ADVERTISEMENT

ಕನ್ನಡದಲ್ಲಿ ತೀರ್ಪು: ಬೇಕು ಕಾನೂನು ಪದಕೋಶ

ಡಾ.ಪಾಟೀಲ ಪುಟ್ಟಪ್ಪ
Published 25 ಅಕ್ಟೋಬರ್ 2013, 19:30 IST
Last Updated 25 ಅಕ್ಟೋಬರ್ 2013, 19:30 IST

ನರಾಡುವ ಭಾಷೆಯಲ್ಲಿಯೇ ಕೋರ್ಟ್‌ ತೀರ್ಪುಗಳು ಹೊರಬೀಳಬೇಕು. ಆದರೆ, ಇದು ಹೈಕೋರ್ಟ್‌ನಂತಹ ನ್ಯಾಯಸ್ಥಾನಗಳಲ್ಲಿ ಕಷ್ಟದ ಕೆಲಸ. ಆದರೆ ಕೆಳಹಂತದ ನ್ಯಾಯಾಲಯಗಳಲ್ಲಿ ಖಂಡಿತವಾಗಿಯೂ ಇದನ್ನು ಜಾರಿಗೆ ತರಬೇಕು. ಬಹುತೇಕ ಕೆಳಹಂತದ ನ್ಯಾಯಾಲಯಗಳಲ್ಲಿ ಈಗಾಗಲೇ ಕನ್ನಡ ಭಾಷೆ ಯಲ್ಲಿಯೇ ಕಲಾಪಗಳು ನಡೆಯುತ್ತಿವೆ. ಆದರೆ, ತೀರ್ಪುಗಳು ಮಾತ್ರ ಇಂಗ್ಲಿಷ್‌ ನಲ್ಲಿಯೇ ಇರುತ್ತವೆ.

ಇದಕ್ಕೆ ಕಾರಣ, ಇಂಗ್ಲಿಷ್‌ನಲ್ಲಿ ಕಾನೂನು ಪದಗಳು ಸಾಕಷ್ಟು ಸೇರಿಕೊಂಡಿವೆ. ಸರಿಯಾದ ಅರ್ಥವನ್ನು ಕೊಡುತ್ತವೆ. ಇಂಗ್ಲಿಷ್‌ ವ್ಯಾಪಕವಾಗಿ ಬಳಕೆಯಲ್ಲಿದೆ. ಸೂಕ್ತ ಕಾನೂನು ಶಬ್ದಗಳನ್ನು ಕನ್ನಡದಲ್ಲಿ ಹುಡುಕದೇ ಒಮ್ಮಿಂದೊಮ್ಮೆಲೇ ಕನ್ನಡದಲ್ಲಿ ತೀರ್ಪು ನೀಡುವ ಕ್ರಮ ಜಾರಿಗೊಳಿಸಬಾರದು.

ಈ ನಿಟ್ಟಿನಲ್ಲಿ ಸರ್ಕಾರ ಮೊದಲು ಮಾಡಬೇಕಾದ ಕ್ರಮವೆಂದರೆ ಕಾನೂನು ಶಬ್ದಕೋಶವನ್ನು ರಚಿಸಲು ಕಾನೂನು ಪಂಡಿತರ ಒಂದು ಸಮಿತಿ ನೇಮಕ ಮಾಡು ವುದು. ಹಿಂದೆಯೂ ಸರ್ಕಾರ ಕರ್ನಾಟಕ ವಿದ್ಯಾವರ್ಧಕ ಸಂಘಕ್ಕೆ ಆ ಜವಾಬ್ದಾರಿ ಯನ್ನು ನೀಡಿತ್ತು. ಆದರೆ, ಅದನ್ನು ವಿಸ್ತೃತವಾಗಿ ನಾವು ಮಾಡಿದೆವೆಂದು ಹೇಳಲಾಗುವುದಿಲ್ಲ.

ಕಾನೂನು ವಿಜ್ಞಾನವಿದ್ದಂತೆ. ನೀಡಿದ ತೀರ್ಪು ಸಂಶಯ ಬರುವಂತಿರಬಾರದು. ಯಥಾವತ್ತಾಗಿರಬೇಕು. ಆದರೆ ಕನ್ನಡದಲ್ಲಿ ಕೋರ್ಟ್‌ ತೀರ್ಪುಗಳಿಗೆ ಅಗತ್ಯವಾದ ಶಬ್ದಗಳನ್ನು ಇನ್ನೂ ಸೃಷ್ಟಿಸಲಾಗಿಲ್ಲ. ಈ ಬಗ್ಗೆ ಕಾನೂನು ಪಂಡಿತರು ಗಂಭೀರ ಚಿಂತನೆ ನಡೆಸಬೇಕು. ಕಾನೂನು ಪದಕೋಶ ರಚಿಸಲು ನೇಮಕವಾಗುವ ಸಮಿತಿ ಯಲ್ಲಿ ಕಾನೂನು ಹಾಗೂ ಕನ್ನಡ ಎರಡನ್ನೂ ಬಲ್ಲವರಿರಬೇಕು.

ಅಂದಾಗ ಆ ಕಾರ್ಯ ಯಶಸ್ವಿಯಾಗಲು ಸಾಧ್ಯ. ಕನ್ನಡದಲ್ಲಿ ತೀರ್ಪು ನೀಡುವುದು ಎಂದರೆ ಕನ್ನಡ ಸಾಹಿತ್ಯ ಬರೆದಂತಲ್ಲ. ಆದ್ದರಿಂದ ಎಲ್ಲ ಕೋರ್ಟ್‌ಗಳಲ್ಲೂ ಕನ್ನಡದಲ್ಲೇ ತೀರ್ಪು ನೀಡಬೇಕೆಂಬ ನಿಯಮ ಜಾರಿಗೆ ತರುವ ಬದಲು ಪ್ರಾಯೋಗಿಕವಾಗಿ ಕೆಲವೇ ಕೋರ್ಟ್‌ಗಳಲ್ಲಿ ಈ ಕ್ರಮವನ್ನು ಅನುಸರಿಸಬೇಕು. ಅಂತಿಮವಾಗಿ ಕನ್ನಡ ದಲ್ಲೇ ಕಾನೂನು ಕಲಾಪಗಳು ನಡೆಯಬೇಕಾದುದು ಕಕ್ಷಿದಾರರ ದೃಷ್ಟಿಯಿಂದ ಒಳ್ಳೆಯದು. ಹಾಗೆಂದು ಕಾನೂನು ಪದಕೋಶ ಇಲ್ಲದೇ, ಸೂಕ್ತ ಮಾರ್ಗದರ್ಶಿ ಕ್ರಮಗಳೂ ಇಲ್ಲದೇ ಜಾರಿಗೆ ತರಬಾರದು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.