ಈಜಿಪ್ತ್ ಮತ್ತು ಟ್ಯುನೀಸಿಯಾದಲ್ಲಿ ಬಂಡೆದ್ದ ಜನಶಕ್ತಿಯ ಎದುರು ಅಧಿಕಾರಾರೂಢ ಸರ್ವಾಧಿಕಾರಿಗಳು ಮಣ್ಣು ಮುಕ್ಕಬೇಕಾಯಿತು. ಆ ಬಂಡಾಯದ ಹಿಂದಿದ್ದ ಧ್ಯೇಯೋದ್ದೇಶ ಎಲ್ಲ ಅರಬ್ ದೇಶಗಳಲ್ಲಿ ಬದಲಾವಣೆಯ ಗಾಳಿ ಬೀಸುವ ನಿರೀಕ್ಷೆ ಮೂಡಿಸಿತ್ತು.
ಅದರ ಪ್ರೇರಣೆ ಎಂಬಂತೆ ಲಿಬಿಯಾದಲ್ಲಿಯೂ ನಿರಂಕುಶ ಸರ್ವಾಧಿಕಾರಿ ಮುಅಮ್ಮರ್ ಗಡಾಫಿ ವಿರುದ್ಧ ಜನ ದಂಗೆಯೆದ್ದಿದ್ದಾರೆ. ಆದರೆ ಅದು ತರುತ್ತಿರುವ ಬದಲಾವಣೆ ಮಾತ್ರ ಅನಾಹುತಕಾರಿ ಎನ್ನುವ ಭಾವನೆ ಮೂಡಿಸುತ್ತಿದೆ.
ರಾಜಧಾನಿ ಟ್ರಿಪೋಲಿಯ ಬಹುಭಾಗ ಬಂಡುಕೋರರ ವಶವಾಗಿದ್ದರೂ ಅವರಿಗೊಂದು ಒಗ್ಗೂಡಿದ ನಾಯಕತ್ವ ಇಲ್ಲ; ದಿಕ್ಕು ದೆಸೆ, ಗುರಿ, ಪ್ರಭಾವ ಸ್ಪಷ್ಟವಾಗಿಲ್ಲ; ಇರಾಕ್‌ನ ಸದ್ದಾಂ ಹುಸೇನ್ ಶೈಲಿಯಲ್ಲಿ ಗಡಾಫಿ ತಲೆ ಮರೆಸಿಕೊಂಡಿದ್ದರೂ ಅಡಗುದಾಣದಿಂದಲೇ ಗುಡುಗುತ್ತಿದ್ದಾರೆ, ಬಂಡುಕೋರರಿಗೆ ಸಹಾಯದ ನೆಪದಲ್ಲಿ ವಿದೇಶಿ ಶಕ್ತಿಗಳು ಹೋರಾಟದಲ್ಲಿ ಭಾಗಿಯಾಗಿರುವುದು ಅರಬ್ ದೇಶಗಳ ಪಾಲಿಗಂತೂ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಅಪಾಯಕಾರಿಯಾಗಲಿದೆ.
ಗಡಾಫಿಯನ್ನು ಮಣಿಸಲು ಲಿಬಿಯಾದ ಬಹುಪಾಲು ಯುವಕರ ಕೈಯಲ್ಲಿ ಯಥೇಚ್ಛ ಬಂದೂಕುಗಳಿವೆ. ಅವರ ಕೋಪ- ಆವೇಶವಂತೂ ಅಭೂತಪೂರ್ವ. ಆದರೆ ಲಿಬಿಯಾದ ಆಂತರಿಕ ಕಗ್ಗಂಟುಗಳು ಈಗ ಬಹರೇನ್, ಸಿರಿಯಾ, ಯೆಮನ್ ಮತ್ತಿತರ ದೇಶಗಳಲ್ಲಿ ನಡೆದಿರುವ ಸರ್ಕಾರಿ ವಿರೋಧಿ ಹೋರಾಟದ ಮೇಲೂ ಪ್ರತಿಧ್ವನಿಸುತ್ತಿವೆ.
