ADVERTISEMENT

ವಾಚಕರ ವಾಣಿ: ಸಾಲದ ಹೊರೆ ಹೆಚ್ಚಿಸುವ ಬಜೆಟ್

ವಾಚಕರ ವಾಣಿ
Published 1 ಫೆಬ್ರುವರಿ 2023, 19:21 IST
Last Updated 1 ಫೆಬ್ರುವರಿ 2023, 19:21 IST

ಸಾಲದ ಹೊರೆ ಹೆಚ್ಚಿಸುವ ಬಜೆಟ್

ಪ್ರಸಕ್ತ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಸಾಲದ ಪ್ರಮಾಣ ಕಡಿಮೆ ಮಾಡುವ ಪ್ರಸ್ತಾವ ಇಲ್ಲ. ಹಿಂದಿನ ವರ್ಷದ ಬಜೆಟ್‌ನಲ್ಲಿ ₹ 14.21 ಲಕ್ಷ ಕೋಟಿ ಸಾಲದ ಪ್ರಸ್ತಾವ ಇತ್ತು. ಆದರೆ ಜನವರಿ 27ರ ಹೊತ್ತಿಗೆ ಬಜೆಟ್‌ ಅಂದಾಜಿನ ಶೇಕಡ 91ರಷ್ಟು ಸಾಲ ಮಾಡಿದೆ ಸರ್ಕಾರ. ಈ ವರ್ಷವೂ ಒಟ್ಟು ವರಮಾನಕ್ಕಿಂತ ವೆಚ್ಚ ಹೆಚ್ಚಿದೆ. ಅಂದರೆ ಈ ವರ್ಷವೂ ಸರ್ಕಾರ ಸಾಲ ತೆಗೆದುಕೊಳ್ಳುವುದು ದೊಡ್ಡ ಮಟ್ಟದಲ್ಲಿಯೇ ಇರಲಿದೆ. ವರ್ಷದ ಕೊನೆಯಲ್ಲಿ ವಾಸ್ತವಿಕ ಸಾಲವು ಬಜೆಟ್‌ ಅಂದಾಜಿಗಿಂತ ಹೆಚ್ಚಾಗಬಹುದು. ಸಾಲದ ಹೊರೆ ಏರಿಸಿ ಯಾವ ಆರ್ಥಿಕ ಕ್ಷೇತ್ರವನ್ನುಅಭಿವೃದ್ಧಿಪಡಿಸಲಾಗುತ್ತಿದೆ, ಯಾವ ಪ್ರದೇಶಕ್ಕೆ ವಿನಿಯೋಗವಾಗುತ್ತಿದೆ ಎನ್ನುವುದೇ ವಿಶ್ಲೇಷಿಸಬೇಕಾದ ಸಂಗತಿ.

ಕರ್ನಾಟಕಕ್ಕೆ ಐಐಎಂಎಸ್‌, ವಿಶೇಷ ಹೂಡಿಕೆ ವಲಯ, ಬೆಂಗಳೂರಿನ ಮೂಲ ಸೌಕರ್ಯಗಳಿಗೆ
ಅನುದಾನದಂತಹವುಗಳನ್ನು ರಾಜ್ಯದ ಜನ ಅಪೇಕ್ಷಿಸಿದ್ದರು. ಅವೆಲ್ಲ ಹುಸಿಯಾಗಿವೆ. ಕೆಲವು ವರ್ಷಗಳಿಂದ ರಾಜ್ಯ ಸರ್ಕಾರ ಹೇಳಿಕೊಂಡು ಬಂದ ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ಘೋಷಿಸಲಾಗಿದೆ. ಆದರೆ ಸಂಪೂರ್ಣ ಕೃಷ್ಣಾ ಯೋಜನೆಯನ್ನು ರಾಷ್ಟ್ರೀಯ ಯೋಜನೆಯೆಂದು ಘೋಷಿಸಿದ್ದರೆ ಅನುಕೂಲವಾಗುತ್ತಿತ್ತು. ಆದಾಯ ತೆರಿಗೆಯ ಮಿತಿ ಏರಿಸಿರುವುದರಿಂದ ಮಧ್ಯಮ ವರ್ಗಕ್ಕೆ ಅನುಕೂಲ. ಆದರೆ ಸಂಪನ್ಮೂಲ ಕ್ರೋಡೀಕರಣಕ್ಕೆ ತೊಂದರೆ ಆಗಲಿದೆ.

