ADVERTISEMENT

ಇಂಧನ ಕ್ಷೇತ್ರಕ್ಕೆ ಇಲ್ಲಿದೆ `ಜನರ ಪ್ರಣಾಳಿಕೆ'

ಶಂಕರ ಶರ್ಮಾ, ಇಂಧನ ನೀತಿ ತಜ್ಞ, ತೀರ್ಥಹಳ್ಳಿ
Published 7 ಜೂನ್ 2013, 19:59 IST
Last Updated 7 ಜೂನ್ 2013, 19:59 IST

ಇತ್ತೀಚಿನ ವರ್ಷಗಳಲ್ಲಿ ದೇಶದ ಬಹುತೇಕ ರಾಜ್ಯಗಳು ವಿದ್ಯುತ್ ಕೊರತೆ ಎದುರಿಸುತ್ತಿವೆ. ಪ್ರವಾಹದಿಂದಾಗಿ ಕಲ್ಲಿದ್ದಲು ಗಣಿಗಳಲ್ಲಿ ನೀರು ತುಂಬಿಕೊಳ್ಳುವುದು, ಸಾಗಣೆ ಸಮಸ್ಯೆ, ಕಾರ್ಮಿಕರ ಪ್ರತಿಭಟನೆಯಿಂದ ಕೆಲಸ ಸ್ಥಗಿತ ಹಾಗೂ ಆಮದು ಮಾಡಿಕೊಳ್ಳುವ ಕಲ್ಲಿದ್ದಲು ದರದಲ್ಲಿ ಏರಿಕೆಯಿಂದಾಗಿ ವಿದ್ಯುತ್ ಉತ್ಪಾದನೆ ಕಡಿಮೆಯಾಗುತ್ತಿದೆ. ಇದು ವಿದ್ಯುತ್ ಕಡಿತಕ್ಕೆ ಇರುವ ಪ್ರಮುಖ ಕಾರಣ. ದೇಶದಾದ್ಯಂತ ಇರುವ ಎಲ್ಲ ವರ್ಗದ ಗ್ರಾಹಕರೂ `ವಿದ್ಯುತ್ ಕಡಿತ'ದ ಬಿಸಿ ಅನುಭವಿಸುತ್ತಿದ್ದಾರೆ.

ಎಲ್ಲ ರಾಜ್ಯಗಳಲ್ಲಿರುವ ಶಾಖೋತ್ಪನ್ನ ವಿದ್ಯುತ್ ಉತ್ಪಾದನಾ ಘಟಕಗಳು ಇಂಧನ ಕೊರತೆಯಿಂದಾಗಿ ಬಿಕ್ಕಟ್ಟಿಗೆ ಸಿಲುಕಿಕೊಂಡಿವೆ. ಹಿಮಾಲಯ ಪರ್ವತ ಶ್ರೇಣಿಯಲ್ಲಿರುವ ಜಲವಿದ್ಯುತ್ ಘಟಕ ಹಾಗೂ ದೇಶದ ವಿವಿಧೆಡೆ ಇರುವ ಪರಮಾಣು ವಿದ್ಯುತ್ ಉತ್ಪಾದನಾ ಘಟಕಗಳು ಸ್ಥಳೀಯರಿಂದ ತೀವ್ರ ಪ್ರತಿರೋಧ ಎದುರಿಸುತ್ತಿವೆ. ಅನಿಲ ಹಾಗೂ ಕಲ್ಲಿದ್ದಲು ಸಕಾಲಕ್ಕೆ ಪೂರೈಕೆಯಾಗದೇ ಇರುವುದರಿಂದ, ಅದನ್ನೇ ನಂಬಿಕೊಂಡ ಘಟಕಗಳು ಉತ್ಪಾದನೆಯನ್ನು ಕಡಿತಗೊಳಿಸುವ ಅನಿವಾರ್ಯತೆ ಎದುರಿಸುತ್ತಿವೆ.

ಆದಾಯ ಕೊರತೆಯು ವಿದ್ಯುತ್ ಕ್ಷೇತ್ರವನ್ನು ಇನ್ನಷ್ಟು ಕೆಳಕ್ಕೆ ತಳ್ಳಿದೆ. ಹೀಗಾಗಿ ಈಗಲೇ ಇದಕ್ಕೆ ಸಂಬಂಧಿಸಿದಂತೆ ಪರಿಹಾರ ಮಾರ್ಗೋಪಾಯ ಕಂಡುಕೊಳ್ಳದೇ ಹೋದರೆ ಬಿಕ್ಕಟ್ಟು ಉಲ್ಬಣಗೊಳ್ಳಬಹುದು. ಈ ಬಿಕ್ಕಟ್ಟಿಗೆ ನೇರವಾಗಿ ಕಾರಣರಾದವರನ್ನು ಹೊರತುಪಡಿಸಿ, ಉಳಿದವರೆಲ್ಲ ವಿದ್ಯುತ್ ಕೊರತೆ ಹೆಚ್ಚುತ್ತಲೇ ಇರುವುದರ ಬಗ್ಗೆ ಕಳವಳ ಹೊಂದಿದ್ದಾರೆ. ಇದಕ್ಕೆ ಕೇವಲ ಒಂದೇ ಸರ್ಕಾರ ಅಥವಾ ಆಯೋಗ ಕಾರಣವಲ್ಲ; ವರ್ಷಗಳಿಂದಲೂ ಸತತವಾಗಿ ಈ ಕ್ಷೇತ್ರದಲ್ಲಿನ ನಿರ್ವಹಣಾ ವೈಫಲ್ಯವೇ ಕಾರಣ.

ಸೂಕ್ಷ್ಮವಾಗಿ ಪರಿಸ್ಥಿತಿಯನ್ನು ಅವಲೋಕಿಸಿದಾಗ, ಬಿಕ್ಕಟ್ಟಿಗೆ ತಕ್ಷಣವೇ ಪರಿಹಾರ ಸಿಗುವುದೂ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ. ಕೊರತೆಯನ್ನು ತಕ್ಕಮಟ್ಟಿಗೆ ಕಡಿಮೆ ಮಾಡುವ ಕೆಲವೇ ಮಾರ್ಗೋಪಾಯಗಳಿದ್ದು, ಉಳಿದಂತೆ ಮುಂದಿನ ದಿನಗಳಲ್ಲಿ ಸಮಸ್ಯೆ ಎದುರಾಗದಂತೆ ಮಾಡಲೇಬೇಕಾದ ಹಲವು ಕ್ರಮಗಳತ್ತ ಸರ್ಕಾರ ಗಮನಹರಿಸುವುದು ಅಗತ್ಯವಾಗಿದೆ. ನಿರ್ವಹಣಾ ವೈಫಲ್ಯದಿಂದ ಎದುರಾದ ಸಾಮಾಜಿಕ, ಪರಿಸರ ಹಾಗೂ ಆರ್ಥಿಕ ಸಮಸ್ಯೆಗಳನ್ನು ಗಮನದಲ್ಲಿ ಇಟ್ಟುಕೊಂಡು, ತುರ್ತಾಗಿ ತೆಗೆದುಕೊಳ್ಳಬೇಕಾದ ನಿರ್ಧಾರಗಳು ಇಲ್ಲಿವೆ. ಇವುಗಳನ್ನು `ಸಾರ್ವಜನಿಕರ ಪ್ರಣಾಳಿಕೆ' ಎಂದೇ ಕರೆಯಬಹುದು.

1. ತನ್ನಲ್ಲಿರುವ ಮೂಲಸೌಕರ್ಯಗಳ ಗರಿಷ್ಠ ಬಳಕೆ ಮಾಡಿಕೊಳ್ಳಲು ಬೇಕಾದ ಎಲ್ಲ ಕಠಿಣ ಕ್ರಮಗಳನ್ನೂ ಸರ್ಕಾರ ತೆಗೆದುಕೊಳ್ಳಬೇಕು. ಸಾಗಣೆ ಹಾಗೂ ವಿತರಣಾ ನಷ್ಟ ಕಡಿಮೆ ಮಾಡುವ ಮೂಲಕ, ಸಿಗುವ ವಿದ್ಯುತ್ ಅನ್ನೇ ಸದ್ಬಳಕೆ ಮಾಡಿಕೊಳ್ಳಬೇಕು. ಮುಂದಿನ ಮೂರು ವರ್ಷಗಳಲ್ಲಿ ಈ ನಷ್ಟವನ್ನು ಶೇ 10ಕ್ಕೆ ಇಳಿಸಬೇಕು ಹಾಗೂ ಮುಂದಿನ ಐದು ವರ್ಷಗಳಲ್ಲಿ ಇನ್ನಷ್ಟು ಇಳಿಸಲು ಗಮನಹರಿಸಬೇಕು.

2. ವಿದ್ಯುತ್ ಸ್ಥಿತಿಗತಿ ಕುರಿತು ಶ್ವೇತಪತ್ರ ಪ್ರಕಟಿಸಬೇಕು. ತಜ್ಞರನ್ನು ಒಳಗೊಂಡ ಸ್ವತಂತ್ರ ತಂಡವೊಂದನ್ನು ಈ ಉದ್ದೇಶಕ್ಕಾಗಿ ರಚಿಸಬೇಕು. ವಿದ್ಯುತ್ ಬೇಡಿಕೆ- ಪೂರೈಕೆ, ಬಿಕ್ಕಟ್ಟಗೆ ಕಾರಣಗಳು, ಪರಿಹಾರ ಮಾರ್ಗೋಪಾಯಗಳ ಬಗ್ಗೆ ಕೂಡ ಇದರಲ್ಲಿ ವಿವರ ಇರಬೇಕು.

3. ವಿದ್ಯುತ್ ಬೇಡಿಕೆ ಹಾಗೂ ಪೂರೈಕೆಗೆ ಆಗುತ್ತಿರುವ ಖರ್ಚು-ವೆಚ್ಚ, ವಿವಿಧ ಮೂಲಗಳಿಂದ ಇಂಧನ ಪಡೆಯುವ ಬಗೆಯನ್ನು ಸರ್ಕಾರ ಪ್ರಕಟಿಸಬೇಕು. ಸೌರಶಕ್ತಿ, ಜೈವಿಕ ಅನಿಲ ಸೇರಿದಂತೆ ನವೀಕರಿಸಬಹುದಾದ ಇಂಧನಗಳಿಂದ ವಿದ್ಯುತ್ ಉತ್ಪಾದಿಸಿ, ಆಯಾ ಪ್ರದೇಶದಲ್ಲೇ ಇರುವ ಗ್ರಾಹಕರಿಗೆ ವಿತರಿಸುವ ವ್ಯವಸ್ಥೆ ರೂಪಿಸಬೇಕು.

4. ಎಲ್ಲ ಗ್ರಾಹಕರೂ ಮೀಟರ್ ಅಳವಡಿಸುವಂತೆ ಕಡ್ಡಾಯ ಮಾಡಬೇಕು. ಇದಕ್ಕಾಗಿ ಒಂದು ವರ್ಷ ಗಡುವು ವಿಧಿಸಬೇಕು. ಹಲವು ಯೋಜನೆಗಳಲ್ಲಿ ಸಿಗುವ ಸಬ್ಸಿಡಿಯನ್ನು ನೇರವಾಗಿ ಆ ಗ್ರಾಹಕನ ಬ್ಯಾಂಕ್ ಖಾತೆಗೆ ಪಾವತಿಸಬೇಕು.

5. ಜಾಗತಿಕ ತಾಪಮಾನ ಹೆಚ್ಚಳ ಹಾಗೂ ವಿದ್ಯುತ್ ಉತ್ಪಾದನಾ ಘಟಕಗಳು ಎದುರಿಸುವ ಆರ್ಥಿಕ ಬಿಕ್ಕಟ್ಟು ಕಡಿಮೆ ಮಾಡಲು, ವೃತ್ತಿಪರ ತಂಡವೊಂದನ್ನು ರಚಿಸಿ ಅದರ ಸಲಹೆ ಅನುಷ್ಠಾನ ಮಾಡಬೇಕು. ಯೋಜನೆ, ಅನುಷ್ಠಾನ, ಸಾಗಣೆ, ವಿತರಣೆ, ಆದಾಯ ಸಂಗ್ರಹ, ಮಾನವ ಸಂಪನ್ಮೂಲ ವಿಭಾಗದಲ್ಲಿ ಕೈಗೊಳ್ಳಬೇಕಾದ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡಬೇಕು.

6. ವಿದ್ಯುತ್ ಉಳಿತಾಯ ಮಾಡಲು ಗ್ರಾಹಕರನ್ನು ಪ್ರೇರೇಪಿಸಬೇಕು. ಮುಂದಿನ ಐದು ವರ್ಷಗಳಲ್ಲಿ ತಲುಪಬೇಕಾದ ಗುರಿ ನಿಗದಿ ಮಾಡಿಕೊಂಡು ಬೃಹತ್ ಆಂದೋಲನವನ್ನೇ ಹಮ್ಮಿಕೊಳ್ಳಬೇಕು. ಸ್ವಯಂಸೇವಾ ಸಂಸ್ಥೆಗಳು, ಮುದ್ರಣ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮಗಳನ್ನು ಇದಕ್ಕಾಗಿ ಬಳಸಿಕೊಳ್ಳಬಹುದು.

7. ರಾಜ್ಯದ ಎಲ್ಲ ವಿದ್ಯುತ್ ಸರಬರಾಜು ಕಂಪೆನಿ(ಎಸ್ಕಾಂ)ಗಳು ಅಧಿಕ ಪ್ರಮಾಣದಲ್ಲಿ ಎಲ್.ಇ.ಡಿ ವಿದ್ಯುತ್ ದೀಪಗಳನ್ನು ಖರೀದಿಸಿ, ಸಂಗ್ರಹಿಸಿಡಬೇಕು. ಹೆಚ್ಚು ವಿದ್ಯುತ್ ಬಳಸುವ ಬಲ್ಬ್‌ಗಳನ್ನು ಗ್ರಾಹಕರು ತಂದುಕೊಟ್ಟು, ಎಲ್‌ಇಡಿ ಬಲ್ಬ್ ತೆಗೆದುಕೊಂಡು ಹೋಗಲು ಪ್ರೇರೇಪಿಸಬೇಕು.

8. ರಸ್ತೆ ಬದಿ ಅಥವಾ ವೃತ್ತಗಳಲ್ಲಿ ಅಳವಡಿಸಲಾದ, ವಿದ್ಯುತ್ ದೀಪಗಳಿಂದ ಝಗಮಗಿಸುವ ಜಾಹೀರಾತು ಫಲಕಗಳಿಗೆ ಸೂಕ್ತ ದರ ವಿಧಿಸಬೇಕು.

9. ಗ್ರಾಹಕರು ವಿದ್ಯುತ್ ಕೊರತೆ ಅನುಭವಿಸುವ ಸಮಯದಲ್ಲಿ, ರಾತ್ರಿ ಹೊತ್ತು ನಡೆಸುವ ಕ್ರೀಡಾಕೂಟಗಳನ್ನು ಸ್ಥಗಿತಗೊಳಿಸಬೇಕು. ಒಂದು ವೇಳೆ ಈ ಮೊದಲೇ ರಾಷ್ಟ್ರೀಯ ಅಥವಾ ಅಂತರರಾಷ್ಟ್ರೀಯ ಕ್ರೀಡಾಕೂಟ ಏರ್ಪಡಿಸಲು ಒಪ್ಪಂದ ಮಾಡಿಕೊಂಡಿದ್ದರೆ, ಹೊರ ರಾಜ್ಯಗಳು ಅಥವಾ ಖಾಸಗಿ ಮೂಲದಿಂದ ವಿದ್ಯುತ್ ಖರೀದಿಸಲು ಸಂಘಟಕರಿಗೆ ಸೂಚಿಸಬೇಕು.

10. ರಾತ್ರಿಯಾಗುತ್ತಿದ್ದಂತೆ ಹೊತ್ತಿಕೊಂಡು, ಸೂರ್ಯೋದಯ ಆಗುತ್ತಿದ್ದಂತೆ ಆರುವ ಸ್ವಯಂಚಾಲಿತ ವ್ಯವಸ್ಥೆಯುಳ್ಳ ಬೀದಿ ದೀಪಗಳನ್ನು ಅಳವಡಿಸುವಂತೆ ಸ್ಥಳೀಯ ಸಂಸ್ಥೆಗಳು, ಪುರಸಭೆ ಹಾಗೂ ಪಾಲಿಕೆಗಳಿಗೆ ಸೂಚಿಸಬೇಕು.

11. ಗಾಳಿ, ಬೆಳಕಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಸಾಧ್ಯವಿರುವಂಥ ಸರ್ಕಾರಿ ಕಚೇರಿಗಳಲ್ಲಿ ಎ.ಸಿ. (ಹವಾ ನಿಯಂತ್ರಣ ವ್ಯವಸ್ಥೆ) ಬಳಸಬಾರದು ಎಂಬ ಕಟ್ಟುನಿಟ್ಟಾದ ಆದೇಶ ಜಾರಿ ಮಾಡಬೇಕು. ಈ ಹಿಂದಿನ ವರ್ಷಕ್ಕಿಂತ ಶೇ 10ರಷ್ಟು ಕಡಿಮೆ ವಿದ್ಯುತ್ ಬಳಸಲು ತಾಕೀತು ಮಾಡಬೇಕು.

12. ಖಾಸಗಿ ವಿದ್ಯುತ್ ಘಟಕಗಳಿಂದ ಉತ್ಪಾದನೆಯಾಗುವ ವಿದ್ಯುತ್ ಅನ್ನು ಅತ್ಯಧಿಕ ವಿದ್ಯುತ್ ಬೇಡಿಕೆ ಅವಧಿಯಲ್ಲಿ ಪಡೆಯಲು ಒಪ್ಪಂದ ಮಾಡಿಕೊಳ್ಳಬೇಕು. ಬೇರೆ ರಾಜ್ಯಗಳಿಂದ ಖರೀದಿಸುವ ದರಕ್ಕಿಂತಲೂ ಖಾಸಗಿ ಕಂಪೆನಿಗಳು ನಿಗದಿ ಮಾಡುವ ದರ ಎಷ್ಟೋ ಪಟ್ಟು ಕಡಿಮೆಯಾಗಿರುತ್ತದೆ.

13. ಕೇವಲ ಇಂದಿನ ಪರಿಸ್ಥಿತಿ ಮಾತ್ರವಲ್ಲದೇ, ದೀರ್ಘಕಾಲೀನ ಅವಧಿಯಲ್ಲಿ ಎದುರಿಸಬಹುದಾದ ವಿದ್ಯುತ್ ಕೊರತೆ ಬಿಕ್ಕಟ್ಟನ್ನು ಎದುರಿಸಲು ಏನು ಮಾಡಬೇಕು ಎಂಬುದನ್ನು ಪರಿಶೀಲಿಸಿ, ಪರಿಹಾರ ಕೊಡಲು ಕಾರ್ಯಪಡೆಯೊಂದನ್ನು ಸರ್ಕಾರ ಸ್ಥಾಪಿಸಬೇಕು. ಸುಸ್ಥಿರ, ಪರಿಸರ ಪೂರಕ ವಿಧಾನಗಳಲ್ಲಿ ವಿದ್ಯುತ್ ಉತ್ಪಾದನೆ ಮಾರ್ಗಗಳನ್ನು ಅನುಷ್ಠಾನ ಮಾಡಲು ಆದ್ಯತೆ ಕೊಡಬೇಕು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.