ಈ ಬದಲಾವಣೆ ಗಾಳಿಯನ್ನು ಅರಗಿಸಿಕೊಳ್ಳಲು ಅರಬ್ ವಿಶ್ವಕ್ಕೆ ಸಾಕಷ್ಟು ಸಮಯಬೇಕು. ಸಾಕಷ್ಟು ಗೊಂದಲವನ್ನೂ ಎದುರಿಸಬೇಕಾಗಬಹುದೇನೋ.
ಈ ವರ್ಷಾರಂಭದಲ್ಲಿ ಬಂಡಾಯ ಶುರುವಾದಾಗ ಇದರ ಅಲೆ ಎಲ್ಲ ದೇಶಗಳಿಗೂ ಹರಡಬಹುದು, ಇದನ್ನು ನಿಲ್ಲಿಸಲು ಸಾಧ್ಯವೇ ಇಲ್ಲವೇನೋ ಎಂದು ಅನ್ನಿಸಿತ್ತು. ಆದರೆ ಈಗ ಆ ವಾತಾವರಣ ಕಮ್ಮಿಯಾಗಿದೆ, ಅನಿಶ್ಚಯ ಕಂಡು ಬರುತ್ತಿದೆ. ಏಕೆಂದರೆ ವಿವಿಧೆಡೆ ಕಂಡು ಬರುತ್ತಿರುವ ಕಗ್ಗಂಟು, ಹೋರಾಟ ಯಥಾಸ್ಥಿತಿಯಲ್ಲೇ ಮುಂದುವರಿದರೆ ಆಡಳಿತ ಕುಸಿದು ಅರಾಜಕತೆ ಸೃಷ್ಟಿಯಾದೀತು ಎಂಬ ಆತಂಕ ಅನೇಕ ದೇಶಗಳಲ್ಲಿ ಮನೆಮಾಡಿದೆ.
ಇದಕ್ಕೆ ನಿದರ್ಶನ ಎಂಬಂತೆ ಯೆಮನ್‌ನ ಬಂಡುಕೋರರು ಸುರಕ್ಷಿತ ನೆಲೆ ಕಂಡುಕೊಂಡಿದ್ದಾರೆ. ಮಧ್ಯಪ್ರಾಚ್ಯದಲ್ಲಿ ಇದುವರೆಗಿದ್ದ ಅಮೆರಿಕ ಬೆಂಬಲಿತ ವ್ಯವಸ್ಥೆಗೂ (ತೈಲದ ಮೇಲೆ ಹತೋಟಿ, ಸೌದಿ ಅರೇಬಿಯದ ಪ್ರಭಾವ, ಅರಬ್- ಇಸ್ರೇಲ್ ಕದನ ವಿರಾಮ, ನಾಗರಿಕರ ವೈಯಕ್ತಿಕ ಸ್ವಾತಂತ್ರ್ಯ ಮೊಟಕುಗೊಂಡಿದ್ದರೂ ಸಹ ತೋರಿಕೆಗಾದರೂ ಇವು ವಿಶ್ವದ ಅತ್ಯಂತ ಸ್ಥಿರ ಆಡಳಿತದ ದೇಶಗಳಾಗಿದ್ದವು) ಈಗ ನಡೆಯುತ್ತಿರುವ ಬಂಡಾಯಕ್ಕೂ ಒಂದಕ್ಕೊಂದು ಹೊಂದಾಣಿಕೆ ಆಗುತ್ತಿಲ್ಲ.