ADVERTISEMENT

⇒ಡಾ. ದೇವಿದಾಸ ಪ್ರಭು, ಭಟ್ಕಳ

***

ಶುಲ್ಕರಹಿತ ರಾಷ್ಟ್ರೀಯ ಮನರಂಜನಾ ದಿನ!

ಕೇಂದ್ರ ಸರ್ಕಾರವು ಬಜೆಟ್ ಮಂಡಿಸುವ ದಿನವನ್ನು ಶುಲ್ಕರಹಿತ ರಾಷ್ಟ್ರೀಯ ಮನರಂಜನಾ ದಿನವೆಂದು ಜನ ಎಂದೋ ತೀರ್ಮಾನಿಸಿದ್ದಾರೆ. ಅದೇ ರೀತಿ ರಾಜ್ಯ ಬಜೆಟ್ ಮಂಡನೆಯ ದಿನವನ್ನು ನಿಃಶುಲ್ಕ ರಾಜ್ಯ ಮನರಂಜನಾ ದಿನವೆಂದು ಪರಿಗಣಿಸಬಹುದಾಗಿದೆ. ಕಾರಣ, ಅಂದು ಆಡಳಿತ ಪಕ್ಷದವರೆಲ್ಲ ಅದನ್ನು ತಮ್ಮ ಭಾಷಾ ಪಾಂಡಿತ್ಯವನ್ನು ಬಳಸಿ ಏಕಪ್ರಕಾರವಾಗಿ ಕಂಡಾಬಟ್ಟೆ ಹೊಗಳುವುದನ್ನು ಮತ್ತು ವಿರೋಧ ಪಕ್ಷದವರೆಲ್ಲ ಅದನ್ನು ಅದೇ ರೀತಿ ತಮ್ಮ ಖಂಡನಾ ಶಬ್ದಕೋಶವನ್ನು ಬರಿದುಮಾಡುತ್ತ ಏಕಪ್ರಕಾರವಾಗಿ ಖಂಡಿಸುವುದನ್ನು ಕೇಳಿಸಿಕೊಳ್ಳುವ ದಿನವಾದ್ದರಿಂದ, ಅದು ಜನರ ಪಾಲಿಗೆ ಮನರಂಜನೆಯ ದಿನವಲ್ಲದೆ ಬೇರೆಯಲ್ಲ.

ಒಂದು ವೇಳೆ ಆಡಳಿತ ಪಕ್ಷದವರು ತಮ್ಮ ಅರ್ಥ ಸಚಿವರು ಮಂಡಿಸಿದ ಬಜೆಟ್‍ನ ನಕಾರಾತ್ಮಕ ಆಂಶಗಳನ್ನು ಎತ್ತಿಹೇಳಿದರೆ ಹಾಗೂ ವಿರೋಧ ಪಕ್ಷದವರು ಯಾರಾದರೂ ಆಡಳಿತ ಪಕ್ಷದ ಬಜೆಟ್‍ನ ಸಕಾರಾತ್ಮಕ ಅಂಶಗಳನ್ನು ಎತ್ತಿಹೇಳಿದರೆ ಅಂಥದ್ದನ್ನು ಪಕ್ಷವಿರೋಧಿ ಚಟುವಟಿಕೆ ಎಂದು ಪರಿಗಣಿಸಿ ಅವರನ್ನು ಪಕ್ಷದಿಂದ ಉಚ್ಚಾಟಿಸಿದರೂ ಆಶ್ಚರ್ಯವಿಲ್ಲ! ಇದು ಭಾರತದ ಪ್ರಗತಿಪರ ಪ್ರಜಾಪ್ರಭುತ್ವದ ಪರಿಸ್ಥಿತಿ. ಹಾಗಾಗಿಯೇ ಈ ರಾಜಕೀಯ ಮುಖಂಡರ ಪ್ರಶಂಸೆ ಮತ್ತು ಟೀಕೆಗಳನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ ಮತ್ತು ಈ ಕಿವಿಯಲ್ಲಿ ಕೇಳಿ ಆ ಕಿವಿಯಲ್ಲಿ ಬಿಟ್ಟುಬಿಡುತ್ತಾರೆ ಎಂಬ ಕಟುಸತ್ಯವನ್ನು ಅವರು ತಿಳಿದುಕೊಳ್ಳುವುದು ಒಳ್ಳೆಯದು.

