ಸಂಪೂರ್ಣ ಗೋಳದಲಿ ನೆನೆದೆಡೆಯೆ ಕೇಂದ್ರವಲ|
ಕಂಪಿಸುವ ಕೇಂದ್ರ ನೀ ಬ್ರಹ್ಮ ಕಂದುಕದಿ||
ಶಂಪಾತರಂಗವದರೊಳು ತುಂಬಿ ಪರಿಯುತಿರೆ|
ದಂಭೋಳಿ ನೀನಾಗು -ಮಂಕುತಿಮ್ಮ||
ಎನ್ನುತ್ತಾರೆ ಡಿವಿಜಿ. ಗೋಳವೊಂದರ ಪ್ರತಿಯೊಂದು ಬಿಂದುವೂ ಕೇಂದ್ರವೇ. ಹಾಗೆಯೇ ಬ್ರಹ್ಮ ಸೃಷ್ಟಿಯ ಪ್ರತಿಯೊಂದು ಜೀವಿಯೂ ಶಕ್ತಿ ಕೇಂದ್ರಗಳು. ನಮ್ಮಲ್ಲಿ ಆತ್ಮವಿಶ್ವಾಸವೆಂಬ ವಿದ್ಯುತ್ ಪ್ರವಾಹ ತುಂಬಿ ಹರಿಯುತ್ತಿರುತ್ತದೆ. ಅದನ್ನು ಗುರುತಿಸಿ, ಬಳಸಿಕೊಂಡರೆ ಪ್ರತಿಯೊಬ್ಬನೂ ದಂಭೋಳಿ ಅಂದರೆ ಇಂದ್ರನ ವಜ್ರಾಯುಧದಷ್ಟು ಶಕ್ತಿಶಾಲಿಯಾಗಬಲ್ಲ ಎಂಬುದು ಈ ಕಗ್ಗದ ಸಾಲುಗಳ ಅರ್ಥ.
ನಮ್ಮಲ್ಲಿರುವ ಈ ಅಪಾರ ಶಕ್ತಿಯ ಅರಿವು ಮೂಡಿದ್ದೇ ಆದರೆ ಎಂತಹ ಕಠಿಣ ಪರಿಸ್ಥಿತಿಯನ್ನು ಎದುರಿಸುವ ಮನೋಸ್ಥೈರ್ಯ ನಮ್ಮಲ್ಲಿ ಮೂಡುತ್ತದೆ. ತರಳುಬಾಳು ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಯವರು ತಮ್ಮ ದಿನಚರಿಯ ಬರಹಗಳ ಸಂಗ್ರಹವಾದ ಆತ್ಮನಿವೇದನೆಯಲ್ಲಿ ಹೀಗೆನ್ನುತ್ತಾರೆ, ಉನ್ನತಿ ಎಂದರೆ ಧನಕನಕಗಳಿಂದ ಪರಿಪೂರ್ಣನಾಗುವುದಲ್ಲ, ಉನ್ನತಿ ಎಂದರೆ ಜಗತ್ತಿನಲ್ಲಿರುವ ಸಮಸ್ತ ವಿದ್ಯೆಗಳನ್ನೂ ಸಂಪಾದಿಸುವುದಲ್ಲ, ಉನ್ನತಿ ಎಂದರೆ ಜನರು ಮೋಹಿಸುವಂತೆ ರುಚಿರುಚಿಕರವಾದ ಭಾಷಣಗಳನ್ನು ಮಾಡುವುದಲ, ಉನ್ನತಿ ಎಂದರೆ ಮನಸ್ಸಿನ ಸ್ಥೈರ್ಯ. ಆತ್ಮವಿಶ್ವಾಸವೆಂದರೆ ಮನೋಸ್ಥೈರ್ಯವೆಂಬ ಮನದಾಳದ ಘನ.
ಇದು ಜೀವನದ ಪ್ರತಿ ಹಂತದಲ್ಲೂ ನಮ್ಮೊಂದಿಗಿರಬೇಕಾದ ಸಕಾರಾತ್ಮಕ ಚಿಂತನೆ. ಬಾಲ್ಯದಿಂದಲೇ ಇದನ್ನು ಬೆಳೆಸಿಕೊಂಡಾಗ ಅದು ವ್ಯಕ್ತಿಯನ್ನು ಯಶಸ್ಸಿನತ್ತ ಒಯ್ಯುತ್ತದೆ. ವಿದ್ಯಾರ್ಥಿ ದೆಸೆಯಲ್ಲಿ ಕಲಿಕೆಯನ್ನು ಆಸಕ್ತಿಯಿಂದ ಮಾಡಿದಾಗ ಆತ್ಮವಿಶ್ವಾಸ ಮೂಡುತ್ತದೆ. ಜ್ಞಾನವಿದ್ದಲ್ಲಿ ಆತ್ಮವಿಶ್ವಾಸವಿರುತ್ತದೆ.