ಹೋದ ವಾರ ರಾಜಧಾನಿ ಟ್ರಿಪೋಲಿ ಗಡಾಫಿಯ ಕೈಯಿಂದ ಜಾರಿದೆ, ಅಧಿಕಾರದಿಂದ ಇಳಿಯುವಂತೆ ಸಿರಿಯಾದ ಅಧ್ಯಕ್ಷ ಬಷರ್ ಅಸ್ಸದ್‌ಗೆ ಅಮೆರಿಕ ಮತ್ತು ಐರೋಪ್ಯ ಒಕ್ಕೂಟ ಕರೆ ನೀಡಿವೆ. ಬಂಡುಕೋರರ ದಾಳಿಯಲ್ಲಿ ಮುಖ ಸುಟ್ಟುಕೊಂಡ ಯೆಮನ್ ಅಧ್ಯಕ್ಷ ಅಲಿ ಅಬ್ದುಲ್ಲಾ ಗಾಯ ಇನ್ನೂ ವಾಸಿಯಾಗಿಲ್ಲ, ಈಜಿಪ್ತ್- ಇಸ್ರೇಲ್ ಬಾಂಧವ್ಯ ಹಳಸಿ ಬಿಕ್ಕಟ್ಟಿನತ್ತ ಜಾರುತ್ತಿದೆ. ಮುಬಾರಕ್ ಪದಚ್ಯುತಿ ನಂತರ ಬಂದ ಸರ್ಕಾರ ಇಸ್ರೇಲ್‌ಗೆ ಸೆಡ್ಡು ಹೊಡೆಯುತ್ತಿರುವುದು ಈಜಿಪ್ತ್‌ನ ಅನೇಕ ನಾಗರಿಕರಿಗೆ ಖುಷಿ ತಂದಿದೆ.
ಅರಬ್ ಸಮಾಜದಲ್ಲಿ ಅಧಿಕಾರದ ವರ್ಗಾವಣೆ ಆರಂಭವಾಗಿದ್ದು, ಹೊಸ ವ್ಯವಸ್ಥೆ ರೂಪುಗೊಳ್ಳುತ್ತಿದೆ ಎನ್ನುತ್ತಾರೆ ಸಿರಿಯಾದ ಪ್ರತಿಪಕ್ಷ ಮುಖಂಡರಲ್ಲೊಬ್ಬರಾದ ಮೈಕೆಲ್ ಕೀಲೊ.
ಬದಲಾವಣೆಯ ಪರಿಣಾಮಗಳ ಬಿಸಿ ಇಸ್ರೇಲ್‌ಗೆ ಈಗಾಗಲೇ ತಟ್ಟಲಿಕ್ಕೆ ಶುರುವಾಗಿದೆ. ಪ್ಯಾಲೆಸ್ಟೈನಿಯರ ಸಂಕಷ್ಟಗಳ ಬಗ್ಗೆ ಅರಬ್ ದೇಶಗಳ ಜನರಲ್ಲಿ ಕೋಪ ತಾಪ ಎದ್ದು ಕಾಣುತ್ತಿದೆ (ಇಷ್ಟು ದಿನ ಇವರ ಸರ್ಕಾರಗಳು ಪ್ಯಾಲೆಸ್ಟೈನ್ ಬಗ್ಗೆ ಕಂಡೂ ಕಾಣದಂತಿದ್ದವು). ಸಲಾಫಿಸ್ಟ್ ಎಂದೇ ಹೆಸರಾದ ಕಟ್ಟಾ ಇಸ್ಲಾಮಿಕ್ ಮೂಲಭೂತವಾದಿಗಳು ಈಜಿಪ್ತ್, ಲಿಬಿಯಾ, ಸಿರಿಯಾ ಮತ್ತಿತರ ದೇಶಗಳಲ್ಲಿ ಈಗ ಪ್ರಮುಖ ಶಕ್ತಿಯಾಗಿ ತಲೆಯೆತ್ತಿದ್ದಾರೆ. ಇವರಿಗೆ ಸೌದಿಅರೇಬಿಯ ಕುಮ್ಮಕ್ಕು, ಹಣ ನೀಡುತ್ತಿದೆ ಎಂಬ ವದಂತಿಗಳಿವೆ. ವಿವಿಧ ದೇಶಗಳ ನಡುವಿನ ಮೈತ್ರಿ ಮುರಿದುಬೀಳುತ್ತಿದೆ, ಸಿರಿಯಾ ಸರ್ಕಾರ ಪ್ರತಿಭಟನಾಕಾರರನ್ನು ಗುಂಡಿಕ್ಕಿ ಕೊಲ್ಲುತ್ತಿರುವುದು ಟರ್ಕಿಗೆ ಕೋಪ ತಂದಿದೆ.
