ADVERTISEMENT

ಸುಡಾನ್‌: ಬದಲಾಗದು ಬೆಲೆ ತೆರುವವರೆಗೂ

ನಿಕೊಲಸ್ ಕ್ರಿಸ್ಟಾಫ್, ನ್ಯೂಯಾರ್ಕ್ ಟೈಮ್ಸ್‌
Published 4 ಜುಲೈ 2015, 19:30 IST
Last Updated 4 ಜುಲೈ 2015, 19:30 IST

ಸುಡಾನ್‌ನ ನ್ಯೂಬಾ ಪರ್ವತ ಪ್ರದೇಶದಲ್ಲಿ ದೇಶದ ವಾಯುಪಡೆ ಆ ಹಳ್ಳಿಯ ಹುಲ್ಲಿನ ಮನೆಗಳ ಮೇಲೆ ಬಾಂಬ್‌ ದಾಳಿ ನಡೆಸಲು ಯತ್ನಿಸುತ್ತಿತ್ತೋ ಅಥವಾ ಅವುಗಳ  ಸಮೀಪದಲ್ಲೇ ಇರುವ ಬಾಲಕಿಯರ ಪ್ರೌಢಶಾಲೆಯನ್ನು ಗುರಿಯಾಗಿ ಇರಿಸಿಕೊಂಡಿತ್ತೋ ಎಂಬುದು ಆಕೆಗೆ ಸ್ಪಷ್ಟವಾಗಿ ತಿಳಿಯಲಿಲ್ಲ.

ಆದರೆ ಅದು ತನ್ನ ಹಳ್ಳಿಯತ್ತ ಧಾವಿಸಿ ಬರುತ್ತಿರುವ ಸುಖೋಯ್ ಯುದ್ಧವಿಮಾನ ಎಂಬುದಷ್ಟೇ 23ರ ಹರೆಯದ ಹಮೀದಾ ಓಸ್ಮಾನ್‌ಗೆ ಗೊತ್ತಾಗಿತ್ತು. ತನ್ನ ಏಕೈಕ ಮಗಳು 2 ವರ್ಷದ ಸಫರಿನಾಳನ್ನು ಬಾಚಿ ತಬ್ಬಿಕೊಂಡ ಆಕೆ ನೆಲದ ಗುಂಡಿಯೊಳಗೆ ಧಾವಿಸಿದಳು. ಸುಡಾನ್ ತನ್ನ ಪ್ರಜೆಗಳ ಮೇಲೆ ಬಾಂಬ್ ದಾಳಿ ನಡೆಸಲು ನಿರ್ಧರಿಸಿದ ಬಳಿಕ ಕುಟುಂಬಗಳು ತಮ್ಮ ಆತ್ಮರಕ್ಷಣೆಗಾಗಿ ಮಾಡಿಕೊಂಡ ರಕ್ಷಣಾ ಬಿಲಗಳು ಅವು.

ಬಿಲದೊಳಗೆ ಹಮೀದಾ ತನ್ನ ಪುತ್ರಿಗೆ ತಾನೇ ಗುರಾಣಿಯಂತೆ ನಿಂತುಬಿಟ್ಟಳು. ಆಗ ಬಾಂಬ್‌ಗಳು ನೆಲದತ್ತ ಧಾವಿಸಿ ಬರುತ್ತಿರುವುದು ಕೇಳಿಸಿತು. ಎರಡು ಭಯಾನಕ ಸ್ಫೋಟಗಳು ಸಂಭವಿಸಿದವು. ಮರುಕ್ಷಣದಲ್ಲೇ ಹಮೀದಾಳ ದೇಹದ ತುಂಬಾ ರಕ್ತದ ಹೊಳೆ. ಕೈ, ಕಾಲು, ತೋಳುಗಳಿಗೆ ಬಾಂಬ್‌ಗಳ ಚೂಪಾದ ತುಣುಕುಗಳು ಚುಚ್ಚಿಕೊಂಡಿದ್ದವು. ಆಕೆ ಕೆಳಗೆ ಬಗ್ಗಿ ನೋಡಿದಾಗ ಅದಕ್ಕಿಂತಲೂ ಭೀಕರವಾದ ಸಂಗತಿ ನಡೆದುಹೋಗಿತ್ತು. ಇಂತಹುದೇ ಬಾಂಬ್‌ನ ತುಂಡೊಂದು ಸಫರಿನಾಳ ತಲೆಯನ್ನೇ ಕಸಿದುಕೊಂಡಿತ್ತು. ಮರುದಿನ ಇನ್ನೊಬ್ಬ ನಾಗರಿಕ ಇದೇ ರೀತಿ ಸಾವು ಕಂಡ.

