ADVERTISEMENT

ವಾಚಕರ ವಾಣಿ: ಯಾರು ಕಡಿಮೆ ಅಪಾಯಕಾರಿ?!

ವಾಚಕರ ವಾಣಿ: 14.4.2025

ಪ್ರಜಾವಾಣಿ ವಿಶೇಷ
Published 14 ಏಪ್ರಿಲ್ 2025, 0:05 IST
Last Updated 14 ಏಪ್ರಿಲ್ 2025, 0:05 IST
<div class="paragraphs"><p>ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು</p></div>

ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

   

ಯಾರು ಕಡಿಮೆ ಅಪಾಯಕಾರಿ?!

ಕಸ ವಿಲೇವಾರಿ ವಾಹನ ವೆಚ್ಚವನ್ನು ಮನೆ ಕಂದಾಯದ ಜೊತೆ ಸದ್ದಿಲ್ಲದೆ ಸಂಗ್ರಹಿಸಲು ಮುಂದಾಗಿರುವ ಸರ್ಕಾರ, ಜನರ ಬದುಕನ್ನು ಇನ್ನಷ್ಟು ಭಾರವಾಗಿಸಲು ಹೊರಟಿದೆ. ಹಿಂದಿನ ವರ್ಷಗಳಲ್ಲಿ ಆಸ್ತಿ ತೆರಿಗೆ, ಆರೋಗ್ಯ ಉಪಕರ, ಭಿಕ್ಷುಕರ ಉಪಕರ, ನೀರಿನ ಕರ, ಗ್ರಂಥಾಲಯ ಉಪಕರ, ಸಾರಿಗೆ ವಾಹನ ಉಪಕರದ ಹೆಸರಿನಲ್ಲಿ ಕರ ವಸೂಲಿ ಮಾಡಲಾಗುತ್ತಿತ್ತು. ಕೇಂದ್ರ ಸರ್ಕಾರದ ಮೇಲೆ ರಾಜ್ಯ ಸರ್ಕಾರ, ರಾಜ್ಯ ಸರ್ಕಾರದ ಮೇಲೆ ಕೇಂದ್ರ ಸರ್ಕಾರ ಆರೋಪ, ಪ್ರತ್ಯಾರೋಪಗಳನ್ನು ಮಾಡುತ್ತಾ, ಎರಡೂ ಸರ್ಕಾರಗಳು ದೇಶದ ಜನರನ್ನು ಸುಲಿಗೆ ಮಾಡುತ್ತಿರುವು
ದಂತೂ ಖಚಿತ. ಆಡಳಿತ ನಡೆಸುತ್ತಿರುವವರು ದಿನನಿತ್ಯ ನೀಡುತ್ತಿರುವ ಅಸಹ್ಯಕರ ಹೇಳಿಕೆಗಳು, ಪರಸ್ಪರ ಭ್ರಷ್ಟಾಚಾರದ ಆರೋಪಗಳನ್ನು ಜನಸಾಮಾನ್ಯರು ಸಹಿಸುವುದು ಅನಿವಾರ್ಯವೇನೋ ಎಂಬಂತೆ ಆಗಿರುವುದು ವಿಪರ್ಯಾಸ. ಇವರಲ್ಲಿ ಯಾರು ಕಡಿಮೆ ಅಪಾಯಕಾರಿಗಳು ಎಂಬುದಷ್ಟೇ ಈಗ ಉಳಿದಿರುವ ಪ್ರಶ್ನೆ.

