ADVERTISEMENT

ಸಣ್ಣ ರೈತರ ನೆರವಿಗೆ ವಿದ್ಯಾರ್ಥಿಗಳು

ಹೊಸ ಹೆಜ್ಜೆ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2017, 19:30 IST
Last Updated 20 ಮಾರ್ಚ್ 2017, 19:30 IST
ಯಂತ್ರಗಳನ್ನು ರೂಪಿಸಿರುವ ತಂಡ
ಯಂತ್ರಗಳನ್ನು ರೂಪಿಸಿರುವ ತಂಡ   

ಐ.ಟಿ.ಐಗಳಲ್ಲಿ ಸಾಮಾನ್ಯವಾಗಿ ಪಠ್ಯ ಆಧರಿತ ತರಬೇತಿಗಳು ನಡೆಯುತ್ತವೆ. ಆದರೆ ಇದಕ್ಕಿಂತ ಭಿನ್ನವಾಗಿ ವಿದ್ಯಾರ್ಥಿಗಳಲ್ಲಿ ತರಬೇತಿಗೆ ಪೂರಕವಾದ ಕಾರ್ಯಚಟುವಟಿಕೆಗಳನ್ನು ಮಾಡಬೇಕೆನ್ನುವ ಉದ್ದೇಶದಿಂದ ಧಾರವಾಡದ ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಐ.ಟಿ.ಐ ಕಾಲೇಜಿನ ವಿದ್ಯಾರ್ಥಿಗಳು ಕೃಷಿಕರಿಗೆ ಅನುಕೂಲವಾಗುವ ಹಲವಾರು ಯಂತ್ರಗಳನ್ನು ರೂಪಿಸಿದ್ದಾರೆ.

‌ಜನತಾ ಶಿಕ್ಷಣ ಸಮಿತಿಯ ಕಾರ್ಯದರ್ಶಿಗಳಾದ ಡಾ. ನ. ವಜ್ರಕುಮಾರ ಹಾಗೂ ವಿತ್ತಾಧಿಕಾರಿಗಳಾದ ಡಾ. ಅಜಿತ ಪ್ರಸಾದರವರ ಸಲಹೆ ಮೇರೆಗೆ ಅತಿ ಕಡಿಮೆ ದರದಲ್ಲಿ ಇದನ್ನು ರೂಪಿಸಲಾಗಿದೆ. ವಿದ್ಯಾರ್ಥಿಗಳಿಗೆ  ಉಪನ್ಯಾಸಕರಾದ ಮಹೇಶ ಕುಂದರಪಿಮಠ, ಸಿದ್ಧಲಿಂಗಯ್ಯಾ ಹಿರೇಮಠ, ಮಹೇಶ ಬಡಿಗೇರ, ಶೋಭಾ ಕಮ್ಮಾರ,  ವಿನಾಯಕ ಗವಳಿ, ಮಂಜುನಾಥ ಹಾವೇರಿ, ಅಶೋಕ ಜಿಗಳೂರ ಮಾರ್ಗದರ್ಶನ ನೀಡಿದ್ದಾರೆ. ಇವುಗಳಲ್ಲಿ ಹಲವು ಉಪಕರಣಗಳು ವಿದ್ಯುತ್ ಹಾಗೂ ಇಂಧನವಿಲ್ಲದೇ ಕಾರ್ಯ ನಿರ್ವಹಿಸಬಲ್ಲವು. ಉಪಕರಣಗಳ ಪರಿಚಯ ಇಲ್ಲಿದೆ.

ಸೈಕಲ್ ಪೆಡಲಿಂಗ್‌: ಈ ಯಂತ್ರ ಕೇವಲ ಮಾನವ ಶಕ್ತಿಯ ಮುಖಾಂತರ 25 ಅಡಿ ನೀರನ್ನು ಮೇಲೆತ್ತುವ ಕೆಲಸ ಮಾಡುತ್ತದೆ. ದೇಹಕ್ಕೆ ವ್ಯಾಯಾಮ ಹಾಗೂ ಹೊಲ ಮನೆಗಳಿಗೆ ನೀರು ಎರಡನ್ನೂ ಇದರಿಂದ ಪಡೆಯಬಹುದು. ಸೈಕಲ್ ಪೆಡಲ್ ಮಾಡಿದಾಗ ಸೆಂಟ್ರಿಪ್ಯೂಗಲ್ ಪಂಪ್‌ನಿಂದ ನೀರನ್ನು ಮೇಲೆತ್ತುವ ಕೆಲಸವಾಗುತ್ತದೆ.

