ADVERTISEMENT

ರಾಜಕೀಯ ಕ್ರಾಂತಿಗೆ ಬೇಕು ‘ಮಹಾ ಮಹಿಳೆ’!

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2019, 20:15 IST
Last Updated 12 ಫೆಬ್ರುವರಿ 2019, 20:15 IST

ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿರುವಾಗ ರಾಜಕಾರಣದಲ್ಲಿ ಮಹಿಳೆಯರಿಗೆ ಸ್ಥಾನಮಾನ ಕುರಿತು ಮತ್ತೆ ಚರ್ಚೆ ಮುನ್ನೆಲೆಗೆ ಬಂದಿದೆ. ಈ ವಿಷಯವು ಪ್ರತೀ ಚುನಾವಣೆ ಸಂದರ್ಭದಲ್ಲಿಯೂ ಚರ್ಚೆಗೆ ಬರುತ್ತದೆ. ಆದರೆ, ಕರ್ನಾಟಕದಲ್ಲಿ ಸುಮಲತಾ ಅವರ ರಾಜಕೀಯ ಪ್ರವೇಶ ಸುದ್ದಿಯಿಂದ ಇದು ಸಹೃದಯರ ಗಮನಸೆಳೆದಿದೆ. ‘ಸುಮಲತಾ ಮಂಡ್ಯದ ಗೌಡತಿ ಅಲ್ಲ’ ಎಂಬ ವಿತಂಡವಾದ ಯಾರೋ ಒಬ್ಬರದ್ದಲ್ಲ, ಪುರುಷಪ್ರಧಾನ ರಾಜಕೀಯ ವ್ಯವಸ್ಥೆಯಲ್ಲಿ ಇಂಥ ಮನಸ್ಥಿತಿ ಕಿತ್ತೊಗೆಯಲಾರದಷ್ಟು ಆಳದಲ್ಲಿ ಬೇರು ಬಿಟ್ಟಿದೆ.

ದೇಶದ ಯಾವುದೇ ಪಕ್ಷವನ್ನು ಉದಾಹರಣೆಯಾಗಿ ತೆಗೆದುಕೊಂಡರೂ, ಅವುಗಳಲ್ಲಿ ಮಹಿಳಾ ಘಟಕಗಳಿವೆ ಎಂಬ ಕಾರಣಕ್ಕೆ ಅನಿವಾರ್ಯವಾಗಿ ಕೆಲವು ಸ್ಥಾನ ಕೊಡಲಾಗಿದೆ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ, ಉತ್ತರಪ್ರದೇಶದಲ್ಲಿ ಮಾಯಾವತಿ ಅವರಿಗೆ ಅವರವರ ಪಕ್ಷದ ಮೇಲೆ ಹಿಡಿತ ಇರಬಹುದು. ಆದರೆ, ಅವರ ನಂತರದ ತಲೆಮಾರು? ತಮಿಳುನಾಡಿನಲ್ಲಿ ಆದಂತೆಯೇ ಆಗದೆ ವಿಧಿಯಿಲ್ಲ. ಹಾಗೆ ನೋಡಿದರೆ ಜಯಲಲಿತಾ ತಮ್ಮ ಉತ್ತರಾಧಿಕಾರಿಯಾಗಿ ಶಶಿಕಲಾ ಅವರನ್ನು ಒಂದು ಮಟ್ಟಿಗೆ ಬಿಂಬಿಸಿದ್ದರು. ವಿವಾದಗಳು, ಆರೋಪಗಳು ಏನೇ ಇರಲಿ, ಅವು ನ್ಯಾಯಾಲಯದಲ್ಲಿ ನಿರ್ಣಯಗೊಳ್ಳುತ್ತಿದ್ದವು. ಜಯಲಲಿತಾ ಬದುಕಿದ್ದಾಗಲೂ ಅವರಿಬ್ಬರ ನಡುವಿನ ಸ್ನೇಹದಲ್ಲಿ ಹುಳಿ ಹಿಂಡುವ ಪ್ರಯತ್ನ ಮಾಡಿದ್ದು ಇದೇ ಮನಸ್ಥಿತಿಯವರು.

ಗಾಂಧಿ, ಅಂಬೇಡ್ಕರ್, ಲೋಹಿಯಾ ಅವರ ಸಿದ್ಧಾಂತಗಳ ಬಗ್ಗೆ ಭಾಷಣ ಮಾಡುವವರು ಪ್ರಜ್ಞಾಪೂರ್ವಕವಾಗಿಯೇ ಮಹಿಳೆಯರನ್ನು ರಾಜಕಾರಣದಲ್ಲಿ ಬೆಳೆಸುತ್ತಿಲ್ಲ. ಮತ್ತೊಂದೆಡೆ, ಮೀಸಲಾತಿ ಜಾರಿ ಮಾಡಿ ಸ್ಥಳೀಯ ಸಂಸ್ಥೆಗಳಲ್ಲಿ ಕೊಟ್ಟಂಥ ಪ್ರಾತಿನಿಧ್ಯ ಗಮನಿಸಿದರೆ ಅಲ್ಲಿ ‘ಮಹಿಳೆಯನ್ನು ಕುದುರೆಯ ಮೇಲೆ ಕೂಡಿಸಿ ಲಗಾಮನ್ನು ಪುರುಷ ಹಿಡಿದಿದ್ದಾನೆ’.

ADVERTISEMENT

ಮಹಿಳೆಯರು ರಾಜಕೀಯಕ್ಕೆ ಬರಲು ಹಿಂದೇಟು ಹಾಕುವಷ್ಟು ನಮ್ಮ ರಾಜಕೀಯ ವ್ಯವಸ್ಥೆ ಕಲುಷಿತಗೊಂಡಿದೆ. ಇದು, ದುರಂತ. ಮಹಿಳೆಯರಿಗೆ ಸಮಪಾಲು ದೊರಕಿಸಿಕೊಂಡುವ ಕ್ರಾಂತಿಗಾಗಿ ‘ಮಹಾ ಮಹಿಳೆ’ಯೇ ಜನಿಸಬೇಕೇ?

ಬಸವರಾಜ ಹೊಸಮನಿ,ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.