ಅದೇ ಅಜ್ಞಾನಿಯಲ್ಲಿ ಅಹಂಕಾರವಿರುತ್ತದೆ. ಆತ್ಮವಿಶ್ವಾಸ ವ್ಯಕ್ತಿಯಲ್ಲಿ ಕಲಿಕೆಯ ಹಂಬಲವನ್ನು ಹೆಚ್ಚಿಸುತ್ತದೆ. ತನ್ನಲ್ಲಿ ತಾನು ನಂಬಿಕೆ ಹೊಂದಿದಾತ ಬೇರೆಯವರನ್ನೂ ನಂಬುತ್ತಾನೆ, ಹೀಗಾಗಿ ಪರಿಣಾಮಕಾರೀ ನಾಯಕತ್ವದ ಮೂಲ ಅಗತ್ಯ, ದೃಢ ಅತ್ಮವಿಶ್ವಾಸ. ದೈಹಿಕ ದೌರ್ಬಲ್ಯಗಳನ್ನೂ ಮೀರಲು ಪ್ರೇರೇಪಿಸುತ್ತದೆ. ತನ್ನಲ್ಲಿ ಏನಿಲ್ಲ ಎಂದು ಕೊರಗುವುದರ ಬದಲು ಏನಿದೆಯೋ ಅದರಲ್ಲಿ ಸಾಧಿಸಬೇಕೆಂಬ ಛಲವನ್ನು ಮೂಡುತ್ತದೆ.
ಹುಟ್ಟಿನಿಂದಲೇ ’ಟೆಟ್ರಾಅಮೇಲಿಯಾ’ ಎಂಬ ಕಾಯಿಲೆಗೆ ತುತ್ತಾಗಿ ಎರಡೂ ಕೈ ಹಾಗೂ ಎರಡೂ ಕಾಲುಗಳನ್ನು ಕಳೆದುಕೊಂಡು ಹುಟ್ಟಿದ ’ನಿಕ್‌ವ್ಯುಜಿಸಿಕ್’ ಇಂದು ಪ್ರಪಂಚವನ್ನೇ ಹುರಿದುಂಬಿಸುವ ಭಾಷಣಕಾರನಾಗಿದ್ದು ಅವನ ಅದಮ್ಯ ಆತ್ಮವಿಶ್ವಾಸದಿಂದ. ಕಾಲಿನ ಜಾಗದಲ್ಲಿರುವ ಹೆಬ್ಬೆರಳ ಗಾತ್ರದ ರಚನೆಗೆ ಪೆನ್ ಜೋಡಿಸಿ ಬರೆಯಲು ಕಲಿತ ಈತ ಎರಡೆರಡು ಸ್ನಾತಕೋತ್ತರ ಪದವಿ ಪಡೆದಿದ್ದಾನೆ. ಎಲ್ಲರಂತೆ ಬದುಕನ್ನು ಆನಂದದಿಂದ ಅನುಭವಿಸುತ್ತಾನೆ. ಹಾಗೆಯೇ ದುರಂತದಲ್ಲಿ ಒಂದು ಕಾಲನ್ನೇ ಕಳೆದುಕೊಂಡ ’ಅರುಣಿಮಾ ಸಿನ್ಹಾ’ ಎವರೆಸ್ಟ್ ಏರಿದ ಮೊದಲ ಅಂಗವಿಕಲ ಮಹಿಳೆ ಎಂಬ ಖ್ಯಾತಿಗೆ ಕಾರಣವಾಗಿದ್ದು ಆಕೆಯ ಆತ್ಮವಿಶ್ವಾಸ.