ADVERTISEMENT

ಗೋಬರ್ ಗ್ಯಾಸ್: ಸಾಮಾನ್ಯವಾಗಿ ಗೋಬರ್‌ಗ್ಯಾಸ್‌ ಘಟಕ ನಿರ್ಮಾಣಕ್ಕೆ ಭಾರಿ ಹಣ ತೆರಬೇಕು. ಆದರೆ ಇದು ಮನೆಗಳಲ್ಲಿ ಉಪಯೋಗಿಸುವ ಸಿಲಿಂಡರ್ ಗಾತ್ರದ್ದು ಹಾಗೂ ಸರಾಗವಾಗಿ ಕೊಂಡಯ್ಯಬಲ್ಲ ಗ್ಯಾಸ್‌. ಚಿಕ್ಕ ಮನೆಗಳಲ್ಲಿ ವಾಸ ಮಾಡುವವರಿಗೆ ಇದು ವರದಾನ.

(ಬಯೋಗ್ಯಾಸ್)

ಕ್ರಿಮಿನಾಶಕ ಸಿಂಪಡಣೆ ಯಂತ್ರ: ಸಾಮಾನ್ಯವಾಗಿ ರೈತರು ಕ್ರಿಮಿನಾಶಕ ಯಂತ್ರವನ್ನು ಬೆನ್ನಿಗೆ ಕಟ್ಟಿಕೊಂಡು ಸಿಂಪಡಣೆ ಮಾಡುತ್ತಾರೆ. ಇಲ್ಲಿ ಆ ಭಾರವನ್ನು ರೈತ ಹೊರಬೇಕಾಗುತ್ತದೆ. ಐ.ಟಿ.ಐ ವಿದ್ಯಾರ್ಥಿಗಳು ತಯಾರಿಸಿದ ಕ್ರಿಮಿನಾಶಕ ಯಂತ್ರ ನಾಲ್ಕು ಚಕ್ರಗಳನ್ನು ಹೊಂದಿರುವ ಟ್ರಾಲಿಯಲ್ಲಿ ಇರಿಸಲಾಗಿದ್ದು, ಟ್ರಾಲಿಯನ್ನು ಮುಂದಕ್ಕೆ ಚಲಿಸಿದಾಗ ಉಂಟಾಗುವ ಒತ್ತಡದಿಂದ ಕ್ರಿಮಿನಾಶಕ ತಂತಾನೆ ಸಿಂಪಡಣೆಯಾಗುತ್ತದೆ. ಸಿಂಪಡಣೆಯ ಎತ್ತರ ಅಗಲವನ್ನು ನಮಗೆ ಬೇಕಾದ ಹಾಗೆ ಹೊಂದಿಸಿಕೊಳ್ಳಬಹುದು.

(ಕೀಟನಾಶಕ ಯಂತ್ರ)

ಕಳೆ ಕೀಳುವ ಯಂತ್ರ: ಇಂಧನ ಹಾಗೂ ವಿದ್ಯುತ್ ಶಕ್ತಿ ಇಲ್ಲದೇ ಒಬ್ಬನೇ ವ್ಯಕ್ತಿ ಕಳೆ ತೆಗೆಯುವ ಯಂತ್ರ ಇದಾಗಿದೆ. ಸರಾಗವಾಗಿ ಉರುಳುವ ಗಾಲಿಯುಳ್ಳ ತಳಭಾಗಕ್ಕೆ ಕಳೆ ಕತ್ತರಿಸುವ ವಿವಿಧ ಅಳತೆಗಳ ಬ್ಲೇಡ್‌ಗಳನ್ನು ಜೋಡಿಸಿ ಹೊಲದಲ್ಲಿ ಇದನ್ನು ಓಡಿಸಿದಾಗ ಕಸ ಕಡ್ಡಿಗಳನ್ನು ತೆಗೆಯುವುದು.

ಕಾಳು/ ಕಸ ಬೇರ್ಪಡಿಸುವ ಯಂತ್ರ: ಹೊಲದಲ್ಲಿಯ ಕಾಳುಗಳನ್ನು ಸ್ವಚ್ಛ ಮಾಡಲು ದೊಡ್ಡ ದೊಡ್ಡ ಯಂತ್ರಗಳು ಬಂದಿವೆ. ಆದರೆ ಸಣ್ಣ ಪ್ರಮಾಣದ, ಅಂದರೆ ಒಂದು ಅಶ್ವಶಕ್ತಿಯ ವಿದ್ಯುತ್ ಮೋಟಾರು ಹೊಂದಿರುವ ಈ ಯಂತ್ರದಲ್ಲಿ ವಿವಿಧ ಆಕಾರದ ಸಾಣಿಗೆಗಳ ಮುಖಾಂತರ ಕಸಕಡ್ಡಿ ಬೇರ್ಪಡಿಸಬಹುದು.

**

–ಮಹಾವೀರ ಉಪಾದ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.