ADVERTISEMENT

ಭರವಸೆಯ ನಾಯಕ

ಹೊನಕೆರೆ ನಂಜುಂಡೇಗೌಡ
Published 3 ಮಾರ್ಚ್ 2012, 19:30 IST
Last Updated 3 ಮಾರ್ಚ್ 2012, 19:30 IST
ಭರವಸೆಯ ನಾಯಕ
ಭರವಸೆಯ ನಾಯಕ   

ವ್ಯಕ್ತಿ

ಅಖಿಲೇಶ್ ಯಾದವ್ ಅವರನ್ನು ನೋಡಿದ ಹಳಬರು ಥೇಟ್ ಅಪ್ಪನಂತೆ ಮಗ ಎಂದು ಉದ್ಗರಿಸುತ್ತಾರೆ. ಮೂವತ್ತು ವರ್ಷಗಳ ಹಿಂದೆ ಮುಲಾಯಂ ಹೇಗಿದ್ದರೋ ಹಾಗೆಯೇ ಅಖಿಲೇಶ್ ಇದ್ದಾರೆ ಎನ್ನುತ್ತಾರೆ ಅವರು. ಅದೇ ಅಗಲ ಮುಖ, ಚೂಪು ಮೂಗು, ಕಿರಿದಾದ ಕಣ್ಣುಗಳು. ಅಪ್ಪನ ದೈಹಿಕ ರೂಪ ಪಡೆದ ಮಗ ಈಗ ರಾಜಕೀಯ ಜೀವನದಲ್ಲಿಯೂ ಅಪ್ಪನನ್ನೇ ಅನುಸರಿಸಲು ಹೊರಟಿದ್ದಾರೆ.

1987ರ ಸೆಪ್ಟೆಂಬರ್ 13ರಂದು ಮುಲಾಯಂಸಿಂಗ್ ಯಾದವ್ ರಾಜ್ಯದಲ್ಲಿ ಕ್ರಾಂತಿರಥ ಏರಿ ಪ್ರವಾಸ ಹೊರಟಿದ್ದರು. ಆ ಯಾತ್ರೆ 1989ರಲ್ಲಿ ಅವರನ್ನು ಕೊಂಡೊಯ್ದು ಮುಖ್ಯಮಂತ್ರಿಯವರ ಸಿಂಹಾಸನದಲ್ಲಿ ಕೂರಿಸಿತ್ತು. ಸರಿಯಾಗಿ ಹದಿನೈದು ವರ್ಷಗಳ ನಂತರ ಮಗ ಅಖಿಲೇಶ್ 2011ರ ಸೆಪ್ಟೆಂಬರ್ 13ರಂದು ಕ್ರಾಂತಿರಥ ಏರಿ ಯಾತ್ರೆ ಪ್ರಾರಂಭಿಸಿದ್ದರು. ಕೊನೆಯ ಸುತ್ತಿನ ಮತದಾನದ ಮೊದಲು ಪ್ರಚಾರ ಮುಗಿದಾಗ ಅವರು ಸುಮಾರು 9,500 ಕಿ.ಮೀ. ಕ್ರಮಿಸಿ 300 ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡಿದ್ದಾರೆ. ತಂದೆಯಂತೆ ಮಗನನ್ನೂ ಕ್ರಾಂತಿರಥ ಯಾತ್ರೆ ಮುಖ್ಯಮಂತ್ರಿ ಪಟ್ಟದಲ್ಲಿ ಕೊಂಡೊಯ್ದು ಕೂರಿಸಲಿದೆಯೇ? ಇದಕ್ಕಾಗಿ ಕೆಲವು ದಿನಗಳು ಕಾಯಬೇಕು.