ನಿರಾಶ್ರಿತ ಬಾಲಕನಾಗಿ ಪಾಕಿಸ್ತಾನದಿಂದ ಭಾರತಕ್ಕೆ ಓಡಿ ಬಂದು, ತೀವ್ರ ಸಂಕಷ್ಟಗಳನ್ನು ಎದುರಿಸಿ, ಸೇನೆಯಲ್ಲಿ ಜವಾನನಾಗಿ ಸೇರಿ, ಒಂದು ಲೋಟ ಹಾಲು ಹೆಚ್ಚು ಸಿಗುತ್ತದೆ ಎಂಬುದಕ್ಕಾಗಿ ಓಟದ ಸ್ಪರ್ಧೆಯಲ್ಲಿ ಗೆದ್ದು, ತನ್ನ ಒಳಗಿನ ಸಾಮರ್ಥ್ಯ ಗುರುತಿಸಿಕೊಂಡ ’ಮಿಲ್ಖಾಸಿಂಗ್’, ಹಾರುವ ಸಿಖ್ ಆಗಿದ್ದು ಆತನ ಅದಮ್ಯ ಆತ್ಮವಿಸ್ವಾಸದಿಂದ. ಏಷ್ಯಾಡ್ , ಕಾಮನ್‌ವೆಲ್ತ್ ಸ್ಪರ್ಧೆಗಳಲ್ಲಿ ಪದಕ ಗೆದ್ದು, ವಿಶ್ವ ದಾಖಲೆ ಸ್ಥಾಪಿಸಿದ ಮಿಲ್ಖಾಸಿಂಗ್‌ಗೆ ಈ ಬಗೆಯ ಆತ್ಮವಿಶ್ವಾಸ ಪ್ರಾಪ್ತಿಯಾಗಿದ್ದು ಆತನ ಕಠಿಣ ಪರಿಶ್ರಮ, ದೃಢ ಇಚ್ಛಾಶಕ್ತಿ ಹಾಗೂ ಸಮರ್ಪಣಾ ಮನೋಭಾವದಿಂದ. ದಟ್ಟ ದಾರಿದ್ರ್ಯ, ಹುಟ್ಟು ಅಂಗವೈಕಲ್ಯವನ್ನೂ ಮೀರಿ ನಿಂತು ಪ್ಯಾರಾಒಲಂಪಿಕ್ಸ್‌ನಲ್ಲಿ ಪದಕ ಗೆದ್ದ ’ಗಿರೀಶ್’ ಗೆ ಆ ಸಾಧನೆ ಸಾಧ್ಯವಾಗಿದ್ದು ಬತ್ತದ ಆತ್ಮವಿಸ್ವಾಸದಿಂದ.
ಆತ್ಮವಿಶ್ವಾಸದಿಂದಿರುವುದು ಹೇಗೆ?
ಕಠಿಣ ಪರಿಶ್ರಮ:- ಯಾವುದೇ ಕ್ಷೇತ್ರದಲ್ಲಿ ಪರಿಪೂರ್ಣರಾಗಲು ನಿರಂತರ ಅಭ್ಯಾಸ ಅಗತ್ಯ. ಅವಿರತ ಅಭ್ಯಾಸದಿಂದಲೇ ಸಚಿನ್ ತೆಂಡೂಲ್ಕರ್ ವಿಶ್ವದ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾದರು. ಚದುರಂಗ ಪಟು ವಿಶ್ವನಾಥನ್ ಆನಂದ್ ಅವರನ್ನು ಮರೆಯುವುದುಂಟೆ?.
ಆಸಕ್ತಿ-: ನೀವು ಮಾಡುವ ಕೆಲಸದಲ್ಲಿ ನಿಮಗೆ ಆಸಕ್ತಿ ಇದ್ದಾಗ ಅದನ್ನು ಸರಿಯಾಗಿ ಮಾಡಲು ಸಾಧ್ಯ. ಅದು ನಿಮ್ಮಲ್ಲಿ ವಿಶ್ವಾಸವನ್ನು ಮೂಡಿಸುತ್ತದೆ.
ಏಕಾಗ್ರತೆ:- ಆಸಕ್ತಿಯಿಂದ ಅಭ್ಯಾಸ ಮಾಡಿದಾಗ ಏಕಾಗ್ರತೆ ಮೂಡುತ್ತದೆ. ಏಕಾಗ್ರತೆಯಿಂದ ಮಾಡುವ ಯಾವುದೇ ಕೆಲಸ ಯಶಸ್ವಿಯಾಗುತ್ತದೆ. ಇದು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.
ಜ್ಞಾನಾರ್ಜನ: -ಆತ್ಮವಿಶ್ವಾಸ ಜ್ಞಾನಜನ್ಯವಾದುದು. ಕಲಿಯುವುದಿನ್ನೂ ಸಾಗರದಂತಿದೆ ಕಲಿತವರಾರಿಲ್ಲಿ ಎಂಬುದು ಮೂಲಮಂತ್ರವಾಗಿರಲಿ. ಕಲಿಕೆಗೆ ವಯಸ್ಸಿನ ಮಿತಿ ಇಲ್ಲ. ಕಲಿಕೆ ಎಂದರೆ ಕೇವಲ ಪುಸ್ತಕದ ಅರಿವಲ್ಲ. ‘ಮಸ್ತಕದಿ ದೊರೆತರಿವು ತರುತಳೆದ ಪುಷ್ಪ’ ಎಂಬ ಡಿ. ವಿ. ಜಿ. ಯವರ ನುಡಿಯಂತೆ ಅನುಭವ ಪ್ರಾಪ್ತಿ ಆತ್ಮವಿಶ್ವಾಸ ವರ್ಧಕ.