⇒ಆರ್.ಲಕ್ಷ್ಮೀನಾರಾಯಣ, ಬೆಂಗಳೂರು

***

ಬೈಸಿಕಲ್‌ ಯೋಜನೆ ಪುನರಾರಂಭವಾಗಲಿ

ಸರ್ಕಾರಿ ಶಾಲಾ ಮಕ್ಕಳಿಗೆ ಬೈಸಿಕಲ್ ನೀಡುವುದನ್ನು ನಿಲ್ಲಿಸಿರುವುದು ಸರಿಯಲ್ಲ. ಈ ಯೋಜನೆಯಿಂದ ಸಣ್ಣ ಗ್ರಾಮ, ಗುಡ್ಡ, ಕಾಡಂಚಿನ ಊರುಗಳಿಂದ ಶಾಲೆಗೆ ಬರುವಂತಹ ಮಕ್ಕಳು ಸಮಯಕ್ಕೆ ಸರಿಯಾಗಿ ಶಾಲೆಗೆ ಹಾಜರಾಗಲು ತುಂಬಾ ಅನುಕೂಲವಾಗುತ್ತಿತ್ತು. ಇಂತಹ ಉಪಯುಕ್ತ ಯೋಜನೆಯನ್ನು ಕೈಬಿಟ್ಟಿದ್ದು ಎಷ್ಟರಮಟ್ಟಿಗೆ ಸರಿ ಎಂಬುದನ್ನು ಸರ್ಕಾರ ಸ್ವಯಂ ಪ್ರಶ್ನೆ ಮಾಡಿಕೊಳ್ಳಲಿ. ಇಂದಿಗೂ ಕೆಲ ಗ್ರಾಮಗಳಿಗೆ ಸರಿಯಾದ ಸಮಯಕ್ಕೆ ಬಸ್ ಸೌಲಭ್ಯ ಇಲ್ಲ. ಇಂತಹ ಸ್ಥಿತಿ ಇರುವುದರಿಂದ ಈ ಯೋಜನೆಯ ಪುನರಾರಂಭಕ್ಕೆ ಸರ್ಕಾರ ಮುಂದಾಗಬೇಕು.

⇒ನಾಗರಾಜ್ ಮನ್ನಾಪುರಿ, ದೇವದುರ್ಗ

***

ಭಾಷಾ ನೀತಿ ರೂಪಿಸಬೇಕಿದೆ

ಚುನಾವಣೆ ಸಮೀಪಿಸುತ್ತಿದ್ದಂತೆ, ಕರ್ನಾಟಕ ಸರ್ಕಾರವು ತುಳುಭಾಷೆಯನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಷಿಸುವ ಸಂಬಂಧ ಅಧ್ಯಯನ ನಡೆಸಿ, ಶಿಫಾರಸಿನೊಂದಿಗೆ ವರದಿ ನೀಡಲು ಸಮಿತಿಯೊಂದನ್ನು ರಚಿಸಿದೆ. ತುಳು, ಕೊಡವ, ಭೋಜಪುರಿ, ರಾಜಸ್ಥಾನಿ, ಬಂಜಾರ ಮೊದಲಾದ 99 ಭಾಷೆಗಳು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಲು ಹೋರಾಟ ನಡೆಸುತ್ತಿರುವಾಗ ಕರ್ನಾಟಕವು ಈ ತೀರ್ಮಾನವನ್ನು ತೆಗೆದು
ಕೊಂಡಿರುವುದರಿಂದ ಕೇಂದ್ರ ಸರ್ಕಾರ ಇದೀಗ ನಿರಾಳವಾಗಿದೆ. ಕೊಡವ ಭಾಷೆ ಅಲ್ಲಿಯೂ ಇಲ್ಲ, ಇಲ್ಲಿಯೂ ಇಲ್ಲ ಎಂಬಲ್ಲಿಗೆ ಬಂದು ನಿಂತಿದೆ.

