ADVERTISEMENT

ಅಭಿವೃದ್ಧಿಯಿಂದ ದೂರ ಈ ನಾವೂರ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2011, 19:30 IST
Last Updated 14 ಅಕ್ಟೋಬರ್ 2011, 19:30 IST

`ನಮ್ಮೂರು ನಾವೂರ ಬೆಳ್ತಂಗಡಿಯಿಂದ 10 ಕಿ.ಮೀ. ದೂರ. ಇಲ್ಲಿನ ಹಲವು ಮನೆಗಳಿಗಿನ್ನೂ ವಿದ್ಯುತ್ ಸಂಪರ್ಕ ಬಂದಿಲ್ಲ. ಇಲ್ಲಿ 3ಜಿ ಸೌಲಭ್ಯ ಇರುವ ಮೊಬೈಲ್‌ಗಳಿವೆ.
 
ಆದರೆ, ಅವನ್ನು ಚಾರ್ಜ್ ಮಾಡಬೇಕಿದ್ದರೆ ವಿದ್ಯುತ್ ಇರುವ ಮನೆ ಹುಡುಕಿಕೊಂಡು ಹೋಗಬೇಕು. ಕೆಲವು ಮನೆಗಳಿಗೆ ಸೌರದೀಪ ವ್ಯವಸ್ಥೆಯೂ ಇಲ್ಲ. ಇಲ್ಲಿನ ಕಾಡು ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಗೆ ಬರುತ್ತದೆ.
 
ಅಲ್ಲಿ ಕಟ್ಟಿಗೆ ಹೆಕ್ಕುವಂತಿಲ್ಲ. ವಿದ್ಯುತ್ ಸಂಪರ್ಕ ಇಲ್ಲದ ಕಾರಣ ಬಹುತೇಕ ಮನೆಗಳಿಗೆ ಟಿ.ವಿ. ಪ್ರವೇಶಿಸಿಲ್ಲ~ ಎಂದು ಸಮಸ್ಯೆಯ ಸರಪಣಿಯನ್ನು ಬಿಚ್ಚಿಡುತ್ತಾರೆ ಇಂದಬೆಟ್ಟು ಪಂಚಾಯಿತಿಯ ನಾವೂರ ನಿವಾಸಿ ಸುನೀಲ್.

ಡಾಂಬರು ಕಾಣದ ರಸ್ತೆಯಲ್ಲಿ ಆರು ಕಿ.ಮೀ.ಗೂ ಹೆಚ್ಚು ದೂರ ನಡಿಗೆಯಲ್ಲಿ ಸಾಗಬೇಕಾದ ಸ್ಥಿತಿ. ನಾವೂರದ ಮಂಜಲದ ದಟ್ಟಾರಣ್ಯದಲ್ಲಿ ಎಎನ್‌ಎಫ್- ನಕ್ಸಲ್ ಗುಂಡಿನ ಚಕಮಕಿಯಲ್ಲಿ ಪೊಲೀಸ್ ಸಿಬ್ಬಂದಿ ಮಹಾದೇವ ಎಸ್.ಮಾನೆ ಬಲಿಯಾದ ಮಂಜಲ ಪ್ರದೇಶದ ಸ್ಥಿತಿ ಇದು. ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರ ತವರು ಜಿಲ್ಲೆ ದಕ್ಷಿಣ ಕನ್ನಡದಲ್ಲಿ ನಕ್ಸಲ್ ಪೀಡಿತ ಪ್ರದೇಶಗಳ ಅಭಿವೃದ್ಧಿ ಪ್ರಶ್ನೆಯಾಗಿಯೇ ಉಳಿದಿದೆ.