ಭಯ: -ಸೋಲಿನ ಭಯಕ್ಕೆ ತುತ್ತಾದರೆ, ಆತ್ಮವಿಶ್ವಾಸ ಕುಂಠಿತವಾಗುತ್ತದೆ, ಸೋಲಿಗೆ ಅಂಜದೆ, ಮಾಡುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿ, ಆಗ ಆತ್ಮವಿಶ್ವಾಸ ತಾನೇ ತಾನಾಗಿ ಹೆಚ್ಚುತ್ತದೆ.
ಪ್ರಾಮಾಣಿಕತೆ:- ನೀವು ಮಾಡುವ ಕೆಲಸವನ್ನು ಪ್ರಾಮಾಣಿಕತನದಿಂದ ಮಾಡಿ. ಅದು ಆತ್ಮತೃಪ್ತಿ ಕೊಡುತ್ತದೆ. ಈ ಆತ್ಮತೃಪ್ತಿ ಆತ್ಮವಿಶ್ವಾಸವನ್ನು ಮೂಡಿಸುತ್ತದೆ. ಮಾಡುವ ಎಲ್ಲಾ ಕೆಲಸಗಳೂ ಶ್ರೇಷ್ಠವಾದವು, ‘ಕಾಯಕವೇ ಕೈಲಾಸ’ ಎಂದು ನಂಬಿ.
ಬಲ್ಲವರನ್ನು ಕೇಳಿ-: ಸೂಕ್ತಸಲಹೆಗಳಿಗೆ ಕಿವಿಗೊಡಿ. ಪರಿಸ್ಥಿತಿಯನ್ನು ನಿಭಾಯಿಸುವ ವಿಶ್ವಾಸ ಮೂಡುತ್ತದೆ. ಸಮಸ್ಯೆಗಳನ್ನು ಸವಾಲೆಂದು ಪರಿಗಣಿಸಿ -ಪ್ರತೀ ಪ್ರಶ್ನೆಗೂ ಉತ್ತರವಿರುವಂತೆ ಪ್ರತೀ ಸಮಸ್ಯೆಗೂ ಪರಿಹಾರ ಇರುತ್ತದೆ. ಸಮಸ್ಯೆ ಎಂದರೆ ಆಲೋಚನೆಯ ಕೊರತೆಯಷ್ಟೇ. ಸಮಸ್ಯೆಗೆ ಪರಿಹಾರವಾಗಬಲ್ಲ ಆಲೋಚನೆಗಳನ್ನು ಕ್ರೋಢೀಕರಿಸಿ, ಆತ್ಮವಿಶ್ವಾಸ ಮೂಡುತ್ತದೆ. ಸಾಧಕರ ಜೀವನಚರಿತ್ರೆಗಳನ್ನು ಓದುವುದರಿಂದಲೂ ಪರಿಸ್ಥಿತಿ ನಿಭಾಯಿಸುವ ಆತ್ಮವಿಶ್ವಾಸ ಮೂಡುತ್ತದೆ. ಜೀವನದಲ್ಲಿ ಮುಂದೆ ಸಾಗಲು ಸ್ಫೂರ್ತಿ ದೊರೆಯುತ್ತದೆ.
ಕೆಡುಕಿಗೆ ಕಿವುಡರಾಗಿ: -ಯಾವುದೇ ಕೆಲಸಕ್ಕೆ ಕೈ ಹಾಕಿದಾಗ ಬೆನ್ನು ತಟ್ಟುವವರಿಗಿಂತ ಕಾಲೆಳೆಯುವವರೇ ಜಾಸ್ತಿ. ಇಂಥವರ ನಕಾರಾತ್ಮಮಕ ನುಡಿಗಳಿಗೆ ಕಿವಿಗೊಡಬೇಡಿ. ಇವು ನಿಮ್ಮ ಆತ್ಮವಿಶ್ವಾಸವನ್ನು ಕುಂದಿಸುತ್ತವೆ.
ಇವನ್ನು ಅಳವಡಿಸಿಕೊಂಡರೆ ನಮ್ಮಾಳದಲ್ಲಿರುವ ಆತ್ಮವಿಶ್ವಾಸವೆಂಬ ದಿವ್ಯ ಚಿಂತಾಮಣಿ ನಮಗೆ ಗೋಚರಿಸುತ್ತದೆ. ಎಂತಹ ಅಸಾಧ್ಯವನ್ನೂ ಸಾಧ್ಯವಾಗಿಸುವ ವ್ಯಕ್ತಿ ವಿಕಸನದ ಈ ಮೂಲಮಂತ್ರವನ್ನು ಬದುಕಿನಲ್ಲಿದ್ದರೆ ಯಶಸ್ಸು ಕಟ್ಟಿಟ್ಟ ಬುತ್ತಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.