ಮ್ಯಾನ್ಮಾರ್ (ಹಿಂದಿನ ಬರ್ಮಾ)ನಲ್ಲಿ ಕಳೆದ ಭಾನುವಾರ ಸಂಸತ್ತಿಗೆ ನಡೆದ ಉಪಚುನಾವಣೆಗಳಲ್ಲಿ ಆಂಗ್ ಸಾನ್ ಸೂಕಿ ವಿಜಯದ ಬಗ್ಗೆ ಯಾರಿಗೂ ಅನುಮಾನವಿರಲಿಲ್ಲ. ಆದರೆ ಇಷ್ಟೊಂದು ಅಂತರದ ಭಾರಿ ವಿಜಯವನ್ನು ನಿರೀಕ್ಷಿಸಿರಲಿಲ್ಲ. ಅವರ ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ (ಎನ್‌ಎಲ್‌ಡಿ) ಪಕ್ಷ, ಸ್ಪರ್ಧಿಸಿದ್ದ 44 ಸ್ಥಾನಗಳಲ್ಲಿ 43 ಸ್ಥಾನಗಳನ್ನು ಗೆದ್ದುಕೊಂಡು ದಿಗ್ವಿಜಯ ಸಾಧಿಸಿದೆ. ಸಂಸತ್ತಿನಲ್ಲಿ ಪ್ರತಿಪಕ್ಷದ ನಾಯಕಿಯಾಗಿ ಈಗ ಸೂಕಿ ಹೊಂದಿಕೊಳ್ಳಬೇಕಿದೆ. ಹೊಸದಾಗಿ ಆಯ್ಕೆಯಾದ ಈ ಎನ್‌ಎಲ್‌ಡಿ ಎಂಪಿಗಳನ್ನು ಸಂಸತ್ತಿನಲ್ಲಿ ಪ್ರಾಬಲ್ಯ ಸಾಧಿಸಿರುವ ಮಿಲಿಟರಿ ಜನರದ್ದೇ ಪಕ್ಷ ಎನಿಸಿದ ಯುಎಸ್‌ಡಿಪಿ ಹೇಗೆ ನೋಡಿಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಸಂಸತ್ತಿನ ಒಳಗೆ ಬದಲಾವಣೆಯ ಹರಿಕಾರರಾಗಿ ಸೂಕಿ ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗುತ್ತಾರೆಂಬುದು ಈಗಿನ ಸವಾಲು.
66 ವರ್ಷದ ಸ್ವಾತಂತ್ರ್ಯದ ಸಂಕೇತವೆನಿಸಿದ ಈ ದಿಟ್ಟ ಮಹಿಳೆಗೆ ಇಂತಹ ಸವಾಲುಗಳು ಹೊಸದೇನಲ್ಲ. ಆಂಗ್ ಸಾನ್ ಸೂಕಿ ಜನಿಸಿದ್ದು 1945ರಲ್ಲಿ ರಂಗೂನ್‌ನಲ್ಲಿ (ಈಗಿನ ಯಾಂಗೋನ್). ತಂದೆ ಆಂಗ್ ಸಾನ್ ಬ್ರಿಟಿಷ್ ಸಾಮ್ರಾಜ್ಯದಿಂದ ಬರ್ಮಾದ ವಿಮೋಚನೆಗಾಗಿ ಹೋರಾಡಿದವರು. ಬರ್ಮಾಗೆ ಸ್ವಾತಂತ್ರ್ಯ ಸಿಕ್ಕ ವರ್ಷವೇ ವಿರೋಧಿಗಳು ಆಂಗ್ ಸಾನ್ ಅವರನ್ನು ಹತ್ಯೆ ಮಾಡಿದರು. ಆಗ ಸೂಕಿಗೆ ಎರಡು ವರ್ಷ.
ತಾಯಿ ಹಾಗೂ ಇಬ್ಬರು ಸೋದರರ ಕುಟುಂಬ. ಒಬ್ಬ ಸೋದರ ಎಂಟು ವರ್ಷದವನಿದ್ದಾಗಲೇ ಮನೆ ಮುಂದಿನ ಕೊಳದಲ್ಲಿ ಮುಳುಗಿ ಸತ್ತ. ಮತ್ತೊಬ್ಬ ಸೋದರ ಅಮೆರಿಕದ ಪ್ರಜೆಯಾಗಿದ್ದಾರೆ.