ಅಖಿಲೇಶ್ ಯಾದವ್! ಉತ್ತರ ಪ್ರದೇಶ ರಾಜಕಾರಣದಲ್ಲಿ ಸಂಚಲನ ಉಂಟುಮಾಡಿರುವ ಹೆಸರು. `ಅಪ್ಪ ಹಾಕಿದ ಆಲದಮರ~ ಎಂಬಂತೆ ಹಳೆ ವಿಚಾರ ಮತ್ತು  ಸಿದ್ಧಾಂತಗಳಿಗೆ ಜೋತುಬಿದ್ದು ಜಡವಾಗಿದ್ದ `ಸಮಾಜವಾದಿ ಪಕ್ಷ~ಕ್ಕೆ ಹೊಸ ಚಿಂತನೆ- ಆಲೋಚನೆಗಳ ಮೂಲಕ ನವ ಚೈತನ್ಯ ನೀಡಿದ್ದಾರೆ. ಹೊಸ ಪೀಳಿಗೆ ಯುವಕರಲ್ಲಿ ಕನಸುಗಳನ್ನು ಬಿತ್ತಿದ್ದಾರೆ. ಭರವಸೆಯ ಆಶಾಕಿರಣವಾಗಿದ್ದಾರೆ.ಲೋಕಸಭೆ ಸದಸ್ಯರಾಗಿದ್ದರೂ ಎಲೆಮರೆ ಕಾಯಿ. ಹಮ್ಮು- ಬಿಮ್ಮುಗಳಿಲ್ಲದ ಸರಳ ವ್ಯಕ್ತಿ. ನೇರ ನಡೆ- ನುಡಿ.

ಲೋಕಸಭೆಯಲ್ಲಿ `ನೇತಾಜಿ~ (ಮುಲಾಯಂಸಿಂಗ್) ಅವರ ಹಿಂದಿನ ಸೀಟಿನಲ್ಲಿ ಕೂರುವ ಸಮಾಜವಾದಿ ಪಕ್ಷದ `ರಾಜಕುಮಾರ~ ಅವಕಾಶ ಸಿಕ್ಕಾಗ ಒಂದೆರಡು ಸಲ ಮಾತಾಡಿದ್ದಾರೆ. ಸದನದ ಗಮನ ಸೆಳೆದಿದ್ದಾರೆ. ಟಿಪ್ಪಣಿಯ ನೆರವಿಲ್ಲದೆ

ಸ್ವಯಂಸ್ಫೂರ್ತಿಯಿಂದ ಆಲೋಚನಾ ಲಹರಿ ಹರಿಸಿದ್ದಾರೆ. ಕಾಂಗ್ರೆಸ್ `ರಾಜಕುಮಾರ~ ರಾಹುಲ್, ಗಾಂಧಿ ಕುಟುಂಬದ ಮತ್ತೊಬ್ಬ ಯುವ ನೇತಾರ ಬಿಜೆಪಿಯ ವರುಣ್ ಮತ್ತಿತರ ಸಮಕಾಲೀನರ ಜತೆ ಅಖಿಲೇಶ್ ಅವರನ್ನು ಹೋಲಿಕೆ ಮಾಡಿ, ಇವರಲ್ಲಿ ಯಾರು ಹೆಚ್ಚು ಸಮರ್ಥರೆಂಬ ಚರ್ಚೆಗಳು ಸಂಸತ್ತಿನ ಮೊಗಸಾಲೆಯಲ್ಲಿ ಎಷ್ಟೋ ಸಲ ನಡೆದಿವೆ. ಈಗ ರಾಹುಲ್ ಮತ್ತು ಅಖಿಲೇಶ್ ಅವರನ್ನು ತೂಗಿ ನೋಡುವ ಕೆಲಸವನ್ನು ಉತ್ತರ ಪ್ರದೇಶದ ಮತದಾರ ಮಾಡುತ್ತಿದ್ದಾನೆ.