`ದಶಕಗಳ ಹಿಂದೆ ಹಾಕಿದ ಜಲ್ಲಿ, ಅರೆಜೀವದಲ್ಲಿರುವ ರಸ್ತೆಗಳು, ಸವಣಾಲು ಗ್ರಾಮದ ಪರಿಸ್ಥಿತಿಯನ್ನು ಮೊದಲಿಗೇ ಪರಿಚಯಿಸುತ್ತವೆ. ನೂರಾರು ಮನೆಗಳಿಗೆ ಸಂಪರ್ಕ ಕಲ್ಪಿಸಬೇಕಾದ ರಸ್ತೆಗಳು ಇನ್ನೂ ಡಾಂಬರು ಕಂಡಿಲ್ಲ. ವರ್ಷದಲ್ಲಿ ಆರು ತಿಂಗಳು ವಾಹನ ಸಂಪರ್ಕದಿಂದ ದೂರ ಉಳಿಯುವ ಅನೇಕ ಪ್ರದೇಶಗಳಿವೆ. ಇಲ್ಲಿ ಪ್ರಗತಿಯ ಹೆಸರಲ್ಲಿ ಗುತ್ತಿಗೆದಾರರ ಆರ್ಥಿಕ ಸ್ಥಿತಿ ಅಭಿವೃದ್ಧಿಪಡಿಸುವ ಕಾಟಾಚಾರದ ಕೆಲಸ ನಡೆಯುತ್ತಿದೆ~ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಸವಣಾಲಿನ ನಿವಾಸಿ ಕುಶಾಲಪ್ಪ.

`ಕುತ್ಲೂರಿನ ಆಸುಪಾಸು ವಿದ್ಯುತ್ ಸಂಪರ್ಕ ಕಾಣದ ಮನೆಗಳು ಬಹಳಷ್ಟಿವೆ. ಸರ್ಕಾರ ಕೊಟ್ಟ ಸೌರದೀಪ ಉರಿದಿದ್ದು ಕೆಲವೇ ದಿನ. ಕಳಪೆ ಗುಣಮಟ್ಟದ ಈ ದೀಪ ನೀಡಿ ಜನರನ್ನು ಮರಳುಗೊಳಿಸಲಾಯಿತು. ಈಗ ಮತ್ತೆ ಸೌರದೀಪ ನೀಡುವ ಭರವಸೆ. ಮತ್ತಷ್ಟು ದುಡ್ಡು ಹಾಳು ಮಾಡುವ ಯೋಜನೆ ಅಷ್ಟೇ. ನಕ್ಸಲ್ ಪೀಡಿತ ಪ್ರದೇಶದ ಜನರ ಬಗ್ಗೆ ನೈಜ ಕಾಳಜಿಯಿಂದ ಸರ್ಕಾರ ಈವರೆಗೂ ಕೆಲಸ ಮಾಡಿಲ್ಲ~ ಎಂದು ದೂರುತ್ತಾರೆ ಕುತ್ಲೂರು ನಿವಾಸಿ ಸದಾಶಿವ.

`ನಕ್ಸಲ್ ಪೀಡಿತ ಪ್ರದೇಶ ಅಭಿವೃದ್ಧಿಗೆ ಸರ್ಕಾರವೇನೋ ಅನುದಾನ ಬಿಡುಗಡೆ ಮಾಡಿತು. ರಾಷ್ಟ್ರೀಯ ಉದ್ಯಾನವನವಾದ ಕಾರಣ ಈ ಪ್ರದೇಶದಲ್ಲಿ ಅಭಿವೃದ್ಧಿ ಕಾರ್ಯಕ್ಕೆ ಅವಕಾಶ ಇಲ್ಲ ಎಂದು ವನ್ಯಜೀವಿ ಇಲಾಖೆ ತಡೆ ಹಾಕಿತು. ಪರಿಣಾಮ ಪ್ಯಾಕೇಜ್ ಹಣ ರಾಷ್ಟ್ರೀಯ ಉದ್ಯಾನವನದ ಹೊರಗಿನ ಅಭಿವೃದ್ಧಿ ಕಾರ್ಯಗಳಿಗೆ ಬಳಕೆಯಾಯಿತು.
 
