ಕಲಾವಿದರ ಬಗ್ಗೆ ನಿರ್ಲಕ್ಷ್ಯ ಏಕೆ?
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ನೀಡುವ ಮಾಸಾಶನವು ಮೂರು
ತಿಂಗಳಿಂದ ಕಲಾವಿದರ ಕೈಸೇರಿಲ್ಲ ಎಂಬ ಸುದ್ದಿ (ಪ್ರ.ವಾ., ಜೂನ್ 16) ಓದಿ ಬೇಸರವಾಯಿತು. ಇಲಾಖೆಯು ನೀಡುವ ಅಲ್ಪ ಧನವೇ ಬಹಳಷ್ಟು ಕಲಾವಿದರ ಜೀವನಕ್ಕೆ ಆಸರೆಯಾಗಿದೆ. ಮಾರ್ಚ್‌ನಲ್ಲಿ ಮಂಡಿಸಿದ್ದ ಬಜೆಟ್‌ನಲ್ಲಿ ಮಾಸಾಶನವನ್ನು ₹2,500ಕ್ಕೆ ಹೆಚ್ಚಿಸುವುದಾಗಿ ಸರ್ಕಾರ ಘೋಷಿಸಿತ್ತು. ಆದರೆ, ಈ ಹೆಚ್ಚಳವೂ ಕಲಾವಿದರಿಗೆ ಇನ್ನೂ ದೊರೆತಿಲ್ಲ ಎಂಬುದು ವಿಷಾದನೀಯ. ಈಗಿನ ಬೆಲೆ ಏರಿಕೆಯ ದಿನಗಳಲ್ಲಿ ಸದ್ಯ ನೀಡುತ್ತಿರುವ ಮಾಸಾಶನವು ಯಾವುದಕ್ಕೂ ಸಾಲುವುದಿಲ್ಲ. ಈ ಮೊತ್ತವನ್ನು ಕನಿಷ್ಠ ₹5 ಸಾವಿರಕ್ಕೆ ಹೆಚ್ಚಿಸಬೇಕಿದೆ.
⇒ಕಡೂರು ಫಣಿಶಂಕರ್, ಬೆಂಗಳೂರು
ಕೊನೆಗೂ ಕಳಚಿದ ‘ಚೋಕರ್ಸ್’ ಪಟ್ಟ
ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡವು 27 ವರ್ಷಗಳ ಬಳಿಕ ಐಸಿಸಿ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ. ‘ಚೋಕರ್ಸ್’ ಹಣೆಪಟ್ಟಿ ಕಳಚಿಕೊಂಡಿರುವುದು ಹೆಮ್ಮೆಯ ಸಂಗತಿ. ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನ ಫೈನಲ್ ಪಂದ್ಯದಲ್ಲಿ ಬಲಾಢ್ಯ ಆಸ್ಟ್ರೇಲಿಯಾ ತಂಡವನ್ನು ಮಣಿಸಿದ್ದು ಮತ್ತೊಂದು ಹೆಗ್ಗಳಿಕೆ. ಆದರೆ, ಈ ಜಯದ ಹಿಂದೆ ಬಹಳಷ್ಟು ನೋವು ಇದೆ.