ಸುಡಾನ್‌ನ ಅಧ್ಯಕ್ಷ ಒಮರ್ ಹಸನ್ ಅಲ್ ಬಶೀರ್ ಮಾನವ ಜನಾಂಗದ ಮೇಲೆ ದಕ್ಷಿಣ ಸುಡಾನ್ ಮತ್ತು ದಾರ್ಫುರ್‌ಗಳಲ್ಲಿ ಇಂತಹ ಅಪರಾಧಗಳನ್ನು ನಡೆಸಿದಾತ. ದೇಶದ ದಕ್ಷಿಣ ತುದಿಯಲ್ಲಿರುವ ನ್ಯೂಬಾ ಪರ್ವತ ಪ್ರದೇಶಗಳಲ್ಲಿ ಇದೀಗ ಅದೇ ಬಗೆಯ ದೌರ್ಜನ್ಯಗಳು ಮರುಕಳಿಸುತ್ತಿವೆ. ಪ್ರಮುಖ ರಾಷ್ಟ್ರಗಳೆಲ್ಲ ಈ ಬೆಳವಣಿಗೆಯ ಬಗ್ಗೆ ವಿಭಿನ್ನವಾಗಿ ಪ್ರತಿಕ್ರಿಯಿಸತೊಡಗಿವೆ.

ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಶೀಘ್ರವೇ ಪೂರ್ವ ಆಫ್ರಿಕಾಕ್ಕೆ ಭೇಟಿ ನೀಡಲಿದ್ದು, ನ್ಯೂಬಾ ಪರ್ವತ ಪ್ರದೇಶದಲ್ಲಿ ಜನ ಎದುರಿಸುತ್ತಿರುವ ಸಂಕಷ್ಟ ಮತ್ತು ದೌರ್ಜನ್ಯಗಳನ್ನು ತಡೆಗಟ್ಟುವ ವಿಚಾರವನ್ನು ಅವರಾದರೂ ಪ್ರಸ್ತಾಪಿಸಬಹುದು ಎಂಬ ಆಶಯವಷ್ಟೇ ಈಗ ಉಳಿದಿದೆ. ಗಾಯಗಳ ನಡುವೆಯೇ ನನ್ನೊಂದಿಗೆ ಬಂದ ಹಮೀದಾ, ಬಾಂಬ್ ದಾಳಿಯಿಂದ ಭಸ್ಮವಾದ ತನ್ನ ಗುಡಿಸಲು ಇದ್ದ ಸ್ಥಳವನ್ನು ನನಗೆ ತೋರಿಸಿದಳು.

‘ಅವರು ಯಾವುದನ್ನು ಧ್ವಂಸಗೊಳಿಸಲು ಪ್ರಯತ್ನಿಸುತ್ತಿದ್ದಾರೋ ನನಗೆ ಗೊತ್ತಿಲ್ಲ. ಆದರೆ ಇಲ್ಲಿನ ಮನೆಗಳ ಮೇಲಂತೂ ಬಾಂಬ್‌ಗಳನ್ನು ಹಾಕುತ್ತಲೇ ಇರುತ್ತಾರೆ’ ಎಂದು ಆಕೆ ಹೇಳಿದಳು. ನ್ಯೂಬಾ ಪರ್ವತ ಪ್ರದೇಶಗಳಲ್ಲಿರುವ ಸಾವಿರಾರು ಸಶಸ್ತ್ರ ಬಂಡುಕೋರರನ್ನು ಬಗ್ಗುಬಡಿಯುವುದಕ್ಕಾಗಿ ಸುಡಾನ್ ಸರ್ಕಾರ ಉದ್ದೇಶಪೂರ್ವಕವಾಗಿಯೇ ನಾಗರಿಕರ ನೆಲೆಗಳು ಮತ್ತು ಬಾಲಕಿಯರ ಶಾಲೆಗಳ ಮೇಲೆ ಬಾಂಬ್ ದಾಳಿ ನಡೆಸುತ್ತಿದೆ. ಜನರನ್ನು ಭಯಗ್ರಸ್ಥರನ್ನಾಗಿಸಿ ಅಲ್ಲಿಂದ ಜಾಗ ಖಾಲಿ ಮಾಡಿಸುವುದೇ ಸರ್ಕಾರದ ಗುರಿ ಇದ್ದಂತಿದೆ.