ಬಿಡುಗಡೆಯಾದ ಹಣ ಏಕೆ ವಾಪಸ್ ಮಾಡುವುದು ಎಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಂಡವು. ನಕ್ಸಲ್ ಪೀಡಿತ ಪ್ರದೇಶ ಹಾಗೆಯೇ ಉಳಿಯಿತು~ ಎಂದು ವಾಸ್ತವ ಸ್ಥಿತಿ ಮುಂದಿಡುತ್ತಾರೆ ನಾಗರಿಕ ಸೇವಾ ಟ್ರಸ್ಟ್ ಅಧ್ಯಕ್ಷ ಸೋಮನಾಥ ನಾಯಕ್.

ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನಲ್ಲಷ್ಟೇ ನಕ್ಸಲ್ ಪೀಡಿತ ಗ್ರಾಮಗಳಿವೆ. ಇಲ್ಲಿನ 81 ಗ್ರಾಮಗಳ ಪೈಕಿ ಏಳು ಗ್ರಾಮ ಪಂಚಾಯಿತಿಯ 11 ಗ್ರಾಮಗಳು ನಕ್ಸಲ್ ಚಟುವಟಿಕೆಯಿಂದಲೇ  ಗುರುತಿಸಿಕೊಂಡಿವೆ.
 
ನಾವೂರ, ಲಾಯಿಲ, ನಾರಾವಿ, ಮಿತ್ತಬಾಗಿಲು, ಕುತ್ಲೂರು, ಸುಲ್ಕೇರಿ, ಸುಲ್ಕೇರಿಮೋಗ್ರು, ಮಲವಂತಿಗೆ, ಶಿರ್ಲಾಲು, ನಾವರ, ಸವಣಾಲು ಗ್ರಾಮಗಳಿಗೆ ಈ ಸಂಬಂಧ ಅನುದಾನವೂ ಬಂದಿದೆ. ನಾರಾವಿ, ಮಿತ್ತಬಾಗಿಲು, ಲಾಯಿಲ, ಶಿರ್ಲಾಲು, ಮೇಲಂತಬೆಟ್ಟು, ಮಲವಂತಿಗೆ ಗ್ರಾಮ ಪಂಚಾಯಿತಿಗಳ ಕೆಲವು ಪ್ರದೇಶಗಳು ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿವೆ.

ನಕ್ಸಲ್ ಪ್ಯಾಕೇಜ್‌ನಡಿ 2005-06ರಲ್ಲಿ ಜಿಲ್ಲೆಗೆ ರೂ.1 ಕೋಟಿ ಅನುದಾನ ಬಿಡುಗಡೆಯಾಗಿತ್ತು. 2006-07ರಲ್ಲಿ 90 ಲಕ್ಷ, 2007-08ರಲ್ಲಿ ರೂ. 1.1 ಕೋಟಿ ಬಂದಿತ್ತು. `ನಮ್ಮಿಂದಾಗಿಯೇ ಗ್ರಾಮದ ಅಭಿವೃದ್ಧಿಗೆ ದುಡ್ಡು ಬರುತ್ತಿದೆ~ ಎಂದು ನಕ್ಸಲರು ಪ್ರಚಾರ ಮಾಡಲಾರಂಭಿಸಿದ್ದನ್ನು ಗಮನಿಸಿದ ಸರ್ಕಾರ, `ನಕ್ಸಲ್ ಪ್ಯಾಕೇಜ್~ ಪದ ಕೈಬಿಟ್ಟಿತ್ತು.
 
ಸೌರದೀಪ ವಿತರಣೆ, ರಸ್ತೆ ದುರಸ್ತಿ, ಮೋರಿ ರಚನೆ, ಮನೆ ದುರಸ್ತಿ, ದಾರಿದೀಪ ಖರೀದಿ, ಪಂಪ್ ಖರೀದಿ ಮತ್ತಿತರ ಉದ್ದೇಶಗಳಿಗೆ ಈ ಅನುದಾನ ವಿನಿಯೋಗಿಸಲಾಗಿದೆ. ಜಿಲ್ಲೆಯಲ್ಲಿ ನಕ್ಸಲ್ ಶರಣಾಗತಿ ಪ್ಯಾಕೇಜ್‌ಗೆ ಪೂರಕ ಸ್ಪಂದನ ಸಿಕ್ಕಿಲ್ಲ.