ರಾಷ್ಟ್ರೀಯ ನಾಯಕನ ಪುತ್ರಿ ಎಂಬ ಹೆಗ್ಗಳಿಕೆ ಜೊತೆಗೆ ಸ್ವಂತ ಸಾಮರ್ಥ್ಯದಿಂದ ರಾಜಕೀಯ ರಂಗದಲ್ಲಿ ಛಾಪು ಮೂಡಿಸಿದ ಸುಶಿಕ್ಷಿತೆ ಹಾಗೂ ಬುದ್ಧಿವಂತೆ ಆಂಗ್ ಸಾನ್ ಸೂಕಿ (ಸ್ನೇಹಿತರು, ಕುಟುಂಬದವರಿಗೆ ಅವರು `ಸೂ~). ಅವರ ಆರಂಭದ ಶಾಲಾ ಶಿಕ್ಷಣ ಬರ್ಮಾದ್ಲ್ಲಲೇ. ತಾಯಿ ಭಾರತದ ರಾಯಭಾರಿ ಹುದ್ದೆಗೆ ನೇಮಕಗೊಂಡ ಕಾರಣ ಹೈಸ್ಕೂಲ್ ಶಿಕ್ಷಣವನ್ನು ನವದೆಹಲಿಯಲ್ಲಿ ಪೂರೈಸಿದರು. ನಂತರ ದೆಹಲಿಯ ಲೇಡಿ ಶ್ರೀರಾಮ್ ಕಾಲೇಜಿನಿಂದ 1964ರಲ್ಲಿ ಪದವಿ ಪಡೆದರು.
ಭಾರತದಲ್ಲಿ ಸೂಕಿ ಅವರಿಗೆ `ಫ್ರೆಂಡ್ಸ್ ಆಫ್ ಬರ್ಮಾ~ ಸಂಘಟನೆಯ ಸಂಸ್ಥಾಪಕಿ ಮಾಲವಿಕಾ ಕಾರ್ಲೇಕರ್ ಸಹಪಾಠಿಯಾಗಿದ್ದರು. ಕಾರ್ಲೇಕರ್ ಪ್ರಕಾರ, `ಸೂಕಿ ಅತ್ಯಂತ ಶಿಸ್ತುಬದ್ಧ ವ್ಯಕ್ತಿ. ಕುಳಿತುಕೊಳ್ಳುವಾಗ ಅವರ ಭಂಗಿಯಲ್ಲೂ ಇದು ವ್ಯಕ್ತವಾಗುತ್ತಿತ್ತು. ಇನ್ನು ಅವರ ನಡೆನುಡಿ, ಮಾತುಗಾರಿಕೆ ಬಗ್ಗೆ ಹೇಳುವುದೇ ಬೇಡ. ಶೈಕ್ಷಣಿಕವಾಗಿಯೂ ಅವರು ತೀಕ್ಷ್ಣಮತಿಯವರಾಗಿದ್ದರು~ ಎನ್ನುತ್ತಾರೆ. `ಭಾರತದಲ್ದ್ದ್‌ದಾಗ ಸಂಕೋಚದ ಹುಡುಗಿಯಾಗಿದ್ದ ಸೂಕಿ ಆತ್ಮವಿಶ್ವಾಸದ ನಾಯಕಿಯಾಗಿ ಬೆಳೆದ ಪರಿ ಅನನ್ಯ. ಎಲೆಮರೆ ಕಾಯಿಯಂತಿದ್ದ ಶಾಲಾ ಬಾಲಕಿ ಬಲವಾದ ಸಿದ್ಧಾಂತಗಳುಳ್ಳ ವ್ಯಕ್ತಿಯಾಗಿ ಬೆಳೆದ ಬಗೆ ಅದು~ ಎಂದು ಮಾಲವಿಕಾ ಸಂದರ್ಶನವೊಂದರಲ್ಲಿ ವಿವರಿಸಿದ್ದಾರೆ.