ಸುಲಭವಲ್ಲ: ಕ್ರಾಂತಿಯ ಮೂಲಕ ಅಧಿಕಾರಸ್ಥರನ್ನು ಇಳಿಸುವುದು ಸುಲಭ ಎಂಬ ಭಾವನೆಯೇ ಎಲ್ಲೆಡೆಯಿದೆ. ಆದರೆ ಲಿಬಿಯಾದಲ್ಲಿ ಗಡಾಫಿ ಸರ್ಕಾರವನ್ನು ಪೂರ್ಣ ತೊಲಗಿಸುವುದಕ್ಕಿಂತಲೂ ಹೊಸ ಸರ್ಕಾರ ಅಸ್ತಿತ್ವಕ್ಕೆ ತರುವುದೇ ಹೆಚ್ಚು ಕಷ್ಟದ ಕೆಲಸ ಎಂಬುದು ಮನದಟ್ಟಾಗುತ್ತಿದೆ ಎನ್ನುತ್ತಾರೆ ಲಿಬಿಯಾ, ಬಹರೇನ್‌ನಲ್ಲಿ ಮಾನವ ಹಕ್ಕು ಆಯೋಗಗಳ ಮುಂದಾಳತ್ವ ವಹಿಸಿದ್ದ ಅಂತರ‌್ರಾಷ್ಟ್ರೀಯ ಕಾಯ್ದೆ ತಜ್ಞ ಎಂ. ಚೆರಿಫ್ ಬಾಸಿಯೋನಿ.
`ನಾವು ಗೊತ್ತುಗುರಿ ಇಲ್ಲದೆ ತೆವಳುತ್ತಿದ್ದೇವೆ. ಮುಂದಿನ ಹಂತದಲ್ಲಿ ಆಯಾ ದೇಶಗಳ ಒಳಗೇ ವಿವಿಧ ಗುಂಪುಗಳು ರಾಜಕೀಯ ಅಸ್ತಿತ್ವ ತೋರಿಸಿಕೊಳ್ಳಲು, ಅಧಿಕಾರ ಕೈವಶ ಮಾಡಿಕೊಳ್ಳಲು ಪರಸ್ಪರ ಸೆಣಸುವ, ಒಬ್ಬರನ್ನೊಬ್ಬರು ನಿರ್ನಾಮ ಮಾಡುವ ದಿನಗಳನ್ನು ಕಾಣಲಿದ್ದೇವೆ. ಭವಿಷ್ಯ ಕಷ್ಟಕರ ಸವಾಲುಗಳಿಂದ ತುಂಬಿದೆ~ ಎನ್ನುವುದು ಲೆಬನಾನ್‌ನ ರಾಜಕೀಯ ವಿಶ್ಲೇಷಕ ತಲಾಲ್ ಅತ್ರಿಸಿ ಕಳವಳ.