ಪಶ್ಚಿಮ ಘಟ್ಟದಲ್ಲಿ ನಕ್ಸಲ್ ಚಟುವಟಿಕೆಗೆ ಅವಕಾಶ ಕಲ್ಪಿಸಿದ್ದು ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಗುಮ್ಮ. ಈ ಉದ್ಯಾನವನ ವ್ಯಾಪ್ತಿಯಲ್ಲಿ 2,000ಕ್ಕೂ ಹೆಚ್ಚು ಕುಟುಂಬಗಳಿವೆ. ಕುದುರೆಮುಖ ರಾಷ್ಟ್ರೀಯ ಉದ್ಯಾನವನದಿಂದ ಹೊರಬರುವ ಕುಟುಂಬಗಳಿಗೆ ರೂ. 10 ಲಕ್ಷ ನೀಡುವುದಾಗಿ ಸರ್ಕಾರ ಘೋಷಿಸಿತ್ತು.
 
ಕುತ್ಲೂರು, ನಾರಾವಿಯಿಂದ ಈವರೆಗೆ 12 ಕುಟುಂಬಗಳು ಉದ್ಯಾನವನದಿಂದ ಹೊರಬಂದು ನಾವೂರಲ್ಲಿ ನೆಲೆಸಿವೆ. ಬಹಳಷ್ಟು ಕುಟುಂಬ ಅರಣ್ಯ ಬಿಡಲು ಒಪ್ಪಿಲ್ಲ. ಈಗ ಮತ್ತೆ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವಿಸ್ತರಣೆಗೆ ಮುಂದಾಗಿದೆ.

ಬೆಳ್ತಂಗಡಿ ತಾಲ್ಲೂಕಿನ ಚಾರ್ಮಾಡಿ ಮೀಸಲು ಅರಣ್ಯ, ಚಿಕ್ಕಮಗಳೂರು ಜಿಲ್ಲೆ ಮೀಸಲು ಅರಣ್ಯವನ್ನು ಕುದುರೆಮುಖ ರಾಷ್ಟ್ರೀಯ ಉದ್ಯಾನವನಕ್ಕೆ ಸೇರಿಸಲು ಅಂತಿಮ ಸಿದ್ಧತೆ ನಡೆದಿದೆ. ಈ ಮೂಲಕ ಕುದುರೆಮುಖ ರಾಷ್ಟ್ರೀಯ ಉದ್ಯಾನವನ-ಪುಷ್ಪಗಿರಿ ಉದ್ಯಾನವನ ನಡುವೆ ಸಂಪರ್ಕ ಕಲ್ಪಿಸಲು ಉದ್ದೇಶಿಸಲಾಗಿದೆ.

ಈ ನಡುವೆ ಗುಂಡಿನ ಚಕಮಕಿಯಲ್ಲಿ ಮಾನೆ ಬಲಿಯಾಗಿದ್ದಾರೆ. ಸರ್ಕಾರದ ವಿರುದ್ಧ ಗ್ರಾಮಸ್ಥರನ್ನು ಎತ್ತಿ ಕಟ್ಟಲು ನಕ್ಸಲರಿಗೆ ಮತ್ತೊಂದು ಅವಕಾಶ ಸಿಕ್ಕಂತೆ ಆಗಿದೆ. ನಕ್ಸಲ್-ಸರ್ಕಾರದ ನಡುವಿನ ಹಣಾಹಣಿಯಲ್ಲಿ ಗ್ರಾಮಸ್ಥರ ಬದುಕು ಹೈರಾಣಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.