ಉತ್ತರಪ್ರದೇಶದ ಯುವ ಮತದಾರರನ್ನು ಸೆಳೆಯಲು ರಾಹುಲ್ ಅವರನ್ನು ಕಾಂಗ್ರೆಸ್ ಬಳಸಿಕೊಂಡಿದೆ. ಇದೇ ಕೆಲಸವನ್ನು ಸಮಾಜವಾದಿ ಪಕ್ಷಕ್ಕೆ ಅಖಿಲೇಶ್ ಸಮರ್ಥವಾಗಿ ಮಾಡಿದ್ದಾರೆ. ಮಾಯಾವತಿ, ಮುಲಾಯಂ ಮತ್ತು ಅಖಿಲೇಶ್ ಅವರನ್ನು ರಾಹುಲ್ ಗಾಂಧಿ ಟೀಕಿಸಿದ್ದಾರೆ. ಅಖಿಲೇಶ್ ಅಷ್ಟೇ ಪರಿಣಾಮಕಾರಿಯಾಗಿ ರಾಹುಲ್ ಅವರನ್ನು ಲೇವಡಿ ಮಾಡಿ ನಕ್ಕಿದ್ದಾರೆ. ರಾಹುಲ್ ಅವರಂತೆ ಅಖಿಲೇಶ್ ವಿದೇಶದಲ್ಲಿ ಓದಿದವರು. ಉನ್ನತ ಶಿಕ್ಷಣ ಪಡೆಯಲು ವಿದೇಶಕ್ಕೆ ಹೋಗುವ ಮೊದಲು ಮೈಸೂರಿನ ಶ್ರೀ ಜಯಚಾಮರಾಜೇಂದ್ರ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಪಡೆದವರು. ಅಪ್ಪನ `ಉತ್ತರಾಧಿಕಾರಿ~ ಆಗುವ ನಿಟ್ಟಿನಲ್ಲಿ ಹೆಜ್ಜೆ ಹಾಕಿರುವ  ಯುವ ನೇತಾರ ಮಣ್ಣಿನ ಸೊಗಡನ್ನು ಉಳಿಸಿಕೊಂಡು ಜನರ ಹೃದಯಕ್ಕೆ ಲಗ್ಗೆ ಹಾಕಿದ್ದಾರೆ. 

ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಹುಟ್ಟು ಪಡೆಯುತ್ತಿದ್ದಾಗ (1991-94) ಅಖಿಲೇಶ್ ಮೈಸೂರಿನಲ್ಲಿ ವಿದ್ಯಾರ್ಥಿ. ಗೆಳೆಯರ ಜತೆ ಎಂದೂ ನಾನು ಮುಲಾಯಂಸಿಂಗ್ ಅವರ ಪುತ್ರ ಎಂದು ಹೇಳಿಕೊಂಡವರಲ್ಲ. ಗೆಳೆಯರಿಗೂ ಇವರು ಮುಲಾಯಂ ಮಗ ಎಂಬುದು ಗೊತ್ತಿರಲಿಲ್ಲ. ತಮ್ಮ ಆಸಕ್ತಿಯನ್ನು ಓದಿಗಷ್ಟೇ ಸೀಮಿತಗೊಳಿಸಿಕೊಂಡಿದ್ದರು. ವಿದ್ಯಾರ್ಥಿ ಸಂಘದ ಚಟುವಟಿಕೆಗಳಲ್ಲೂ ಭಾಗವಹಿಸಿದವರಲ್ಲ. ಮಗ ಓದುತ್ತಿದ್ದಾಗ ಒಮ್ಮೆ ಮುಲಾಯಂ ಸಿಂಗ್ ಮೈಸೂರಿಗೆ ಭೇಟಿ ಕೊಟ್ಟಿದ್ದರು. ಅದೂ ಭಾನುವಾರ.

ವಿಶ್ವವಿದ್ಯಾಲಯದ ಕ್ಯಾಂಪಸ್ ಸುತ್ತಾಡಿ ಹಾಗೇ ಹೋಗಿದ್ದಾರೆ. ಓದಿನ ಬಳಿಕ ಅಖಿಲೇಶ್ ಮೈಸೂರಿಗೆ ಬಂದಿಲ್ಲ. ರಾಜಕೀಯ ಚಟುವಟಿಕೆಗಳಲ್ಲಿ ಬ್ಯುಸಿಯಾಗಿದ್ದಾರೆ. ಈಗ ಸಮಾಜವಾದಿ ಪಕ್ಷದ ಅಧ್ಯಕ್ಷರಾಗಿರುವ ಅಖಿಲೇಶ್, ಕನೌಜ್ ಲೋಕಸಭಾ ಕ್ಷೇತ್ರದ ಸದಸ್ಯರೂ ಹೌದು. 12 ವರ್ಷಗಳ ಹಿಂದೆ ನಡೆದ ಉಪ ಚುನಾವಣೆಯಲ್ಲಿ ಮೊದಲ ಬಾರಿಗೆ ಆಯ್ಕೆಯಾದವರು. ಅನಂತರ ಸತತವಾಗಿ ಆಯ್ಕೆಯಾಗುತ್ತಿದ್ದಾರೆ. ಇದು ಅವರ ಮೂರನೆ ಇನ್ನಿಂಗ್ಸ್.

ಅಖಿಲೇಶ್, ಫಿರೋಜಾಬಾದ್ ಲೋಕಸಭಾ ಕ್ಷೇತ್ರದಿಂದಲೂ ಲೋಕಸಭೆಗೆ ಆಯ್ಕೆಯಾಗಿದ್ದರು. ಕನೌಜ್ ಉಳಿಸಿಕೊಂಡು ಫಿರೋಜಾಬಾದ್ ಖಾಲಿ ಮಾಡಿದರು. ಈ ಕ್ಷೇತ್ರದಿಂದ ಪತ್ನಿ ಡಿಂಪಲ್ ಅವರನ್ನು ಕಣಕ್ಕಿಳಿಸಿದರು. ಆದರೆ, ಮತದಾರ ಪ್ರತಿಸ್ಪರ್ಧಿ ರಾಜ್‌ಬಬ್ಬರ್ ಕೈ ಹಿಡಿದು ಕಾಂಗ್ರೆಸ್ ಪರ ವಾಲಿದ್ದು ಇದೀಗ ಇತಿಹಾಸ. ಎರಡು ವರ್ಷಗಳಲ್ಲಿ ಉತ್ತರ ಪ್ರದೇಶದ ರಾಜಕಾರಣದಲ್ಲಿ ಸಾಕಷ್ಟು ಬದಲಾವಣೆ ಗಾಳಿ ಬೀಸಿದೆ.
ಅಖಿಲೇಶ್ ಜನರ ಅಚ್ಚುಮೆಚ್ಚಿನ ನಾಯಕರಾಗಿ ರೂಪುಗೊಳ್ಳುತ್ತಿದ್ದಾರೆ. ಸಮಾಜವಾದಿ ಪಕ್ಷಕ್ಕೆ ಅಂಟಿರುವ ಕಳಂಕ ತೊಳೆಯುವ ಕೆಲಸ ಕೈಗೊಳ್ಳುವ ಮೂಲಕ ಜನರ ನಿರೀಕ್ಷೆಗಳಿಗೆ ಸ್ಪಂದಿಸುತ್ತಿದ್ದಾರೆ. `ಗೂಂಡಾಗಳ ಪಕ್ಷ~ ಎಂಬ ಹಣೆಪಟ್ಟಿ ಕಳಚಲು ಶ್ರಮಿಸಿದ್ದಾರೆ. ಉತ್ತಮ ಹಿನ್ನೆಲೆ ಹೊಂದಿದ ಅಭ್ಯರ್ಥಿಗಳನ್ನು ಆರಿಸಿದ್ದಾರೆ.
 
ವೃತ್ತಿಪರರಿಗೆ ಮಣೆ ಹಾಕಿದ್ದಾರೆ. ಡಿ.ಪಿ. ಯಾದವ್ ಅವರಂಥ ಕ್ರಿಮಿನಲ್ ಹಿನ್ನೆಲೆ ಜನರನ್ನು ನಿರ್ಲಕ್ಷಿಸಿದ್ದಾರೆ. ಅಷ್ಟೇ ಅಲ್ಲ, ಬಣ್ಣದ ಜಗತ್ತಿನ ಸಿನಿಮಾ ತಾರೆಯರನ್ನು ದೂರವಿಡುವ ಪ್ರಯತ್ನ ಮಾಡಿದ್ದಾರೆ. ಮುಲಾಯಂ ತಮ್ಮ ಗೆಳೆಯ ಅಮರ್‌ಸಿಂಗ್ ಮೂಲಕ ಬಣ್ಣದ ಜಗತ್ತಿನ ನಂಟು ಬೆಳೆಸಿಕೊಂಡಿದ್ದರು. ಪುತ್ರ ಅಖಿಲೇಶ್‌ಗೆ ಈ ತೆವಲು ಇದ್ದಂತಿಲ್ಲ.
ಸಮಾಜವಾದಿ ಪಕ್ಷ ಕೇವಲ ಯಾದವರು, ಮುಸ್ಲಿಮರು ಅಥವಾ ಹಿಂದುಳಿದವರನ್ನೇ ಅವಲಂಬಿಸಿಲ್ಲ. ಎಲ್ಲ ಸಮಾಜ- ಸಮುದಾಯದ ಬೆಂಬಲವೂ ಇರಬೇಕೆಂಬ ವಿಶಾಲ ಮನೋಭಾವನೆ ಪ್ರದರ್ಶಿಸಿದೆ. ಇದು ಸಮಾಜವಾದಿ ಪಕ್ಷದ ವಿಶ್ವಾಸಾರ್ಹತೆ ಹೆಚ್ಚಿಸಿದೆ.ಅಭ್ಯರ್ಥಿಗಳ ಆಯ್ಕೆಗೆ  ಅವರು ಅನುಸರಿಸಿದ ವಿಧಾನವೇ ಕುತೂಹಲ ಹುಟ್ಟಿಸುವಂತಹದ್ದು. ಆಸಕ್ತರಿಂದ ಅರ್ಜಿ ಕರೆದು, ಸಂದರ್ಶನದ ಬಳಿಕ ಯೋಗ್ಯರನ್ನು ಆಯ್ಕೆ ಮಾಡಿದ್ದಾರೆ.

ಭಾಷೆ- ಶಿಕ್ಷಣದ ವಿಷಯದಲ್ಲೂ ಅಪ್ಪ-ಮಗನ ನಡುವೆ ಎಷ್ಟೊಂದು ಅಂತರ. ಅಪ್ಪ ಇಂಗ್ಲಿಷ್ ಮತ್ತು ಕಂಪ್ಯೂಟರ್ ವಿರೋಧಿ. ಮಗನಿಗೆ ಇವೆರಡೂ ಬೇಕು. ಸಮಾಜವಾದಿ ಪಕ್ಷ ಇಂಗ್ಲಿಷ್ ವಿರೋಧಿಯಲ್ಲ. ಹಿಂದಿ- ಉರ್ದು ಜತೆ ಇಂಗ್ಲಿಷ್‌ಗೂ ಸ್ಥಾನ ಸಿಗಬೇಕೆಂಬ ಸಂದೇಶವನ್ನು ಅಖಿಲೇಶ್ ರವಾನಿಸಿದ್ದಾರೆ. ಎಸ್‌ಪಿ ಅಧಿಕಾರಕ್ಕೆ ಬಂದರೆ ಶಾಲೆಗಳಲ್ಲಿ ಇಂಗ್ಲಿಷ್ ಕಲಿಸುವ, ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್-ಟ್ಯಾಬ್ಲೆಟ್ ಕೊಡುವ ಭರವಸೆ ನೀಡಿದ್ದಾರೆ. ಸಮಕಾಲೀನ ಜಗತ್ತಿನ ಪೈಪೋಟಿಗಳಿಗೆ ವಿದ್ಯಾರ್ಥಿಗಳನ್ನು ಅಣಿಗೊಳಿಸಬೇಕಾದ ಅನಿವಾರ್ಯತೆ ತಂದೆಗಿಂತ ಮಗನಿಗೆ ಚೆನ್ನಾಗಿ ಗೊತ್ತಿದೆ.

ಅಖಿಲೇಶ್ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಬಹುಮತ ಪಡೆದು ಅಧಿಕಾರಕ್ಕೆ ಬರಲಿದೆ ಎಂಬ ಆತ್ಮವಿಶ್ವಾಸ ಇಟ್ಟುಕೊಂಡಿದ್ದಾರೆ. ಉತ್ತರ ಪ್ರದೇಶ ಚುನಾವಣಾ ಫಲಿತಾಂಶ ಪ್ರಕಟಣೆಗೆ ಕೇವಲ ಮೂರು ದಿನ ಬಾಕಿ ಉಳಿದಿದೆ. ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಯಾರು? ಎಂಬ ಚರ್ಚೆ ಆರಂಭವಾಗಿದೆ. ಮುಲಾಯಂಸಿಂಗ್ ಮತ್ತು ಅಖಿಲೇಶ್ ಹೆಸರುಗಳು ಚಲಾವಣೆಯಲ್ಲಿವೆ.

ಮಗನಿಗೆ ರಾಜ್ಯಾಭಾರ ವಹಿಸಲು ಮುಲಾಯಂ ತುದಿಗಾಲಲ್ಲಿ ನಿಂತಿದ್ದಾರೆ. `ನೇತಾಜಿ~ಯೇ ಮುಖ್ಯಮಂತ್ರಿ ಎಂದು ಅಖಿಲೇಶ್ ಹೇಳಿದ್ದಾರೆ. ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್‌ಸಿಂಗ್ ಬಾದಲ್ ನಿಧಾನವಾಗಿ ಪುತ್ರ ಸುಖ್‌ಬೀರ್ ಸಿಂಗ್‌ಗೆ ಕುರ್ಚಿ ಬಿಡಲು ತಯಾರಿ ನಡೆಸಿರುವಂತೆ ಮುಲಾಯಂ ಕೂಡಾ ಮಗನಿಗೆ ವೇದಿಕೆ ಸಿದ್ಧಪಡಿಸುತ್ತಿದ್ದಾರೆ.
ಅಖಿಲೇಶ್‌ಗೆ ಪಟ್ಟ ಕಟ್ಟುವುದಕ್ಕೆ ಮುಲಾಯಂ ಸೋದರ ಶಿವಪಾಲ್‌ಸಿಂಗ್, ಹಿರಿಯ ಮುಖಂಡ ಅಜಂಖಾನ್ ಸೇರಿದಂತೆ ಹಲವರು ವಿರೋಧ ಮಾಡುತ್ತಿದ್ದಾರೆ.

ಲೋಕಸಭಾ ಸದಸ್ಯರಾಗಿರುವ ಅಖಿಲೇಶ್ ರಾಷ್ಟ್ರ ರಾಜಕಾರಣ ಮಾಡಲಿದ್ದಾರೆ ಎಂದು ಶಿವಪಾಲ್ ಹೇಳಿದ್ದಾರೆ. ಮುಖ್ಯಮಂತ್ರಿ ಏನಿದ್ದರೂ ನೇತಾಜಿಯೇ. ಈ ವಿಷಯದಲ್ಲಿ ರಾಜಿ ಇಲ್ಲ ಎಂದು ಅಖಿಲೇಶ್ ಸ್ಪಷ್ಟಪಡಿಸಿದ್ದಾರೆ. ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದು ಅಖಿಲೇಶ್‌ಗೆ ಮುಖ್ಯಮಂತ್ರಿ ಗದ್ದುಗೆ ಬಿಟ್ಟುಕೊಟ್ಟರೆ ಮುಲಾಯಂ ಕುಟುಂಬದ ಒಳಗೆ ಮತ್ತು ಹೊರಗೆ ವಿರೋಧ ಕಟ್ಟಿಕೊಳ್ಳುವುದು ನಿಶ್ಚಿತ. ಒಟ್ಟಿನಲ್ಲಿ ಅಖಿಲೇಶ್ ಸಮಾಜವಾದಿ ಪಕ್ಷದ ಭರವಸೆಯ ನಾಯಕ ಎಂಬುದರಲ್ಲಿ ಎರಡು ಮಾತಿಲ್ಲ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.