ಈ ಭಾಗದ ಜನರಿಗೆ ನೆರವು ಸಿಗಬಾರದು ಮತ್ತು ಪ್ರತ್ಯಕ್ಷದರ್ಶಿಗಳು ಇರಬಾರದು ಎಂಬ ಕಾರಣಕ್ಕೆ ಸುಡಾನ್ ಸರ್ಕಾರ ಇಲ್ಲಿಗೆ ಅಂತರರಾಷ್ಟ್ರೀಯ ನೆರವು ತಂಡದ ಕಾರ್ಯಕರ್ತರು, ರಾಜತಾಂತ್ರಿಕರು ಮತ್ತು ಪತ್ರಕರ್ತರ ಭೇಟಿಯನ್ನು ನಿರ್ಬಂಧಿಸಿದೆ. ನಾನು ವೀಸಾ ಇಲ್ಲದೆ ಬಂಡುಕೋರರ ಈ ನೆಲೆಯೊಳಗೆ ನುಸುಳಿ ಬಂದಿದ್ದೆ. ನ್ಯೂಬಾ ಪರ್ವತ ಪ್ರದೇಶಕ್ಕೆ ಈ ಮೊದಲು ಸಹ ಮೂರು ಬಾರಿ ಹೀಗೆಯೇ ಕದ್ದುಮುಚ್ಚಿ ಬಂದಿದ್ದೇನೆ.

ಎಂಡೆಹ್ ಎಂಬ ಹಳ್ಳಿಯಲ್ಲಿ ಶಾಲಾ ಮಕ್ಕಳು ಕೆಲವು ಭೀಕರ ಶಬ್ದಗಳನ್ನು ಅನುಕರಣೆ ಮಾಡಿ ನನಗೆ ತೋರಿಸಿದರು. ಆಂಟನೋವ್ ಬಾಂಬರ್‌ನ ಕರ್ಣಕಠೋರ ಸದ್ದು, ಸುಖೋಯ್ ಯುದ್ಧವಿಮಾನದ ಸಿಡಿಲಬ್ಬರ, ಆಗಸದಿಂದ ತೇಲಿ ಬರುವ ಬಾಂಬ್ ನೆಲಕ್ಕೆ ಬೀಳುವ ಪರಿ... ಎಲ್ಲವನ್ನೂ ಕಣ್ಣಿಗೆ ಕಟ್ಟುವಂತೆ ವಿವರಿಸಿದರು. ಒಂದು ಕ್ಷಣ ಬಾಂಬ್ ಹಾಕಿದಾಗ ಉಂಟಾಗುವ ಸದ್ದನ್ನು ಅನುಕರಿಸಿದರೆ, ಮತ್ತೊಂದು ಕ್ಷಣದಲ್ಲಿ ಶಾಲೆಯೊಂದಕ್ಕೆ ಬಾಂಬ್ ಬಿದ್ದು ಒಬ್ಬ ಶಿಕ್ಷಕ, ಮೂವರು ಮಕ್ಕಳು ಮೃತಪಟ್ಟ ಸಂಗತಿಯನ್ನು ಹೃದಯ ಹಿಂಡುವಂತೆ ಹೇಳಿದರು.

ಬಾಂಬ್‌ ದಾಳಿ ನಡೆದಾಗ ರಕ್ಷಿಸಿಕೊಳ್ಳುವ ಸಲುವಾಗಿ ಹಳ್ಳಿಯವರು ಇದೀಗ ಗುಹೆಗಳ  ಸಮೀಪದಲ್ಲಿ ಶಾಲೆಗಳನ್ನು ಪುನರ್ ನಿರ್ಮಿಸಿದ್ದಾರೆ. ಆ ಮಕ್ಕಳು ನನಗೆ ಗುಹೆಗಳನ್ನು ತೋರಿಸಿದಾಗ ನಾಗರ ಹಾವಿನ ಪೊರೆಯೊಂದು ಅಲ್ಲಿ ಕಾಣಿಸಿತು. ಅಂದರೆ ಈ ಗುಹೆಗಳಲ್ಲಿ ಅಂತಹ ಹಾವುಗಳು ಇರುವುದು ನಿಚ್ಚಳವಾಗಿತ್ತು. ಇದರ ಬಗ್ಗೆ ನಾನು ಹಳ್ಳಿಯವರನ್ನು ಕೇಳಿದಾಗ, ಬಾಂಬ್‌ಗಳಿಗಿಂತ ಈ ಹಾವುಗಳೇ ಕಡಿಮೆ ಭಯಾನಕ ಎಂಬ ಭಾವನೆ ಅವರಲ್ಲಿದ್ದುದು ತಿಳಿಯಿತು.