ಐಸಿಸಿ ಟ್ರೋಫಿಯ ಹಲವು ಟೂರ್ನಿಗಳ ಕ್ವಾರ್ಟರ್ ಫೈನಲ್ ಮತ್ತು ಸೆಮಿ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವು ಸೋಲು ಕಂಡಿತ್ತು. ಇದು ಆ ದೇಶದ ಕ್ರಿಕೆಟ್ ಪ್ರೇಮಿಗಳ ನಿದ್ದೆಗೆಡಿಸಿತ್ತು. ಜಾಗತಿಕ ಕ್ರಿಕೆಟ್ ಲೋಕಕ್ಕೆ ಅತ್ಯುತ್ತಮ ಆಟಗಾರರನ್ನು ನೀಡಿದ ಹೆಗ್ಗಳಿಕೆ ಹೊಂದಿರುವ ದಕ್ಷಿಣ ಆಫ್ರಿಕಾ ತಂಡಕ್ಕೆ ಅಂಟಿದ್ದ ದುರದೃಷ್ಟ ವನ್ನು ಕಿತ್ತೆಸೆಯುವಲ್ಲಿ ತೆಂಬಾ ಬವುಮಾ ನಾಯಕತ್ವದ ಪಡೆ ಕೊನೆಗೂ ಯಶಸ್ವಿಯಾಗಿದೆ. ಬವುಮಾ ಸಜ್ಜನ ಎಂಬುದರಲ್ಲಿ ಎರಡು ಮಾತಿಲ್ಲ. ಆಫ್ರಿಕಾ ದಲ್ಲಿನ ಕ್ರೀಡಾ ಮೀಸಲಾತಿಯಿಂದ ಅವರು ಕ್ರಿಕೆಟ್‌ನಲ್ಲಿ ಅವಕಾಶ ಗಿಟ್ಟಿಸಿದ್ದಾರೆ ಎಂಬ ನಿಂದನೆಯು ಅವರಿಗೆ ಮೆತ್ತಿಕೊಂಡಿತ್ತು. ಎಲ್ಲಾ ಟೀಕೆಗಳನ್ನು ತಾಳ್ಮೆಯಿಂದ ಸಹಿಸಿಕೊಂಡಿದ್ದ ಅವರು, ತಮ್ಮ ಅಮೋಘ ಪ್ರತಿಭೆ ಮೂಲಕವೇ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ.⇒ಬಾಬು ಶಿರಮೋಜಿ, ಬೆಳಗಾವಿ
ಬೋಧಕರ ಮನೋವೈಕಲ್ಯ!
ರಾಜ್ಯದ ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳಲ್ಲಿ ಬೋಧಕ ವರ್ಗದ ವರ್ಗಾವಣೆ ಪ್ರಕ್ರಿಯೆ ಆರಂಭವಾಗಿದೆ. ಕೆಲವರು ಈ ವರ್ಗಾವಣೆ ತಪ್ಪಿಸಿಕೊಳ್ಳಲು
ಅಂಗವಿಕಲರೆಂದು ನಕಲಿ ಪ್ರಮಾಣ ಪತ್ರ ಸಲ್ಲಿಸುತ್ತಿರುವ ಕುರಿತು ಕೆಲವು ಪ್ರಾಧ್ಯಾಪಕರೇ ಆರೋಪಿಸಿದ್ದಾರೆ (ಪ್ರ.ವಾ., ಜೂನ್ 16). ವಿದ್ಯಾರ್ಥಿಗಳಿಗೆ ಬೋಧನೆ ಮಾಡುವವರೇ ಇಂತಹ ಕೃತ್ಯ ಎಸಗಿದರೆ ಹೇಗೆ? ತಮ್ಮಲ್ಲಿನ
ಮನೋವೈಕಲ್ಯವನ್ನು ಅವರೇ ಸಾಬೀತು ಮಾಡಿದಂತಾಗಿದೆ. ನಕಲಿ ಪ್ರಮಾಣ ಪತ್ರ ಸಲ್ಲಿಸಿದವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕಿದೆ. ಆಗಲಾದರೂ ಅವರಿಗೆ ಬುದ್ಧಿ ಬರಬಹುದು. ಅಂಗವೈಕಲ್ಯವನ್ನು ನಿಜವಾಗಿ ಹೊಂದಿರುವ
ಪ್ರಾಧ್ಯಾಪಕರಿಗೆ ಯಾವುದೇ ತೊಂದರೆ ಆಗದಂತೆ ಎಚ್ಚರ ವಹಿಸಬೇಕಿದೆ.