ಲಿಬಿಯಾದ ಬಂಡುಕೋರರು ದೇಶದ ಮೇಲೆ ಇನ್ನೂ ಪೂರ್ಣ ನಿಯಂತ್ರಣ ಸಾಧಿಸಿಲ್ಲ. ಆದರೆ ಗಡಾಫಿ ತಲೆ ಮರೆಸಿಕೊಂಡಿದ್ದಾರೆ. ನೆರೆಯ ಅರಬ್ ದೇಶಗಳ ಪ್ರತಿಭಟನಕಾರರಲ್ಲಿ ಇದು ಹುಮ್ಮಸ್ಸು, ಉತ್ಸಾಹ ತುಂಬಿದ್ದಂತೂ ಸುಳ್ಳಲ್ಲ. ಈ ಭಯದಿಂದಲೇ ಯೆಮನ್ ಸರ್ಕಾರ ವಾರಾಂತ್ಯದಿಂದ ರಾಜಧಾನಿಯಲ್ಲಿ ಇನ್ನಷ್ಟು ಭದ್ರತಾ ಪಡೆಗಳನ್ನು ನಿಯೋಜಿಸಿದೆ. ಅಲ್ ಜಝೀರಾ ಟಿವಿಯಲ್ಲಿ ಗಡಾಫಿಯ ಚಿತ್ರದ ಜತೆಗೆ ಈಜಿಪ್ತ್, ಟ್ಯುನೀಸಿಯಾದ ದಂಗೆಯ ಕಾಲದಲ್ಲಿ ಹಾಡುತ್ತಿದ್ದ ಕ್ರಾಂತಿಕಾರಿ ಹಾಡುಗಳನ್ನು ಪ್ರಸಾರ ಮಾಡಲಾಗುತ್ತಿದೆ.
`ಗಡಾಫಿ ಮತ್ತವನ ಮಕ್ಕಳು ದಯಾಪೂರಿತ ಸಾವು ಕಾಣಬಾರದು. ಅವರನ್ನು ಜೀವಂತವಾಗಿ ಹಿಡಿಯಿರಿ. ಅವರಿಗೆಲ್ಲ ಹೀನಾಯವಾಗಿ ಅವಮಾನಿಸುವುದನ್ನು ನಾನು ಕಾಣಬೇಕು~ ಎನ್ನುವ ಸಿರಿಯಾದ 30ರ ಯುವಕ ಅಜೀಜ್ ಅಲ್ ಅರಬ್ಬಿ ಮಾತುಗಳಲ್ಲಿ ಆಕ್ರೋಶ ಗುರುತಿಸಬಹುದು.
ಸರ್ವಾಧಿಕಾರಿಗಳ ವಿರುದ್ಧ ಕೋಪದಿಂದ ಕುದಿಯುವ ಅರಬ್ ದೇಶಗಳ ಯುವಕರ ನುಡಿಗಟ್ಟಿಗೆ ಹೊಸ ಹೊಸ ಶಬ್ದ ಸೇರಿಕೊಂಡಿದೆ. ಈಜಿಪ್ತ್ ದಂಗೆಯಲ್ಲಿ ಜನಪ್ರಿಯವಾಗಿದ್ದ `ಇರ್ಹಲ್ (ತೊಲಗು), ಬಲ್ತಾಗಿಯಾ (ಸರ್ಕಾರಿ ಬೆಂಬಲಿತ ವಂಚಕರು)~ ಮುಂತಾದವು ಈಗ ದೇಶಗಳ ಗಡಿಗಳನ್ನೂ ಮೀರಿ ಎಲ್ಲೆಡೆ ಬಳಕೆಯಾಗುತ್ತಿವೆ.
ಸದ್ದಾಂಗೆ ಹೋಲಿಕೆ: ಇದುವರೆಗಂತೂ ಲಿಬಿಯಾದಲ್ಲಿನ ಹೋರಾಟ ಅನಿಶ್ಚಯದ ಮುಸುಕಿನಲ್ಲೇ ಇದೆ. ಇದಕ್ಕೂ ಇರಾಕ್‌ನಲ್ಲಿ ಸದ್ದಾಂ ಪದಚ್ಯುತಿಗೆ ನಡೆದ ಹೋರಾಟಕ್ಕೂ ಸಾಮ್ಯತೆ ಕಾಣುವವರಿದ್ದಾರೆ. ಅಲ್ಲೂ ಕೂಡ ಸೆರೆ ಸಿಕ್ಕುವವರೆಗೂ ಸದ್ದಾಂ ಅಡಗುದಾಣದಲ್ಲಿ ಇದ್ದುಕೊಂಡೇ ದೇಶದ ಮೇಲೆ ಕರಿ ನೆರಳು ಬೀರಿದ್ದ.