ADVERTISEMENT

⇒ಎಂ.ಜಿ.ರಂಗಸ್ವಾಮಿ, ಹಿರಿಯೂರು

ಟ್ರಂಪ್‌ ಸುಂಕ: ತಿಳಿಯಬೇಕಿದೆ ಅಸಲಿ ಚಿತ್ರಣ

‘ಟ್ರಂಪ್ ಟ್ಯಾರಿಫ್’ ಎಂಬುದು ಈಗ ಒಂದು ತೂಗುಗತ್ತಿಯಂತೆ ಆಗಿಬಿಟ್ಟಿದೆ. ಕೆಲವು ಮಾಧ್ಯಮಗಳೂ ಊಹಾಪೋಹ ಸೃಷ್ಟಿಸಿ ಜನರನ್ನು ಆತಂಕಕ್ಕೆ ಈಡುಮಾಡುತ್ತಿವೆ. ಪ್ರತಿಸುಂಕಗಳ ಸೂತ್ರ ಸರಿಯಾದ ಆಧಾರವನ್ನೇ ಹೊಂದಿಲ್ಲ. ವ್ಯಾಪಾರದ ಕೊರತೆಗೆ (ಟ್ರೇಡ್‌ ಡೆಫಿಸಿಟ್‌) ವಿವಿಧ ಕಾರಣಗಳು ಇರುತ್ತವೆ. ಉತ್ಪನ್ನವೊಂದು ಒಂದು ದೇಶವನ್ನು ತಲುಪಿದ ಮೇಲೆ‌ ಬೇರೆಡೆಗೆ ಹೋಗುವ ಸಾಧ್ಯತೆ ಕೂಡ ಇರುತ್ತದೆ. ‘ಹೊರಗಿನಿಂದ ವಸ್ತುಗಳು ಭಾರಿ ತೆರಿಗೆಗಳೊಂದಿಗೆ ಅಮೆರಿಕಕ್ಕೆ ಬರುತ್ತಿವೆ. ಅದರ ಬದಲು ನಮ್ಮಲ್ಲೇ ತಯಾರಿಸಬೇಕು’ ಎಂಬ ಆಲೋಚನೆಯಲ್ಲೇ‌ ಲೋಪ ಇದೆ. ಒಟ್ಟಿನಲ್ಲಿ‌ ಇದು ಒಂದು ಚೌಕಾಸಿ ವ್ಯಾಪಾರ. ವಿವಿಧ ದೇಶಗಳು ಮಾತುಕತೆಗೆ ಬಂದಾಗ ಸುಂಕದ ದರಗಳು ಬದಲಾಗುತ್ತವೆ! ಚೀನಾದಂತೆ ಭಾರತವು ಅಮೆರಿಕಕ್ಕೆ ಸಡ್ಡು ಹೊಡೆಯುವ ಸ್ಥಿತಿಯಲ್ಲಿ ಇಲ್ಲ. ಸಂಧಾನಗಳ ಮೂಲಕ ರಾಜಿಸೂತ್ರ ರೂಪುಗೊಳ್ಳಬಹುದು. ಅಸಲಿ ಚಿತ್ರಣ ಇನ್ನಷ್ಟೇ ತಿಳಿಯಬೇಕಿದೆ.

⇒ಎಚ್.ಎಸ್.ಮಂಜುನಾಥ, ಗೌರಿಬಿದನೂರು

ಪ್ರಚೋದನಕಾರಿ ಕರೆ ಸಲ್ಲದು

‘ರಾಜ್ಯ ಸರ್ಕಾರದ ಕುಮ್ಮಕ್ಕಿನಿಂದ ಪೊಲೀಸ್ ಠಾಣೆಗಳು ಕಾಂಗ್ರೆಸ್ ಕಚೇರಿಯಂತಾಗಿವೆ. ಬಿಜೆಪಿ ಕಾರ್ಯಕರ್ತರ ವಿರುದ್ಧ ಕಿರುಕುಳ ಮಿತಿಮೀರಿದ್ದು, ಕಾರ್ಯಕರ್ತರು ಬಡಿಗೆ ಹಿಡಿದು ಠಾಣೆಗೆ ನುಗ್ಗುವ ದಿನ ದೂರವಿಲ್ಲ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಎಚ್ಚರಿಕೆ ನೀಡಿರುವುದು (ಪ್ರ.ವಾ., ಏ. 12) ನಿಜಕ್ಕೂ ಆಘಾತ ಕಾರಿಯಾಗಿದೆ. ಪೊಲೀಸರ ವರ್ತನೆ ಅವರು ತಿಳಿಸಿರುವ ಹಾಗೆ ಆಗಿರುವುದು ನಿಜವೇ ಆಗಿದ್ದರೆ, ಅದು ಖಂಡನಾರ್ಹ ವಾದದ್ದೇ ಸರಿ. ಆದಾಗ್ಯೂ ನಾಯಕರಾದವರು ಹೀಗೆ ಹಿಂಸೆಗೆ, ಕಾನೂನಿನ ಉಲ್ಲಂಘನೆಗೆ ತಮ್ಮ ಕಾರ್ಯಕರ್ತರನ್ನು ಪ್ರಚೋದಿಸುವಂತೆ ಪರೋಕ್ಷವಾಗಿ ಕರೆ ನೀಡಿರುವುದು ಅಸಾಂವಿಧಾನಿಕವೂ ಅರಾಜಕವೂ ಆಗುವುದಿಲ್ಲವೆ?