ನ್ಯೂಬಾದಲ್ಲಿ ನಾಲ್ಕು ವರ್ಷಗಳಿಂದ ಬಾಂಬ್‌ಗಳು ಬೀಳುತ್ತಲೇ ಇವೆ. ಈ ವರ್ಷದ ಆರಂಭದಿಂದ ಇದು ಹೆಚ್ಚಾಗಿದೆ. ಡಿಸೆಂಬರ್‌ನಿಂದ ಫೆಬ್ರುವರಿ ನಡುವೆ 1,764 ಬಾಂಬ್‌ಗಳನ್ನು ಹಾಕಲಾಗಿದೆ ಎಂದು ‘ನ್ಯೂಬಾ ರಿಪೋರ್ಟ್ಸ್‌’ ಹೆಸರಿನ ಸಂಘಟನೆಯೊಂದು ಹೇಳಿದೆ. ನ್ಯೂಬಾದಲ್ಲಿನ ಹತ್ಯಾಕಾಂಡಕ್ಕೂ, ದಾರ್ಫುರ್‌ನಲ್ಲಿ ನಡೆದ ಹತ್ಯಾಕಾಂಡಕ್ಕೂ ವ್ಯತ್ಯಾಸವಿದೆ. ಅಲ್ಲಿ ನಾಗರಿಕ ಸೇನೆಯೇ ಹಳ್ಳಿಗಳನ್ನು ಭಸ್ಮಮಾಡಿ ಹಾಕಿತ್ತು. ನ್ಯೂಬಾ ಪರ್ವತ ಪ್ರದೇಶಗಳಲ್ಲಿ ಬಂಡುಕೋರರು ನಾಗರಿಕ ಸೇನೆಯನ್ನು ಹೊರಹಾಕಿದ್ದಾರೆ.

ಹೀಗಾಗಿ ಸುಡಾನ್ ಸರ್ಕಾರ ಆಗಸದಿಂದಲೇ ಬಾಂಬ್ ಹಾಕಿ ಜನರನ್ನು ಕೊಲ್ಲತೊಡಗಿದೆ. ಅಧ್ಯಕ್ಷ ಬಶೀರ್ ಈ ಭಾಗದ ಜನರಿಗೆ ಆಹಾರ, ಔಷಧ ಮತ್ತು ಇತರ ಎಲ್ಲ ಬಗೆಯ ಪೂರೈಕೆಗಳಿಗೆ ತಡೆ ಒಡ್ಡಿದ್ದಾರೆ. ಈ ಭಾಗದತ್ತ ಸಂಚರಿಸುವ ಟ್ರಕ್‌ಗಳ ಮೇಲೂ ಸುಡಾನ್ ಬಾಂಬ್‌ ದಾಳಿ ನಡೆಸಿದೆ. ಆಹಾರ, ಔಷಧಕ್ಕೆ ತಡೆ ಒಡ್ಡಿದ್ದರಿಂದ ಬಹುಶಃ ನೇರವಾಗಿ ಬಾಂಬ್ ಹಾಕಿ ಕೊಂದದ್ದಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ.