ಸಂವಿಧಾನದ ವಿಧಿ 345ರ ಪ್ರಕಾರ, ರಾಜ್ಯಗಳು ಒಂದಕ್ಕಿಂತ ಹೆಚ್ಚು ಅಧಿಕೃತ ಭಾಷೆಗಳನ್ನು ಹೊಂದಬಹುದು. ಇದನ್ನು ಆಧರಿಸಿ, ತೆಲಂಗಾಣವು ತೆಲುಗುವಿನ ಜೊತೆಗೆ ಉರ್ದುವನ್ನು, ಬಿಹಾರವು ಬಿಹಾರಿ ಭಾಷೆಯ ಜೊತೆಗೆ ಮೈಥಿಲಿ ಮತ್ತು ಬಾಂಗ್ಲಾವನ್ನು, ಪಶ್ಚಿಮ ಬಂಗಾಳವು ಬಾಂಗ್ಲಾ ಜೊತೆಗೆ ಉರ್ದು, ಪಂಜಾಬಿ, ನೇಪಾಲಿ, ಒರಿಯಾ ಮತ್ತು ಹಿಂದಿಯನ್ನು, ಅಸ್ಸಾಂ ಸರ್ಕಾರವು ಅಸ್ಸಾಮಿ ಜೊತೆಗೆ ಬಂಗಾಲಿ ಮತ್ತು ಬೋಡೊವನ್ನು, ಮೇಘಾಲಯವು ಇಂಗ್ಲಿಷ್‌ ಜೊತೆಗೆ ಖಾಸೀ ಮತ್ತು ಗಾರೋವನ್ನು, ದೆಹಲಿ ಸರ್ಕಾರವು ಹಿಂದಿಯ ಜೊತೆಗೆ ಇಂಗ್ಲಿಷ್‌, ಪಂಜಾಬಿ ಮತ್ತು ಉರ್ದುವನ್ನು ಅಧಿಕೃತ ಭಾಷೆಗಳೆಂದು ಘೋಷಿಸಿವೆ. ವಿಧಿ 346ರ ಪ್ರಕಾರ ರಾಜ್ಯ ಮತ್ತು ಕೇಂದ್ರ ಸರ್ಕಾರದ ಹಾಗೂ ರಾಜ್ಯ– ರಾಜ್ಯಗಳ ನಡುವಣ ಸಂಪರ್ಕ ಭಾಷೆಯು ಯಾವುದೇ ಅಧಿಕೃತ ಭಾಷೆ ಆಗಬಹುದು. ವಿಧಿ 347ರ ಪ್ರಕಾರ, ರಾಜ್ಯವೊಂದರ ಬೇರೊಂದು ಅಧಿಕೃತ ಭಾಷೆಯೂ ಸಂಪರ್ಕ ಭಾಷೆಯಾಗಬಹುದು. ಹೀಗಾಗಿ ಭಾಷೆಗಳ ಸಬಲೀಕರಣದ ದೃಷ್ಟಿಯಿಂದ ಇದೊಂದು ಮಹತ್ವದ ಹೆಜ್ಜೆ. ಆದರೆ ಪ್ರಸ್ತುತ ಸರ್ಕಾರಕ್ಕೆ ಚುನಾವಣೆಯನ್ನು ಗೆಲ್ಲುವುದರ ಹೊರತಾಗಿ ಸಣ್ಣ ಭಾಷೆಗಳನ್ನು ಉಳಿಸುವ ಬಗ್ಗೆ ಕಳಕಳಿ ಇದೆಯೇ ಎಂಬುದು ಸಂಶಯ. ಕೊಡವ ಮತ್ತು ಕೊರಗ ಭಾಷೆಗಳು ಇಳಿಮುಖವಾಗಿವೆ. ಉರ್ದು ಅಕಾಡೆಮಿಯನ್ನು ಸರ್ಕಾರವೇ ಮುಚ್ಚಿದೆ. ಸಣ್ಣ ಭಾಷೆಗಳ ಸಮೀಕ್ಷೆಯೂ ನಡೆದಿಲ್ಲ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರವು ತನ್ನದೇ ಆದ ಒಂದು ಭಾಷಾ ನೀತಿಯನ್ನು ರೂಪಿಸಿ, ರಾಜ್ಯದೊಳಗೆ ಇರುವ 70ಕ್ಕೂ ಹೆಚ್ಚು ಭಾಷೆಗಳನ್ನು ಉಳಿಸಿ ಬೆಳೆಸಲು ಯೋಜನೆಗಳನ್ನು ರೂಪಿಸುವುದು ಅಗತ್ಯ.

⇒ಪುರುಷೋತ್ತಮ ಬಿಳಿಮಲೆ, ನವದೆಹಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.