ಏಕೆಂದರೆ ಆತ ಆಡಳಿತ ನಡೆಸುತ್ತಿದ್ದಾಗ ಬದ್ಧ ದ್ವೇಷಿಗಳಾಗಿದ್ದ ಸಮುದಾಯಗಳನ್ನು ತನ್ನ ಅಧಿಕಾರದ ಬಲದಿಂದ ಹದ್ದುಬಸ್ತಿನಲ್ಲಿಟ್ಟಿದ್ದ. ಆತನ ಗೈರು ಹಾಜರಿಯಲ್ಲಿ ಇವುಗಳ ನಡುವಿನ ಈರ್ಷೆ ಅರಾಜಕತೆ, ನಾಗರಿಕ ಅಂತಃಕಲಹಕ್ಕೆ ತಿರುಗಿತ್ತು. ಅದರ ಫಲವೇ ನಿರಂತರ ಬಂಡಾಯ. ಅವನ ಆಡಳಿತ ಶೈಲಿ ಮತ್ತು ಪರಿಣಾಮವನ್ನು ಅಮೆರಿಕನ್ನರು ಹಗುರವಾಗಿ ಕಂಡಿದ್ದರು. ಅದಕ್ಕಾಗಿ ದುಬಾರಿ ಬೆಲೆ ತೆರಬೇಕಾಗಿ ಬಂತು.
`ಗಡಾಫಿ ನಂತರದ ಲಿಬಿಯಾವನ್ನು ಕೆಲವರು ಸದ್ದಾಂ ನಂತರದ ಇರಾಕ್‌ಗೆ ಹೋಲಿಸುತ್ತಿದ್ದಾರೆ. ಅಂಥವರ ದೃಷ್ಟಿಯಲ್ಲಿ ಲಿಬಿಯಾದ ಆಡಳಿತದ ಮೇಲೆ ಲಿಬಿಯನ್ನರಿಗೆ ಪೂರ್ಣ ನಿಯಂತ್ರಣ ಇರುವುದಿಲ್ಲ (ಅಂದರೆ ಗಡಾಫಿ ವಿರುದ್ಧ ಹೋರಾಡಲು ಸಹಾಯ ಮಾಡಿದ ಪಾಶ್ಚಾತ್ಯ ದೇಶಗಳ ಕೈಗೊಂಬೆ ಎಂದರ್ಥ). ಸಿಕ್ಕಾಪಟ್ಟೆ ಷರತ್ತುಗಳು, ನಿರ್ಬಂಧಗಳಿಗೆ ಮಣಿಯಬೇಕಾಗುತ್ತದೆ. ಈಗಿನ ಸ್ಥಿತಿಯಲ್ಲಿ ಅದರಿಂದ ಹೊರಬರುವ ಸಾಮರ್ಥ್ಯ ಅವರಿಗಿಲ್ಲ~ ಎಂದು ಲೆಬನಾನ್ ಎಡಪಂಥೀಯ ಪತ್ರಿಕೆ `ಅಲ್ ಅಕ್ಬರ್~ನಲ್ಲಿ ಬರೆಯುತ್ತಾರೆ ಬಷೀರ್ ಅಲ್ ಬಕ್ರ್.
