೆಮಾಡುತ್ತದೆ.

ರೈತರ ಬಳಿ ಇರುವ ಬೀಜವನ್ನು ತನ್ನ ಪರಿಧಿಯಿಂದಲೇ ಹೊರಗಿಡುವ ಈ ಮಸೂದೆಯು ರೈತರಿಗೆ ಸಕಾಲದಲ್ಲಿ ವಿಶ್ವಾಸಾರ್ಹ ಬೀಜಗಳನ್ನು ಒದಗಿಸುವ ಹೊಣೆ ಹೊತ್ತಿರುವ ಸರ್ಕಾರಿ ಸ್ವಾಮ್ಯದ ಬೀಜ ನಿಗಮಗಳನ್ನು ಪ್ರಸ್ತಾಪಾರ್ಹ ಎಂದೂ ತಿಳಿದಂತಿಲ್ಲ. ಪ್ರತೀ ಕಾನೂನಿನಲ್ಲೂ ಅದಕ್ಕೆ ಸಂಬಂಧಿಸಿದ ಕುಂದುಕೊರತೆ, ಅಡ್ಡಿ– ಆತಂಕ, ವ್ಯಾಜ್ಯಗಳ ನಿವಾರಣೆ ಮತ್ತು ಪರಿಹಾರಕ್ಕೆ ವ್ಯವಸ್ಥೆ ಮಾಡಲಾಗಿರುತ್ತದೆ. ಅಂತಹ ಯಾವ ವ್ಯವಸ್ಥೆಯೂ ಇಲ್ಲದ ಈ ಮಸೂದೆಯು ಕಳಪೆ ಬೀಜದ ವಿಚಾರದಲ್ಲಿ ರೈತರು
ಗ್ರಾಹಕ ವೇದಿಕೆಗೆ ಹೋಗಿ ಪರಿಹಾರ ಪಡೆದುಕೊಳ್ಳಲಿ ಎನ್ನುತ್ತದೆ. ಬೆಲೆ ನಿಯಂತ್ರಣದ ವಿಚಾರದಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನುಹೊಂದಿರಬೇಕಾಗಿದ್ದ ಮಸೂದೆಯು, ಕಂಪನಿಯೊಂದು ಯದ್ವಾತದ್ವಾ ಬೆಲೆ ಹೆಚ್ಚಿಸಿಕೊಂಡಾಗ ಮಾತ್ರ ಸರ್ಕಾರವು ನಿಯಂತ್ರಿಸಬೇಕೆಂದು ಸೂಚಿಸಿರುವುದು ಸರಿಯಲ್ಲ. ಪ್ರಸ್ತುತ ಬೀಜಮಸೂದೆಯು ‘ಜೀವವೈವಿಧ್ಯ ಕಾಯ್ದೆ- 2002’ಕ್ಕೆ ವ್ಯತಿರಿಕ್ತವಾಗಿರುವುದು ಆಕ್ಷೇಪಾರ್ಹ.
ಬೀಜವನ್ನು‘ಸಮುದಾಯಗಳ ಸಾರ್ವಭೌಮ ಹಕ್ಕಿನ ಭಾಗ’ ಎಂದು ಜೀವವೈವಿಧ್ಯ ಕಾಯ್ದೆ ಹೇಳುವಾಗ, ಇಲ್ಲಿ
ಬೀಜವನ್ನು ಒಂದು ‘ಮಾರಾಟ ವಸ್ತು’ ಎಂದುಪರಿಗಣಿಸಿರುವುದು ನಮ್ಮ ಸಾರ್ವಭೌಮ ಹಕ್ಕಿನ ಉಲ್ಲಂಘನೆಯಾಗುತ್ತದೆ. ಹೀಗಾಗಿ, ಈ ಮಸೂದೆಯನ್ನು ಕಾಯ್ದೆಯಾಗಿಸಕೂಡದು, ಅದನ್ನು ಸಾರ್ವಜನಿಕ ವಿಚಾರಣೆಗೆ ಒಳಪಡಿಸಬೇಕು, ರೈತಮುಖಿಯಾದ ಪರ್ಯಾಯ ಮಸೂದೆಯನ್ನು ರೂಪಿಸಲು ಸರ್ಕಾರ ಗಮನಹರಿಸಬೇಕು ಎಂದು, ಹಲವು ಸಮಾಲೋಚನಾ ಸಭೆಗಳ ನಂತರ ನಾವು ಒತ್ತಾಯಿಸುತ್ತಿದ್ದೇವೆ. ಕೃಷಿ ವಲಯವು ರಾಜ್ಯ ಸರ್ಕಾರದ ವ್ಯಾಪ್ತಿ ಯಲ್ಲಿದ್ದು, ರಾಜ್ಯ ಸರ್ಕಾರಗಳು ರೈತರ ಹಿತ ಕಾಯುವಲ್ಲಿ ಹೆಚ್ಚಿನ ಪಾತ್ರ ವಹಿಸಬೇಕಾಗಿದ್ದರೂ ಈ ಬೀಜ ಮಸೂದೆಯು ಕೇಂದ್ರ ಸರ್ಕಾರಕ್ಕೆ ಪರಮಾಧಿಕಾರ ನೀಡಿರುವುದು ತೀವ್ರ ಆಕ್ಷೇಪಾರ್ಹ.

-ಅ.ನ.ಯಲ್ಲಪ್ಪ ರೆಡ್ಡಿ, ಪ್ರೊ. ಎಂ.ಕೆ.ರಮೇಶ್, ಡಾ. ಪ್ರಕಾಶ ಕಮ್ಮರಡಿ, ಪಿ.ಬಾಬು, ವಿ.ಗಾಯತ್ರಿ, ಜೆ.ಎಂ.ವೀರಸಂಗಯ್ಯ, ಕೋಡಿಹಳ್ಳಿ ಚಂದ್ರಶೇಖರ್

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.