‘ಬೆಲೆ ಏರಿಕೆಯಿಂದ ಜನರಿಗೆ ತೊಂದರೆಯಾಗಿರುವುದಕ್ಕೆ ರಾಜ್ಯ ಸರ್ಕಾರದ ಹಾಗೆಯೇ ಅವರದೇ ಪಕ್ಷ ಆಳ್ವಿಕೆ ನಡೆಸುತ್ತಿರುವ ಕೇಂದ್ರ ಸರ್ಕಾರವೂ ಜವಾಬ್ದಾರಿಯನ್ನು ಹೊರಬೇಕಾಗುತ್ತದೆ. ಇದನ್ನು ಅವರೂ ನೆನಪಿನಲ್ಲಿ ಇಡಬೇಕಾಗಿತ್ತು, ಅಲ್ಲವೆ?

⇒ಪು.ಸೂ.ಲಕ್ಷ್ಮೀನಾರಾಯಣ ರಾವ್, ಬೆಂಗಳೂರು

ಶಿವಾಜಿಯ ಪಾತ್ರ ಮಾಡಬಾರದೇಕೆ?

‘ಶಿವಾಜಿ ಕುರಿತು ನಟ, ನಿರ್ದೇಶಕ ರಿಷಬ್‌ ಶೆಟ್ಟಿ ಅವರು ಸಿನಿಮಾ ಮಾಡಿದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ.
ಮುಂದಿನ ಪರಿಸ್ಥಿತಿ ಮನಗಂಡು ಈಗಲೇ ಸಿನಿಮಾ ನಿಲ್ಲಿಸಬೇಕು’ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ನಾಯಕ ವಾಟಾಳ್‌ ನಾಗರಾಜ್‌ ಅವರು ಎಚ್ಚರಿಕೆ ನೀಡಿರುವುದು ವರದಿಯಾಗಿದೆ (ಪ್ರ.ವಾ., ಏ. 12). ರಾಜ್ಯದಲ್ಲೇ ಐತಿಹಾಸಿಕ ಪುರುಷರು, ಮಹನೀಯರು ಬಹಳಷ್ಟು ಮಂದಿ ಇದ್ದರೂ ಅಂಥವರನ್ನು ಬಿಟ್ಟು ಶಿವಾಜಿ ಪಾತ್ರ ಮಾಡಲು ಹೊರಟಿರುವುದು ಸರಿಯಲ್ಲ ಎಂಬ ಹೇಳಿಕೆ ಅವರ ಸಂಕುಚಿತ ಮನೋಭಾವವನ್ನು ತೋರಿಸುತ್ತದೆ.

ಶಿವಾಜಿಯ ಪಾತ್ರಕ್ಕೆ ರಿಷಬ್ ದೇಹಭಾಷೆ ಉತ್ತಮವಾಗಿ ಇರಬಹುದು. ಬಹುಶಃ ಆ ಕಾರಣದಿಂದ ಚಿತ್ರತಂಡವು ಶಿವಾಜಿ ಪಾತ್ರಕ್ಕೆ ಅವರನ್ನು ಆಯ್ಕೆ ಮಾಡಿರಬಹುದು. ನಮ್ಮ ವರನಟ ರಾಜ್‌ಕುಮಾರ್‌ ಅವರು ‘ಸಂತ ತುಕಾರಾಂ’, ‘ಕವಿರತ್ನ ಕಾಳಿದಾಸ’ ಅವರಂತಹವರ ಜೀವನಕಥೆಯನ್ನು ಆಧರಿಸಿದ ಚಿತ್ರಗಳಲ್ಲಿ ನಟಿಸಿದ್ದಾರೆ. ಮಹಾತ್ಮ ಗಾಂಧಿ ಅವರಿಗೆ ಸಂಬಂಧಿಸಿದ ಚಿತ್ರದಲ್ಲಿ ಅವರ ಪಾತ್ರವನ್ನು ಬ್ರಿಟಿಷ್ ಪ್ರಜೆ ರಿಚರ್ಡ್ ಅಟೆನ್‌ಬರೊ ಮಾಡಿದ್ದಾರೆ. ಒಬ್ಬ ನಟನಿಗೆ ಒಪ್ಪುವಂತಹ ಪಾತ್ರವಾಗಿದ್ದರೆ ಅದನ್ನು ವಿರೋಧಿಸುವುದು ಮತ್ತು ನಟಿಸದಂತೆ ಧಮಕಿ ಹಾಕುವುದು ಸರಿಯಲ್ಲ.