ಇನ್ನು ಅನೇಕರ ಪ್ರಕಾರ, ಗಡಾಫಿ ದುರಾಡಳಿತದಿಂದ ಲಿಬಿಯಾ ಮುಕ್ತಗೊಂಡರೂ ಕೂಡ ಈ ಕಾರ್ಯದಲ್ಲಿ ಅಮೆರಿಕ ಮತ್ತಿತರ ವಿದೇಶಿ ಶಕ್ತಿಗಳ ನೆರವು ಪಡೆದಿದ್ದರಿಂದಾಗಿ ಲಿಬಿಯನ್ ಹೋರಾಟಗಾರರಿಗೆ ಈಜಿಪ್ತ್ ಮತ್ತು ಟ್ಯುನೀಸಿಯಾದ ಜನರಷ್ಟು ಮುಕ್ತ ಅವಕಾಶ, ಲಾಭ ಸಿಗುವುದಿಲ್ಲ. ಏಕೆಂದರೆ ಬೆಂಬಲಕ್ಕೆ ಪ್ರತಿಯಾಗಿ ಇರಾಕ್‌ನ ತೈಲದ ಮೇಲೆ ಪಾಶ್ಚಾತ್ಯ ದೇಶಗಳು ನಿಯಂತ್ರಣ ಸಾಧಿಸಿವೆ. ಲಿಬಿಯಾದಲ್ಲೂ ಹಾಗೇ ಆಗುತ್ತದೆ.
`ಅಮೆರಿಕ ನೇತೃತ್ವದ ನ್ಯಾಟೊ ಬೆಂಬಲ ಲಿಬಿಯಾಗೆ ಪುಕ್ಕಟ್ಟೆಯೇನಲ್ಲ. ಅದಕ್ಕಾಗಿ ಬೆಲೆ ತೆರಬೇಕಾಗುತ್ತದೆ~ ಎಂದು ಲೆಬನಾನ್‌ನ ಅಲ್ ಸಫೀರ್ ಪತ್ರಿಕೆಯಲ್ಲಿ ಅಂಕಣಕಾರ ಸತೆ ನೌರೊದ್ದೇನ್ ಬರೆಯುತ್ತಾರೆ.
ಅವರ ಪ್ರಕಾರ, ಅರಬ್ ದೇಶಗಳಲ್ಲಿ ಸಂದಿಗ್ಧ ಇದೆ. ಹೀಗಾಗಿಯೇ ಇಸ್ರೇಲ್‌ನ ಕಡು ದ್ವೇಷಿ ಹಿಜಬುಲ್ಲಾ ಉಗ್ರರನ್ನು ಸಿರಿಯಾದ ಬಂಡಾಯಗಾರರು ದೂರ ಇಟ್ಟಿದ್ದಾರೆ. ಬಹುಸಂಖ್ಯಾತ ಷಿಯಾಗಳನ್ನು ಸಿರಿಯಾ ಕ್ರೂರವಾಗಿ ದಮನ ಮಾಡಿದೆ ಎಂದು ಕೋಪಿಸಿಂಡು ಬಹರೇನ್ ಅಲ್ಲಿಂದ ತನ್ನ ರಾಯಭಾರಿಯನ್ನು ವಾಪಸ್ ಕರೆಸಿಕೊಂಡಿದೆ. ಗಡಾಫಿ ತನ್ನ ಬೆಂಬಲಿಗರನ್ನು `ಕ್ರಾಂತಿಕಾರಿ ಯುವಕರು~ ಎಂದು ಹೊಗಳುತ್ತಾರೆ.
`ಮುನ್ನುಗ್ಗಿ, ಮುನ್ನುಗ್ಗಿ~ ಎಂದು ಎಂದಿನ ಅಚ್ಚುಮೆಚ್ಚಿನ ಭಾಷೆಯಲ್ಲಿ ಹುರಿದುಂಬಿಸುವ ಗಡಾಫಿ ಮಾತು, ಕೊನೆಯಿಲ್ಲದ ಹೋರಾಟದ ಸಂಕೇತ ನೀಡುತ್ತದೆ.
ಆ್ಯಂಟನಿ ಶದಿದ್ ಮತ್ತು ನಡಾ ಬಕ್ರಿ
ದಿ ನ್ಯೂಯಾರ್ಕ್ ಟೈಮ್ಸ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.