ಆಕ್ಸ್‌ಫರ್ಡ್‌ನ ಸೇಂಟ್ ಹ್ಯೂಗ್ ಕಾಲೇಜಿನ್ಲ್ಲಲೂ ಮತ್ತೆ ಶಿಕ್ಷಣ ಮುಂದುವರಿಸಿ 1967ರಲ್ಲಿ ಪದವಿ ಗಳಿಸಿದರು ಸೂಕಿ. ಅಲ್ಲಿ ಅವರು ಓದಿದ್ದು ರಾಜ್ಯಶಾಸ್ತ್ರ, ತತ್ವಶಾಸ್ತ್ರ ಹಾಗೂ ಅರ್ಥಶಾಸ್ತ್ರ. ನಂತರ ಜಪಾನಿ ಭಾಷೆಯನ್ನೂ ಕಲಿತರು.1985-86ರಲ್ಲಿ ಕ್ಯೊಟೊ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು. 1987ರಲ್ಲಿ ಶಿಮ್ಲಾದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ನಲ್ಲಿ ಫೆಲೊ ಆಗಿದ್ದರು. 1969ರಲ್ಲಿ ನ್ಯೂಯಾರ್ಕ್‌ಗೆ ತೆರಳಿ ವಿಶ್ವಸಂಸ್ಥೆಯಲ್ಲಿ ನೌಕರಿ ಮಾಡಿದರು.
1972ರಲ್ಲಿ ಬ್ರಿಟಿಷ್ ಪ್ರಜೆ ಹಾಗೂ ಟಿಬೆಟ್ ಸಂಸ್ಕೃತಿಯ ವಿದ್ವಾಂಸ ಮೈಕೇಲ್ ಆರಿಸ್ ಅವರನ್ನು ವಿವಾಹವಾದರು ಸೂಕಿ. ಭೂತಾನ್‌ನಲ್ಲಿ ಈ ನವದಂಪತಿ ವಾಸ್ತವ್ಯ ಹೂಡಿದ್ದಾಗ, ಆರಿಸ್ ಅವರು ಅಲ್ಲಿನ ರಾಜ ಕುಟುಂಬಕ್ಕೆ ಖಾಸಗಿ ಶಿಕ್ಷಕರಾಗಿದ್ದರು. ಜೊತೆಗೆ ಸರ್ಕಾರದ ಅನುವಾದಕರಾಗ್ದ್ದಿದ್ದರು. ಸೂಕಿ ಭೂತಾನ್‌ನಲ್ಲಿ ವಿಶ್ವಸಂಸ್ಥೆ ವ್ಯವಹಾರಗಳ ಸಂಶೋಧನಾ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಎರಡು ವರ್ಷಗಳ ನಂತರ ಇಂಗ್ಲೆಂಡ್‌ಗೆ ಸ್ಥಳಾಂತರಗೊಂಡರು. ಆಕೆಯ ಪತಿಗೆ ಆಕ್ಸ್‌ಫರ್ಡ್‌ನಲ್ಲಿ ಟಿಬೆಟ್ ಹಾಗೂ ಹಿಮಾಲಯ ಅಧ್ಯಯನಕ್ಕೆ ಸಂಬಂಧಿಸಿದ ಹುದ್ದೆ ದೊರಕಿತ್ತು.
ಸಾವಿನ ಹಾಸಿಗೆಯಲ್ಲಿದ್ದ ತಾಯಿಯ ಆರೈಕೆಗೆಂದು ಸೂಕಿ ಬರ್ಮಾಗೆ ಹಿಂದಿರುಗಿದ್ದು 1988ರಲ್ಲಿ. ಆ ಮುಂಚಿನ ಸುಮಾರು 20 ವರ್ಷಗಳು ಎರಡು ಮಕ್ಕಳ ತಮ್ಮ ಕುಟುಂಬದ ಪೋಷಣೆಯ್ಲ್ಲಲೇ ಸೂಕಿ ನಿರತರಾಗಿದ್ದರು. ಆದರೂ 1970 ಹಾಗೂ 1980ರ ದಶಕದಲ್ಲಿ ತಮ್ಮ ವಯಸ್ಸಾದ ತಾಯಿಯನ್ನು ನೋಡಲು ಪದೇಪದೇ ಬರ್ಮಾಗೆ ಭೇಟಿ ನೀಡುತ್ತಿದ್ದುದೂ ಉಂಟು.ಆಗೆಲ್ಲಾ ಅವರು ದೇಶದ ಸ್ಥಿತಿಯನ್ನು ಕಣ್ಣಾರೆ ಕಾಣುವಂತಾಗಿತ್ತು.