⇒ನಿಖಿತಾ ಶಶಾಂಕ್ ಭಟ್, ಬೆಂಗಳೂರು
ಮೊಬೈಲ್ ಹಾಜರಾತಿ ಸ್ವಾಗತಾರ್ಹ
ರಾಜ್ಯದ ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಸೇರಿ ಸಿಬ್ಬಂದಿಗೆ ಜುಲೈ 1ರಿಂದ ಮೊಬೈಲ್ ಫೋನ್ ಆಧಾರಿತ ಹಾಜರಾತಿ ವ್ಯವಸ್ಥೆ ಜಾರಿಗೆ ಸರ್ಕಾರ ಮುಂದಾಗಿರುವುದು ಉತ್ತಮ ನಿರ್ಧಾರ (ಪ್ರ.ವಾ., ಜೂನ್ 16). ಮೊಬೈಲ್ ಆಧಾರಿತ ಹಾಜರಾತಿಯಿಂದ ಸಾರ್ವಜನಿಕರ ದೂರು ಕಡಿಮೆ ಆಗಲಿದೆ ಎಂಬ ಆಶಯವನ್ನು ಸಕಾರಾತ್ಮಕವಾಗಿ ಸ್ವಾಗತಿಸೋಣ. ಇದರಿಂದ ವೈದ್ಯರು ಎಲ್ಲಿಂದ ಹಾಜರಾತಿ ಹಾಕುತ್ತಿದ್ದಾರೆ ಎಂಬುದು ತಿಳಿಯಲಿದೆ. ಜೊತೆಗೆ, ನೌಕರರು ಕೆಲಸದ ವೇಳೆ ಸ್ಥಳದಲ್ಲಿ ಇದ್ದಾರೆಯೇ ಅಥವಾ ಇಲ್ಲವೇ ಎಂಬುದು ಬಯಲಾಗಲಿದೆ.
ಬೆಳಿಗ್ಗೆ ಕಚೇರಿಗೆ ಬಂದು ಮೊಬೈಲ್ ಫೋನ್ ಮೂಲಕ ಹಾಜರಾತಿ ಹಾಕಿ, ಸ್ವಲ್ಪ ಸಮಯದ ನಂತರ ಜಾಗ ಖಾಲಿ ಮಾಡುತ್ತಾರೆ. ಕರ್ತವ್ಯಲೋಪ ಎಸಗುವ ಇಂತಹ ನೌಕರರ ಮೇಲೂ ನಿಗಾ ವಹಿಸುವುದು ಉತ್ತಮ.
⇒ಎಂ.ಜಿ. ರಂಗಸ್ವಾಮಿ, ಹಿರಿಯೂರು
ಸರ್ಕಾರದ ಇಬ್ಬಗೆ ನೀತಿ
2009ರಲ್ಲಿ ಸರ್ಕಾರದಿಂದ ನೇರ ನೇಮಕವಾದ ಮತ್ತು ಜೆಒಸಿಯಿಂದ ಬಂದು ಪಿಯು ಕಾಲೇಜು ಸೇರಿದ ಉಪನ್ಯಾಸಕರಿಗೆ ವೇತನಸಹಿತ ಬಿ.ಇಡಿ ಕೋರ್ಸ್ ಮಾಡಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಆದರೆ, ಅನುದಾನಿತ ಖಾಸಗಿ ಕಾಲೇಜಿನ ಉಪನ್ಯಾಸಕರಿಗೆ ಮಾತ್ರ ವೇತನರಹಿತವಾಗಿ ಬಿ.ಇಡಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಇದು ದ್ವಂದ್ವ ನೀತಿಯಾಗಿದೆ. ಈ ತಾರತಮ್ಯ ಸರಿಪಡಿಸಲು ಮುಖ್ಯಮಂತ್ರಿಯವರಿಗೂ ಮನವಿ ಸಲ್ಲಿಸಲಾಗಿದೆ. ವಿಳಂಬ ಧೋರಣೆ ತಳೆದಿರುವುದು ಸರಿಯಲ್ಲ.⇒ಫಾಲ್ಗುಣ ಗೌಡ ಅಚವೆ, ಅಂಕೋಲಾ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.