⇒ಚಂದ್ರಕಾಂತ ನಾಮಧಾರಿ, ಅಂಕೋಲಾ

ಪಾಕ್ಷಿಕ, ಮಾಸಪತ್ರಿಕೆ ಮೇಲೆ ಕೆಂಗಣ್ಣು

ಅಂಚೆ ಇಲಾಖೆಯು ಹಂತಹಂತವಾಗಿ ಪಾಕ್ಷಿಕ ಮತ್ತು ಮಾಸಪತ್ರಿಕೆಗಳ ಕತ್ತನ್ನು ಹಿಸುಕಲು ಹೊರಟಿರುವುದು ಖಂಡನೀಯ. ಈ ಮೊದಲು 50 ಗ್ರಾಮ್‌ಗಿಂತ ಕಡಿಮೆ ತೂಕವುಳ್ಳ ಪಾಕ್ಷಿಕ ಅಥವಾ ಮಾಸಪತ್ರಿಕೆಯನ್ನು ರಿಯಾಯಿತಿ ದರದಲ್ಲಿ, ಅಂದರೆ 25 ಪೈಸೆಯಲ್ಲಿ ಅಂಚೆಗೆ ಹಾಕಲು ಅವಕಾಶವಿತ್ತು. ನಿಗದಿತ ದಿನಾಂಕದಲ್ಲಿ ಅಂಚೆಗೆ ಹಾಕಲು ಸಾಧ್ಯವಾಗದಿದ್ದರೆ ವರ್ಷದಲ್ಲಿ ಎರಡು ಬಾರಿ ಅನುಮತಿ ಪಡೆದು ಬೇರೆ ದಿನಾಂಕದಲ್ಲಿ ಅಂಚೆಗೆ ಹಾಕಬಹುದಿತ್ತು. ಪ್ರಸ್ತುತ ಬರೀ ದಿನಪತ್ರಿಕೆ ಹಾಗೂ ವಾರಪತ್ರಿಕೆಗಳಿಗೆ ಮಾತ್ರ ಆ ರಿಯಾಯಿತಿ ಇದ್ದು ಪಾಕ್ಷಿಕ, ಮಾಸಪತ್ರಿಕೆಗಳಿಗೆ ರಿಯಾಯಿತಿಯನ್ನು ತೆಗೆಯಲಾಗಿದೆ. ಇದರಿಂದ ಪಾಕ್ಷಿಕ ಹಾಗೂ ಮಾಸಪತ್ರಿಕೆಗಳನ್ನು ಎರಡು ರೂಪಾಯಿ ದರದಲ್ಲಿ ಅಂಚೆಗೆ ಹಾಕಬೇಕಾಗಿದೆ ಹಾಗೂ ಅದಕ್ಕೆ ಶೇ 18ರಷ್ಟು ಜಿಎಸ್‍ಟಿ ಅಂದರೆ 36 ಪೈಸೆ ಸೇರಿ ಒಟ್ಟು ₹ 2.36 ಆಗುತ್ತದೆ. ಇದು, ಪ್ರಸ್ತುತ ಇರುವ ದರಕ್ಕಿಂತ ಒಂಬತ್ತು ಪಟ್ಟು ಹೆಚ್ಚಳವಾಗಿದೆ.

25 ಪೈಸೆಯನ್ನು 50 ಪೈಸೆಗೆ ಹೆಚ್ಚಿಸಿದ್ದರೂ ನಿಭಾಯಿಸಬಹುದು. ಆದರೆ ಈ ರೀತಿಯ ವಿಪರೀತ ದರ ಏರಿಕೆಯಿಂದ ಈ ಪತ್ರಿಕೆಗಳನ್ನು ಉಳಿಸಿಕೊಂಡು ನಡೆಸುವುದು ಕಷ್ಟವಾಗಲಿದೆ. ಈ ಕಾರಣದಿಂದ ಇಲಾಖೆಯು ತನ್ನ ನಿರ್ಧಾರವನ್ನು ಪರಿಶೀಲಿಸಬೇಕು. ‍ಪಾಕ್ಷಿಕ ಹಾಗೂ ಮಾಸಪತ್ರಿಕೆಗಳ ಒಡೆತನ ಹೊಂದಿರುವವರು ಈ ದಿಸೆಯಲ್ಲಿ ಸರ್ಕಾರವನ್ನು ಆಗ್ರಹಿಸಬೇಕು.

⇒ಈ.ಬಸವರಾಜು, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.