ಔಷಧದ ಮೇಲೆ ಹಾಕಿದ ನಿಷೇಧದಿಂದ ಭಾರಿ ದೊಡ್ಡ ಅನಾಹುತವೇ ಸೃಷ್ಟಿಯಾಗಿದೆ, ಜತೆಗೆ ಜನ ಭಾರಿ ಸಿಟ್ಟಿಗೇಳುವಂತೆ ಮಾಡಿದೆ. ಬಂಡುಕೋರರ ಹಿಡಿತದ ಪ್ರದೇಶಗಳಲ್ಲಿ ಶೇ 5ರಿಂದ 10ರಷ್ಟು ಮಕ್ಕಳಿಗೆ ಮಾತ್ರ ಲಸಿಕೆಗಳು ಲಭಿಸಿವೆ. ಇದರ ಫಲವಾಗಿ ಕಳೆದ ವರ್ಷ ನ್ಯೂಬಾ ಪರ್ವತ ಪ್ರದೇಶದಲ್ಲಿ ಭಾರಿ ಪ್ರಮಾಣದಲ್ಲಿ ದಢಾರ ಕಾಣಿಸಿಕೊಂಡಿತ್ತು.

ಯುನಿಸೆಫ್ ಮತ್ತು ಲಸಿಕೆ ನೀಡುವ ಇತರ ಸಂಘಟನೆಗಳು ಈ ಭಾಗಕ್ಕೆ ಲಸಿಕೆ ಕಳುಹಿಸಲು ಹಿಂದೇಟು ಹಾಕುತ್ತಿವೆ. ಹೀಗೆ ಮಾಡಿದ್ದೇ ಆದರೆ ಸುಡಾನ್‌ ಸರ್ಕಾರದ ದ್ವೇಷ ಕಟ್ಟಿಕೊಳ್ಳಬೇಕಾಗುತ್ತದೆ, ಆಗ ಇತರ ಭಾಗಗಳಿಗೆ ಲಸಿಕೆ ತಲುಪಿಸುವ ಅವಕಾಶ ಕೈತಪ್ಪಿ ಹೋಗಬಹುದು ಎಂಬ ಆತಂಕ ಅವುಗಳನ್ನು ಕಾಡುತ್ತಿದೆ. ಹೀಗಾಗಿ ಬಂಡುಕೋರ ನೆಲೆಗಳಿರುವ ಪ್ರದೇಶದಲ್ಲಿ ತಮ್ಮ ಮಕ್ಕಳು ಬಾಂಬ್‌ಗಳಿಂದ ಮಾತ್ರವಲ್ಲ, ದಢಾರದಂತಹ ಮಾರಕ ಕಾಯಿಲೆಗಳಿಂದಲೂ ಸಾಯುತ್ತಿರುವುದನ್ನು ಪೋಷಕರು ಅಸಹಾಯಕರಾಗಿ ನೋಡಬೇಕಾಗಿ ಬಂದಿದೆ.

ಮಕ್ಕಳು ಸಾಂಕ್ರಾಮಿಕ ರೋಗಗಳಿಂದ ಸಾಯುತ್ತಿರುವುದು ಅತ್ಯಂತ ದಾರುಣ ವಿಚಾರ. ಹೀಗಾಗಿ ಇಲ್ಲಿ ಮಾನವೀಯತೆಯನ್ನು ಪ್ರದರ್ಶಿಸಲೇಬೇಕಾಗಿದೆ. ನೆರವು ನೀಡುವ ಏಜೆನ್ಸಿಗಳು ಔಷಧವನ್ನು, ಲಸಿಕೆಯನ್ನು ಎಲ್ಲಿಗಾದರೂ ಸಾಗಿಸುವ ಸ್ವಾತಂತ್ರ್ಯ ಹೊಂದಿರಬೇಕು. ರಾಜತಾಂತ್ರಿಕ ಶಿಷ್ಟಾಚಾರದ ಹೆಸರಿನಲ್ಲಿ ಮಕ್ಕಳು ಸಾಯುವುದನ್ನು ಸಹಿಸಿಕೊಂಡಿರಲು ಸಾಧ್ಯವಿಲ್ಲ.