ಆರ್ಥಿಕತೆಯ ಕುಸಿತ, ಜನರ ಕಷ್ಟ ಹಾಗೂ ಮಿಲಿಟರಿಯ ಭ್ರಷ್ಟ ಸರ್ವಾಧಿಕಾರಿ ಆಡಳಿತ ಇವೆಲ್ಲಾ ಅವರ ಅನುಭವಕ್ಕೆ ಬರುತ್ತಿತ್ತು. ತಮ್ಮ ವಿದ್ಯಾಭ್ಯಾಸ, ಬರವಣಿಗೆ, ವಿಶ್ವಸಂಸ್ಥೆಯಲ್ಲಿನ ಕೆಲಸದ ಅನುಭವಗಳ ಹಿನ್ನೆಲೆಯಲ್ಲಿ ಬರ್ಮಾದಲ್ಲಿ ಮಿಲಿಟರಿಯ ಪಾತ್ರದ ವಿರುದ್ಧ ಟೀಕೆ ಮಾಡಲು ಸೂಕಿ ಸನ್ನದ್ಧರಾದರು.
1988ರಲ್ಲಿ ಬರ್ಮಾಗೆ ವಾಪಸಾಗುವ ಸಂದರ್ಭದ್ಲ್ಲಲ್ಲಿ ಅವರು ಲಂಡನ್ ಸ್ಕೂಲ್ ಆಫ್ ಓರಿಯೆಂಟಲ್ ಅಂಡ್ ಆಫ್ರಿಕನ್ ಸ್ಟಡೀಸ್‌ನಲ್ಲಿ ಹೆಸರು ನೊಂದಾಯಿಸಿ ಉನ್ನತ ಪದವಿಗಾಗಿ ಅಧ್ಯಯನ ಮಾಡುತ್ತಿದ್ದರು. ಈ ಅವಧಿಯಲ್ಲಿ ಅವರು ಪಾಂಡಿತ್ಯಪೂರ್ಣ ಕೃತಿಗಳನ್ನೂ ಪ್ರಕಟಿಸಿದರು. ಅವು ಆಧುನಿಕ ಬರ್ಮಾ ಇತಿಹಾಸ ಕುರಿತಾದ ಆಳವಾದ ಆಸಕ್ತಿ ಮತ್ತು ಜ್ಞಾನವನ್ನು ಪ್ರದರ್ಶಿಸುತ್ತವೆ.
ವಸಾಹತುಶಾಹಿ ಆಡಳಿತಕ್ಕೆ ಭಾರತೀಯ ಹಾಗೂ ಬರ್ಮಿಗಳ ಪ್ರತಿಕ್ರಿಯೆಗಳ ಕುರಿತಾಗಿ ಅವರು ಬರೆದ ತೌಲನಿಕ ವಿವೇಚನೆಯ ಪ್ರೌಢ ಪ್ರಬಂಧ ಬಹಳ ಮುಖ್ಯವಾದುದು. 1982ರಲ್ಲಿ ಅವರು ತಮ್ಮ ತಂದೆ ಕುರಿತಂತೆ ಬರೆದ ದೀರ್ಘ ಪ್ರಬಂಧ ನಂತರ ಪುಸ್ತಕವಾಗಿ ಪ್ರಕಟವಾಯಿತು.
`ನನ್ನ ಬಾಲ್ಯದಿಂದಲೂ ಸ್ವಾತಂತ್ರ್ಯ ಚಳವಳಿಯ ಇತಿಹಾಸ ಹಾಗೂ ಬರ್ಮಾದ ಸಾಮಾಜಿಕ ಮತ್ತು ರಾಜಕೀಯ ಅಭಿವೃದ್ಧಿಯ ಬಗ್ಗೆ ನನಗೆ ಆಳವಾದ ಆಸಕ್ತಿ ಇದೆ. ನನ್ನ ತಂದೆ ನನಗೆ ಕೇವಲ ಎರಡು ವರ್ಷವಾಗಿದ್ದಾಗ ತೀರಿಕೊಂಡರು. ನಾನು ದೊಡ್ಡವಳಾಗುತ್ತಾ ಅವರ ಕುರಿತಾದ ವಿಷಯ ಸಂಗ್ರಹಿಸುತ್ತಾ ಹೋದಂತೆ ತಮ್ಮ 32 ವರ್ಷಗಳ ಜೀವಿತಾವಧಿಯಲ್ಲಿ ನನ್ನ ತಂದೆ ಎಷ್ಟೊಂದನ್ನು ಸಾಧಿಸಿದ್ದರು ಎಂಬುದನ್ನು ಅರಿತುಕೊಳ್ಳತೊಡಗಿದೆ. ದೇಶಭಕ್ತ ಹಾಗೂ ಮುತ್ಸದ್ಧಿಯಾಗಿದ್ದ ಅವರ ಕುರಿತಂತೆ ಮೆಚ್ಚುಗೆ ಬೆಳೆಸಿಕೊಂಡೆ. ಈ ಒಂದು ಗಟ್ಟಿ ಅನುಬಂಧದಿಂದಾಗಿ ನನ್ನ ದೇಶದ ಕ್ಷೇಮಾಭಿವೃದ್ಧಿಗೆ ಸಂಬಂಧಿಸಿದಂತೆ ನನ್ನಲ್ಲೂ ಆಳವಾದ ಹೊಣೆಗಾರಿಕೆ ಇದೆ~ ಎಂದು ಸೂಕಿ ಹೇಳಿಕೊಂಡಿದ್ದಾರೆ.
1988ರಲ್ಲಿ ಅವರು ಬರ್ಮಾಗೆ ವಾಪಸಾದಾಗ, 26 ವರ್ಷಗಳ ರಾಜಕೀಯ ದಮನ ಹಾಗೂ ಆರ್ಥಿಕ ಕುಸಿತದ ವಿರುದ್ಧ ಸ್ವಯಂಪ್ರೇರಿತ ಬಂಡಾಯದ ಅಲೆ ಅಲ್ಲಿ ಎ್ದ್ದದದ್ದು ಕಾಕತಾಳೀಯವಾಗಿತ್ತು. ತಕ್ಷಣವೇ ಆಂಗ್ ಸಾನ್ ಸೂಕಿ ಪರಿಣಾಮಕಾರಿ ಜನನಾಯಕಿಯಾಗಿ ರೂಪುಗೊಂಡರು. ಮಿಲಿಟರಿ ಆಡಳಿತವನ್ನು ವಿರೋಧಿಸಲು ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ (ಎನ್‌ಎಲ್‌ಡಿ) ಪಕ್ಷವನ್ನು ಹುಟ್ಟುಹಾಕಿದರು, 1988ರ ಆಗಸ್ಟ್ 26ರಂದು ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ಸೂಕಿ ಕುರಿತು ಪ್ರಖ್ಯಾತ ನಟ ಹಾಗೂ ನಂತರ ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿಯ ಸದಸ್ಯರಾದ ಆಂಗ್ ಲ್ವಿನ್ ಹೇಳಿರುವುದು ಹೀಗೆ: `ನಮಗೆಲ್ಲಾ ಅಚ್ಚರಿಯಾಗಿತ್ತು. ಆಕೆ ತನ್ನ ತಂದೆಯಂತೆ ಕಾಣಿಸುತ್ತಿದ್ದುದಷ್ಟೇ ಅಲ್ಲ, ಅವರಂತೇ ಮಾತನಾಡುತ್ತಿದ್ದಳು. ಸಂಕ್ಷಿಪ್ತವಾಗಿ, ಚುಟುಕಾಗಿ ಹಾಗೂ ಸ್ಪಷ್ಟವಾಗಿ...~
1989ರಲ್ಲಿ ಸೂಕಿ ಯನ್ನು ಮಿಲಿಟರಿ ಆಡಳಿತ ಗೃಹಬಂಧನದಲ್ಲಿರಿಸಿತು. 1990ರ ಚುನಾವಣೆಯಲ್ಲಿ ಸೂಕಿಯ ಪಕ್ಷ ಭಾರಿ ವಿಜಯ ಸಾಧಿಸಿತು. ಆದರೆ ಚುನಾವಣೆಯ ಗೆಲುವನ್ನು ಅನೂರ್ಜಿತಗೊಳಿಸಿದ ಮಿಲಿಟರಿ ಆಡಳಿತ ಅವರ ಗೃಹ ಬಂಧನ ಮುಂದುವರಿಸಿತು.
ಗೃಹ ಬಂಧನ ಶುರುವಾದ ನಂತರ ಪತಿ ಆರಿಸ್‌ಗೆ ಪತ್ನಿಯನ್ನು ಭೇಟಿಯಾಗಲು ಅವಕಾಶ ಸಿಕ್ಕಿದ್ದು ಐದು ಬಾರಿ ಮಾತ್ರ. 1995ರ ಕ್ರಿಸ್‌ಮಸ್ ಭೇಟಿ ಪತಿ-ಪತ್ನಿಯ ಕಡೆಯ ಭೇಟಿಯಾಯಿತು. 1997ರಲ್ಲಿ ಆರಿಸ್‌ಗೆ ಪ್ರೊಸ್ಟೇಟ್ ಕ್ಯಾನ್ಸರ್ ಇರುವುದು ಪತ್ತೆಯಾಯಿತು.
ಬರ್ಮಾಗೆ ಬರಲು ಆರಿಸ್‌ಗೆ ವೀಸಾ ನಿರಾಕರಿಸಲಾಯಿತು. ಬದಲಿಗೆ ಸೂಕಿಗೇ ಲಂಡನ್‌ಗೆ ತೆರಳಲು ಸೂಚಿಸಲಾಯಿತು. ಆದರೆ ಹಾಗೆ ಹೋದಲ್ಲಿ ಮತ್ತೆ ದೇಶಕ್ಕೆ ಮರಳುವುದಕ್ಕೆ ಮಿಲಿಟರಿ ಆಡಳಿತ ಅವಕಾಶ ಕೊಡದಿರಬಹುದೆಂಬ ಭೀತಿಯಿಂದ ಸೂಕಿ ಪತಿಯ ಬಳಿ ತೆರಳಲಿಲ್ಲ. 1999ರಲ್ಲಿ ಆರಿಸ್ ತೀರಿಕೊಂಡರು. ಬ್ರಿಟನ್‌ನಲ್ಲಿರುವ ಮಕ್ಕಳನ್ನು ನೋಡುವ ಅವಕಾಶವೂ ಅವರಿಗೆ ಸಿಕ್ಕಿರಲಿಲ್ಲ. ಈಗ 2011ರಿಂದ ಮಕ್ಕಳು ಅಮ್ಮನನ್ನು ಬರ್ಮಾದಲ್ಲಿ ಭೇಟಿಯಾಗಿದ್ದಾರೆ.
1989 ಹಾಗೂ 2003ರಲ್ಲಿ ಅವರ ಹತ್ಯೆಗೆ ಪ್ರಯತ್ನಗಳು ನಡೆದರೂ ಈ ಕೃಶಾಂಗಿ ಧೃತಿಗೆಡಲಿಲ್ಲ. 1991ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿಗೆ ಭಾಜನರಾದ ಸೂಕಿ ಅವರ ಮೇಲೆ ಗಾಂಧೀಜಿಯ ಅಹಿಂಸಾತತ್ವ ಹಾಗೂ ಬೌದ್ಧತತ್ವಗಳ ಪ್ರಭಾವ ಅಪಾರ. ಅಧಿಕಾರದ `ವಿಷ~ ಕುರಿತಂತೆ ಸೂಕಿ ಅವರ ಈ ಮಾತುಗಳು ಸಾರ್ವಕಾಲಿಕವಾದುದು.
`ಅಧಿಕಾರವಲ್ಲ, ಭೀತಿ ಎಂಬುದು ನಿಮ್ಮನ್ನು ಭ್ರಷ್ಟರನ್ನಾಗಿಸುತ್ತದೆ. ಅಧಿಕಾರವನ್ನು ಕಳೆದುಕೊಳ್ಳುವ ಭೀತಿ ಅಧಿಕಾರದಲ್ಲಿ ಇರುವವರನ್ನು ಭ್ರಷ್ಟರನ್ನಾಗಿಸುತ್ತದೆ. ದಂಡನೆಯ ಭೀತಿ, ಅಧಿಕಾರಕ್ಕೊಳಪಟ್ಟವರನ್ನೂ ಭ್ರಷ್ಟರನ್ನಾಗಿಸುತ್ತದೆ~.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.