1980ರ ದಶಕದಲ್ಲೂ ಸುಡಾನ್ ಸರ್ಕಾರ ದಕ್ಷಿಣ ಭಾಗದಲ್ಲಿನ ಬಂಡುಕೋರರ ಹಿಡಿತದ ಪ್ರದೇಶಗಳಲ್ಲಿ ಇಂತಹುದೇ ದಿಗ್ಬಂಧನ ವಿಧಿಸಿತ್ತು. ಅಮೆರಿಕದ ರೇಗನ್ ಆಡಳಿತ ಮತ್ತು ಬುಷ್ ಆಡಳಿತಗಳು ಯುನಿಸೆಫ್ ಜತೆಗೆ ಕೆಲಸ ಮಾಡಿ ಸುಡಾನ್‌ಗೆ ಜೀವದಾನ ನೀಡುವ ಕ್ರಮಗಳನ್ನು ಕೈಗೊಂಡಿದ್ದವು. ಅಗತ್ಯ ಇರುವ ಕಡೆಗೆ ನೇರವಾಗಿ ನೆರವು ರವಾನಿಸಿದ್ದವು. ಇಂದು ಸಹ ಇಂತಹುದೇ ಹೊಸ ಜೀವದಾನದ ಕಾರ್ಯಾಚರಣೆ ನಡೆಯಬೇಕಾಗಿದೆ.

ಒಬಾಮ ಅವರೂ ಈ ನಿಟ್ಟಿನಲ್ಲಿ ಹಿಂದೆ ಬಿದ್ದಿಲ್ಲ. ನ್ಯೂಬಾ ಪರ್ವತ ಪ್ರದೇಶಗಳಿಗೆ ಸದ್ದಿಲ್ಲದೆ ಆಹಾರ ಪೂರೈಸಿದ್ದಾರೆ. ಈ ಮೂಲಕ ಹಸಿವೆಯನ್ನು ನಿವಾರಿಸಿದ್ದಾರೆ. ಔಷಧ ಪೂರೈಕೆ ವಿಚಾರದಲ್ಲೂ ಇದೇ ಮಾದರಿಯನ್ನು ಅನುಸರಿಸಬೇಕಾಗಿದೆ. ಆದರೆ ಒಟ್ಟಾರೆ, ಸುಡಾನ್‌ಗೆ ಬೆಂಬಲವಾಗಿ ನಿಲ್ಲುವ ವಿಚಾರದಲ್ಲಿ ಒಬಾಮ ಈ ಮೊದಲಿನ ನಾಲ್ವರು ಅಧ್ಯಕ್ಷರಿಗಿಂತ ಹಿಂದೆ ಇರುವಂತೆ ತೋರುತ್ತದೆ.

ಸಫರಿನಾಳ ಹತ್ಯೆಯನ್ನು ನೋಡಿದಾಗ ಸುಡಾನ್ ಯಾರನ್ನು ಗುರಿಯಾಗಿ ಇಟ್ಟುಕೊಂಡಿತ್ತು, ಗ್ರಾಮಸ್ಥರನ್ನೋ, ಬಾಲಕಿಯರ ಪ್ರೌಢಶಾಲೆಯನ್ನೋ ಎಂಬುದು ಸ್ಪಷ್ಟವಾಗದು. ಯಾಕೆಂದರೆ ಹಳ್ಳಿಗಳು ಮತ್ತು ಶಾಲಾ ಬಾಲಕಿಯರು ಇಬ್ಬರ ಮೇಲೂ ಆಗಾಗ್ಗೆ ದಾಳಿಗಳು ನಡೆಯುತ್ತಲೇ ಇರುತ್ತವೆ.

ಸುಡಾನ್‌ನಲ್ಲಿ ಬದುಕು ಎಂಬುದು ಕ್ರೂರ. ಸಫರಿನಾಳಂತಹ ಮಕ್ಕಳಿಗಂತೂ ಅದು ಸಾವಿನಲ್ಲಿ ಕೊನೆಯಾಗುತ್ತಿದೆ. ಜಾಗತಿಕ ನಾಯಕರು ಮತ್ತು ನೆರವು ನೀಡುವ ಏಜೆನ್ಸಿಗಳು ಸುಡಾನ್ ವಿದ್ಯಮಾನಗಳ ಬಗ್ಗೆ ಆಕ್ಷೇಪ ಎತ್ತದೇ ಹೋದರೆ ಮತ್ತು ಈ ದೇಶ ತನ್ನ ಅನಾಗರಿಕ ವರ್ತನೆಗೆ ಬೆಲೆ ತೆರುವಂತೆ ಆಗದಿದ್ದರೆ ಅಲ್ಲಿಯವರೆಗೂ ಇಲ್ಲಿ ಯಾವ ಬದಲಾವಣೆಯೂ ಆಗದು.

-ನಿಕೊಲಸ್ ಕ್ರಿಸ್ಟಾಫ್
ನ್ಯೂಯಾರ್ಕ್ ಟೈಮ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT